ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಚರ್ಚೆ ಹಿಂದೆ ಸರಿದು, ಅನಗತ್ಯ ವಿವಾದಗಳು, ಉಪಯೋಗಕ್ಕೆ ಬಾರದ ಸಾಧನೆಗಳ ಚರ್ಚೆಯೇ ದೊಡ್ಡದಾಗಿ ನಡೆಯುತ್ತಿರುವಾಗ ‘ಜವಾನ್’ ಎಲ್ಲಾ ಜ್ವಲಂತ ಸಮಸ್ಯೆಗಳನ್ನೂ ನೆನಪಿಸುತ್ತದೆ. ಅವು ಬಹುತೇಕ ತೀರಾ ನಾಟಕೀಯ ಮತ್ತು ಕಣ್ಣೀರು ತರಿಸುವ ಸಲುವಾಗಿಯೇ ವಿನ್ಯಾಸಗೊಳಿಸಲಾದ ದೃಶ್ಯಗಳಾಗಿದ್ದರೂ, ಒಂದು ಮಾಸ್ ಸಿನಿಮಾದ ಭಾಗವಾಗಿ ಸಮರ್ಪಕ ಕೆಲಸ ಮಾಡುತ್ತವೆ. ಇತ್ತೀಚೆಗೆ ಹಿಂದಿಯ ಜನಪ್ರಿಯ ಸಿನಿಮಾಗಳಲ್ಲಿ ಕಂಡೇ ಇರದ ಸರ್ಕಾರವನ್ನು ಪ್ರಶ್ನಿಸುವ ಕಾರ್ಯವನ್ನು ‘ಜವಾನ್’ ಮಾಡುತ್ತದೆ.
‘ಜವಾನ್’ ಸಿನಿಮಾದ ಆರಂಭಕ್ಕೆ ಮುನ್ನ ಥಿಯೇಟರ್‌ನಲ್ಲಿ ತೋರಿಸುವ ಮಸಾಲೆಯೊಂದರ ಹೊಸ ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ನಡುವೆ ಆಸಕ್ತಿದಾಯಕವಾದ ‘ನೋಕ್ ಜೋಕ್’ ಒಂದು ನಡೆಯುತ್ತದೆ. ‘ನಾನು ಈಗ ಆ್ಯಕ್ಷನ್ ಹೀರೋ’ ಎನ್ನುತ್ತಾನೆ ಶಾರುಖ್, ‘ಹಾಗಿದ್ರೆ ನಾನೇನು ರೋಮ್ಯಾನ್ಸ್ ಮಾಡಲಾ?’ ಎಂದು ಕೇಳುತ್ತಾನೆ ಮಾಜಿ ಆಕ್ಷನ್ ಹೀರೋ ಅಮಿತಾಭ್. ‘ಇಲ್ಲ ಅದನ್ನೂ ನಾನೇ ಮಾಡ್ತೇನೆ. ಖಾರ ಮತ್ತು ಬಣ್ಣ ಎರಡೂ ಇರುವ ಮಸಾಲೆಯಂತೆ ನಾನು’ ಎನ್ನುತ್ತಾನೆ ಶಾರುಖ್. ಈ ಜಾಹೀರಾತು ಮುಂದೆ ಬರಲಿರುವ ಚಿತ್ರದ ಸಣ್ಣ ಪರಿಚಯದಂತಿದೆ.
