ಕಂಗನಾ ನಟನೆಯ ‘ತೇಜಸ್’ ಹಿಂದಿ ಸಿನಿಮಾ ಅಕ್ಟೋಬರ್ 27, 2023ರಂದು ತೆರೆಕಂಡಿತ್ತು. ಚಿತ್ರದ ಬಜೆಟ್ 70 ಕೋಟಿ ರೂಪಾಯಿ. ನಿರ್ಮಾಪಕರಿಗೆ 19.23 ಕೋಟಿ ರೂಪಾಯಿ ರಿಟರ್ನ್ಸ್ ಸಿಕ್ಕಿದ್ದು, 50.77 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಂಗನಾ ರನಾವತ್ ನಟನೆಯ ‘ತೇಜಸ್’ ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿದ್ದು 50 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಬಾಲಿವುಡ್ ಹಂಗಾಮ ವರದಿಯ ಅನ್ವಯ ಸಿನಿಮಾದ ಒಟ್ಟಾರೆ ವಹಿವಾಟು 4.25 ಕೋಟಿ ರೂಪಾಯಿ. ರೋನ್ನಿ ಸ್ಕ್ರೂವಾಲಾ ನಿರ್ಮಾಣದ ಸಿನಿಮಾ ಅಕ್ಟೋಬರ್ 27ರಂದು ತೆರೆಕಂಡಿತ್ತು. ಚಿತ್ರದ ಬಜೆಟ್ 70 ಕೋಟಿ ರೂಪಾಯಿ. ಭಾರತದ ಬಾಕ್ಸ್ ಆಫೀಸ್‌ನಲ್ಲಿ 4.25 ಕೋಟಿ ರೂಪಾಯಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ವಹಿವಾಟು 70 ಲಕ್ಷ. ಚಿತ್ರದ OTT, ಸ್ಯಾಟಲೈಟ್ ಮತ್ತು ಮ್ಯೂಸಿಕ್ ರೈಟ್ಸ್‌ಗಳಿಂದ 17 ಕೋಟಿ ರೂ ಲಭಿಸಿದೆ. ಒಟ್ಟಾರೆ ನಿರ್ಮಾಪಕರಿಗೆ 19.23 ಕೋಟಿ ರೂಪಾಯಿ ರಿಟರ್ನ್ಸ್ ಸಿಕ್ಕಿದ್ದು, 50.77 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಿಂಗಳುಗಳ ಹಿಂದೆ ತೆರೆಕಂಡ ಕಂಗನಾ ಅವರ ‘ಧಾಕಡ್’ ಕೂಡ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತ್ತು. ವರದಿಗಳು ಹೇಳುವಂತೆ ಈ ಚಿತ್ರದ ನಿರ್ಮಾಪಕರು 78 ಕೋಟಿ ನಷ್ಟ ಅನುಭವಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾದ ವಹಿವಾಟು 2.58 ಕೋಟಿಯಷ್ಟೆ. 2019ರಲ್ಲಿ ಕಂಗನಾ ನಟನೆಯ ‘ಮಣಿಕರ್ನಿಕಾ’ 92.19 ಕೋಟಿ ವಹಿವಾಟು ನಡೆಸಿತ್ತು. ಆನಂತರದ ಅವರ ‘ಜಡ್ಜ್‌ಮೆಂಟಲ್ ಹೈ ಕ್ಯಾ’ 33.11 ಕೋಟಿ, ‘ಪಂಗಾ’ ಸಿನಿಮಾ 28.92 ಕೋಟಿ ರೂಪಾಯಿ ಗಳಿಸಿದ್ದವು. ಕೋವಿಡ್ ದಿನಗಳಲ್ಲಿ ತೆರೆಕಂಡ ಕಂಗನಾರ ಬಯೋಪಿಕ್ ಸಿನಿಮಾ ‘ಜಯಲಲಿತಾ’ ಗಳಿಸಿದ್ದು 1.46 ಕೋಟಿಯಷ್ಟೆ. 2024ರ ಆರಂಭದಲ್ಲಿ ಅವರ ‘ಎಮರ್ಜೆನ್ಸಿ’ ಸಿನಿಮಾ ತೆರೆಕಾಣಲಿದೆ.