ಕೆಲವು ಸನ್ನಿವೇಶಗಳು ಇನ್ನೂ ಚುರುಕಾಗಿ ಇರಬಹುದಿತ್ತು. ಕಥೆಯಲ್ಲಿ ಇನ್ನೊಂದಷ್ಟು ತಿರುವುಗಳು ಇದ್ದಿದ್ದರೂ ನಡೆಯುತ್ತಿತ್ತು. ಆದರೂ ಇದನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೆ ಈಚಿನ ದಿನಗಳಲ್ಲಿ ಬಂದ ಅತ್ಯುತ್ತಮ ಸರಣಿಗಳ ಸಾಲಿಗೆ ‘ಚೂನಾ’ ಸೇರುತ್ತದೆ. ಮನರಂಜನೆ ಮತ್ತು ರೋಚಕತೆಗೆ ಕೊರತೆ ಇಲ್ಲದ ಅಚ್ಚುಕಟ್ಟಾದ ಸರಣಿ ‘ಚೂನಾ’ Netflixನಲ್ಲಿ ಲಭ್ಯವಿದೆ.

‘ಮನಿ ಹೈಸ್ಟ್’ ಸರಣಿ ಬಂದಾಗ ಎಲ್ಲೆಲ್ಲೂ ಅದರದ್ದೇ ಚರ್ಚೆ. ಅದೇ ಮಾದರಿಯ ದೇಸಿ ಸರಣಿ ಇದೀಗ ವೀಕ್ಷಕರನ್ನು ಮನರಂಜಿಸಲು ಬಂದಿದೆ. ತೀರಾ ಮನಿ ಹೈಸ್ಟ್ ಅಷ್ಟು ಅಲ್ಲದಿದ್ದರೂ ನಮ್ಮ ಸೊಗಡಿಗೆ ಹೊಂದುವಂತಹ ಮಾದರಿ ಎನ್ನಬಹುದು. ಅದುವೇ Netflixನಲ್ಲಿ ಬಿಡುಗಡೆಯಾಗಿರುವ ‘ಚೂನಾ’. ಇದರಲ್ಲಿ ಒಬ್ಬ ಪ್ರಭಾವಿ ರಾಜಕಾರಣಿ ಅರವಿಂದ್ ಶುಕ್ಲಾನ ವಿರುದ್ಧ ಆರು ಜನರ ತಂಡವೊಂದು ಒಂದು ಪ್ರತೀಕಾರದ ರೂಪದಲ್ಲಿ ದರೋಡೆಯನ್ನು ಯೋಜಿಸುವ ಹುನ್ನಾರವನ್ನು ತೋರಿಸಿದ್ದಾರೆ. ಅವರು ಅಂದುಕೊಂಡಂತೆಯೇ ದರೋಡೆ ನಡೆಸುವಲ್ಲಿ ಸಫಲರಾಗುತ್ತಾರಾ ಎನ್ನುವುದೇ ಸರಣಿಯ ತಿರುಳು.

ಈ ಮಾದರಿಯ ದರೋಡೆ, ಕಳ್ಳತನ, ಸಂಚು ಇತ್ಯಾದಿಗಳ ಸುತ್ತ ಹೆಣೆದಿರುವ ಕಥೆಗಳು ಮನರಂಜನೆಯ ವಿಷಯದಲ್ಲಿ ವೀಕ್ಷಕರಿಗೆ ಮೋಸ ಮಾಡುವುದಿಲ್ಲ. ಒಂದು ಮಟ್ಟದ ರೋಚಕತೆಯನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತವೆ. ಏಕೆಂದರೆ ತೆರೆಯ ಮೇಲೆ ಒಂದು ಸಂಚನ್ನು, ಅಪರಾಧವನ್ನು ನಿಖರವಾಗಿ ತೋರಿಸಬೇಕಾದರೆ ಕಥೆಯಲ್ಲಿ ಒಂದು ಮಟ್ಟದ ವೇಗ ಮತ್ತು ಪಾತ್ರಗಳಲ್ಲಿ ಚುರುಕುತನ ಇರಲೇಬೇಕು. ಸಾಕಷ್ಟು ಅನಿರೀಕ್ಷಿತ ತಿರುವುಗಳನ್ನೂ ಕಥೆ ಒಳಗೊಂಡಿರಬೇಕು. ಆಕ್ಷನ್ ಸನ್ನಿವೇಶಗಳು ಧಾರಾಳವಾಗಿ ಇರಬೇಕು. ಕಥೆಯಲ್ಲಿ ಚಕಚಕನೇ ಸನ್ನಿವೇಶಗಳು ಬದಲಾಗುತ್ತಿರಬೇಕು. ಆಗಲೇ ಸಂಚು ಮನಸ್ಸಿಗೆ ಇಳಿಯುವುದು. ಪುಷ್ಪೇಂದ್ರನಾಥ್ ಮಿಶ್ರ ಅವರು ‘ಚೂನಾ’ ಸರಣಿಯಲ್ಲಿ ಈ ಮಾದರಿಗೆ ಬೇಕಾದ ನಾಡಿಮಿಡಿತವನ್ನು ಸರಿಯಾಗಿ ಗ್ರಹಿಸಿ ಚಂದದ ಕಥೆ ಮಾಡಿದ್ದಾರೆ.

