ಇಂತಹ ಆ್ಯಕ್ಷನ್ ಥ್ರಿಲ್ಲರ್ಗಳಿಗೆ ಒಂದು ವೇಗ ಬೇಕು. ಆದರೆ, ‘ಘೋಸ್ಟ್’ ಚಿತ್ರಕ್ಕೆ ಆ ವೇಗವೇ ಶಾಪವಾಗಿದೆ. ನಾನ್-ಲೀನಿಯರ್ ಶೈಲಿಯಲ್ಲಿ ನಿರೂಪಿತವಾಗಿರುವ ಕತೆ ಹಿಂದೆ ಮುಂದೆ ಚಲಿಸುತ್ತಾ, ಜೊತೆಜೊತೆಗೆ ಹಲವಾರು ಸೈಡ್ ಟ್ರ್ಯಾಕ್ಗಳನ್ನೂ ಸೇರಿಸಿಕೊಂಡು ಸಾಗುತ್ತಿರುವಾಗ ಕತೆಯನ್ನು ಸಂಪೂರ್ಣವಾಗಿ ಹೇಳಲು, ಪ್ರೇಕ್ಷಕರಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರಿಸಲು ಕತೆಗೆ ಅಗತ್ಯವಿರುವಷ್ಟು ಉದ್ದ ಅಗಲವಾದ Space ಇಲ್ಲಿಲ್ಲ. ಹಾಗೆಯೇ ಶಿವರಾಜಕುಮಾರ್ ಅಭಿಮಾನಿಗಳನ್ನೇ ಗಮನದಲ್ಲಿಟ್ಟುಕೊಂಡು, ಶಿವರಾಜಕುಮಾರ್ ಅಭಿಮಾನಿಯೇ ನಿರ್ದೇಶಿಸಿರುವುದರಿಂದ ಅಭಿಮಾನಿ ಬಳಗ ಖುಶಿಪಡಲು ಬೇಕಾದ ಸಾಕಷ್ಟು ಸಂಗತಿಗಳೂ ಇಲ್ಲಿವೆ.
ದೊಡ್ಡ ಸ್ಟಾರ್ ಇರುವ ಮಾಸ್ ಸಿನಿಮಾ ಅಂದ ಕೂಡಲೇ ಹೀರೋನ ಆ್ಯಕ್ಷನ್ ಜೊತೆಗೆ, ಅಲಂಕಾರಕ್ಕೊಬ್ಬ ಹೀರೋಯಿನ್, ಅಗತ್ಯವಿಲ್ಲದ ಐಟಂ ಸಾಂಗ್, ಹೀರೋನ ಪ್ರತಾಪ ಹೇಳುವ ಇಂಟ್ರಡಕ್ಷನ್ ಸಾಂಗ್, ಒಂದಷ್ಟು ಮೆಲೋಡ್ರಾಮ ಇರಲೇಬೇಕು ಎಂಬ ಅಲಿಖಿತ ನಿಯಮವನ್ನು ಮುರಿಯಲು ಯತ್ನಿಸಿರುವ ಸಿನಿಮಾಗಳು ಕನ್ನಡದಲ್ಲಿ ಕಡಿಮೆ. ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಎಂದೂ ಹಿಂಜರಿಯದ ಶಿವರಾಜಕುಮಾರ್ ಅವರ ಹೊಸ ಚಿತ್ರ ‘ಘೋಸ್ಟ್’, ಈ ಎಲ್ಲಾ ನಿಯಮಗಳನ್ನು ಮುರಿದಿದೆ ಎಂಬುದು ಇದರ ಹೆಗ್ಗಳಿಕೆ. ಜೊತೆಗೆ, ಕನ್ನಡಕ್ಕೆ ಹೆಚ್ಚು ಪರಿಚಿತವಲ್ಲದ ಕತೆಯೊಂದನ್ನು ಯೋಚಿಸಿರುವುದು ಮತ್ತು ಅದನ್ನು ತೆರೆಯ ಮೇಲೆ ಫಾಸ್ಟ್ ಮತ್ತು ಕ್ರಿಸ್ಪ್ ಆಗಿ ನಿರೂಪಿಸಲು ಯತ್ನಿಸಿರುವುದೂ ಕೂಡ ಪ್ರಶಂಸನೀಯವೇ. ಆದರೆ, ಒಬ್ಬ ದೊಡ್ಡ ಸ್ಟಾರ್, ಹಲವು ಉಪಕತೆಗಳು, ವಿಶಾಲವಾದ ಕ್ಯಾನ್ವಾಸ್, ಅನೇಕಾನೇಕ ಪಾತ್ರಗಳು ಇರುವ ಕತೆಯನ್ನು, ನಿರ್ದೇಶಕರು ತಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡ ರೀತಿಯಲ್ಲೇ ತೆರೆಯ ಮೇಲೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಎಂಬುದು ಚಿತ್ರದ ಒಟ್ಟಾರೆ ಸೋಲು ಗೆಲುವನ್ನು ನಿರ್ಧರಿಸುತ್ತದೆ.
ಇತ್ತೀಚಿಗೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರಗಳಿಗೂ ಜೈಲಿಗೂ ನಂಟು ಹೆಚ್ಚಾದಂತೆ ಕಾಣುತ್ತಿದೆ. ತಮಿಳಿನ ‘ಜೈಲರ್’ ಮತ್ತು ಹಿಂದಿಯ ‘ಜವಾನ್’ ನಂತರ ಈಗ ಕನ್ನಡದ ‘ಘೋಸ್ಟ್’ನಲ್ಲೂ ಕೂಡ ಸೆರೆಮನೆಯನ್ನೇ ಕೇಂದ್ರವಾಗಿಟ್ಟುಕೊಂಡು ಕತೆ ಹೆಣೆಯಲಾಗಿದೆ. ನಿರ್ದೇಶಕ ಎಂ ಜಿ ಶ್ರೀನಿವಾಸ್, ಕೊಂಚವೂ ಸಮಯ ವ್ಯರ್ಥ ಮಾಡದೇ, ಮೊದಲ ದೃಶ್ಯದೊಂದಿಗೆ ನೇರವಾಗಿ ಕತೆಯೊಳಗೆ ಪ್ರವೇಶಿಸುತ್ತಾರೆ. ಜೈಲಿನ ಖಾಸಗೀಕರಣದಂತಹ ಆಸಕ್ತಿಕರ ವಿಷಯದೊಂದಿಗೆ ಆರಂಭವಾಗುವ ಸಿನಿಮಾ ಕೆಲವೇ ನಿಮಿಷಗಳಲ್ಲಿ ಜೈಲನ್ನು ವಶಪಡಿಸಿಕೊಳ್ಳುವ ದೃಶ್ಯದೊಂದಿಗೆ ಕತೆಯ ಪ್ರಮುಖ ಘಟ್ಟವನ್ನು ತಲುಪಿಯೇ ಬಿಡುತ್ತದೆ. ಜೈಲಿನ ನವೀಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ನಡೆಯಲಿರುವ ಭೂಮಿ ಪೂಜೆಯ ಸಂದರ್ಭದಲ್ಲಿ, ಏಕಾಏಕಿ ದುಷ್ಕರ್ಮಿಗಳು (ಅದೇ ಜೈಲಿನ ಸೆರೆವಾಸಿಗಳು) ಸೆರೆಮನೆಯನ್ನು ವಶಕ್ಕೆ ಪಡೆದುಕೊಂಡು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಸೇರಿದಂತೆ ಸಾವಿರಾರು ಖೈದಿಗಳನ್ನು ಒತ್ತೆಯಾಳಾಗಿಸಿಕೊಳ್ಳುತ್ತಾರೆ. ಜೈಲನ್ನು ಏಕೆ ವಶಪಡಿಸಿಕೊಂಡರು? ಅದರಲ್ಲಿ ಒತ್ತೆಯಾಳಾಗಿ ಸಿಕ್ಕಿಕೊಳ್ಳುವ ಜೈಲಿನ ಖಾಸಗೀಕರಣದ ರೂವಾರಿ ವಾಮನ್ ಯಾರು? ಆ ದುಷ್ಕರ್ಮಿಗಳ ಗುಂಪಿನ ನಾಯಕ ಯಾರು? ಆತನ ಉದ್ದೇಶವೇನು ಇವೆಲ್ಲವನ್ನೂ ಮುಂದೆ ಫ್ಲಾಷ್ಬ್ಯಾಕ್ ತಂತ್ರದಲ್ಲಿ ಶ್ರೀನಿ ಹೇಳುತ್ತಾ ಹೋಗುತ್ತಾರೆ.
