ಮೇಲ್ನೋಟಕ್ಕೆ ಸೈನ್ಸ್ ಫಿಕ್ಷನ್ ಮಾದರಿಯ ಕಥೆ ಅನ್ನಿಸಿದರೂ ಇಲ್ಲಿ ಆಫ್ರಿಕನ್ ಅಮೇರಿಕನ್ ಸಮುದಾಯದ ವಾಸ್ತವಗಳ ಬಹಳ ಸೂಕ್ಷ್ಮ ಚಿತ್ರಣಗಳ ನಿರೂಪಣೆ ಇದೆ. ಹೇಗೆ ಒಂದು ಮೈನಾರಿಟಿ ಎನಿಸಿಕೊಳ್ಳುವ ಸಮುದಾಯವನ್ನು ಮೆಜಾರಿಟಿ ಮತ್ತು privileged ಅನ್ನಿಸಿಕೊಳ್ಳುವ ವರ್ಗ manipulate ಮಾಡಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ ಎನ್ನುವುದರ ಚಿತ್ರಣವಿದೆ. Netflixನಲ್ಲಿ stream ಆಗುತ್ತಿದೆ ‘they cloned Tyrone’.

ಜೂಲ್ ಟೇಲರ್ ನಿರ್ದೇಶನದ ‘They cloned Tyrone’ ಸೈನ್ಸ್ ಫಿಕ್ಷನ್ ಮಾದರಿಯ ಚಿತ್ರ. ಅಮೇರಿಕಾದ ಊರೊಂದರ ಆಫ್ರಿಕನ್ ಅಮೇರಿಕನ್ ಜನರು ವಾಸವಾಗಿರುವ ಜಾಗವೊಂದರಲ್ಲಿ ನಡೆಯುವ ವಿಚಿತ್ರ ಕಥಾನಕ. ಇಲ್ಲಿ gangster ಜೀವನಶೈಲಿಯ ಚಿತ್ರಣವಿದೆ. ಬಳಸಿರುವ ಭಾಷೆ ಕೂಡ ಆ ಮಾದರಿಯದ್ದೆ. ಆಫ್ರಿಕನ್ ಅಮೇರಿಕನ್ ಸಮುದಾಯದಲ್ಲಿ ನಡೆಯುವ ಆಂತರಿಕ ಸಂಚು, ಒಳಜಗಳಗಳು ಇವೆಲ್ಲವನ್ನೂ ಮತ್ತಾರೋ ತಮ್ಮ ಲಾಭಕ್ಕೆ ಹೇಗೆ ಬಳಸಿಕೊಂಡು ಅವರೇ ಒಬ್ಬರಿಗೊಬ್ಬರು ಹೊಡೆದಾಡುಕೊಳ್ಳುವಂತೆ ಮಾಡುತ್ತಾರೆ ಎನ್ನುವುದು ಈ ಚಿತ್ರದ ತಿರುಳು.

ಬರಿಯ ಆಫ್ರಿಕನ್ ಅಮೇರಿಕನ್ ಜನಗಳೇ ವಾಸಿಸುವ ಬಡಾವಣೆಯೊಂದರಲ್ಲಿ ಆ ಸಮುದಾಯದ ಜನಗಳ ನಿತ್ಯದ ಜಂಜಡಗಳನ್ನು ಈ ಚಿತ್ರ ಅನಾವರಣಗೊಳಿಸುತ್ತಾ ಹೋಗುತ್ತದೆ. ಅವರುಗಳ ಡ್ರಗ್ಸ್ ವ್ಯಾಪಾರದ ವ್ಯೂಹ, ಅದಕ್ಕೆ ಸಂಬಂಧಿಸಿದ ಕಲಹಗಳು ಇತ್ಯಾದಿಗಳ ಚಿತ್ರಣವಿದೆ. ಅವರ ಸಮುದಾಯದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರುಗಳನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತದೆ ಎನ್ನುವುದನ್ನೂ ನಾಯಕನ ಸೋದರನಾದ ಪುಟ್ಟ ಹುಡುಗನೊಬ್ಬನ ಸಾವಿನ ಮೂಲಕ ಸೂಚ್ಯವಾಗಿ ತೋರಿಸಲಾಗಿದೆ.