ಆದರೆ, ಖಾರ ಮತ್ತು ಬಣ್ಣ ಮಾತ್ರವಲ್ಲ, ಅಟ್ಲೀ ನಿರ್ದೇಶನದ ಈ ಸಿನಿಮಾದಲ್ಲಿ ಉಪ್ಪು, ಖಾರ, ಹುಳಿ, ಸಿಹಿ, ಕಹಿ, ಒಗರು ಎಲ್ಲಾ ಮಿಳಿತವಾಗಿದೆ ಮತ್ತು ಅವೆಲ್ಲಾ ಜೋರಾಗಿಯೇ ಇದೆ. ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದು, ದೊಡ್ಡ ಬಜೆಟ್‌ನ ಆ್ಯಕ್ಷನ್ ಸಿನಿಮಾಗಳೇ ಆದ್ದರಿಂದ ಮತ್ತು ಲವರ್ ಬಾಯ್ ಶಾರುಖ್‌ಗೆ ಕಳೆದ ಹಲವು ವರ್ಷಗಳಿಂದ ಒಂದೂ ದೊಡ್ಡ ಹಿಟ್ ಚಿತ್ರ ನೀಡಲು ಸಾಧ್ಯವಾಗದ ಕಾರಣ ಶಾರುಖ್ ಕಾಲ ಮುಗಿಯಿತು ಎಂದೇ ಹಲವರು ವಿಮರ್ಶಿಸಿದ್ದರು. ಆದರೆ, ವರ್ಷದ ಆರಂಭದಲ್ಲಿ ‘ಪಠಾಣ್’ ಸಿನಿಮಾದ ಜೊತೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದ ಶಾರುಖ್ ಆ್ಯಕ್ಷನ್ ಹೀರೋ ಆಗಿ ಮಿಂಚಿದ್ದಲ್ಲದೆ, ಈಗ ‘ಜವಾನ್’ನೊಂದಿಗೆ ತಮ್ಮ ಯಶಸ್ಸು ಒಂದು ಆ್ಯಕ್ಷನ್ ಸಿನಿಮಾಗೆ ಸೀಮಿತವಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
‘ಜವಾನ್’ ನೋಡಿದ ಮೇಲೆ, ‘ಪಠಾಣ್’ ಸಿನಿಮಾ ಕೇವಲ ಟ್ರೈಲರ್ ಆಗಿತ್ತು ಎಂಬುದು ಗೊತ್ತಾಗುತ್ತದೆ. ಆದರೆ, ಇದನ್ನು ಒಂದು ದೊಡ್ಡ ಮಾಸ್, ಆ್ಯಕ್ಷನ್ ಚಿತ್ರ ಎಂದು ಸುಲಭವಾಗಿ ತಳ್ಳುಹಾಕಲು ಸಾಧ್ಯವಾಗದಂತೆ ಅಟ್ಲೀ, ಸಮಕಾಲೀನವಾದ ಸಾಮಾಜಿಕ ವಿಷಯಗಳಿಂದ ತುಂಬಿ ಬಿಡುತ್ತಾರೆ ಮತ್ತು ಅಧಿಕಾರವನ್ನು ಅನುಭವಿಸುತ್ತಿರುವವರಿಗೆ ಬಿಸಿ ಮುಟ್ಟವಂತಹ ಸಂದೇಶವನ್ನು ಇಟ್ಟಿದ್ದಾರೆ. ಯಾವುದೋ ದೂರದ, ಸುಂದರ ಪರ್ವತ ಪ್ರದೇಶವೊಂದರಲ್ಲಿ ಕತೆ ಆರಂಭವಾಗುತ್ತದೆ. ಅಲ್ಲಿ ದೊಡ್ಡ ರೀತಿಯಲ್ಲಿ ತನ್ನ ನಾಯಕನನ್ನು ಪರಿಚಯಿಸುವ ನಿರ್ದೇಶಕ, ಹತ್ತೇ ನಿಮಿಷದೊಳಗೆ ನಮ್ಮನ್ನು 30 ವರ್ಷ ಮುಂದೆ ಕರೆದುಕೊಂಡು ಹೋಗುತ್ತಾರೆ ಮತ್ತು ನೇರವಾಗಿ ಮುಂಬೈ ಮೆಟ್ರೋದೊಳಗೆ ಕೂರಿಸುತ್ತಾರೆ. ಅಲ್ಲಿಂದ ಶಾರುಖ್ ತೆರೆಯ ಮೇಲೆ ಏನಿಲ್ಲವೆಂದರೂ ಐದಾರು ವೇಷಗಳಲ್ಲಿ ಕಾಣಿಸಿಗುತ್ತಾರೆ ಮತ್ತು ಶಾರುಖ್ ಅಭಿಮಾನಿಗಳಿಗೆ ಇದು ರಸದೌತಣದಂತಿದೆ.