ಇಂತಹ ಆ್ಯಕ್ಷನ್ ಥ್ರಿಲ್ಲರ್ಗಳಿಗೆ ಒಂದು ವೇಗ ಬೇಕು. ಇಲ್ಲವಾದಲ್ಲಿ ಅದು ಆಕಳಿಕೆ ತರುವ ಸಂಭವ ಹೆಚ್ಚು. ಆದರೆ, ‘ಘೋಸ್ಟ್’ ಚಿತ್ರಕ್ಕೆ ಆ ವೇಗವೇ ಶಾಪವಾಗಿದೆ. ನಾನ್-ಲೀನಿಯರ್ ಶೈಲಿಯಲ್ಲಿ ನಿರೂಪಿತವಾಗಿರುವ ಕತೆ ಹಿಂದೆ ಮುಂದೆ ಚಲಿಸುತ್ತಾ, ಜೊತೆಜೊತೆಗೆ ಹಲವಾರು ಸೈಡ್ ಟ್ರ್ಯಾಕ್ಗಳನ್ನೂ ಸೇರಿಸಿಕೊಂಡು ಸಾಗುತ್ತಿರುವಾಗ ಕತೆಯನ್ನು ಸಂಪೂರ್ಣವಾಗಿ ಹೇಳಲು, ಪ್ರೇಕ್ಷಕರಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರಿಸಲು ಕತೆಗೆ ಅಗತ್ಯವಿರುವಷ್ಟು ಉದ್ದ ಅಗಲವಾದ ಸ್ಥಳವನ್ನು ನೀಡಬೇಕಾಗುತ್ತದೆ. ನಿರ್ದೇಶಕರು ಅದನ್ನು ಮಾಡದೆ, ಇಕ್ಕಟ್ಟಿನ ಸ್ಥಳದೊಳಗೆ ದೊಡ್ಡ ಕತೆಯನ್ನು ತುರುಕಲು ಹೋಗಿ ಕೈ, ಕಾಲು ಕತ್ತರಿಸಿದ್ದಾರೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವ ಅಂಶಗಳು, ಸರಿಯಾಗಿ ಹೊಂದಾಣಿಕೆಯಾಗದೆ ಕತೆ ಎಷ್ಟೋ ಕಡೆ ಗೋಜಲು ಗೋಜಲಾಗುತ್ತದೆ ಮತ್ತು ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತವೆ.
ಇಂತಹ ಚಿತ್ರಗಳಲ್ಲಿ ದೊಡ್ಡ ಮಟ್ಟದ ಲಾಜಿಕ್, ಕಾರ್ಯಕಾರಣ ಸಂಬಂಧ, ವೈಜ್ಞಾನಿಕತೆ ಹುಡುಕುವುದು ತಪ್ಪಾದರೂ, ಒಂದು ಮಟ್ಟದ ತಾರ್ಕಿಕತೆ ಇದ್ದಾಗ ಮಾತ್ರ ಕತೆಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ, ಆ್ಯಕ್ಷನ್ ಸೀಕ್ವೆನ್ಸ್ಗಳ ವಿಜೃಂಭಣೆಗೆ ಅವಕಾಶ ಮಾಡಿಕೊಡುವ ಸಲುವಾಗಿ ಚಿತ್ರವನ್ನು ಒಪ್ಪಿಕೊಳ್ಳಲು ಕಷ್ಟವಾಗುವ ರೀತಿಯ ಅತಾರ್ಕಿಕತೆಗಳಿಂದ ತುಂಬಲಾಗಿದೆ. ಚಿತ್ರಕತೆಯಲ್ಲಿ ಹಲವು ಆಸಕ್ತಿಕರ ಹಾಗು ವಿಶೇಷ ಅಂಶಗಳನ್ನು ಸೇರಿಸಲು ಯತ್ನಿಸಲಾಗಿದೆ. ಪ್ರಾಣಿಗಳ ತರಬೇತಿ, ಟ್ರಾನ್ಸಿಸ್ಟರ್ನ ವಿಶೇಷ ಬಳಕೆ, ಸಣ್ಣ ಬೋಟ್ಗಳು, ಕ್ಲೈಮ್ಯಾಕ್ಸ್ನಲ್ಲಿ ಪ್ರತಿಮೆ ಬಳಕೆಯಾಗಿರುವ ರೀತಿ – ಹೀಗೆ ಹತ್ತು ಹಲವು ಅಂಶಗಳನ್ನು ಸೇರಿಸಲಾಗಿದೆ. ಆದರೆ, ಅರೆ ಬೆಂದ ಕತೆಯಿಂದಾಗಿ ಇವುಗಳಲ್ಲಿ ಬಹಳಷ್ಟು ಸಂಗತಿಗಳು ಹಾಸ್ಯಾಸ್ಪದವೆನಿಸಿಬಿಡುತ್ತದೆ.
