ಕಥೆ ಸಾಧಾರಣವಾದ್ದರಿಂದ ಅಂತ್ಯ ಕೂಡ ಹೀಗೇ ಆಗುತ್ತದೆ ಎಂದು ವೀಕ್ಷಕ ಸುಲಭವಾಗಿ ಊಹಿಸಿಬಿಡಬಹುದು. ಜೊತೆಗೆ ಚಿತ್ರಕತೆ ಕೆಲವು ಕಡೆ ಇನ್ನೂ ವೇಗವಾಗಿ ಇರಬಹುದಿತ್ತು ಮತ್ತು ಮತ್ತಷ್ಟು ಕುತೂಹಲಕರ ತಿರುವುಗಳು ಇರಬಹುದಿತ್ತು ಎನಿಸುತ್ತದೆ. ಆದರೂ ರಾಜಕುಮಾರ್ ರಾವ್ ಮತ್ತು ದುಲ್ಕರ್ ಸಲ್ಮಾನ್ ನಟನೆ ಜೊತೆಗೆ ಸರಣಿಯಲ್ಲಿ ನಿರೂಪಿತವಾಗಿರುವ ಡಾರ್ಕ್ ಕಾಮಿಡಿ ಈ ಎಲ್ಲ ಕೊರತೆಗಳನ್ನು ಮುಚ್ಚಿಬಿಡುತ್ತದೆ. ‘ಗನ್ಸ್ & ಗುಲಾಬ್ಸ್’ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಫ್ಯಾಮಿಲಿ ಮ್ಯಾನ್’ ಮೊದಲಾದ ಅನೇಕ ಯಶಸ್ವಿ ವೆಬ್ ಸರಣಿಗಳಿಗೆ ಹೆಸರುವಾಸಿಯಾದ ರಾಜ್ ಮತ್ತು ಡಿ ಕೆ ತಂಡ ಈ ಬಾರಿ ಒಂದು ಡಾರ್ಕ್ ಕಾಮಿಡಿ ಮಾದರಿಯ ರೋಚಕ ಸರಣಿ ‘ಗನ್ಸ್ & ಗುಲಾಬ್ಸ್’ ಅನ್ನು ವೀಕ್ಷಕರಿಗೆ ನೀಡಿದ್ದಾರೆ. ರಾಜಕುಮಾರ್ ರಾವ್ ಮತ್ತು ದುಲ್ಕರ್ ಸಲ್ಮಾನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಆದರ್ಶ್ ಗೌರವ್, ಟಿ ಜೆ ಭಾನು ಮತ್ತು ಗುಲ್ಶನ್ ದೇವಯ್ಯ ಅವರಂತಹ ಹೆಸರಾಂತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯ ಬಗ್ಗೆ ಹಲವಾರು ನಿರೀಕ್ಷೆಗಳಿದ್ದು ಆ ನಿರೀಕ್ಷೆಯ ಮಟ್ಟವನ್ನು ಈ ಸರಣಿ ತಲುಪಿದೆಯೇ ಎಂದು ನೋಡೋಣ.
ಮೊದಲೇ ಹೇಳಿದಂತೆ ಇದೊಂದು ಡಾರ್ಕ್ ಕಾಮಿಡಿ ಮಾದರಿಯ ರೋಚಕತೆ ಇರುವ ಸರಣಿ. ಗುಲಾಬಗಂಜ್ ಪ್ರಾಂತ್ಯದ ಡ್ರಗ್ ದೊರೆ ಗಾಂಚಿಗೂ ಕೋಲ್ಕತ್ತಾ ಮೂಲದ ವ್ಯಾಪಾರಿ ಸುಖಾನ್ತೋ ಚಟರ್ಜಿಗೂ ಒಂದು ದೊಡ್ಡ ಒಪ್ಪಂದ ಆಗಿರುತ್ತದೆ. ಅದರ ಪ್ರಕಾರ ಗಾಂಚಿ ಸುಖಾನ್ತೋಗೆ ಒಂದು ತಿಂಗಳ ಅವಧಿಯಲ್ಲಿ ಒಂದು ದೊಡ್ಡ ಪ್ರಮಾಣದ ಮಾದಕವಸ್ತು ತಲುಪಿಸಬೇಕಾಗಿರುತ್ತದೆ. ಆದರೆ ಪ್ರಾಮಾಣಿಕ ಅಧಿಕಾರಿಯಾದ ಮತ್ತು ಮಾದಕವಸ್ತು ನಿಯಂತ್ರಣ ಇಲಾಖೆಯಲ್ಲಿ ಕೆಲಸ ಮಾಡುವ ಅರ್ಜುನ್ ವರ್ಮಾನ ಕಣ್ಣು ತಪ್ಪಿಸಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಅವನು ಅದೇ ಸ್ಥಳಕ್ಕೆ ವರ್ಗಾವಣೆಯಾಗಿ ಬರುತ್ತಾನೆ.
