ಕನ್ನಡದ ಇತ್ತೀಚಿನ ಯಶಸ್ವೀ ಸಿನಿಮಾಗಳಾದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’ ಇದೀಗ ಓಟಿಟಿಯಲ್ಲಿ ಲಭ್ಯವಿವೆ. ಚಿರಂಜೀವಿ ಮತ್ತು ಕೀರ್ತಿ ಸುರೇಶ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಣ್ಣ – ತಂಗಿ ಕತೆಯ ‘ಭೋಳ ಶಂಕರ’ ತೆಲುಗು ಸಿನಿಮಾ ಸೆಪ್ಟೆಂಬರ್‌ 15ರಿಂದ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ | ಕನ್ನಡ | ಜುಲೈ 21ರಂದು ತೆರೆಕಂಡು ಯಶಸ್ವಿಯಾಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಹೊಸ ಹುಡುಗರು, ಭಿನ್ನವಾಗಿ ಹೆಣೆದು, ಪ್ರಸ್ತುತಪಡಿಸಿದ ಈ ಸಿನಿಮಾ ಯುವಕರನ್ನು ಬಹುವಾಗಿ ಸೆಳೆದಿತ್ತು. ಇತ್ತೀಚೆಗಷ್ಟೇ ಸಿನಿಮಾ 50 ದಿನ ಪೂರೈಸಿದಾಗ ಚಿತ್ರತಂಡದವರು ಸಂಭ್ರಮಾಚರಣೆ ನಡೆಸಿದ್ದರು. ಯುವ ಪ್ರತಿಭಾವಂತ ಕಲಾವಿದರ ಜೊತೆ ರಮ್ಯ, ರಿಷಭ್‌ ಶೆಟ್ಟಿ, ದಿಗಂತ್‌, ಪವನ್‌ ಕುಮಾರ್‌ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ಚಿತ್ರವನ್ನು ಪರಂವಃ ಪಿಕ್ಚರ್ಸ್ ಬ್ಯಾನರ್ ಅಡಿ ನಟ ರಕ್ಷಿತ್ ಶೆಟ್ಟಿ ಪ್ರಸೆಂಟ್‌ ಮಾಡಿದ್ದರು.

ಕೌಸಲ್ಯ ಸುಪ್ರಜಾ ರಾಮ | ಕನ್ನಡ | ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್‌, ಬೃಂದಾ ಆಚಾರ್ಯ ಮುಖ್ಯಪಾತ್ರಗಳಲ್ಲಿ ನಟಿಸಿದ್ದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೆಪ್ಟೆಂಬರ್ 14ರ ರಾತ್ರಿಯಿಂದ Amazon Primeನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಶಶಾಂಕ್ ನಿರ್ದೇಶಿಸಿರುವ ಈ ಸಿನಿಮಾ ಕುಟುಂಬ ಪ್ರೇಕ್ಷಕರನ್ನು​ ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿತ್ತು. ಈಗ OTT ಮೂಲಕ ಇನ್ನೂ ಹೆಚ್ಚು ಜನರಿಗೆ ಸಿನಿಮಾ ತಲುಪುತ್ತಿದೆ. ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿಸಿ ಪಾಟೀಲ್ ಮತ್ತು ನಿರ್ದೇಶಕ ಶಶಾಂಕ್ ನಿರ್ಮಾಣದ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದೆ.

ಭೋಳ ಶಂಕರ | ತೆಲುಗು | ಚಿರಂಜೀವಿ ನಟನೆಯ ‘ಭೋಳ ಶಂಕರ’ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಪ್ರೇಕ್ಷಕರು ಚಿರಂಜೀವಿಯ ಕತೆಯ ಆಯ್ಕೆಯ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಿನಿಮಾ ಇದೀಗ Netflix​ನಲ್ಲಿ ಸೆಪ್ಟೆಂಬರ್ 15ರಿಂದ ಸ್ಟ್ರೀಮಿಂಗ್‌ ಆರಂಭಿಸಿದೆ. ಚಿತ್ರವನ್ನು ರಾಮಬ್ರಹ್ಮ ಸುಂಕರ ನಿರ್ಮಿಸಿದ್ದು, ನಟ ಚಿರಂಜೀವಿ ಅವರು ಚಿತ್ರದಲ್ಲಿ ಅಜಿತ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸಿದ್ದರು. ತಮನ್ನಾ ಭಾಟಿಯಾ, ಸುಶಾಂತ್, ರಘು ಬಾಬು, ಮುರಳಿ ಶರ್ಮಾ, ರವಿಶಂಕರ್, ವೆನ್ನೆಲ ಕಿಶೋರ್, ತುಳಸಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

