ಕಳೆದ ವಾರ ತೆರೆಕಂಡ ಸಿದ್ದಾರ್ಥ್ ಅಭಿನಯದ ‘ಚಿತ್ತ’ ತಮಿಳು ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾದ ಕನ್ನಡ ಅವತರಣಿಕೆ ‘ಚಿಕ್ಕು’ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ‘ಚಿಕ್ಕು’ ಪ್ರಮೋಷನ್ ಸಂದರ್ಭದಲ್ಲಿ ಸಿದ್ದಾರ್ಥ್‌ಗೆ ಕನ್ನಡ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಗಿತ್ತು. ಘಟನೆಯನ್ನು ನೆನಪು ಮಾಡಿಕೊಂಡ ಸಿದ್ದಾರ್ಥ್ ಬೇಸರ ವ್ಯಕ್ತಪಡಿಸಿದ್ದಾರೆ.
ತಮಿಳು ನಟ ಸಿದ್ಧಾರ್ಥ್‌ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರರ ಗುಂಪೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತ್ತು. ಈ ಘಟನೆಯನ್ನು ನಟರಾದ ಶಿವರಾಜಕುಮಾರ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ಖಂಡಿಸಿದ್ದರು. ಈ ಘಟನೆಯಿಂದ ನಟ ಸಿದ್ಧಾರ್ಥ್ ತೀವ್ರ ಬೇಸರಗೊಂಡಿದ್ದು, ಈ ಘಟನೆಯ ಕುರಿತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ಚಿತ್ತ’ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ. ಹೈದರಾಬಾದ್‌ನಲ್ಲಿ ‘ಚಿತ್ತ’ ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ತಮಿಳುನಟ ಸಿದ್ಧಾರ್ಥ್ ಭಾವುಕರಾಗಿದ್ದಾರೆ. ‘ನನ್ನ ಸಿನಿಮಾವನ್ನು ತೆಲುಗಿನವರು ನೋಡೋದಿಲ್ಲ’ ಎಂಬ ಅಭಿಪ್ರಾಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
‘ಚಿತ್ತ’ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಸಿದ್ಧಾರ್ಥ್ ವೇದಿಕೆಯಲ್ಲಿ ಭಾವುಕರಾದರು. ‘ಇಂಥ ಸಿನಿಮಾ ನೋಡಿಲ್ಲ ಎಂದು ತಮಿಳಿನ Red Joint ಸಿನಿಮಾ ಹಕ್ಕು ಖರೀದಿ ಮಾಡಿದ್ರು. ಮಲಯಾಳಂನಲ್ಲಿ Gokulam Goppalan ಅವರು ಖರೀದಿ ಮಾಡಿದ್ದರು. ಕನ್ನಡದಲ್ಲಿ Hombale Films ನನ್ನ ಸಿನಿಮಾ ಖರೀದಿಸಿದ್ದರು. ತೆಲುಗಿನಲ್ಲಿ ಸಿದ್ಧಾರ್ಥ್ ಸಿನಿಮಾನ ಯಾರು ನೋಡ್ತಾರೆ ಎಂದು ಹೇಳ್ತಾರೆ’ ಎಂದು ವೇದಿಕೆಯಲ್ಲಿ ನಟ ಸಿದ್ಧಾರ್ಥ್ ಭಾವುಕರಾಗಿದ್ದಾರೆ. ‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ತೆಲುಗಿನಲ್ಲಿ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿತ್ತು. ಸಿದ್ಧಾರ್ಥ್ ಸಿನಿಮಾನ ಯಾರು ನೋಡ್ತಾರೆ ಎಂಬ ಕೆಲವರ ಅಭಿಪ್ರಾಯಕ್ಕೆ ನನಗೆ ಇಲ್ಲಿ ಸರಿಯಾಗಿ ಥಿಯೇಟರ್ ಸಿಗಲಿಲ್ಲ. ಈ ಸಂದರ್ಭದಲ್ಲಿ ನಿಮ್ಮೊಂದಿಗೆ ನಾನಿದ್ದೇನೆ ಎಂದು Asian Filmsನ ಸುನಿಲ್ ಜತೆಗೆ ನಿಂತರು’ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
‘ಪ್ರೇಕ್ಷಕರೇ ಪ್ರಭುಗಳು, ನೀವು ನನ್ನನ್ನು ಸ್ಟಾರ್ ಮಾಡಿದ್ದು. ಬೊಮ್ಮರಿಲ್ಲು, ನುವ್ವಸ್ತಾನಂಟೆ ನೇನುದ್ದಂಟಾನ ಮುಂತಾದ ಸಿನಿಮಾಗಳಿಗೆ ನೀವು ಪ್ರೀತಿ ತೋರಿಸಿದ್ದೀರಿ’ ಎಂದು ಸಿದ್ಧಾರ್ಥ್ ನೆನಪಿಸಿಕೊಂಡರು. ‘ತೆಲುಗಿನಲ್ಲಿ ಬೊಮ್ಮರಿಲ್ಲು ಮುಂತಾದ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದೇನೆ. ಈಗ ‘ಚಿತ್ತ’ ಸಿನಿಮಾ ನಿಮ್ಮ ಮುಂದಿದೆ. ಇದು ನಾನು ಈವರೆಗೆ ಮಾಡಿರುವ ಸಿನಿಮಾಗಳಲ್ಲಿಯೇ ಅತ್ಯುತ್ತಮ ಚಿತ್ರ. ನನಗೆ ಇಷ್ಟು ಒಳ್ಳೆಯ ಸಿನಿಮಾ ಮಾಡಲು ಇನ್ನು ಸಾಧ್ಯವಿಲ್ಲ. ಒಂದು ವೇಳೆ ನಾನು ಒಳ್ಳೆಯ ಸಿನಿಮಾ ನೀಡಿದ್ರೆ ಪ್ರೇಕ್ಷಕರು ನೋಡ್ತಾರೆ ಅನ್ನೋದು ನನ್ನ ನಂಬಿಕೆ. ನಿಮಗೆ ಸಿನಿಮಾದ ಮೇಲೆ ಪ್ರೀತಿ ಇದ್ದರೆ ಈ ಸಿನಿಮಾ ನೋಡಿ. ತೆಲುಗಿನಲ್ಲಿ ಸಿದ್ಧಾರ್ಥ್ ಸಿನಿಮಾ ಏಕೆ ನೋಡಬೇಕು ಎಂದುಕೊಂಡರೆ ನೋಡಬೇಡಿ. ಹಾಗಿದ್ದರೆ ನಾನು ಇಲ್ಲಿಗೆ ನನ್ನ ಸಿನಿಮಾ ಕುರಿತು ಪ್ರಚಾರ ಮಾಡುವುದಿಲ್ಲ’ ಎಂದು ಭಾವುಕರಾಗಿದ್ದಾರೆ.