ನೂರಾನಲವತ್ತು ನಿಮಿಷಗಳ ಚಿತ್ರದ ಪ್ರತಿಯೊಂದು ನಿಮಿಷವೂ ಬರಹಗಾರರ ಕಲ್ಪನೆಯ ಮಿತಿಯನ್ನು ಮೀರಿ ತೆರೆಯ ಮೇಲೆ ಪ್ರಕಾಶಿಸಿವೆ. ಆದರೆ ಈ ಮಾದರಿಯ ಅನಿಮೇಷನ್ ಚಿತ್ರಗಳಲ್ಲಿ ಕಥೆ ಮತ್ತು ಕಲ್ಪನೆಗಿಂತ ದೃಶ್ಯವೈಭವ ಮತ್ತು ತಾಂತ್ರಿಕತೆ ನೆನಪಲ್ಲಿ ಉಳಿಯೋದೆ ಹೆಚ್ಚು. ಆದರೆ ನಿರ್ದೇಶಕರ ಅಚ್ಚುಕಟ್ಟು ಮತ್ತು ಕಥಾನಿಷ್ಠೆ ಪ್ರತಿಯೊಂದು ಫ್ರೆಮಿನಲ್ಲೂ ಎದ್ದು ಕಾಣುತ್ತದೆ.
ಬಹು ನಿರೀಕ್ಷಿತ ‘ಸ್ಪೈಡರ್ ಮ್ಯಾನ್ – ಅಕ್ರಾಸ್ ದ ಸ್ಪೈಡರ್ ವರ್ಸ್’ ಬಿಡುಗಡೆಯಾಗಿದೆ. ‘ಸ್ಪೈಡರ್ ಮ್ಯಾನ್- ಇಂಟು ದ ಸ್ಪೈಡರ್ ವರ್ಸ್’ ಚಿತ್ರದ ಅದ್ಭುತ ಅನಿಮೇಷನ್, ಮರೆಯಲಾಗದ ಪಾತ್ರಗಳು ಮತ್ತು ಸಂಕೀರ್ಣ ಕಥೆ ಎಲ್ಲವೂ ಹಸಿರಾಗಿರುವಾಗಲೇ ಅದನ್ನು ಆಧರಿಸಿದ ಮತ್ತೊಂದು ಸ್ಪೈಡರ್ ಮ್ಯಾನ್ ಮಾಯಾಲೋಕವನ್ನು ವೀಕ್ಷಕರಿಗೆ ಉಣಬಡಿಸಲು ತಯಾರಾಗಿದೆ ‘ಸ್ಪೈಡರ್ ಮ್ಯಾನ್ -ಅಕ್ರಾಸ್ ದ ಸ್ಪೈಡರ್ ವರ್ಸ್’ ಚಿತ್ರ. ನಿರೀಕ್ಷಿಸಿದಂತೆಯೂ ಈ ಚಿತ್ರದಲ್ಲೂ ಅದ್ಭುತವಾದ ದೃಶ್ಯಕಲಾಕುಂಚವಿದೆ ಮತ್ತು ಅಪರಿಮಿತವಾದ ಕಲ್ಪನೆಯೂ. ಚಿತ್ರ ನೋಡುತ್ತಿದ್ದಂತೆ ಮುಂದಿನ ಭಾಗ ಯಾವಾಗ ಬರುತ್ತದೆ ಎಂಬ ಕಾತುರವನ್ನು ಹುಟ್ಟುಹಾಕುವ ಚಿತ್ರಗಳ ಸಾಲಿಗೆ ಈ ಚಿತ್ರವೂ ಸೇರುತ್ತದೆ.
