ಲಾಕ್‌ಡೌನ್‌ ಸಮಯದಲ್ಲಿ ಶುರುವಾದ ಪ್ರಾಜೆಕ್ಟ್‌ ‘ದಿ ವೆಕೆಂಟ್‌ ಹೌಸ್‌’. ನಟಿ ಎಸ್ತರ್‌ ನರೋನ್ಹಾ ನಟಿಸಿ, ನಿರ್ದೇಶಿಸಿ, ಸಂಗೀತ ಸಂಯೋಜಿಸಿರುವ ಕನ್ನಡ – ಕೊಂಕಣಿ ದ್ವಿಭಾಷಾ ಸಿನಿಮಾ. ಜಾನೆಟ್‌ ನರೋನ್ಹಾ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರದಲ್ಲಿ ಸಂದೀಪ್‌ ಮಲಾನಿ ನಟಿಸಿದ್ದಾರೆ.

ಬಹುಭಾಷಾ ನಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯೂ ಅವರದೆ. ನಿರ್ಮಾಣದಲ್ಲಿ ಅವರ ತಾಯಿ ಜಾನೆಟ್‌ ನರೋನ್ಹಾ ಜೊತೆಯಾಗಿದ್ದಾರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡುವ ಎಸ್ತರ್‌, ‘ಲಾಕ್‌ಡೌನ್‌ನಲ್ಲಿ ಶುರುವಾದ ಪ್ರಯತ್ನವಿದು. ಈ ಸಿನಿಮಾದಲ್ಲಿ ಕಾಣಿಸುವುದು ನಮ್ಮ ತೋಟದ ಮನೆ. ಲಾಕ್‌ಡೌನ್‌ ಟೈಮ್‌ನಲ್ಲಿ ನಾವು ಅಲ್ಲಿಗೆ ಶಿಫ್ಟ್ ಆಗಿದ್ದೆವು. ನನಗೆ ಹೊಳೆದ ಕತೆಯನ್ನು ತಾಯಿಯ ಬಳಿ ಚರ್ಚಿಸಿ ಕತೆ ಬೆಳೆಸಿದೆ. ಆಕಸ್ಮಾತ್‌ ನಾನೇ ನಿರ್ದೇಶಕಿಯಾಗುವ ಸಂದರ್ಭ ಸೃಷ್ಟಿಯಾಯ್ತು. ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆಗಳಲ್ಲಿ ಸಿನಿಮಾ ತಯಾರಾಗಿದೆ. ಶೀಘ್ರ ಚಿತ್ರವನ್ನು ತೆರೆಗೆ ತರಲಿದ್ದೇವೆ’ ಎನ್ನುತ್ತಾರೆ.

ಮೂಲತಃ ಮಂಗಳೂರಿನವರಾದ ಎಸ್ತರ್‌ ನರೋನ್ಹಾ ಬೆಳೆದದ್ದು ಮುಂಬೈನಲ್ಲಿ. ‘ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ ಪ್ರವೇಶಿಸಿದ ಎಸ್ತರ್ ಮುಂದೆ ತೆಲುಗು, ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದರು. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಎಸ್ತರ್‌ ಅಭಿನಯಿಸಿದ್ದಾರೆ. ಇದೀಗ ‘ದಿ ವೆಕೆಂಟ್ ಹೌಸ್’ ಸಿನಿಮಾದೊಂದಿಗೆ ನಿರ್ದೇಶಕಿಯಾಗಿದ್ದಾರೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಗಿದೆ.

LEAVE A REPLY

Connect with

Please enter your comment!
Please enter your name here