‘ಚೂನಾ’ ಎಂದರೆ ಸುಣ್ಣ. ಈ ಸರಣಿಯಲ್ಲಿ ಎಂಟು ಸಂಚಿಕೆಗಳಿವೆ. ಎಂಟೂ ಒಂದಕ್ಕಿಂತ ಒಂದು ಬಿಗಿಯಾಗಿ, ಆಸಕ್ತಿಕರವಾಗಿ ಹೆಣೆಯಲ್ಪಟ್ಟಿವೆ. ಹಳೆಯ ಸೇಡು ತೀರಿಸಿಕೊಳ್ಳಲು 6 ಜನರ ಯುವಪಡೆ ದುಷ್ಟ ರಾಜಕಾರಣಿ ಶುಕ್ಲಾ ವಿರುದ್ಧ ಹೂಡುವ ಸಂಚಿನ ಪಯಣ ವೀಕ್ಷಿಸುವಾಗ ಸೇಡು, ಕೋಪ, ತಲ್ಲಣಗಳ ಒಂದು ರೋಲರ್ ಕೋಸ್ಟರ್ ಅನುಭವವನ್ನು ವೀಕ್ಷಕರು ಅನುಭವಿಸುತ್ತಾರೆ. ಅರವಿಂದ್ ಶುಕ್ಲಾ ಪಾತ್ರದಲ್ಲಿ ಜಿಮ್ಮಿ ಶೆರ್ಗಿಲ್ ವಿಜೃಂಭಿಸಿದ್ದಾರೆ.
ಹಾಸ್ಯ, ಸೇಡು, ಆಕ್ಷನ್ ಎಲ್ಲದರ ಪರಿಪೂರ್ಣ ಮಿಶ್ರಣವಿರುವ ಮೊನಚಾದ ನಿರೂಪಣೆಯನ್ನು ಪ್ರತಿಯೊಂದು ಸಂಚಿಕೆಯಲ್ಲೂ ಕಾಣಬಹುದು.

ಆರ್ಷದ್ ವಾರ್ಸಿ ಅವರು ಸರಣಿಯನ್ನು ನಿರೂಪಿಸುವ ಹೊಣೆ ಹೊತ್ತು ಅವರ ದನಿಯನ್ನು ನೀಡಿರುವುದು ವಿಶೇಷ. ಕುತೂಹಲ ಮತ್ತು ಲವಲವಿಕೆ ಮಿಶ್ರಿತ ಧಾಟಿಯಲ್ಲಿ ಅವರ ನಿರೂಪಣೆ ಸಾಗುತ್ತದೆ. ಅವರ ನಿರೂಪಣೆಯ ಶೈಲಿ ಕಥೆಯ ಮೆರುಗನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಎಲ್ಲಕ್ಕಿಂತ ವಿಶೇಷ ಎನಿಸುವುದು ನಿರ್ದೇಶಕ ಪುಷ್ಪೇಂದ್ರ ಅವರು ಪಾತ್ರಗಳನ್ನು ಬೆಳೆಸಿರುವ ರೀತಿ. ಪ್ರತಿಯೊಂದು ಪಾತ್ರದ ಪ್ರತಿಯೊಂದು ನಡವಳಿಕೆಗೂ ಹಿನ್ನೆಲೆಗಳನ್ನು ಸೃಷ್ಟಿಸುತ್ತಾ ಅವರ ವರ್ತಮಾನಕ್ಕೆ ಅದನ್ನು ಜೋಡಿಸುತ್ತಾ ಹೋಗಿರುವುದು ಪಾತ್ರಗಳನ್ನು ಪುಷ್ಟೀಕರಿಸಿದೆ ಮತ್ತು ಅವರುಗಳನ್ನು ಈ ಸನ್ನಿವೇಶಕ್ಕೆ ದೂಡಿದ ಸಂದರ್ಭಗಳಿಗೆ ಮತ್ತಷ್ಟು ಸ್ಪಷ್ಟತೆಯನ್ನು ಕೊಟ್ಟಿದೆ.