ಮೊದಲ ಭಾಗವನ್ನು ಅಟ್ಲೀ, ಶಾರುಖ್ ಮತ್ತು ಆತನ ಆರು ಜನ ಮಹಿಳಾ ಸಹಚರರ ತಂಡ ನಡೆಸುವ ಒಂದಷ್ಟು ‘ವಿದ್ರೋಹಿ’ ಕೆಲಸಗಳು ಮತ್ತು ಅವರನ್ನು ತಡೆಯಲು, ಹಿಡಿಯಲು ಹೊರಟಿರುವ ಪೋಲೀಸ್ ಅಧಿಕಾರಿ ನರ್ಮದಾ (ನಯನತಾರ) ನಡುವಿನ ಕಳ್ಳ ಪೋಲೀಸ್ ಆಟಗಳಿಂದ ತುಂಬಿದ್ದಾರೆ. ಇವು ಮನೋರಂಜಕವಾಗಿವೆ ಮತ್ತು ರೋಚಕವಾಗಿವೆ. ಜೊತೆಜೊತೆಗೆ, ರೈತ ಆತ್ಮಹತ್ಯೆಗಳು, ಉದ್ಯಮಿಗಳ ಸಾಲ ಮನ್ನಾ, ಸರ್ಕಾರಿ ಆಸ್ಪತ್ರೆಗಳ ದುರವಸ್ಥೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ತೆರೆಯ ಮೇಲೆ ತರಲಾಗಿದೆ. ನಡುವಿನ ಸಣ್ಣ ಅಂತರದಲ್ಲೇ, ಪುಟ್ಟ, ಸುಂದರ ಮತ್ತು ವಿಶಿಷ್ಟ ಪ್ರೇಮಕತೆಯೂ ನಡೆದು ಹೋಗುತ್ತದೆ.
ಇವೆಲ್ಲವೂ ಮುಂದಿನ ಡಬಲ್ ಧಮಾಕದಂತಹ ಮಧ್ಯಂತರ ಮತ್ತು ಮುಂದಿನ ಭಾಗಕ್ಕೆ ಸರಿಯಾದ ಬುನಾದಿಯಾಗಿ ಕೆಲಸ ಮಾಡುತ್ತದೆ. ಮದ್ಯಂತರದ ನಂತರ ತಮ್ಮ ಎಂದಿನ ಫ್ಲಾಷ್‌ಬ್ಯಾಕ್ ತಂತ್ರದಲ್ಲಿ ತುಂಬಾ ಭಾವನಾತ್ಮಕವಾದ ಕತೆ ಹೇಳುವ ನಿರ್ದೇಶಕರು, ಐಶ್ವರ್ಯ ಪಾತ್ರದಲ್ಲಿ ದೀಪಿಕಾ ಪಡುಕೋಣೆಯನ್ನು ಪರಿಚಯಿಸಿ, ಹಿಟ್ ಜೋಡಿ ಶಾರುಖ್ ಮತ್ತು ದೀಪಿಕಾ ಮ್ಯಾಜಿಕ್ ಅನ್ನು ಬಳಸಿಕೊಳ್ಳುತ್ತಾರೆ. ಮೊದಲ ಭಾಗದಲ್ಲಿ ಅಷ್ಟೇನೂ ಕಾಣಸಿಗದ ಖಳನಾಯಕ ಕಾಲ (ವಿಜಯ ಸೇತುಪತಿ) ಈ ಭಾಗದಲ್ಲಿ ಆವರಿಸಿಕೊಳ್ಳುತ್ತಾರೆ. ಸಾಕಷ್ಟು ರೋಚಕ ಆ್ಯಕ್ಷನ್ ಮತ್ತು ಛೇಸ್ ದೃಶ್ಯಗಳು, ಹಾಡು ನೃತ್ಯಗಳು, ಆಗಾಗ ಬರುವ ಅನಿರೀಕ್ಷಿತ ಮತ್ತು ನಿರೀಕ್ಷಿತ ತಿರುವುಗಳೊಂದಿಗೆ ದ್ವಿತೀಯಾರ್ಧ ಅಲ್ಲಲ್ಲಿ ಬಿಸಿ ಕಳೆದುಕೊಂಡು ಮತ್ತೆ ಕೆಲವು ಕಡೆ ಎದೆ ಬಡಿತ ಹೆಚ್ಚಿಸುತ್ತಾ ಸಾಗುತ್ತದೆ. ಆದರೆ, ಮೊದಲಾರ್ಧಕ್ಕೆ ಹೋಲಿಸಿದರೆ ಎರಡನೇ ಭಾಗ ಕೆಲವು ಕಡೆ ಎಳೆದಂತೆ ಅನಿಸುತ್ತದೆ.