ಆದರೆ, ಚಿತ್ರ ಶಿವರಾಜಕುಮಾರ್ ಅಭಿಮಾನಿಗಳನ್ನೇ ಗಮನದಲ್ಲಿಟ್ಟುಕೊಂಡು, ಶಿವರಾಜಕುಮಾರ್ ಅಭಿಮಾನಿಯೇ ನಿರ್ದೇಶಿಸಿರುವುದರಿಂದ ಅಭಿಮಾನಿ ಬಳಗ ಖುಶಿಪಡಲು ಬೇಕಾದ ಸಾಕಷ್ಟು ಸಂಗತಿಗಳು ಇಲ್ಲಿವೆ. ಶಿವರಾಜಕುಮಾರ್ ಇಲ್ಲಿ ಮೂರು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ, ಹಲವು ಹೆಸರುಗಳನ್ನು ಹೊಂದಿದ್ದಾರೆ, ದೊಡ್ಡವ್ರು, ದಳವಾಯಿ, ಘೋಸ್ಟ್, ಒಜಿ ಜೊತೆಗೆ ಆನಂದ್ ಹೀಗೆ ನಾಮ ಹಲವು. ಶಿವರಾಜಕುಮಾರ್ ಅವರನ್ನು ಡಿಏಜ್ ಮಾಡುವ ಯೋಚನೆ ಚೆನ್ನಾಗಿದ್ದರೂ, ತೆರೆಯ ಮೇಲೆ ಯುವಕ ಶಿವರಾಜಕುಮಾರ್ ತಮ್ಮ ‘ಆನಂದ್’ ದಿನಗಳನ್ನೇ ನೆನಪಿಸಿದರೂ, ಹಾವಭಾವ, ಮ್ಯಾನರಿಸಂ ಸಪ್ಪೆ ಎನಿಸುತ್ತದೆ. ಅಲ್ಲಿಯವರೆಗೂ ಕಣ್ಣಲ್ಲಿ ಬೆಂಕಿ ಉಗುಳುವ ಗ್ಯಾಂಗ್ಸ್ಟರ್ ಶಿವರಾಜ್ಕುಮಾರ್ ಅನ್ನು ನೋಡಿದ ಪ್ರೇಕ್ಷಕರಿಗೆ, ತಮ್ಮ ಎಂದಿನ ಸಹಜ ಲವಲವಿಕೆ ಇಲ್ಲದ ‘ಆನಂದ್’ ವರ್ಷನ್ ನೈಜವೆನಿಸುವುದಿಲ್ಲ.
ಇಡೀ ಚಿತ್ರದ ಹೊರೆಯನ್ನು ಶಿವರಾಜಕುಮಾರ್ ಹೆಗಲಿಗೆ ಹೊರಿಸಲಾಗಿರುವುದರಿಂದ ಚಿತ್ರದಲ್ಲಿರುವ ಮತ್ತೊಂದೇ ಒಂದು ಪ್ರಮುಖ ಪಾತ್ರವೆಂದರೆ ಚೆಂಗಪ್ಪ (ಜಯರಾಮ್). ಗ್ಯಾಂಗ್ಸ್ಟರ್ ದಳವಾಯಿಯನ್ನು ಹಿಡಿಯಲು ಯತ್ನಿಸುವ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಜಯರಾಮ್, ಕನ್ನಡದಲ್ಲಿ ತಾವೇ ಡಬ್ ಮಾಡಿದ್ದಾರೆ. ಮೊದಲೇ ಅವರೊಬ್ಬ ಕೇರಳ ಮೂಲದ ಅಧಿಕಾರಿ ಎಂದು ಸಿನಿಮಾದಲ್ಲಿ ಹೇಳಿರುವುದರಿಂದ ಅವರ ಆ್ಯಕ್ಸೆಂಟ್ ಅನ್ನು ಒಪ್ಪಬಹುದು. ಆದರೆ, ಅವರಿಗೆ ಬರೆಯಲಾಗಿರುವ ದೊಡ್ಡ ದೊಡ್ಡ ಸಂಭಾಷಣೆಗಳು ಆ ಆ್ಯಕ್ಸೆಂಟ್ಗೆ ಹೊಂದುವುದಿಲ್ಲ. ಜಯರಾಮ್ ಪಾತ್ರಚಿತ್ರಣವೂ ಕೂಡ ಅಲ್ಲಲ್ಲಿ ಅತೀ ನಾಟಕೀಯವೆನಿಸಿ, ಪೊಲೀಸರ ಒಟ್ಟು ಕಾರ್ಯನಿರ್ವಹಣೆ ಗಂಭೀರತೆ ಕಳೆದುಕೊಳ್ಳುತ್ತದೆ.