ಕ್ಯಾಲ್ಕುಲೇಟರ್ ಶುಕ್ಲಾ ಎಂದೇ ಕುಖ್ಯಾತನಾದ ಖಳನಾಯಕ ಜಿಮ್ಮಿ ಶೆರ್ಗಿಲ್ ಪಾತ್ರ ಸಂಪೂರ್ಣ ಪೈಸಾ ವಸೂಲ್ ಪಾತ್ರ ಎಂದೇ ಹೇಳಬಹುದು. ಚಾಲಾಕಿತನ, ಸಂಚು, ಮರ್ಮ, ಎದುರಾಳಿಯ ಮುಂದಿನ ನಡೆಯ ಬಗ್ಗೆ ನಿಖರತೆ ಎಲ್ಲದರಲ್ಲೂ ಲಯ ತಪ್ಪದ ಖತರ್‌ನಾಕ್‌ ಖಳನಾಯಕನ ಪಾತ್ರದ ಪರಿಪೂರ್ಣ ಚಿತ್ರಣವನ್ನು ಇಲ್ಲಿ ಕಾಣಬಹುದು. ಇಂತಹ ಒಬ್ಬ ಪರ್ಫೆಕ್ಷನಿಸ್ಟ್ ಖಳನಾಯಕನ ವಿರುದ್ಧ ಸಂಚು ಮಾಡುವುದಕ್ಕೆ ಗುಂಡಿಗೆ ಮತ್ತು ಬುದ್ಧಿಶಕ್ತಿ ಎರಡೂ ಬೇಕು. ಸಂಚಿನ ಯೋಜನೆ ಮತ್ತು ಅದನ್ನು ಜಾರಿಗೊಳಿಸಿರುವ ರೀತಿ, ಆರೂ ಜನರ ಚಾಕಚಕ್ಯತೆ ಎಲ್ಲವೂ ನೋಡಲು ಬಹಳ ಸೊಗಸಾಗಿದೆ. ಅಷ್ಟಕ್ಕೂ ಈ ಆರು ಜನರು ಯಾರು, ಅವರ ಹಿನ್ನೆಲೆ ಏನು, ಅವರಿಗೆ ಶುಕ್ಲಾ ವಿರುದ್ಧ ಇರುವ ಸೇಡು ಯಾಕೆ ಎನ್ನುವ ಪ್ರಶ್ನೆಗಳಿಗೆ ಸರಣಿ ಉತ್ತರಿಸುತ್ತಾ ಹೋಗುತ್ತದೆ.