ಮೊದಲನೇ ಭಾಗ ಬಂದ ಸುಮಾರು ಒಂದು ವರ್ಷದ ನಂತರ ಈ ಚಿತ್ರ ಬಿಡುಗಡೆಯಾಗಿದ್ದು ಇದೊಂದು ಅನಿಮೇಷನ್ ಚಿತ್ರವಾಗಿದೆ. ಗ್ವೇನ್ ಸ್ಟೇಸಿ, ಅವಳ ತಂದೆ ಜಾರ್ಜ್ ಇಂದ ತನ್ನ ಗುರುತನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ತನ್ನ ವಿಶ್ವಕ್ಕೆ ವಾಪಸಾಗಿದ್ದಾಳೆ. ಖಳ ಪಾತ್ರದ ಬದಲಿಯಾಗಿ ಜೋರ್ಮ ತಕ್ಕೋನ್ ಆಕೆಯ ಪ್ರಪಂಚಕ್ಕೆ ಬಂದಾಗ ಆ ಖಳನನ್ನು ಹಿಂಬಾಲಿಸುತ್ತಾ ಸ್ಪೈಡರ್ ಮ್ಯಾನ್ 2099 ಮತ್ತು ಸ್ಪೈಡರ್ ವುಮನ್ ಕಣಕ್ಕೆ ಇಳಿಯುತ್ತಾರೆ. ಗ್ವೇನ್ ಬಳಿ ಹೋಗಿ ತಾವು ರಹಸ್ಯ ಸ್ಪೈಡರ್ ಸಮುದಾಯದ ಭಾಗವೆಂದೂ ಖಳರಿಗೆಲ್ಲ ತಕ್ಕ ಶಾಸ್ತಿ ಮಾಡಿ ಅವರವರು ಸಲ್ಲುವ ಸ್ಥಳಕ್ಕೆ ವಾಪಸ್ ಕಳಿಸುವ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಇದ್ದಾರೆಂದೂ ತಿಳಿಸಿ ಆಕೆಯನ್ನು ಕಾಪಾಡುತ್ತಾರೆ. ಗ್ವೇನ್ ತಂದೆಗೆ ಆಕೆಯ ಬಗ್ಗೆ ತಿಳಿಯುತ್ತದೆ. ಆಕೆಯೂ ಸ್ಪೈಡರ್ ಸಮುದಾಯದ ಭಾಗವಾಗಿ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ಮತ್ತು ತಪ್ಪುಗಳನ್ನು ತಡೆಯುವ ನಿಟ್ಟಿನಲ್ಲಿ ಕೈಜೋಡಿಸುತ್ತಾಳೆ.
ಆದರೆ ಅಭಿಮಾನಿಗಳಿಗೆ ತಿಳಿದಿರುವಂತೆ ಮೈಲ್ಸ್ ಮೋರೆಲ್ಸ್ ಪಾತ್ರ ಅತ್ಯಂತ ದೊಡ್ಡ ತಪ್ಪುಗಳಲ್ಲಿ ಒಂದು. ಈತನನ್ನು ಕಾಪಾಡುವುದಕ್ಕೋಸ್ಕರವೇ ಪೀಟರ್ ಪಾರ್ಕರ್ ತನ್ನ ಪ್ರಾಣ ತ್ಯಜಿಸಿದ್ದು. ಮೈಲ್ಸ್ ಅನ್ನು ಕಚ್ಚಿದ ಜೇಡ ಅಲ್ಲಿ ಇದ್ದದ್ದೇ ತಪ್ಪು. ಆದರೆ ಅದು ಈಗ ಇದೆ. ಮುಂದೇನು? ಈ ಕಥೆಯ ಮುಖ್ಯಹಂದರವೇ ನಮ್ಮ ಮುಂದಿರುವ ನೈಜ ಚಿತ್ರಣವನ್ನು ಇಟ್ಟುಕೊಂಡು ಮುಂದುವರೆಯುವುದು. ಆದರೆ ಈ ಚಿತ್ರದಲ್ಲಿ ಕಣ್ಣ ಮುಂದಿರುವ ನೈಜತೆಗೆ ಜೋತುಬೀಳುವುದು ಇಲ್ಲದ ಅಥವಾ ಇದ್ದಿರಬಹುದಾದ ನೈಜತೆಯ ಕಲ್ಪನೆಗಳಿಗೆ ಜೋತುಬೀಳುವುದಕ್ಕಿಂತ ವಾಸಿ ಎನ್ನುವುದನ್ನು ಹೇಳಹೊರಟಿದೆಯೋ ಎನಿಸುತ್ತದೆ. ನಮ್ಮ ವಿಧಿ ನಮ್ಮ ಕೈಯ್ಯಲ್ಲೇ ಇದೆ ಎಂದು ಹೇಳುತ್ತಾ ಬಹುತೇಕ ಸೂಪರ್ ಹೀರೊ ಚಿತ್ರಗಳಲ್ಲಿ ತೋರಿಸುವಂತೆ ಎಲ್ಲವೂ ಹಣೆಬರಹ ಎಂಬುದಕ್ಕೆ ಜೋತುಬೀಳದೆ ಇರುವ ಸಂದರ್ಭವನ್ನು ಬಳಸಿಕೊಂಡು ಹೇಗೆ ನಮ್ಮನ್ನು ನಾವು ಸಬಲೀಕರಿಸಿಕೊಳ್ಳಬಹುದು ಎನ್ನುವುದನ್ನು ತೋರಿಸುತ್ತದೆ. ಅಲ್ಲೇ ಇದು ವಿಶೇಷ ಎನಿಸುವುದು.