ಸರಿಯಾಗಿ ಅಭಿವೃದ್ಧಿಪಡಿಸಿಲ್ಲದ ಪಾತ್ರ ದೊರೆತಿದ್ದರೂ, ತೆರೆಯ ಮೇಲೆ ಹೆಚ್ಚು ಸಮಯ ದೊರೆಯದಿದ್ದರೂ ವಿಲನ್ ವಾಮನ್ ಪಾತ್ರದಲ್ಲಿ ಪ್ರಶಾಂತ್ ನಾರಾಯಣ್ ವಿಶೇಷವಾಗಿ ಗಮನಸೆಳೆಯುತ್ತಾರೆ. ಆ ಪಾತ್ರವನ್ನು ಮತ್ತಷ್ಟು ಅಭಿವೃದ್ದಿಪಡಿಸಿ, ಪ್ರಶಾಂತ್ ಪ್ರತಿಭೆಯನ್ನು ಬಳಸಿಕೊಂಡಿದ್ದರೆ ಒಂದು ನೆನಪಿನಲ್ಲುಳಿಯುವ ಖಳನ ಪಾತ್ರ ಕನ್ನಡಕ್ಕೆ ಸಿಗುತ್ತಿತ್ತು. ಉಳಿದಂತೆ ಟೀವಿ ಜರ್ನಲಿಸ್ಟ್ ಆಗಿ ಅರ್ಚನಾ ಜೋಯಿಸ್ ಚೆನ್ನಾಗಿ ನಟಿಸಿದ್ದರೂ ಆ ಪಾತ್ರದ ಅಗತ್ಯ, ತನ್ನ ಅಪ್ಪನೊಂದಿಗೆ ಆಕೆಯ ಸಂಬಂಧ ಯಾವುದೂ ಮನಸೆಳೆಯುವುದಿಲ್ಲ. ಇಡೀ ಚಿತ್ರದಲ್ಲಿ ಕಾಣದಿರುವ ಎಮೋಷನಲ್ ಆಂಗಲ್ ನೀಡುವ ಸಲುವಾಗಿ ಕೆಲವು ಪಾತ್ರಗಳನ್ನು ಸೃಷ್ಟಿಸಿ ಸಾಯಿಸಲಾಗಿದೆ. ಆದರೆ, ಅವುಗಳ ಸಾವು ಕೂಡ ಮನ ತಟ್ಟುವುದರಲ್ಲಿ ಸಫಲವಾಗುವುದಿಲ್ಲ. ಕೊನೆಗೂ ಸಿನಿಮಾದ ಯಾವುದೇ ಪಾತ್ರದೊಂದಿಗೆ ಭಾವನಾತ್ಮಕವಾಗಿ ಪ್ರೇಕ್ಷಕ ಕನೆಕ್ಟ್ ಆಗುವುದೇ ಇಲ್ಲ.