ಮಾಜಿ ಕಂಟ್ರಾಕ್ಟರ್ ಜೆಪಿ ಮದ್ಯಪಾನ ವ್ಯಸನಿಯಾದರೆ ಬಾಂಕೆ ಶುಕ್ಲಾನಿಂದ ತನ್ನ ವೃತ್ತಿಯನ್ನು ಕಳೆದುಕೊಂಡವ. ಅನ್ಸಾರಿ ಒಬ್ಬ ಪುಡಿ ರೌಡಿ. ತ್ರಿಲೋಕಿ ಕೂಡ ಹೆಚ್ಚು ಕಮ್ಮಿ ಲೋಕಲ್ ರೌಡಿಯ ಹಾಗೆ. ಬಿಷನು ಶುಕ್ಲನ ಭಾಮೈದ. ಪಂಡಿತ್ ಜೀ ಇವರೆಲ್ಲರಿಗೂ ದಿಕ್ಕು ತೋರಿಸುವ ಕುಖ್ಯಾತ ಆಧ್ಯಾತ್ಮಿ. ಹೀಗೆ ಆರು ಬೇರೆ ಬೇರೆ ಹಿನ್ನೆಲೆಗಳಿರುವ ಸಮಾಜದಲ್ಲಿ ತಿರಸ್ಕರಿಸಲ್ಪಟ್ಟ ವ್ಯಕ್ತಿಗಳು ಆರು ವಿವಿಧ ಆಯಾಮಗಳನ್ನು ಕಥೆಗೆ ಲೇಪಿಸುತ್ತಾ ಹೋಗುತ್ತಾರೆ. ಬಾಂಕೆಯ ಸಹೋದರಿ ಬೇಲಾ ತನ್ನ ಆಕ್ಷನ್ ದೃಶ್ಯಗಳಿಂದ ಮನಸ್ಸು ಗೆಲ್ಲುತ್ತಾಳೆ. ಹಾಗಾದರೆ ‘ಚೂನಾ’ದಲ್ಲಿ ಕೊರತೆಗಳೇ ಇಲ್ಲವೇ ಎಂದು ಕೇಳಿದರೆ ಖಂಡಿತ ಇದೆ. ಸುಮಾರು ಸನ್ನಿವೇಶಗಳು ಕಥೆಗೆ ತಿರುವು ಸಿಗಲಿ ಎಂದೇ ಉದ್ದೇಶಪೂರ್ವಕವಾಗಿ ಕೂರಿಸಿದಂತೆ ಎನಿಸಿ ತುಸು ಅಸಹಜ ಎನಿಸುತ್ತದೆ. ಕೆಲವು ಸನ್ನಿವೇಶಗಳು ಇನ್ನೂ ಚುರುಕಾಗಿ ಇರಬಹುದಿತ್ತು. ಕಥೆಯಲ್ಲಿ ಇನ್ನೊಂದಷ್ಟು ತಿರುವುಗಳು ಇದ್ದಿದ್ದರೂ ನಡೆಯುತ್ತಿತ್ತು. ಆದರೂ ಇದನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೆ ಈಚಿನ ದಿನಗಳಲ್ಲಿ ಬಂದ ಅತ್ಯುತ್ತಮ ಸರಣಿಗಳ ಸಾಲಿಗೆ ‘ಚೂನಾ’ ಸೇರುತ್ತದೆ. ಎಷ್ಟು ಬೇಕೋ ಅಷ್ಟೇ ಮಸಾಲೆ ಇರುವ ಕುತೂಹಲಭರಿತ ಸರಣಿ ಇದು.

ಆರು ವಿಭಿನ್ನ ಪ್ರಕೃತಿಯ ಜನರು ಬೇರೆ ಸಂದರ್ಭಗಳಲ್ಲಿ ಒಟ್ಟು ಸೇರುವುದಕ್ಕೆ ಆಗದೆಯೇ ಇರುವಂಥವರು ಒಟ್ಟಿಗೆ ಸೇರಿ ಒಬ್ಬನ ಮೇಲೆ ಸೇಡು ತೀರಿಕೊಳ್ಳುವ ಅಂಶವೇ ಇದರ ಹೈಲೈಟ್. ಸೇಡಿನ ಕಾರಣ ಬೇರೆ ಬೇರೆ ಇದ್ದರೂ ಎಲ್ಲರಿಗೂ ಒಬ್ಬನೇ ಶತ್ರು. ಸೇಡಿನ ಅನಾವರಣ ಹೇಗೆ ಆಗುತ್ತದೆ ಎನ್ನುವುದನ್ನು ಸರಣಿ ನೋಡಿ ತಿಳಿಯಿರಿ. ಮನರಂಜನೆ ಮತ್ತು ರೋಚಕತೆಗೆ ಕೊರತೆ ಇಲ್ಲದ ಅಚ್ಚುಕಟ್ಟಾದ ಸರಣಿ ‘ಚೂನಾ’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here