ಇನ್ನು ಮೈಲ್ಸ್ ಪಾತ್ರಕ್ಕೆ ಬರುವುದಾದರೆ ಅವನು ಬ್ರೂಕ್ಲಿನ್ ಅಲ್ಲಿ ಒಳ್ಳೆಯ ವಿದ್ಯಾರ್ಥಿ ಮತ್ತು ಸುತ್ತಲಿನ ಸಮುದಾಯದ ಜೊತೆ ಸ್ನೇಹಮಯಿಯಾದ ಸ್ಪೈಡರ್ ಮ್ಯಾನ್ ಆಗುವ ಎರಡು ಜವಾಬ್ದಾರಿಗಳನ್ನು ನಿಭಾಯಿಸಲು ಹೆಣಗುತ್ತಾ ತನ್ನ ನಿಜದ ಬಗ್ಗೆ ತನ್ನ ತಂದೆತಾಯಿಗೆ ತಿಳಿಸುವ ಪ್ರಯತ್ನದಲ್ಲಿರುತ್ತಾನೆ. ಆದರೆ ಅದರ ಪರಿಣಾಮಗಳ ಬಗ್ಗೆ ಆತನಿಗೆ ಹೆದರಿಕೆಯಿರುತ್ತದೆ. ಆಗ ಸ್ಪಾಟ್ ರೂಪದಲ್ಲಿ ಒಂದು ಖಳ ಪಾತ್ರ ಬರುತ್ತದೆ. ಆತನಿಗಿರುವ ಹಿನ್ನೆಲೆ, ಆತ ಮಾಡಿದ ಅನಾಚಾರಗಳು ಒಂದೇ ಎರಡೇ! ಪ್ರಪಂಚಕ್ಕೆ ಹಾನಿಕಾರಕವಾದ ಅವನ ಶಕ್ತಿಗಳ ಬಗ್ಗೆ ಮೈಲ್ಸ್ಗೆ ಅರಿವಿದೆ. ಸ್ಪಾಟ್ ತಿರುಗಿಬಂದದ್ದು ಸ್ಪೈಡರ್ ಸಮುದಾಯದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ. ಗ್ವೇನ್ ಮತ್ತು ತಂಡ ಮೈಲ್ಸ್ ಜೀವನಕ್ಕೆ ಮತ್ತೆ ಪ್ರವೇಶಿಸುತ್ತಾರೆ.
ಇವರಿಬ್ಬರ ಪುನರ್ಮಿಲನ ತೆರೆಯ ಮೇಲೆ ವೀಕ್ಷಿಸುವುದು ಪ್ರೇಕ್ಷಕರಿಗೆ ಅಪ್ಪಟ ಹಬ್ಬದೂಟ. ಚಿತ್ರದ ದೃಶ್ಯವೈಭವ ಇಲ್ಲಿ ಉತ್ತುಂಗಕ್ಕೇರುತ್ತದೆ. ಈ ಚಿತ್ರದ ಹಿಂದಿನ ಚಿತ್ರ ನಾಯಕನಾಗೋಕ್ಕೆ ಯಾರು ಯೋಗ್ಯರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದರೆ ಈ ಚಿತ್ರ ನಾಯಕತ್ವ ಎಂದರೆ ಹೇಗಿರಬೇಕು ಎನ್ನುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಎಲ್ಲ ನಾಯಕರುಗಳ ಜೀವನಗಾಥೆ ಏಕೆ ಒಂದೇ ವಿನ್ಯಾಸದಲ್ಲಿ ಇರಬೇಕು? ಏಕೆ ದುರಂತದ ಮೂಲಕವೇ ನಾಯಕತ್ವ ಪ್ರಕಾಶಿಸಬೇಕು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಚಿತ್ರತಂಡ ಅನಿಮೇಷನ್ ಮೂಲಕ ತಮ್ಮ ಯೋಚನೆ ಮತ್ತು ಕಲ್ಪನೆಗಳನ್ನೆಲ್ಲ ಸ್ವಚ್ಛಂದವಾಗಿ ಗರಿಗೆದರಿ ಹಾರಲು ಬಿಟ್ಟಿದ್ದಾರೆ.
