ಬೂಗಿಮ್ಯಾನ್ ದರ್ಶನಕ್ಕೆ ಮುಂಚೆ ಹುಟ್ಟುವ ಅಷ್ಟೆಲ್ಲ ಕಾತುರ, ಕುತೂಹಲ ಮತ್ತು ಭಯಗಳು ಬೂಗಿಮ್ಯಾನ್ ತೆರೆಯ ಮೇಲೆ ಬರುತ್ತಿದ್ದಂತೆ ಇಷ್ಟೇನಾ ಎನಿಸಿ ನಿರಾಸೆಯಾಗಿಬಿಡುತ್ತದೆ. ಚಿತ್ರಕಥೆಯಲ್ಲಿ ಇರುವ ಅಕ್ಕತಂಗಿಯ ಭಾವನಾತ್ಮಕ ಮಜಲು ಕೂಡ ಒಟ್ಟಾರೆಯಾಗಿ ಚಿತ್ರಕ್ಕೆ ಯಾವ ರೀತಿಯೂ ಪೂರಕವಾಗಿ ಕೆಲಸ ಮಾಡಿಲ್ಲ. ಚಿತ್ರದ ಅಂತ್ಯ ಕೂಡ ಬಹಳ ಸುಲಭವಾಗಿ ಊಹಿಸಬಹುದು. ‘ದ ಬೂಗಿಮ್ಯಾನ್’ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಮತ್ತು ಆಮೇಜಾನ್ ಪ್ರೈಮ್‌ನಲ್ಲೂ ಲಭ್ಯವಿದೆ.

ಸ್ಟೀಫನ್ ಕಿಂಗ್ ಅವರ ಸಣ್ಣ ಕಥೆಯನ್ನು ಆಧರಿಸಿದ ‘ದ ಬೂಗಿಮ್ಯಾನ್’ ಚಲನಚಿತ್ರದ ಬಗ್ಗೆ ಹಾರರ್ ಸಿನಿಪ್ರಿಯರಲ್ಲಿ ಆ ಚಿತ್ರ ಘೋಷಣೆ ಆದಾಗಿನಿಂದಲೇ ಕುತೂಹಲ ಮತ್ತು ಕಾತುರವಿತ್ತು. ಸ್ಟೀಫನ್ ಕಿಂಗ್ ಅವರ ಕಥೆಗಳಲ್ಲಿನ ನಿಗೂಢತೆ, ರೋಚಕತೆ ಮತ್ತು ಭಯ ಹೇಗೆ ತೆರೆಯ ಮೇಲೆ ಕಾಣಬಹುದು ಎಂಬ ಕುತೂಹಲಕ್ಕೆ ಉತ್ತರದಂತೆ ‘ದ ಬೂಗಿಮ್ಯಾನ್’ ತೆರೆಕಂಡಿದೆ. ಹಾರರ್ ಮಾದರಿಯ ಚಿತ್ರಗಳಲ್ಲಿ ಪರಿಣಿತನಾದ ರಾಬ್ ಸಾಲವೆಜ್ ನಿರ್ದೇಶನ ಅಂದ ಮೇಲೆ ನಿರೀಕ್ಷೆ ದುಪ್ಪಟ್ಟು ಆಗೋದು ಸಹಜವೇ. 2020ರಲ್ಲಿ ತೆರೆಕಂಡ ಅವರ ನಿರ್ದೇಶನದ ‘ಹೋಸ್ಟ್’ ಚಿತ್ರ ಅವರ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡೋದಕ್ಕೆ ಕಾರಣ. ಆದರೆ ‘ಹೋಸ್ಟ್’ ಚಿತ್ರದ ರಾಬ್ ಸಾಲವೆಜ್ ಇಲ್ಲಿ ಕಾಣುವುದಿಲ್ಲ. ಅವರ ಕೈಚಳಕ ‘ಬೂಗಿಮ್ಯಾನ್’ನಲ್ಲಿ ಅಷ್ಟು ಪರಿಣಾಮ ಬೀರಿಲ್ಲ ಎನ್ನುವುದು ಬೇಸರದ ವಿಷಯ.