ಗಾಂಚಿಯ ಗ್ಯಾಂಗಲ್ಲಿ ಪಾನ ಟಿಪ್ಪು ಕೂಡ ಒಬ್ಬ ಪ್ರಮುಖ ವ್ಯಕ್ತಿ. ಆತನ ತಂದೆ ಬಾಬು ಟೈಗರ್ ಈ ಡ್ರಗ್ಸ್ ಜಾಲದಲ್ಲಿ ದೊಡ್ಡ ಹೆಸರು. ಆದರೆ ಆತನ ಮಗ ಟಿಪ್ಪುಗೆ ತಂದೆಯ ದಂಧೆ ಸೇರಲು ಇಷ್ಟವಿರುವುದಿಲ್ಲ. ತನ್ನ ಪಾಡಿಗೆ ತಾನು ಮೆಕಾನಿಕ್ ಕೆಲಸ ಮಾಡಿಕೊಂಡು ಇರುತ್ತಾನೆ. ಆತನಿಗೆ ಸ್ಕೂಲ್ ಟೀಚರ್ ಚಂದ್ರಲೇಖ ಮೇಲೆ ಕೂಡ ಒಲವು. ಆದರೆ ಆಕಸ್ಮಿಕವಾಗಿ ಸಂದರ್ಭಗಳು ಎದುರಾಗಿ ಟಿಪ್ಪು ಸಂದರ್ಭದ ಕೈಗೊಂಬೆಯಾಗಿ ತನ್ನ ತಂದೆಯನ್ನು ಕೊಂದವರ ಬಳಗದ ಇಬ್ಬರನ್ನು ಕೊಲೆಮಾಡಿ ಅಪರಾಧ ಲೋಕದ ಭಾಗವಾಗಿಬಿಡುತ್ತಾನೆ.
ಇತ್ತ ಕಡೆ ಗಾಂಚಿಗೂ ಕೂಡ ಏನೇನೋ ಸಮಸ್ಯೆಗಳಾಗಿ ಆತನ ದಂಧೆಯನ್ನು ಆತನ ಮಗ ಮಾಡಬೇಕಾಗಿ ಬರುತ್ತದೆ. ಹೀಗೆ ಎರಡು ಬಣಗಳ ನಡುವಿನ ಒಳಸಂಚು, ಗುದ್ದಾಟ, ಪೋಲೀಸ್ ಮತ್ತು ಅಪರಾಧಿಗಳ ನಡುವಿನ ಹಣಾಹಣಿ ಮತ್ತು ತಿರುವುಗಳಲ್ಲಿ ಕಥೆ ಸಾಗುತ್ತದೆ. ಈ ಸರಣಿಯ ಮುಖ್ಯ ಆಕರ್ಷಣೆಗಳೆಂದರೆ ಇಬ್ಬರು ಅಪ್ರತಿಮ ನಟರಾದ ರಾಜಕುಮಾರ್ ರಾವ್ ಮತ್ತು ದುಲ್ಕರ್ ಸಲ್ಮಾನ್. ರಾಜಕುಮಾರ್ ರಾವ್ ಅಂತೂ ಅವರ ಪಾತ್ರದೊಳಗೆ ಇಳಿದು ಜೀವಿಸಿಬಿಟ್ಟಿದ್ದಾರೆ. ಅವರ ಹಾವಭಾವ, ಅಭಿನಯದ ಮೂಲಕ ಟಿಪ್ಪು ಪಾತ್ರಕ್ಕೆ ನೂರಕ್ಕೆ ನೂರು ನ್ಯಾಯ ಸಲ್ಲಿಸಿದ್ದಾರೆ. ಟಿಪ್ಪು ಪಾತ್ರಕ್ಕೆ ಇರುವ ಒಂದು ಸೂಚ್ಯವಾದ ಮುಗ್ಧತೆ ಅವರ ಅಭಿನಯದಲ್ಲಿ ಮತ್ತೂ ಉತ್ಕೃಷ್ಟವಾಗಿ ವ್ಯಕ್ತವಾಗಿದೆ. ಅವರ ನಟನೆಯಲ್ಲಿನ ಸಹಜತೆ ಈ ಪಾತ್ರದ ಗಾಢತೆಯನ್ನು ಹೆಚ್ಚಿಸಿದೆ.
ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ಅವರ ಅಭಿನಯ ಕೂಡ ಅಚ್ಚುಕಟ್ಟು. ಒಬ್ಬ ಪ್ರಾಮಾಣಿಕ ಮತ್ತು ಖಡಕ್ ಅಧಿಕಾರಿಯ ಪಾತ್ರಕ್ಕೆ ಹೇಳಿಮಾಡಿಸಿದಂಥ ಧೋರಣೆ ಅವರಲ್ಲಿ ಕಂಡುಬಂದಿದೆ. ರಾಜಕುಮಾರ್ ರಾವ್ ಮತ್ತು ಸಲ್ಮಾನ್ ಅವರ ಕಾಂಬೊ ದೃಶ್ಯಗಳು ಕಡಿಮೆ ಇದ್ದರೂ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಗುಲ್ಶನ್ ದೇವಯ್ಯ ಅವರ ಅಭಿನಯ ಬಹಳ ಮಜಾ ಕೊಡುತ್ತಾ ವೀಕ್ಷಕರನ್ನು ಹಿಡಿದಿಡುತ್ತದೆ. ರಾಜಕುಮಾರ್ ರಾವ್ ಅವರ ಪ್ರೇಯಸಿ ಚಂದ್ರಕಲಾ ಪಾತ್ರದಲ್ಲಿ ಟಿ ಜೆ ಭಾನು ಅವರ ಅಭಿನಯ ಕೂಡ ಬಹಳ ಖುಷಿ ಕೊಡುತ್ತದೆ. ಲಘು ಹಾಸ್ಯದ ಸನ್ನಿವೇಶಗಳು ಬಹಳ ಉತ್ತಮವಾಗಿ ಮೂಡಿಬಂದಿವೆ.
ಸುಮಿತ್ ಆರೋರ ಅವರ ಲೇಖನಿಯಿಂದ ಮೂಡಿಬಂದ ಸಂಭಾಷಣೆ ಮೊನಚಾಗಿ ಬಹಳ ಉತ್ತಮವಾಗಿದೆ. ಸರಣಿಯ ಕೊನೆ ಸಂಚಿಕೆಯಂತೂ ಭರಪೂರ ಮನರಂಜನೆ ಮತ್ತು ಆಕ್ಷನ್ನಿಂದ ಕೂಡಿದ್ದು ಬಹಳ ಉತ್ತಮ ಅಂತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಮಕ್ಕಳು ಇರುವ ಸನ್ನಿವೇಶಗಳೆಲ್ಲವೂ ಎಲ್ಲೂ ಅನಗತ್ಯ ಎನಿಸದೇ ಕಥೆಯ ಮುಖ್ಯಹಂದರಕ್ಕೆ ಧಕ್ಕೆಯಾಗದ ರೀತಿಯಲ್ಲೇ ನಿರೂಪಿತವಾಗಿದೆ. ಆದರೆ ಇಷ್ಟೆಲ್ಲ ಒಳ್ಳೆಯ ನಟರನ್ನು ಇಟ್ಟುಕೊಂಡು ಹೇಳಲು ಹೊರಟಿರುವ ಕಥೆ ಮಾತ್ರ ಸಾಧಾರಣವಾಗಿರುವುದು ಸ್ವಲ್ಪ ನಿರಾಸೆ ಹುಟ್ಟಿಸುತ್ತದೆ. ಎರಡು ಗುಂಪುಗಳ ನಡೆಯುವ ಗ್ಯಾಂಗ್ ವಾರ್ ಮಾದರಿಯ ಸಮರ ಹೊಸದೇನಲ್ಲ. ಕಥೆಯಲ್ಲಿ ಇನ್ನಷ್ಟು ಹೊಸತನ ಕೊಟ್ಟಿದ್ದರೆ ಇನ್ನೂ ಚೆನ್ನಾಗಿರಬಹುದಿತ್ತು ಅನಿಸುತ್ತದೆ.