140 ನಿಮಿಷಗಳ ಈ ಚಿತ್ರದ ಪ್ರತಿಯೊಂದು ನಿಮಿಷವೂ ಬರಹಗಾರರ ಕಲ್ಪನೆಯ ಮಿತಿಯನ್ನು ಮೀರಿ ತೆರೆಯ ಮೇಲೆ ಪ್ರಕಾಶಿಸಿವೆ. ಆದರೆ ಈ ಮಾದರಿಯ ಅನಿಮೇಷನ್ ಚಿತ್ರಗಳಲ್ಲಿ ಕಥೆ ಮತ್ತು ಕಲ್ಪನೆಗಿಂತ ದೃಶ್ಯವೈಭವ ಮತ್ತು ತಾಂತ್ರಿಕತೆ ನೆನಪಲ್ಲಿ ಉಳಿಯೋದೆ ಹೆಚ್ಚು. ಆದರೆ ನಿರ್ದೇಶಕರ ಅಚ್ಚುಕಟ್ಟು ಮತ್ತು ಕಥಾನಿಷ್ಠೆ ಪ್ರತಿಯೊಂದು ಫ್ರೆಮಿನಲ್ಲೂ ಎದ್ದು ಕಾಣುತ್ತದೆ. ಈ ಚಿತ್ರದ ಹಿಂದಿನ ಭಾಗಕ್ಕಿಂತಲೂ ಈ ಭಾಗ ಇನ್ನೂ ನಿಖರವಾಗಿ ಮೂಡಿಬಂದಿದೆ. ಇಲ್ಲಿ ದೃಶ್ಯವೈಭವದ ಜೊತೆಜೊತೆಗೆ ಕಲಾವಂತಿಕೆಯೂ ಮಿಳಿತವಾಗಿದೆ. ಸಾಹಸ ಸನ್ನಿವೇಶಗಳಂತೂ ಮೈ ನವಿರೇಳಿಸುತ್ತವೆ.
ಅನಿಮೇಷನ್ ಪಾತ್ರಗಳಿಗೆ ಧ್ವನಿ ನೀಡಿರುವ ಅನೇಕ ಜನಪ್ರಿಯರೂ ಅವರವರ ಕೆಲಸಗಳಿಗೆ ಪರಿಪೂರ್ಣ ನ್ಯಾಯ ಸಲ್ಲಿಸಿದ್ದು ಚಿತ್ರವೀಕ್ಷಣೆಯ ಅನುಭವವನ್ನು ಮತ್ತಷ್ಟು ಗಾಢವಾಗಿಸುತ್ತದೆ. ಸಾಮಾನ್ಯವಾಗಿ ಈಗಾಗಲೇ ಜನಪ್ರಿಯವಾಗಿರುವ ಚಿತ್ರಗಳಿಗೆ ಇಂಥ ಸೀಕ್ವೆಲ್ ಮಾದರಿಯ ಮುಂದುವರೆದ ಭಾಗದಂತ ಚಿತ್ರಗಳು ಬಂದಾಗ ಪೂರ್ವನಿಯೋಜಿತ ವಿನ್ಯಾಸದಲ್ಲೇ ಮಾಡುವುದು ಹೆಚ್ಚು. ಆದರೆ ಈ ಚಿತ್ರ ತನ್ನ ಪ್ರೀಕ್ವೆಲ್ ಚಿತ್ರದಲ್ಲಿ ಇದ್ದಂತಹ ಕಥೆಯ ಬುನಾದಿಯ ಮೇಲೆ ಮತ್ತಷ್ಟು ಚಂದವಾಗಿ ಕಥೆ ಕಟ್ಟಿಕೊಟ್ಟು ಮುಂದೇನು ಎನ್ನುವಂತಹ ಕಾತುರವನ್ನು ವೀಕ್ಷಕರ ಪಾಲಿಗೆ ಬಿಟ್ಟು ಹೋಗಿದೆ. ಮುಂದಿನ ಭಾಗದಲ್ಲಿ ಇನ್ನೂ ಹೆಚ್ಚಿನ ಮನರಂಜನೆಯನ್ನು ನಿರೀಕ್ಷಿಸಬಹುದು ಎನ್ನುವ ಭರವಸೆಯನ್ನು ಕೊಟ್ಟು ಚಿತ್ರ ಮುಗಿಯುತ್ತದೆ. ‘ಸ್ಪೈಡರ್ ಮ್ಯಾನ್ – ಅಕ್ರಾಸ್ ದ ಸ್ಪೈಡರ್ ವರ್ಸ್’ ಚಿತ್ರ ಸ್ಪೈಡರ್ ಮ್ಯಾನ್ ಅಭಿಮಾನಿಗಳು ನೋಡಲೇಬೇಕಾದ ಒಂದು ಅತ್ಯುತ್ತಮ ದೃಶ್ಯಕಾವ್ಯ.