‘ಅಪನ್ಹೈಮರ್’ನಲ್ಲಿ ಅಣು ಬಾಂಬ್ ತಯಾರಿಕೆ ಮತ್ತು ಅದರ ಪ್ರಕ್ರಿಯೆ ಮುಖ್ಯವಾಗಿಲ್ಲ. ಬದಲಾಗಿ ಅದನ್ನು ತಯಾರಿಸಲು ಒಪ್ಪಿ ಅದರ ನೇತೃತ್ವ ವಹಿಸಿದ ವಿಜ್ಞಾನಿಯ ಜೀವನ, ಆತನ ದ್ವಂದ್ವ ವ್ಯಕ್ತಿತ್ವ, ಆತನ ಬದುಕಿನಲ್ಲಿ ಬಂದು ಹೋದವರು, ಆತ ಪಡೆದ ಜನಪ್ರಿಯತೆ, ಅನುಭವಿಸಿದ ಮಾನಸಿಕ ತುಮುಲ, ಆತನನ್ನು ಕಾಡಿದ ಪಾಪ ಪ್ರಜ್ಞೆ, ನಂತರದಲ್ಲಿ ತನ್ನದೇ ದೇಶದಿಂದ ಆತ ಅನುಭವಿಸಿದ ಅವಮಾನ ಮತ್ತು ಅಪನಂಬಿಕೆ ಇವುಗಳ ಕುರಿತಾಗಿದೆ ಚಿತ್ರ. ಆ ಮೂಲಕ ಮಾನವ ಇತಿಹಾಸದ ಪ್ರಮುಖ ಘಟನೆ ಮತ್ತು ಕಾಲಘಟ್ಟವೊಂದನ್ನು ದಾಖಲಿಸುತ್ತದೆ.
‘ಅಪನ್ಹೈಮರ್’ ಸಿನಿಮಾದ ಮಧ್ಯಭಾಗದಲ್ಲಿ ಚಿತ್ರದ ಪ್ರಮುಖ ಮತ್ತು ಬಹುನಿರೀಕ್ಷಿತ ದೃಶ್ಯ ಆರಂಭವಾಗುತ್ತದೆ. ಅಣುಬಾಂಬ್ ಪರೀಕ್ಷಾ ಸ್ಫೋಟಕ್ಕೆ ವಿಜ್ಞಾನಿಗಳ ತಂಡ ಸಿದ್ಧವಾಗಿರುತ್ತದೆ. ತಂಡದ ಎರಡು ವರ್ಷಗಳ ಶ್ರಮ, ಅದಕ್ಕೆ ಬಳಕೆಯಾಗಿರುವ ಕೋಟ್ಯಾಂತರ ಹಣ, ಆ ವಿಜ್ಞಾನಿಗಳ ಮೇಲಿರುವ ಒತ್ತಡ ಎಲ್ಲವನ್ನೂ ತೆರೆಯ ಮೇಲೆ ನೋಡಿರುವ, ಒಂದು ರೀತಿಯಲ್ಲಿ ತಾವೂ ಅದನ್ನು ಅನುಭವಿಸಿರುವ ನಾವು, ಪ್ರೇಕ್ಷಕರೂ ಕೂಡ ಉಸಿರು ಬಿಗಿಹಿಡಿದು ಸ್ಫೋಟದ ಫಲಿತಾಂಶಕ್ಕಾಗಿ ಕಾಯುತ್ತಿರುತ್ತೇವೆ. ಕೌಂಟ್‌ಡೌನ್ ಮುಗಿದು ಬಾಂಬ್ ಸ್ಫೋಟಿಸಿದಾಗ ಅದುವರೆಗೆ ನಮ್ಮ ಎದೆಬಡಿತ ಹೆಚ್ಚಿಸಿದ್ದ ಹಿನ್ನೆಲೆ ಸಂಗೀತ ಒಮ್ಮೆಗೆ ನಿಂತು, ಸಂಪೂರ್ಣ ನಿಶ್ಯಬ್ಧ ಆವರಿಸುತ್ತದೆ. ತೆರೆಯ ಮೇಲೆ ಆಗಾಧ ಬೆಂಕಿಯ ಗೋಲಗಳು ಆಕಾಶದೆತ್ತರಕ್ಕೆ ಚಿಮ್ಮುತ್ತವೆ. ಕೆಲವು ಸೆಕೆಂಡುಗಳ ಕಾಲ ನಮಗೆ ಕಾಣುವುದು ಆಕಾಶವನ್ನೇ ನುಂಗಿ ಬಿಡುವಂತೆ ಎದ್ದಿರುವ ದೊಡ್ಡ ಬೆಂಕಿಯ ಜ್ವಾಲೆಗಳು ಮಾತ್ರ, ಒಂದು ಸಣ್ಣ ಸದ್ದೂ ಇಲ್ಲ. ಬೇರೆಯವರ ಬಗ್ಗೆ ಗೊತ್ತಿಲ್ಲ, ಆ ಕ್ಷಣದ ನಿಶ್ಯಬ್ಧದಲ್ಲಿ ಪರೀಕ್ಷೆ ಯಶಸ್ವಿಯಾದದ್ದಕ್ಕೆ ಸಂತಸವಾಗುವ ಬದಲು ನನ್ನನ್ನಂತೂ ಒಂದು ರೀತಿಯ ವಿಷಾದ ಆವರಿಸಿತು. ನಂತರ ಕೇಳುವ ಕಿವಿಗಡಚಿಕ್ಕುವ ಸದ್ದು ಮತ್ತು ವಿಜ್ಞಾನಿಗಳ ಸಂಭ್ರಮಾಚರಣೆ ಕೂಡ ಆ ವಿಷಾದವನ್ನು ಕರಗಿಸಲಿಲ್ಲ. ನನ್ನ ಮಟ್ಟಿಗಂತೂ ‘ಅಪನ್ಹೈಮರ್’ ಚಿತ್ರದ ಗೆಲುವು ಆ ವಿಷಾದದ ಕ್ಷಣದಲ್ಲಿದೆ.
ಯುದ್ಧ ಸಂಬಂಧೀ ಚಿತ್ರಗಳಿಗಿರುವ ದೊಡ್ಡ ಸಮಸ್ಯೆಯೆಂದರೆ, ಅದು ಎಷ್ಟೇ ಯುದ್ಧ ವಿರೋಧಿ ಸಂಭಾಷಣೆಗಳನ್ನು ಹೇಳಿದರೂ, ಯುದ್ಧವಿರೋಧಿ ಸಂದೇಶಗಳನ್ನು ಒಳಗೊಂಡಿದ್ದರೂ, ಪ್ರೇಕ್ಷಕರು ಒಂದು ಪಕ್ಷವನ್ನು ಸೇರಿಕೊಂಡು ಸಿನಿಮಾವನ್ನು ಥ್ರಿಲ್ಲರ್ ರೀತಿ ಆನಂದಿಸಿಯೇ ಇರುತ್ತಾರೆ. ಹೀಗಾಗಿಯೇ, ಲಕ್ಷಾಂತರ ಜನರ ಜೀವಕ್ಕೆ ಎರವಾಗಲಿದೆ, ಜಗತ್ತಿನ ಇತಿಹಾಸಕ್ಕೆ ಬೇಕಿಲ್ಲದೇ ಇದ್ದ ತಿರುವು ನೀಡಲಿದೆ ಎಂಬುದು ಗೊತ್ತಿದ್ದರೂ, ಆ ಅಣು ಬಾಂಬ್ ಪರೀಕ್ಷೆಯ ಯಶಸ್ಸಿಗೆ ಪ್ರೇಕ್ಷಕರೂ ಕೂಡ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತಾರೆ. ಏಕೆಂದರೆ, ನಮ್ಮೆಲ್ಲರೊಳಗೂ ಒಬ್ಬ ಅಪನ್ಹೈಮರ್ ಇದ್ದೇ ಇರುತ್ತಾನೆ. ತಾನೇ ಮೊದಲಿಗೆ ಅಣು ಬಾಂಬ್ ತಯಾರಿಸಿದ್ದರೂ ನಂತರದಲ್ಲಿ ಅದರ ಬಳಕೆ ಮತ್ತು ನ್ಯೂಕ್ಲಿಯರ್ ವೆಪನ್‌ಗಳ ತಯಾರಿಕೆಯನ್ನು ಕಟುವಾಗಿ ವಿರೋಧಿಸಿದ ಅಪನ್ಹೈಮರ್ ವ್ಯಕ್ತಿತ್ವದಲ್ಲಿನ ವಿರೋಧಾಭಾಸ, ತಪ್ಪು ಸರಿಗಳ ನಡುವಣ ಸಂಘರ್ಷ, ನೈತಿಕ ತಾಕಲಾಟಗಳು ಪ್ರೇಕ್ಷಕರೊಳಗೂ ಇರುತ್ತದೆ. ಹೀಗಾಗಿ, ಅಣುಬಾಂಬ್‌ನ ಯಶಸ್ವೀ ಪರೀಕ್ಷೆ ಪ್ರೇಕ್ಷಕರಲ್ಲಿ ಸಂಭ್ರಮವನ್ನು ತುಂಬಿದರೆ ಚಿತ್ರ ಸೋತಂತೆ. ಅದು ಆಗದಂತೆ ತಡೆಯುವುದರಲ್ಲಿ ನಿರ್ದೇಶಕ ನೋಲನ್ ಯಶಸ್ವಿಯಾಗಿರುವುದು ಈ ಚಿತ್ರದ ಅತೀ ದೊಡ್ಡ ಹೆಗ್ಗಳಿಕೆ. ಮತ್ತು ದೊಡ್ಡ ಎಕ್ಸೈಟ್‌ಮೆಂಟ್ ನಿರೀಕ್ಷಿಸಿ ಬಂದ ಪ್ರೇಕ್ಷಕರಿಗೆ ಅಣು ಬಾಂಬ್ ಸ್ಫೋಟದ ದೃಶ್ಯ ಕೊಡಬೇಕಾದಷ್ಚು ಥ್ರಿಲ್ ಕೊಡಲಿಲ್ಲ ಎನಿಸಿ ನಿರಾಸೆಯಾದರೆ, ಅದೂ ಕೂಡ ಚಿತ್ರದ ದೊಡ್ಡ ನೈತಿಕ ಗೆಲುವು.
ನಾನು ಕ್ರಿಸ್ಟೋಫರ್ ನೋಲನ್ ಚಿತ್ರಗಳ ದೊಡ್ಡ ಅಭಿಮಾನಿಯೇನೂ ಅಲ್ಲ. ಎರಡನೇ ವಿಶ್ವಯುದ್ಧದ ಬಗ್ಗೆ ಸಾಲು ಸಾಲು ಚಿತ್ರಗಳನ್ನು ನೀಡಿರುವ ಹಾಲಿವುಡ್, ಅಪನ್ಹೈಮರ್ ಬಗ್ಗೆ ಇದುವರೆಗೂ ಚಿತ್ರವೊಂದನ್ನು ಮಾಡಿರಲಿಲ್ಲ ಎಂಬುದೇ ವಿಚಿತ್ರವೆನಿಸುವ ಸಂಗತಿ. ಒಬ್ಬ ವಿಶಿಷ್ಟ ವಿಜ್ಞಾನಿಯ ಬಯೋಪಿಕ್ ಎಂಬುದೇ ಈ ಚಿತ್ರದ ಬಗ್ಗೆ ನನಗಿದ್ದ ಕುತೂಹಲಕ್ಕೆ ಪ್ರಮುಖ ಕಾರಣ. ನೋಲನ್ ಚಿತ್ರಗಳು ತಾಂತ್ರಿಕತೆ ವಿಷಯದಲ್ಲಿ ಇಷ್ಟವಾದರೂ, ಹಲವು ಬಾರಿ ಆತ ಅನುಸರಿಸುವ ನಿರೂಪಣಾ ತಂತ್ರ ಅನಗತ್ಯ ಗಿಮಿಕ್ ಎನಿಸಿದ್ದಿದೆ. ನಾನ್ ಲೀನಿಯರ್ ನಿರೂಪಣೆಯಲ್ಲಿ ಆತ ತೆಗೆದುಕೊಳ್ಳುವ ಹೊಸ ಹೊಸ ಮಾರ್ಗಗಳು ಎಷ್ಟೋ ಬಾರಿ ಚಿತ್ರಕ್ಕೆ ಹೊಸ ಆಯಾಮವನ್ನೇನೂ ನೀಡದೆ, ಅದನ್ನು ಮತ್ತಷ್ಟು ಕ್ಲಿಷ್ಟಗೊಳಿಸಿ ಆತನ ಅಭಿಮಾನಿಗಳನ್ನು ಖುಷಿಪಡಿಸುವ ಪ್ರಯತ್ನವಾಗಿ ನನಗೆ ಕಂಡಿದ್ದಿದೆ. ‘ಅಪನ್ಹೈಮರ್’ ಸಿನಿಮಾ ಕೂಡ ಇಂತಹ ನಾನ್ ಲೀನಿಯರ್ ನಿರೂಪಣಾ ಶೈಲಿಯನ್ನೇ ಅನುಸರಿಸಿದೆ. ಆದರೆ, ಚಿತ್ರದ ನಾಯಕನ ಮನಸ್ಥಿತಿ, ಚಿತ್ರದ ಉದ್ದಕ್ಕೂ ಆತನನ್ನು ಕಾಡುವ ದ್ವಂದ್ವಗಳು, ನಾಯಕ ಮತ್ತು ಆತನ ವಿರೋಧಿ ಇಬ್ಬರ ದೃಷ್ಟಿಕೋನವನ್ನು ಪ್ರತ್ಯೇಕವಾಗಿ ತೋರಿಸಲು ಈ ನಿರೂಪಣಾ ತಂತ್ರ ನೆರವಾಗಿದೆ ಮತ್ತು ಚಿತ್ರವನ್ನು ಮತ್ತಷ್ಟು ಲೇಯರ್ಡ್ ಆಗಿಸಿದೆ.