ಇಂತಹ ಒಂದು ಆ್ಯಕ್ಷನ್ ಚಿತ್ರಕ್ಕೆ ಶಾರುಖ್ ನಾಯಕ ಆಗಿರುವುದರ ದೊಡ್ಡ ಲಾಭವೆಂದರೆ ತೆರೆಯನ್ನು ತುಂಬುವ ಮಹಿಳೆಯರು. ಭಾರತದ ಇತರ ಯಾವುದೇ ದೊಡ್ಡ ಬಜೆಟ್, ಆ್ಯಕ್ಷನ್ ಮಾಸ್ ಚಿತ್ರಗಳಲ್ಲಿ ಕಂಡಿಲ್ಲದಷ್ಟು ಮಹಿಳೆಯರು ಈ ಚಿತ್ರದಲ್ಲಿದ್ದಾರೆ. ಆಝಾದ್ (ಶಾರುಖ್) ತಂಡದಲ್ಲಿರುವ ಸದಸ್ಯರು ಮಹಿಳೆಯರು, ಇವರನ್ನು ಹಿಡಿಯಲು ಯತ್ನಿಸುವ ಪೋಲೀಸ್ ಮಹಿಳೆ, ಚಿತ್ರದ ಪ್ರಮುಖ ಭಾಗಗಳು ನಡೆಯುವುದು ಮಹಿಳಾ ಕಾರಾಗೃಹದಲ್ಲಿ. ಇತರ ಆ್ಯಕ್ಷನ್ ಚಿತ್ರಗಳಲ್ಲಿ ಹೆಣ್ಣುಗಳನ್ನು ಒಂದಷ್ಟು ದೃಶ್ಯಗಳಲ್ಲಿ ಐ ಕ್ಯಾಡಿಯಂತೆ ಬಳಸುವುದು ಸಾಮಾನ್ಯ ಸಂಗತಿಯಾಗಿರುವಾಗ, ‘ಜವಾನ್’ನಲ್ಲಿ ಮಾತ್ರ ಯಾವ ಮಹಿಳೆಯೂ ಅಬಲೆಯಲ್ಲ, ನಾಯಕ ರಕ್ಷಿಸಲಿ ಎಂದು ಕಾಯುವುದೂ ಇಲ್ಲ.
ಹಾಗಂತ ಮಹಿಳಾವಾದಿ ಎಂದೇ ಹೆಸರಾಗಿರುವ ಶಾರುಖ್ ಆ ಮೂಲಕ ಸಂಪೂರ್ಣ ಲಿಂಗ ಸಾಮಾನತೆ ಸಾಧಿಸಿದ್ದಾರೆ ಎಂದೇನಲ್ಲ. ಇಷ್ಟೆಲ್ಲಾ ಮಹಿಳೆಯರಿದ್ದೂ, ಚಿತ್ರದ ಕೇಂದ್ರಬಿಂದು, ಪರಿಧಿ, ವಿಸ್ತೀರ್ಣಗಳನ್ನು ಆವರಿಸಿಕೊಂಡಿರುವುದು ನಾಯಕ ಶಾರುಖ್. ಹೀಗಾಗಿ, ಇದರಲ್ಲಿರುವ ಎಷ್ಟೋ ಪ್ರತಿಭಾವಂತ ನಟಿಯರಿಗೆ ಅರ್ಹ ರೀತಿಯ ಪಾತ್ರ ಮತ್ತು ತೆರೆಯ ಮೇಲೆ ಸಮಯ ಸಿಕ್ಕಿಲ್ಲ. ಆದರೂ, ಇದರಲ್ಲಿರುವ ಮಹಿಳಾ ಸಂಖ್ಯಾಬಲ ಮತ್ತು ಪಾತ್ರಗಳ ವಿಧ ಗಮನಾರ್ಹ ಮತ್ತು ಶ್ಲಾಘನೀಯ ಬದಲಾವಣೆ ಎಂಬುದು ನಿಜ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಮಗುವಿನ ಅವಿವಾಹಿತ ತಾಯಿಯನ್ನು, ನಾಯಕ ತೀರ ಸಹಜವಾಗಿ ಮದುವೆಯ ನಂಟಸ್ತನಕ್ಕಾಗಿ ಭೇಟಿ ಮಾಡುವುದು, ದೊಡ್ಡ ಬಾಷಣಗಳ ಹಂಗಿಲ್ಲದೆ ಸರಳವಾಗಿ, ಪ್ರಮುಖ ಸಂದೇಶವನ್ನು ದಾಟಿಸುತ್ತದೆ.