ಕಥೆ ಸಾಧಾರಣವಾದ್ದರಿಂದ ಅಂತ್ಯ ಕೂಡ ಹೀಗೇ ಆಗುತ್ತದೆ ಎಂದು ವೀಕ್ಷಕ ಸುಲಭವಾಗಿ ಊಹಿಸಿಬಿಡಬಹುದು. ಜೊತೆಗೆ ಚಿತ್ರಕತೆ ಕೆಲವು ಕಡೆ ಇನ್ನೂ ವೇಗವಾಗಿ ಇರಬಹುದಿತ್ತು ಮತ್ತು ಮತ್ತಷ್ಟು ಕುತೂಹಲಕರ ತಿರುವುಗಳು ಇರಬಹುದಿತ್ತು ಎನಿಸುತ್ತದೆ. ನಡುವಿನ ಸಂಚಿಕೆಗಳು ಸ್ವಲ್ಪ ಬೋರ್ ಹೊಡೆಸುತ್ತವೆ. ಸಂಕಲನ ಇನ್ನಷ್ಟು ಚುರುಕಾಗಿ ಇರಬಹುದಿತ್ತು.ಆದರೂ ರಾಜಕುಮಾರ್ ರಾವ್ ಮತ್ತು ದುಲ್ಕರ್ ಸಲ್ಮಾನ್ ನಟನೆ ಜೊತೆಗೆ ಸರಣಿಯಲ್ಲಿ ನಿರೂಪಿತವಾಗಿರುವ ಡಾರ್ಕ್ ಕಾಮಿಡಿ ಈ ಎಲ್ಲ ಕೊರತೆಗಳನ್ನು ಮುಚ್ಚಿಬಿಡುತ್ತದೆ. ಅಮನ್ ಪಂತ್ ಅವರ ಹಿನ್ನೆಲೆ ಸಂಗೀತ ಕಥೆಗೆ ಬಹಳ ಪೂರಕವಾಗಿ ಮೂಡಿಬಂದಿದೆ. ಪಂಕಜ್ ಕುಮಾರ್ ಅವರ ಛಾಯಾಗ್ರಹಣ ಬಹಳ ಉತ್ತಮವಾಗಿದೆ. 90ರ ದಶಕದ ಕಾಲಘಟ್ಟದಲ್ಲಿ ಈ ಕಥೆ ಹೆಣೆಯಲಾಗಿದ್ದು ಕಲಾ ನಿರ್ದೇಶನ ತಂಡ ಈ ಅನುಭವವನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಸರಣಿಯ ನಿರ್ಮಾಣದ ಗುಣಮಟ್ಟ ಬಹಳ ಉತ್ತಮವಾಗಿದೆ.
ಒಟ್ಟಾರೆ ಹೇಳಬೇಕೆಂದರೆ ಗನ್ಸ್ & ಗುಲಾಬ್ಸ್ ಒಂದು ಸಾಧಾರಣವಾದ ಆದರೆ ಉತ್ತಮವಾಗಿ ನಿರೂಪಿಸಲ್ಪಟ್ಟ ಕಥೆ ಹೊಂದಿದ ಸರಣಿ. ಚಿತ್ರಕತೆಯಲ್ಲಿನ ಕೊರತೆಯನ್ನು ಉತ್ತಮವಾದ ನಟನೆ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ನೀಗಿಸುತ್ತದೆ. ರಾಜ್ ಮತ್ತು ಡಿ ಕೆ ಯವರ ಹಿಂದಿನ ಕೆಲಸಗಳಷ್ಟು ಗುಣಮಟ್ಟ ಇದರಲ್ಲಿ ಇರದಿದ್ದರೂ ಮೋಸವಂತೂ ಇಲ್ಲ. ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನೋಡಿದರೆ ಧಾರಾಳವಾಗಿ ನೋಡಿಸಿಕೊಂಡು ಹೋಗುವ ಸರಣಿ. Netflixನಲ್ಲಿ ಸ್ಟ್ರೀಮ್ ಆಗುತ್ತಿದೆ ‘ಗನ್ಸ್ & ಗುಲಾಬ್ಸ್’.