‘ಅಪನ್ಹೈಮರ್’ ಚಿತ್ರದ ಕತೆ ಎರಡು ಹಳಿಗಳಲ್ಲಿ ಸಾಗುತ್ತದೆ. ಒಂದರಲ್ಲಿ ಅಪನ್ಹೈಮರ್ ನ ಭದ್ರತಾ ಪರವಾನಿಗೆಗೆ ಸಂಬಂಧಿಸಿದಂತೆ ಅಮೇರಿಕಾದ ಅಣು ಶಕ್ತಿ ಆಯೋಗ ನಡೆಸಿದ ವಿಚಾರಣೆ ಮತ್ತು US ಸೆನೆಟ್ ನಡೆಸಿದ ಆತನ ವಿರೋಧಿ ಲೂಯಿಸ್ ಸ್ಟ್ರಾಸ್ ವಿಚಾರಣೆ. ಅಪನ್ಹೈಮರ್ ವಿಚಾರಣೆ ಮತ್ತು ಆತ ಹೇಳುವ ವಿವರಗಳು ಕಾಲಘಟ್ಟದ ದೃಷ್ಟಿಯಲ್ಲಿ ಮೊದಲಿದ್ದರೂ, ಅದು ಬಣ್ಣದಲ್ಲಿದೆ. ಸ್ಟ್ರಾಸ್ ವಿಚಾರಣೆ ನಂತರ ನಡೆದರೂ ಆತನ ದೃಷ್ಚಿಕೋನದಿಂದ ನಿರೂಪಿತವಾಗಿರುವ ದೃಶ್ಯಗಳು ಕಪ್ಪು ಬಿಳುಪಿನಲ್ಲಿದೆ. ಅಣು ಬಾಂಬ್ ತಯಾರಿಕೆ, ಪರೀಕ್ಷೆ ಮತ್ತು ಪ್ರಯೋಗ ಅಪನ್ಹೈಮರ್ ದೃಷ್ಚಿಕೋನದಲ್ಲಿ ನಿರೂಪಿತವಾಗಿರುವುದರಿಂದ ಈ ರೀತಿಯ ವರ್ಣ ವಿಭಜನೆ ಸಮಂಜಸವಾಗಿದೆ.
