ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದೇಶವನ್ನು ಕಾಡಿದ ಕೋವಿಡ್ 19 ವಾಕ್ಸಿನ್ ಸುತ್ತ ಹೆಣೆದ ಕಥಾಹಂದರವಿದು. ನಾನಾ ಪಾಟೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಸೆಪ್ಟೆಂಬರ್ 28ರಂದು ತೆರೆಕಾಣುತ್ತಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋ-ವಾಕ್ಸಿನ್ ಅಭಿವೃದ್ಧಿಯ ಕುರಿತ ನೈಜ ಕಥೆಯನ್ನು ಸಿನಿಮಾ ಹೇಳಲಿದೆ. ಟ್ರೈಲರ್‌ನಲ್ಲಿ ಹಿರಿಯ ವಿಜ್ಞಾನಿ (ನಾನಾ ಪಾಟೇಕರ್) ಲಸಿಕೆಯನ್ನು ಕಂಡು ಹಿಡಿಯುವುದಾಗಿ ಭರವಸೆ ನೀಡುವುದನ್ನು ಕಾಣಬಹುದು. ಈವಿಷಯವನ್ನು ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೋಸ್ಕರ ರಹಸ್ಯವಾಗಿಡಲು ಉನ್ನತ ಅಧಿಕಾರಿಗಳನ್ನು ವಿಜ್ಞಾನಿಗಳು ಒತ್ತಾಯಿಸುತ್ತಾರೆ.
ಭಾರತದಲ್ಲಿರುವ ಈ ವೈದ್ಯಕೀಯ ಮೂಲಸೌಕರ್ಯವು 130 ಕೋಟಿ ಜನರನ್ನು ರಕ್ಷಿಸಬಲ್ಲುದೇ? ‘ಇಲ್ಲ, ಭಾರತದಿಂದ ಈ ಕಾರ್ಯ ಅಸಾಧ್ಯ’ ಎಂದು ಪತ್ರಕರ್ತೆ (ರೈಮಾ ಸೇನ್) ಹೇಳುತ್ತಾಳೆ. ಕೋವಿಡ್‌ಗಾಗಿ ಲಸಿಕೆ ಕಂಡುಹಿಡಿಯಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ವಿಜ್ಞಾನಿಗಳ ಸಾಹಸವನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಈ ವೈದ್ಯಕೀಯ ಥ್ರಿಲ್ಲರ್ ಸಿನಿಮಾವನ್ನು ಅಭಿಷೇಕ್ ಅಗರ್‌ವಾಲ್ ಮತ್ತು ಪಲ್ಲವಿ ಜೋಶಿ ನಿರ್ಮಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ (‘ಕಾಂತಾರ’ ಖ್ಯಾತಿಯ ಕನ್ನಡ ನಟಿ) ಮತ್ತು ಮೋಹನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಸೆಪ್ಟೆಂಬರ್ 28ರಂದು ಮೂಲ ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.