‘ಜವಾನ್’ ಸಿನಿಮಾ ಕತೆ ಹಲವು ಸಿನಿಮಾಗಳನ್ನು ನೆನಪಿಸುತ್ತದೆ ಮತ್ತು ಪ್ರಮುಖ ಸನ್ನಿವೇಶಗಳಲ್ಲಿ ಬಳಸಲಾಗಿರುವ ಹಾಡುಗಳು, ಪಾತ್ರಗಳ ಹೆಸರುಗಳು, ಸಂಭಾಷಣೆಗಳ ಮೂಲಕ ಹಲವು ಸಿನಿಮಾಗಳನ್ನು ಉದ್ಧರಿಸುತ್ತದೆ. ಅದು ಚಿತ್ರಕ್ಕೊಂದು ವಿಶಿಷ್ಟ ಚಮತ್ಕಾರಿಕತೆಯನ್ನು ನೀಡಿದೆ. ಮೊದಲೇ ಹೇಳಿದಂತೆ, ಚಿತ್ರ ಕೇವಲ ಫೈಟ್ ಸೀನ್‌ಗಳ ರೋಚಕತೆಗೆ ಸೀಮೀತವಾಗಿಲ್ಲ. ಇಲ್ಲಿ ತಾಯಿ ಸೆಂಟಿಮೆಂಟ್ ಇದೆ, ದ್ವಿಪಾತ್ರವಿದೆ, ತಂದೆ ಮಗನ ಬಾಂಧವ್ಯವಿದೆ, ಜವಾನ್ – ಕಿಸಾನ್ ಸೆಂಟಿಮೆಂಟ್‌ಗಳಿವೆ, ದೇಶಪ್ರೇಮವಿದೆ. ಕಣ್ಣೀರು ಧಾರಾಕಾರವಾಗಿ ಸುರಿಸಬೇಕಾದ ಸನ್ನಿವೇಶಗಳು ಧಾರಾಳವಾಗಿದೆ. ಯಾವುದೋ ಒಂದು ನಿರ್ದಿಷ್ಟ ಸಾಮಾಜಿಕ ಸಮಸ್ಯೆಯ ಬಗ್ಗೆ ಮಾತನಾಡದೆ ಅಟ್ಲೀ ಹಲವಾರು ಪ್ರಚಲಿತ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಮತ್ತು ಇವುಗಳನ್ನೆಲ್ಲಾ ತೆರೆಯ ಮೇಲೆ ತರುವ ವಿಷಯದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ, ಜನಪ್ರಿಯ ಸೂತ್ರಗಳನ್ನು, ಕ್ಲೀಷೆಗಳನ್ನು, ಅಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿ ಒಂದು ಮಾಸ್ ಎಂಟರ್‌ಟೇನರ್ ತೆರೆಗೆ ತಂದಿದ್ದಾರೆ.