ನೋಲನ್‌ನ ಇತರ ಕೆಲವು ಚಿತ್ರಗಳು ಬೇಡುವಷ್ಟರ ಮಟ್ಟಿನ ವೈಜ್ಞಾನಿಕ ಮಾಹಿತಿ ಈ ಚಿತ್ರಕ್ಕೆ ಬೇಕಾಗಿಲ್ಲ. ಏಕೆಂದರೆ, ‘ಅಪನ್ಹೈಮರ್’ನಲ್ಲಿ ಅಣು ಬಾಂಬ್ ತಯಾರಿಕೆ ಮತ್ತು ಅದರ ಪ್ರಕ್ರಿಯೆ ಮುಖ್ಯ ಅಲ್ಲವೇ ಅಲ್ಲ. ಬದಲಾಗಿ ಅದನ್ನು ತಯಾರಿಸಲು ಒಪ್ಪಿ ಅದರ ನೇತೃತ್ವ ವಹಿಸಿದ ವಿಜ್ಞಾನಿಯ ಜೀವನ, ಆತನ ದ್ವಂದ್ವ ವ್ಯಕ್ತಿತ್ವ, ಆತನ ಬದುಕಿನಲ್ಲಿ ಬಂದು ಹೋದವರು, ಆತ ಪಡೆದ ಜನಪ್ರಿಯತೆ, ಅನುಭವಿಸಿದ ಮಾನಸಿಕ ತುಮುಲ, ಆತನನ್ನು ಕಾಡಿದ ಪಾಪ ಪ್ರಜ್ಞೆ, ನಂತರದಲ್ಲಿ ತನ್ನದೇ ದೇಶದಿಂದ ಆತ ಅನುಭವಿಸಿದ ಅವಮಾನ ಮತ್ತು ಅಪನಂಬಿಕೆ ಇವುಗಳ ಕುರಿತಾಗಿದೆ ಚಿತ್ರ. ಆ ಮೂಲಕ ಮಾನವ ಇತಿಹಾಸದ ಪ್ರಮುಖ ಘಟನೆ ಮತ್ತು ಕಾಲಘಟ್ಟವೊಂದನ್ನು ದಾಖಲಿಸುತ್ತದೆ. ಹೀಗಾಗಿ, ಅನೇಕ ಇತಿಹಾಸ ಪ್ರಸಿದ್ಧ ವ್ಯಕ್ತಿಗಳು, ವಿಜ್ಞಾನಿಗಳು, ಪಾತ್ರಗಳು, ಘಟನೆಗಳು ಬಂದು ಹೋಗುತ್ತವೆ. ಮತ್ತು ಚಿತ್ರ ಸಂಭಾಷಣೆಗಳಿಂದ ತುಂಬಿದೆ. ಹೀಗಾಗಿ, ಈ ಚಿತ್ರ ನೋಡುವಾಗ ಎರಡನೇ ವಿಶ್ವಯುದ್ಧ, ಆಗಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗಳು ಬಗ್ಗೆ ಸ್ವಲ್ಪವಾದರೂ ಮಾಹಿತಿ ಇದ್ದರೆ ಒಳ್ಳೆಯದು.
‘ಅಪನ್ಹೈಮರ್’ನಲ್ಲಿ ಪ್ರತಿಭಾವಂತ ಸ್ಟಾರ್ ನಟ – ನಟಿಯರ ದೊಡ್ಡ ದಂಡೇ ಇದೆ. ಅಪನ್ಹೈಮರ್ ಆಗಿ ನಟಿಸಿರುವ ಕಿಲಿಯನ್ ಮರ್ಫಿಗೆ ಇದು ಆತನ ಜೀವನದ ಅತ್ಯಂತ ಪ್ರಮುಖ ಪಾತ್ರ ಮತ್ತು ಆತನ ಅತ್ಯುತ್ತಮ ನಟನೆಯ ಪಾತ್ರ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ಸ್ಟ್ರಾಸ್ ಪಾತ್ರದಲ್ಲಿ ನಟಿಸಿರುವ ರಾಬರ್ಟ್ ಡೌನಿ ಜ್ಯೂನಿಯರ್ ಅಮೋಘ ನಟನೆ, ಆತ ಪಾತ್ರದೊಳಗೆ ಲೀಲಾಜಾಲವಾಗಿ ಪ್ರವೇಶಿಸಿರುವ ರೀತಿ ಉಳಿದೆಲ್ಲರ ಅಭಿನಯವನ್ನು ಹಿಂದಿಕ್ಕುವಂತಿದೆ. ಮ್ಯಾಟ್ ಡೇಮನ್, ಎಮಿಲಿ ಬ್ಲಂಟ್, ಫ್ಲಾರೆನ್ಸ್, ರಾಮಿ ಮಲೆಕ್, ಕೆನ್ನೆತ್ ಬ್ರಾನ್ ಹೀಗೆ ಸಾಲು ಸಾಲು ಪ್ರಸಿದ್ಧ ನಟ – ನಟಿಯರು ಅದ್ಭುತವಾಗಿ ಅಭಿನಯಿಸಿದ್ದಾರೆ. ಇಷ್ಟು ಪ್ರತಿಭೆಗಳನ್ನು ಒಟ್ಟಿಗೆ ಸೇರಿಸಿರುವುದೂ ಕೂಡ ನೋಲನ್ ಸಾಧನೆಯೇ.