ತಾಂತ್ರಿಕತೆ ಮತ್ತು ಮೇಕಿಂಗ್ ವಿಷಯದಲ್ಲಿ ಚಿತ್ರ ಗೆದ್ದಿದೆ. ಸಿನಿಮಾಟೋಗ್ರಫಿ ಮತ್ತು ಅರ್ಜುನ್ ಜನ್ಯ ಸಂಗೀತ ಅಚ್ಚುಕಟ್ಟಾಗಿದೆ. ಬಹುತೇಕ ಕತ್ತಲಲ್ಲೇ ನಡೆಯುವ ಕತೆಯಾದ್ದರಿಂದ ಮತ್ತು ಇಲ್ಲೂ ಚಿನ್ನದ ಬೇಟೆ ಇರುವುದರಿಂದ ‘ಕೆಜಿಎಫ್’ ಛಾಯೆ ಇದೆ. ಶಿವರಾಜಕುಮಾರ್ ಅವರಿಗೆ ಸಂಭಾಷಣೆಗಳು ಕಡಿಮೆ ಇದ್ದರೂ, ಇರುವುದೆಲ್ಲಾ ಬಹುತೇಕ ಮಾಸ್ ಡೈಲಾಗ್ಗಳೇ. ಅವುಗಳಲ್ಲಿ ಕೆಲವು ವರ್ಕ್ ಆಗುತ್ತವೆ, ಕೆಲವು ಇಲ್ಲ. ಕೊನೆಯಲ್ಲಿ ಕೆಲವು ಕ್ಷಣಗಳ ಕಾಲ ಕಾಣಿಸಿಕೊಳ್ಳುವ ಅನುಪಮ್ ಖೇರ್ ಕೂಡ ಯಾವುದೇ ಪ್ರಭಾವ ಬೀರುವುದಿಲ್ಲ. ‘ಘೋಸ್ಟ್’ ಭಾಗ 2ರಲ್ಲಿ ಅವರಿಗೆ ದೊಡ್ಡ ಪಾತ್ರವಿರುವ ಸೂಚನೆ ನೀಡಲಾಗಿದೆಯಷ್ಟೆ.
ಹೆಚ್ಚೇನೂ ಹಿನ್ನೆಲೆ ಇಲ್ಲದ, ‘ಜೈಲರ್’ ಚಿತ್ರದ ಸಣ್ಣ ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್ ಮಿಂಚಿರುವ ರೀತಿ, ಅದರಿಂದ ಗಳಿಸಿದ ಜನಪ್ರಿಯತೆ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ. ಪಾತ್ರವನ್ನು ದೊಡ್ಡಮಟ್ಟಕ್ಕೆ ಬೆಳೆಸಲು, ಸ್ಟಾರ್ಗಳ ಮಾಸ್ ಅಪೀಲ್ ಅನ್ನು ಬಳಸಿಕೊಳ್ಳಲು ಸಂಕೀರ್ಣ ಕತೆಯ, ದೊಡ್ಡ ಹಿನ್ನೆಲೆಯ ಅಗತ್ಯವಿಲ್ಲ. ಪ್ರೇಕ್ಷಕರು ಪಾತ್ರದೊಂದಿಗೆ ಕನೆಕ್ಟ್ ಆಗಲು, ಕತೆಗೆ ಅಚ್ಚುಕಟ್ಟಾಗಿ ಹೊಂದುವ ಸರಳವಾದ ಒಂದು ವಾಕ್ಯದ ಪಾತ್ರ ಪರಿಚಯವೂ ಸಾಕಾಗುತ್ತದೆ. ಆದರೆ, ಕಡಿಮೆ ಸಮಯದಲ್ಲಿ ತುಂಬಾ ದೊಡ್ಡ ಕತೆ ಹೇಳಲು ಹೋಗಿರುವ ನಿರ್ದೇಶಕ ಶ್ರೀನಿ, ಕೊನೆಗೆ ಯಾವುದನ್ನೂ ಸರಿಯಾಗಿ ಹೇಳಲಾಗದ ಭಾವದಲ್ಲಿ ಸಿನಿಮಾ ಮುಗಿಸಿದ್ದಾರೆ. ಘೋಸ್ಟ್ 2ರಲ್ಲಿ ಈ ಎಲ್ಲಾ ಅಸ್ಪಷ್ಟತೆಗಳಿಗೆ ಉತ್ತರ ಸಿಗಬಹುದೇನೋ ಕಾದು ನೋಡಬೇಕು. ಉತ್ತಮ ಚಿತ್ರಕಥೆಯಿರುವ, ಒಂದು ಒಳ್ಳೆಯ ಹೈಸ್ಟ್ ಅಥವಾ ಹಾಸ್ಟೇಜ್ ಥ್ರಿಲ್ಲರ್ ನಿರೀಕ್ಷೆಯಲ್ಲಿ ನೀವಿದ್ದರೆ ನಿಮಗೆ ನಿರಾಸೆಯಾಗಬಹುದು. ಆದರೆ, ಶಿವರಾಜಕುಮಾರ್ ಅಭಿಮಾನಿಗಳಿಗೆ ಮತ್ತು ಪಕ್ಕಾ ಆ್ಯಕ್ಷನ್ ಸಿನಿಮಾ ಪ್ರೇಮಿಗಳಿಗೆ ಚಿತ್ರ ಸಂಭ್ರಮ ತರುವಂತಿದೆ.