ತಮ್ಮ ನಾಯಕ ಹಿಂದಿ ಸಿನಿಮಾದ ಹೀರೋ ಎಂಬ ಕಾರಣಕ್ಕೆ ತಮ್ಮ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಬದಲಾಗಿ ಶಾರುಖ್‌ಗೆ ಇರುವ ಆಕರ್ಷಣೆ ಮತ್ತು ತಾರಾಬಲವನ್ನು ತನ್ನ ರೀತಿಯ ಸಿನಿಮಾ ಮಾಡಲು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ, ಚಿತ್ರ ಸೌತ್ ಇಡಿಯನ್ ಥಾಲಿಯಲ್ಲಿ, ನಾರ್ತ್ ಇಂಡಿಯನ್ ಪರೋಟ ಬಡಿಸಿದಂತಿದೆ. ನಿರ್ದೇಶಕರಿಗೆ ಇರುವ ಈ ಆತ್ಮವಿಶ್ವಾಸವೇ ಚಿತ್ರದಲ್ಲಿರುವ ಎಲ್ಲಾ ಅತಾರ್ಕಿಕತೆಗಳನ್ನು, ಅತಿಯನ್ನು ಮತ್ತು ಮಿತಿಯನ್ನು ಮರೆಯುವಂತೆ ಮಾಡುತ್ತದೆ.
ನಟನೆಯ ವಿಷಯಕ್ಕೆ ಬಂದರೆ ಶಾರುಖ್ ಇದು ತನ್ನ ಚಿತ್ರ ಎಂಬುದು ಎಲ್ಲೂ ಯಾರೂ ಮರೆಯದಂತೆ ನಟಿಸಿದ್ದಾರೆ, ಆವರಿಸಿದ್ದಾರೆ. ಮಗನ ಪಾತ್ರಕ್ಕಿಂತ ತನ್ನ ನಿಜ ವಯಸ್ಸಿಗೆ ಹತ್ತಿರವಾದ ಅಪ್ಪನ ಪಾತ್ರದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ವಿಜಯ್ ಸೇತುಪತಿ ತಮ್ಮ ಪಾತ್ರಕ್ಕೆ ಸರಿಯಾದ ಆಳ ಅಗಲವಿಲ್ಲದಿದ್ದರೂ, ಶಾರುಖ್‌ಗೆ ಸಮರ್ಥನೀಯ ಎದುರಾಳಿಯಾಗಿ ಮಿಂಚಿದ್ದಾರೆ. ದೀಪಿಕಾ ಸಣ್ಣದಾದರೂ, ನೆನಪುಳಿಯುವ ಪಾತ್ರದಲ್ಲಿ, ಕೆಲವೇ ನಿಮಿಷಗಳಲ್ಲಿ ಹಲವಾರು ಭಾವನೆಗಳನ್ನು ತುಂಬಿ ಮಾಯವಾಗುತ್ತಾರೆ. ನಯನತಾರ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಸೇರಿದಂತೆ ಎಲ್ಲರೂ ಅಚ್ಚುಕಟ್ಟಾಗಿ ನಟಿಸಿದ್ದಾರೆ.
ಅನಿರುದ್ಧ ಹಿನ್ನೆಲೆ ಸಂಗೀತ ಚಿತ್ರವನ್ನು ಎತ್ತರಕ್ಕೆ ಏರಿಸುತ್ತದೆ, ಆದರೆ, ಹಾಡುಗಳು ನಿರಾಸೆಗೊಳಿಸುತ್ತವೆ. ಒಟ್ಟಿನಲ್ಲಿ ಅಟ್ಲೀ ಚಿತ್ರಗಳಲ್ಲಿರುವ ಅದ್ಧೂರಿತನ ಎದ್ದು ಕಾಣುತ್ತದೆ. ಚಿತ್ರ ಎತ್ತಿಕೊಂಡಿರುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡದಿದ್ದರೆ ಈ ವಿಮರ್ಶೆ ಅಪೂರ್ಣ. ಏಕೆಂದರೆ, ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಚರ್ಚೆ ಹಿಂದೆ ಸರಿದು, ಅನಗತ್ಯ ವಿವಾದಗಳು, ಉಪಯೋಗಕ್ಕೆ ಬಾರದ ಸಾಧನೆಗಳ ಚರ್ಚೆಯೇ ದೊಡ್ಡದಾಗಿ ನಡೆಯುತ್ತಿರುವಾಗ ‘ಜವಾನ್’ ಎಲ್ಲಾ ಜ್ವಲಂತ ಸಮಸ್ಯೆಗಳನ್ನೂ ನೆನಪಿಸುತ್ತದೆ.