ರಾಮಬಾಣಂ | ತೆಲುಗು | ಗೋಪಿಚಂದ್ ನಟಿಸಿದ್ದ ‘ರಾಮಬಾಣಂ’ ಸಿನಿಮಾ ಸೆಪ್ಟೆಂಬರ್ 15ರಿಂದ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಸಿನಿಮಾ ಕಳೆದ ತಿಂಗಳ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ತನ್ನ ಸಹೋದರ ರಾಜಾರಾಮ್‌ ನನ್ನು ಬಿಟ್ಟು ಓಡಿಹೋಗಿ ಅನೇಕ ವರ್ಷಗಳ ನಂತರ ವಿಕ್ಕಿ (ಗೋಪಿಚಂದ್) ಕೋಲ್ಕತ್ತಾದಲ್ಲಿ ದರೋಡೆಕೋರನಾಗಿ ಬದಲಾಗಿ ರೌಡಿಗಳೊಟ್ಟಿಗೆ ವಾಸಿಸುತ್ತಿರುತ್ತಾನೆ. ವಿಕ್ಕಿಯೇ ತನ್ನ ಸಹೋದರನೆಂದ ತಿಳಿದ ರಾಜಾರಾಮ್‌ ಯಾವ ರೀತಿ ಅವನನ್ನು ಬದಲಾಯಿಸುತ್ತಾನೆ ಎನ್ನುವುದು ಚಿತ್ರದ ಕತೆ. ಶ್ರೀವಾಸ್ ಚಿತ್ರವನ್ನು ನಿರ್ದೇಶಿಸಿದ್ದು, ಟಿ ಜಿ ವಿಶ್ವ ಪ್ರಸಾದ್ ನಿರ್ಮಿಸಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಬಾರ್ಬಿ | ಇಂಗ್ಲಿಷ್‌ | ಅಡ್ವೆಂಚರ್ ಫ್ಯಾಂಟಸಿ ಕಾಮಿಡಿ ಸಿನಿಮಾ. ನೋವಾ ಬಾಂಬಾಚ್ ಚಿತ್ರಕಥೆ ಬರೆದಿದ್ದು, ಗ್ರೆಟಾ ಗೆರ್ವಿಗ್ ನಿರ್ದೇಶಿಸಿದ್ದಾರೆ. ಮ್ಯಾಟ್ಟೆಲ್ ಅವರ ‘ಬಾರ್ಬಿ ಫ್ಯಾಶನ್ ಗೊಂಬೆ’ಗಳನ್ನು ಆಧರಿಸಿ ಹಲವಾರು ಕಂಪ್ಯೂಟರ್ ಆನಿಮೇಟೆಡ್ ಡೈರೆಕ್ಟ್ ಟು ವೀಡಿಯೋ ಮತ್ತು ಸ್ಟ್ರೀಮಿಂಗ್ ಟೆಲಿವಿಷನ್ ಚಲನಚಿತ್ರಗಳ ತೆರೆಕಂಡಿವೆ. ಆದರೆ ಈ ಚಿತ್ರವು ಮೊದಲ ಲೈವ್ ಆಕ್ಷನ್ ಬಾರ್ಬಿ ಚಲನಚಿತ್ರವಾಗಿದೆ. ಚಿತ್ರದಲ್ಲಿ ಮಾರ್ಗಾಟ್ ರಾಬಿ ‘ಬಾರ್ಬಿ’ಯಾಗಿ ಮತ್ತು ರಿಯಾನ್ ಗೊಸ್ಲಿಂಗ್ ಕೆನ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಮೇರಿಕಾ ಫೆರೆರಾ, ಕೇಟ್ ಮೆಕಿನ್ನನ್, ಮೈಕೆಲ್ ಸೆರಾ, ಅರಿಯಾನಾ ಗ್ರೀನ್‌ಬ್ಲಾಟ್, ಇಸಾ ರೇ, ರಿಯಾ ಪರ್ಲ್ಮನ್, ಹೆಲೆನ್ ಮಿರೆನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಭಾರತದಲ್ಲಿ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಿ ಜನಮನ್ನಣೆ ಗಳಿಸಿತ್ತು. ‘ಬಾರ್ಬಿ’ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here