ಒಬ್ಬ ಡ್ರಗ್ ಡೀಲರ್ ಫಾನ್ಟೆನ್, ಒಬ್ಬ ತಲೆಹಿಡುಕ ಸ್ಲಿಕ್ ಮತ್ತು ಒಬ್ಬ ವೇಶ್ಯೆ ಯೋ ಯೋ ಆಚಾನಕ್ಕಾಗಿ ತಮ್ಮ ಸಮುದಾಯದವನ್ನು ಗುರಿಮಾಡಿ ನಡೆಸಲಾಗುತ್ತಿರುವ ಸಂಚು ಒಂದನ್ನು ಗ್ರಹಿಸಿ ಅದರ ಮೂಲವನ್ನು ಪತ್ತೆ ಹಚ್ಚಲು ಹೊರಡುತ್ತಾರೆ. ಫಾನ್ಟೆನ್ ಮತ್ತು ಸ್ಲಿಕ್ ನಡುವೆ ನಡೆಯುವ ಒಂದು ಸಣ್ಣ ಕಲಹದ ನಂತರ ಫಾನ್ಟೆನ್ ಮೇಲೆ ಯಾರೋ ಗುಂಡು ಹಾರಿಸುತ್ತಾರೆ. ಆದರೆ ಮರುದಿನ ಫಾನ್ಟೆನ್ ಹಿಂದಿನ ಯಾವ ಘಟನೆಯೋ ನೆನಪಿಲ್ಲದಂತೆ ಮತ್ತೆ ಮರುಜೀವ ಪಡೆದವನಂತೆ ಮೇಲೆದ್ದು ಬರುತ್ತಾನೆ. ಫಾನ್ಟೆನ್ ಸಾವನ್ನು ಖುದ್ದಾಗಿ ನೋಡಿದ್ದ ಸ್ಲಿಕ್ ಮತ್ತು ಯೋಯೋಗೆ ಅನುಮಾನ ಬಂದು ಮೂರೂ ಜನ ಇದರ ರಹಸ್ಯವನ್ನು ಬೇಧಿಸಲು ಹೊರಟಾಗ ಗುಪ್ತ ಸ್ಥಳವೊಂದರಲ್ಲಿ ನೆಲಮಾಳಿಗೆಯಲ್ಲಿ ಇವರುಗಳದ್ದೇ ಕ್ಲೋನ್‌ಗಳು ಅಂದರೆ ಪ್ರತಿರೂಪಿಗಳು ಕಣ್ಣಿಗೆ ಬೀಳುತ್ತಾರೆ.

ಇವರು ವಾಸಮಾಡುವ ಬಡಾವಣೆಯ ನಿತ್ಯದ ಚಿತ್ರಣವನ್ನು ಪ್ರಯೋಗಾಲಯದಲ್ಲಿ ಕುಳಿತು ವೀಕ್ಷಿಸುತ್ತಾ ಅವರುಗಳ ನಿತ್ಯದ ನಡವಳಿಕೆಗಳನ್ನು ಕೂತಲ್ಲಿಯೇ ನಿಯಂತ್ರಿಸುತ್ತಿರುವ ಪಡೆಯನ್ನು ನೋಡಿ ನಿಬ್ಬೆರಗಾಗುತ್ತಾರೆ. ನಿತ್ಯ ಬಳಸುವ ಆಹಾರ, ಪಾನೀಯ, ಪ್ರಸಾದನ ಸಾಮಗ್ರಿಗಳಲ್ಲಿ ಎಂಥದ್ದೋ ಪುಡಿಯನ್ನು ಮಿಶ್ರಣ ಮಾಡಿ ತನ್ಮೂಲಕ ಅವರ ನಡವಳಿಕೆಯನ್ನು ನಿಯಂತ್ರಿಸುವ ವಿಧಾನ ಈ ಮೂವರಿಗೂ ಅರ್ಥವಾಗುತ್ತಾ ಹೋಗುತ್ತದೆ. ಜನಗಳ ಕೊಳ್ಳುಬಾಕತನದ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಅದರ ಮೂಲಕವೇ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಂಚನ್ನು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ.

ಈ ರಹಸ್ಯವನ್ನು ಭೇದಿಸಿ ಈ ಸಂಚನ್ನು ಬಯಲಿಗೆಳೆದು ಅವರುಗಳ ಬಳಿ ಬಂಧಿಗಳಾಗಿ ಅವರ ಜೀತದಾಳುಗಳಂತೆ ಇರುವ ತಮ್ಮ ಪ್ರತಿರೂಪಗಳನ್ನು ಅವರುಗಳ ಕಪಿಮುಷ್ಟಿಯಿಂದ ಬಿಡಿಸಲು ಮೂವರೂ ಪಣತೊಡುತ್ತಾರೆ. ಈ ಪ್ರಯತ್ನದಲ್ಲೇ ಒಂದಷ್ಟು ಅವರುಗಳ ನಡುವೆಯೇ ಒಳಜಗಳಗಳು, ಕಲಹಗಳು ಆಗಿ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಮತ್ತೊಂದಷ್ಟು ರಹಸ್ಯಗಳು ಬಯಲಾಗುತ್ತವೆ. ಇದನ್ನೆಲ್ಲ ಯಾರು ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ ಎಂಬ ರಹಸ್ಯಗಳೆಲ್ಲ ಬಯಲಾಗುತ್ತಾ ಹೋಗುತ್ತವೆ. ಕೊನೆಗೂ ಈ ಮೂವರೂ ಪ್ರತಿರೂಪಿಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಬಿಡುಗಡೆಯ ನಂತರ ಏನಾಗುತ್ತದೆ? ಈ ಸಂಚಿನ ವ್ಯೂಹದ ಆಳ ಎಷ್ಟು ಮತ್ತು ಎಲ್ಲಿಯವರೆಗೆ ಹಬ್ಬಿದೆ? ಅಂತ್ಯದಲ್ಲಿ ಏನಾಗುತ್ತದೆ? ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕು. ಕುತೂಹಲಕಾರಿಯಾದ ಮತ್ತು ಅನಿರೀಕ್ಷಿತ ಅಂತ್ಯವೊಂದನ್ನು ಕೊಟ್ಟು ಚಿತ್ರ ಮುಗಿಸಿದ್ದಾರೆ.