ಅವು ಬಹುತೇಕ ತೀರಾ ನಾಟಕೀಯ ಮತ್ತು ಕಣ್ಣೀರು ತರಿಸುವ ಸಲುವಾಗಿಯೇ ವಿನ್ಯಾಸಗೊಳಿಸಲಾದ ದೃಶ್ಯಗಳಾಗಿದ್ದರೂ, ಒಂದು ಮಾಸ್ ಸಿನಿಮಾದ ಭಾಗವಾಗಿ ಸಮರ್ಪಕ ಕೆಲಸ ಮಾಡುತ್ತದೆ. ದೇಶ ನಡೆಸುವ ದೊಡ್ಡ ಉದ್ಯಮಿಗಳು, ಭ್ರಷ್ಟ ನಾಯಕರು, ಅಧಿಕಾರಿಗಳು, ರೈತ ಆತ್ಮಹತ್ಯೆಗಳು, ಸೈನಿಕರಿಗೆ ನೀಡಲಾಗುವ ಕಳಪೆ ಶಸ್ತ್ರಾಸ್ತ್ರಗಳ, ಆಮ್ಲಜನಕ ಕೊರತೆಯಿಂದ ಅಸುನೀಗುವ ಮಕ್ಕಳು, ಸಾಲ ಮನ್ನಾ ಮಾಡಿಸಿಕೊಂಡು ಮೆರೆಯುವ ಉದ್ಯಮಿಗಳು, ಇವಿಎಂ, ಕೈಗಾರಿಕೆಗಳು ನಡೆಸುತ್ತಿರುವ ಮಾಲಿನ್ಯ….. ಹೀಗೆ ಇವೆಲ್ಲಾ ಯಾವುದೋ ವ್ಯಕ್ತಿಗಳು, ಘಟನೆಗಳನ್ನು ನೆನಪಿಸುತ್ತವೆ. ಮತ್ತು ಇತ್ತೀಚೆಗೆ ಹಿಂದಿಯ ಜನಪ್ರಿಯ ಸಿನಿಮಾಗಳಲ್ಲಿ ಕಂಡೇ ಇರದ ಸರ್ಕಾರವನ್ನು ಪ್ರಶ್ನಿಸುವ ಕಾರ್ಯವನ್ನು ಮಾಡುತ್ತದೆ.
ಕೊನೆಯಲ್ಲಿ ನೇರವಾಗಿ ಪ್ರೇಕ್ಷಕರೊಂದಿಗೇ ಮಾತನಾಡುವ ನಾಯಕ, ಮತದಾರರ ಮತಕ್ಕಿರುವ ಶಕ್ತಿ ಮತ್ತು ಆ ಶಕ್ತಿಯನ್ನು ತಮ್ಮ ನಾಯಕರುಗಳನ್ನು ಪ್ರಶ್ನಿಸಲು ಬಳಸುವಂತೆ ಸಂದೇಶ ನೀಡುತ್ತಾನೆ. ತನ್ನ ವಿರೋಧಿಗಳಿಗೆ ತನ್ನ ಚಿತ್ರಗಳ ಮೂಲಕವೇ ಉತ್ತರ ನೀಡುವ ಶಾರುಖ್, ಚಿತ್ರದ ರಾಜಕೀಯದ ಬಗ್ಗೆ ಯೋಚಿಸದೆಯೇ ಹಾಗೇ ಸುಮ್ಮನೆ ಈ ಕತೆಯನ್ನು ಎತ್ತಿಕೊಂಡಿದ್ದಾರೆ ಎಂದು ಅನಿಸುವುದಿಲ್ಲ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ತೆರೆಯ ಮೇಲೆ ಕಾಣುವ ಇವೆಲ್ಲಾ ಕಾಕಾತಾಳೀಯ ಎಂದೂ ಕೂಡ ಅನಿಸುವುದಿಲ್ಲ.