ಬೂಗಿಮ್ಯಾನ್ ಅನ್ನುವುದು ಒಂದು ಕಾಲ್ಪನಿಕ ಪಾತ್ರ. ನಮ್ಮಲ್ಲಿ ಮಕ್ಕಳಿಗೆ ಹೆದರಿಸೋಕ್ಕೆ ಗೊಗ್ಗಯ್ಯ ಬರ್ತಾನೆ, ಗುಮ್ಮ ಬರ್ತಾನೆ ಎಂದು ಹೇಳುವ ರೀತಿ ಪಾಶ್ಚಾತ್ಯರಲ್ಲಿ ಈ ಬೂಗಿಮ್ಯಾನ್ ದಂತಕತೆ ಪ್ರಚಲಿತವಾಗಿದೆ. ಆದರೆ ಸ್ಟೀಫನ್ ಕಿಂಗ್ ಕಥೆಯಲ್ಲಿನ ಆ ಭಯ ಮತ್ತು ನಿಗೂಢತೆ ಚಿತ್ರದಲ್ಲಿ ಇದೆಯೇ ಎಂದು ನೋಡಿದರೆ ಒಂದು ಮಟ್ಟಕ್ಕೆ ಇದೆ ಎನ್ನಬಹುದು. ಚಿತ್ರದ ಮೊದಲ 30 ನಿಮಿಷಗಳು ತನ್ನ ನಿಗೂಢತೆಯಿಂದ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕರ ವೈಶಿಷ್ಟ್ಯವೂ ಅದೇ. ಚಿತ್ರದ ಆರಂಭಿಕ ದೃಶ್ಯ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಮೂಡಿಸುತ್ತದೆ. ಆದರೆ ಇಲ್ಲಿಂದ ಮುಂದಕ್ಕೆ ಬೇರೆ ಬೇರೆ ಪಾತ್ರಗಳು ಪರಿಚಯವಾಗುತ್ತಾ ಹೋದಂತೆ ಆ ಮೊನಚು ಕಡಿಮೆಯಾಗುತ್ತಾ ಹೋಗುತ್ತದೆ.

ಮಕ್ಕಳನ್ನು ಅನುಮಾನಾಸ್ಪದವಾಗಿ ಕಳೆದುಕೊಂಡು ವಿಷಾದಲ್ಲಿರುವ ತಂದೆ ಲೆಸ್ಟರ್ ಪಾತ್ರ ಇಲ್ಲಿ ಪರಿಚಯವಾಗುತ್ತದೆ. ತನ್ನ ದುಃಖವನ್ನು ಕಡಿಮೆ ಮಾಡಿಕೊಳ್ಳಲು ಆಪ್ತ ಸಲಹೆಗಾರ ವಿಲ್ ಬಳಿ ಬರುತ್ತಾನೆ. ವಿಲ್ ಕೂಡ ತನ್ನ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿರುತ್ತಾನೆ. ಆತನ ಎರಡು ಹೆಣ್ಣುಮಕ್ಕಳೇ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಲೆಸ್ಟರ್ ಪಾತ್ರ ಮಾಡಿರುವ ಡೇವಿಡ್ ದಸ್ಟ್ಮಾಲಷಿಯನ್ ಅದ್ಭುತವಾದ ನಟ. ಆದರೆ ಇಲ್ಲಿ ಅವನ ಪಾತ್ರ ಬಹಳ ಚಿಕ್ಕದಾಗಿದ್ದು ಹೀಗೆ ಬಂದು ಹಾಗೆ ಹೋದರೂ ಇರುವ ಸ್ವಲ್ಪ ಕ್ಷಣಗಳೇ ಪರಿಣಾಮಕಾರಿಯಾಗಿವೆ.

ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾತ್ರಗಳಲ್ಲಿ ಅಕ್ಕತಂಗಿಯರ ವಿಷಾದ ಚಿತ್ರದ ಉದ್ದಕ್ಕೂ ಕಾಣಬಹುದು. ಅದರಲ್ಲೂ ಅಕ್ಕ ಸೇಡಿ ತನ್ನ ಅಮ್ಮನ ಉಡುಪುಗಳನ್ನು ಧರಿಸುತ್ತಾ ಆಕೆಯನ್ನು ನೆನಪಿಸಿಕೊಳ್ಳುವುದು ಮನಸ್ಸನ್ನು ತಟ್ಟುತ್ತದೆ. ನಿಗೂಢತೆ ಮತ್ತು ಭಯದ ಛಾಯೆಯಲ್ಲೂ ಒಂದು ಭಾವನಾತ್ಮಕ ಮಜಲನ್ನು ಇಲ್ಲಿ ಕಾಣಬಹುದಾಗಿದೆ. ಸೇಡಿ ಪಾತ್ರದಲ್ಲಿ ತ್ಯಾಚರ್ ಅವರ ಅಭಿನಯ ಬಹಳ ಪ್ರಬುದ್ಧವಾಗಿದೆ. ತಂಗಿಯ ಪಾತ್ರದಲ್ಲಿ ಲೈರಾರ ಅಭಿನಯ ಕೂಡ ಬಹಳ ಪ್ರೌಢವಾಗಿದೆ. ಭಯದ ಅಭಿವ್ಯಕ್ತಿ ಇರಲಿ ಅಥವಾ ಸಂದರ್ಭವನ್ನು ನಿಭಾಯಿಸುವ ಸಮಯಪ್ರಜ್ಞೆ ಇರಲಿ ಪುಟ್ಟ ಹುಡುಗಿ ಲೈರಾ, ಸಾಯರ್ ಪಾತ್ರದಲ್ಲಿ ಮನಸ್ಸನ್ನು ಗೆಲ್ಲುತ್ತಾಳೆ.