ನೋಲನ್ ಚಿತ್ರಗಳಲ್ಲಿನ ತಾಂತ್ರಿಕ ನೈಪುಣ್ಯತೆಯ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಎಂದಿನಂತೆ, ಸಿನಿಮಟೋಗ್ರಫಿ ಮತ್ತು ಸಂಕಲನ ಚಿತ್ರದ ಜೀವಾಳ. ಚಿತ್ರದ ಹಿನ್ನೆಲೆ ಸಂಗೀತದ ಬಗ್ಗೆ ಹೇಳಲೇಬೇಕು. ದೃಶ್ಯಗಳನ್ನು ಎತ್ತರಕ್ಕೆ ಏರಿಸುವಲ್ಲಿ, ರೋಚಕತೆ ಕಟ್ಟಿಕೊಡುವಲ್ಲಿ ಹಿನ್ನೆಲೆ ಸಂಗೀತ ಅತೀ ದೊಡ್ಡ ಪಾತ್ರ ವಹಿಸಿದೆ. ಅಬ್ಬರವೆನಿಸದೆ, ದೃಶ್ಯದ ಜೊತೆ ಮಿಳಿತವಾಗಿದೆ. ಜೊತೆಗೆ, ನಿಶ್ಯಬ್ಧವೂ ಅಷ್ಟೇ ಶಕ್ತಿಯುತವಾಗಿ ಬಳಕೆಯಾಗಿದೆ.
ಚಿತ್ರದ ವಿಷಯ ಮತ್ತು ಅದನ್ನು ನೋಲನ್ ನಿಭಾಯಿಸಿರುವ ರೀತಿಯಲ್ಲಿ ‘ಅಪನ್ಹೈಮರ್’, ನೋಲನ್‌ನ ಅತೀ ಹೆಚ್ಚು ಪ್ರಬುದ್ಧವಾದ ಚಿತ್ರ. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿದ ಎಂಬ ಕಾರಣಕ್ಕೆ ತನ್ನ ದೇಶಕ್ಕಾಗಿ ಬಾಂಬ್ ತಯಾರಿಸಿ ಕೊಟ್ಟ ವಿಜ್ಞಾನಿಯನ್ನೇ ನಂತರದಲ್ಲಿ ಅನುಮಾನಿಸಿ, ಶತೃ ದೇಶದ ಏಜೆಂಟ್ ಎಂಬ ರೀತಿಯಲ್ಲಿ ನೋಡಿ ಅವಮಾನಿಸಿದ್ದು, ಅದೂ ಅಮೆರಿಕಾದಂತಹ ಲಿಬರಲ್ ದೇಶದಲ್ಲಿ ಎಂಬುದು ಈ ಚಿತ್ರಕ್ಕೊಂದು ಸಾರ್ವಕಾಲಿಕ ಪ್ರಸ್ತುತತೆ ನೀಡಿದೆ. ಚಿತ್ರದ ಮಧ್ಯದಲ್ಲೆಲ್ಲೋ ನಡೆಯುವ ಅಪನ್ಹೈಮರ್ ಮತ್ತು ಐನ್‌ಸ್ಚೀನ್ ನಡುವಣ ಭೇಟಿಯನ್ನು ಘಟನೆಯಾಗಿ ಚಿತ್ರದಲ್ಲಿ ಹಲವು ಬಾರಿ ತೋರಿಸಿಯೂ, ಅಲ್ಲಿ ಅವರ ನಡುವೆ ನಡೆದ ಸಂಭಾಷಣೆಯನ್ನು ಹಾಗೆಯೇ ಕಾಪಿಟ್ಟು, ಅದನ್ನು ಕೊನೆಯ ದೃಶ್ಯವಾಗಿಸಿರುವುದು ನೋಲನ್ ಬುದ್ಧಿವಂತಿಕೆಗೆ ಸಾಕ್ಷಿ. ‘ಅಪನ್ಹೈಮರ್’ ಕೊನೆಯಲ್ಲಿ ಐನ್‌ಸ್ಟೀನ್‌ಗೆ ಹೇಳುವ ಮಾತು ಇಡೀ ಚಿತ್ರದ ಸಾರವನ್ನು, ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುತ್ತದೆ ಮತ್ತು ಅತ್ಯಂತ ಸೂಕ್ತ ಹಾಗೂ ಶಕ್ತಿಯುತ ಕ್ಲೈಮ್ಯಾಕ್ಸ್ ಆಗಿ ಖಂಡಿತಾ ಕಾಡುತ್ತದೆ.