Nancy drew ಕಾದಂಬರಿಯ ಪತ್ತೇದಾರಿ ಪಾತ್ರವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಯೋಯೋ ಪಾತ್ರದಲ್ಲಿ ಟೆಯೋಣ ಪ್ಯಾರಿಸ್ ತನ್ನ ಅಭಿನಯದಿಂದ ಗಮನ ಸೆಳೆಯುತ್ತಾಳೆ. ಫಾನ್ಟೆನ್ ಪಾತ್ರದ ಜಾನ್ ಬೋಯೇಗಾ ಮತ್ತು ಸ್ಲಿಕ್ ಪಾತ್ರಧಾರಿ ಜೇಮಿ ಫಾಕ್ಸ್ ಅಭಿನಯ ಈ ಚಿತ್ರದ ಹೈಲೈಟ್. ದೇ ಕ್ಲೋನ್ಡ್ ಟೈರೋನ್ ಚಿತ್ರ ಜಾರ್ಡನ್ ಪೀಲೆಯ ‘US’ ಚಿತ್ರವನ್ನು ಬಹಳ ನೆನಪಿಸುತ್ತದೆ. ‘US’ ಚಿತ್ರದಲ್ಲಿ ಇಂಥದ್ದೇ ಕ್ಲೋನಿಂಗ್ ವಿಷಯವನ್ನು ಇಟ್ಟುಕೊಂಡು ಆಫ್ರಿಕನ್ ಅಮೇರಿಕನ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಮಜಲುಗಳನ್ನು ತುಸು ಗಂಭೀರವಾಗಿ ನಿರೂಪಿಸಿದ್ದರೆ ಈ ಚಿತ್ರದಲ್ಲಿ ಹಾಸ್ಯಲೇಪಿತ ಮತ್ತು ವರ್ಣರಂಜಿತ ನಿರೂಪಣೆಯ ಶೈಲಿಯನ್ನು ಕಾಣಬಹುದು.

ಮೇಲ್ನೋಟಕ್ಕೆ ಸೈನ್ಸ್ ಫಿಕ್ಷನ್ ಮಾದರಿಯ ಕಥೆ ಅನ್ನಿಸಿದರೂ ಇಲ್ಲಿ ಆಫ್ರಿಕನ್ ಅಮೇರಿಕನ್ ಸಮುದಾಯದ ವಾಸ್ತವಗಳ ಬಹಳ ಸೂಕ್ಷ್ಮ ಚಿತ್ರಣಗಳ ನಿರೂಪಣೆ ಇದೆ. ಹೇಗೆ ಒಂದು ಮೈನಾರಿಟಿ ಎನಿಸಿಕೊಳ್ಳುವ ಸಮುದಾಯವನ್ನು ಮೆಜಾರಿಟಿ ಮತ್ತು privileged ಅನ್ನಿಸಿಕೊಳ್ಳುವ ವರ್ಗ manipulate ಮಾಡಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ ಎನ್ನುವುದರ ಚಿತ್ರಣವಿದೆ. ಆ ಸಮುದಾಯದ ಸಾಮಾಜಿಕ ವಾಸ್ತವದ ಅರಿವಿರುವವರಿಗೆ ಈ ಚಿತ್ರದಲ್ಲಿನ ಅನೇಕ ಸೂಕ್ಷ್ಮ ಸಾಮಾಜಿಕ ಪದರಗಳು ಗೋಚರವಾಗುತ್ತಾ ಹೋಗುತ್ತವೆ. ಮನರಂಜನೆಯ ಜೊತೆಗೆ ಸೂಕ್ಷ್ಮತೆಯನ್ನು ಕಟ್ಟಿಕೊಟ್ಟಿರುವ ಚಿತ್ರ ‘they cloned Tyrone’ ಒಂದು ಉತ್ತಮ ಅನುಭವ ನೀಡುವ ಚಿತ್ರ. Netflixನಲ್ಲಿ stream ಆಗುತ್ತಿದೆ ‘they cloned Tyrone’.

LEAVE A REPLY

Connect with

Please enter your comment!
Please enter your name here