ತ್ಯಾಚರ್ ಮತ್ತು ಲೈರಾ ಇಬ್ಬರ ತೆರೆಯ ಮೇಲಿನ ಅಕ್ಕತಂಗಿ ಬಾಂಧವ್ಯ ಬಹಳ ನೈಜವಾಗಿ ಮೂಡಿಬಂದಿದೆ. ಅಕ್ಕನೇ ತಾಯಿಯಾಗುವ ಸನ್ನಿವೇಶಗಳು ಮನಸ್ಸು ಮುಟ್ಟುತ್ತವೆ. ಆದರೆ ಇಷ್ಟೆಲ್ಲ ಇದ್ದು ಕೂಡ ಸಿನಿಮಾ ಪರಿಣಾಮಕಾರಿಯಾಗಿಲ್ಲ ಎನಿಸಿದರೆ ಅದು ಚಿತ್ರಕಥೆಯಲ್ಲಿ ಇಲ್ಲದ ಬಿಗಿತನ. ಚಿತ್ರದಲ್ಲಿ ನಿಗೂಢತೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದರೂ ಅದನ್ನು ಸರಿಯಾಗಿ ಬೆಳೆಸಿಲ್ಲ. ಅಷ್ಟೆಲ್ಲ ಕಟ್ಟಿಕೊಟ್ಟು ಕೊನೆಯಲ್ಲಿ ಬೂಗಿಮ್ಯಾನ್ ಎದುರಿಗೆ ಬರುವ ಘಳಿಗೆ ಬಹಳ ನೀರಸವಾಗಿದೆ. ಚಿತ್ರದ ಗ್ರಾಫಿಕ್ಸ್ ಕೂಡ ಅಷ್ಟಕ್ಕಷ್ಟೇ.

ಬೂಗಿಮ್ಯಾನ್ ದರ್ಶನಕ್ಕೆ ಮುಂಚೆ ಹುಟ್ಟುವ ಅಷ್ಟೆಲ್ಲ ಕಾತುರ, ಕುತೂಹಲ ಮತ್ತು ಭಯಗಳು ಬೂಗಿಮ್ಯಾನ್ ತೆರೆಯ ಮೇಲೆ ಬರುತ್ತಿದ್ದಂತೆ ಇಷ್ಟೇನಾ ಎನಿಸಿ ನಿರಾಸೆಯಾಗಿಬಿಡುತ್ತದೆ. ಚಿತ್ರಕಥೆಯಲ್ಲಿ ಇರುವ ಅಕ್ಕತಂಗಿಯ ಭಾವನಾತ್ಮಕ ಮಜಲು ಕೂಡ ಒಟ್ಟಾರೆಯಾಗಿ ಚಿತ್ರಕ್ಕೆ ಯಾವ ರೀತಿಯೂ ಪೂರಕವಾಗಿ ಕೆಲಸ ಮಾಡಿಲ್ಲ. ಚಿತ್ರದ ಅಂತ್ಯ ಕೂಡ ಬಹಳ ಸುಲಭವಾಗಿ ಊಹಿಸಬಹುದು. ಏನು ಮಾಡಬೇಕೆಂದು ತಿಳಿಯದೇ ಹೇಗೋ ಒಂದು ಅಂತ್ಯ ಕೊಟ್ಟಂತಿದೆ. ಅಂತ್ಯ ನೋಡಿದರೆ ಎರಡನೇ ಭಾಗ ಕೂಡ ಬರುವ ಸುಳಿವು ಇದೆ. ಒಟ್ಟಾರೆ ಹೇಳಬೇಕೆಂದರೆ ಒಳ್ಳೆಯ ನಟನೆ, ಉತ್ತಮ ಹಿನ್ನೆಲೆ ಸಂಗೀತ ಇರುವ ಸಾಧಾರಣ ತಾಂತ್ರಿಕತೆ, ಕಥೆ ಹೊಂದಿರುವ ಹಾರರ್ ಚಿತ್ರ ಈ ‘ಬೂಗಿಮ್ಯಾನ್’. ಚಿತ್ರಮಂದಿರದ ಕತ್ತಲಲ್ಲಿ ನೋಡಿದರೆ ತುಸು ಭಯವಾಗಬಹುದೇನೋ. ಪ್ರಯತ್ನಿಸಿ.
‘ದ ಬೂಗಿಮ್ಯಾನ್’ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಮತ್ತು ಆಮೇಜಾನ್ ಪ್ರೈಮ್‌ನಲ್ಲೂ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here