ಖ್ಯಾತ ನಟ ರಜನೀಕಾಂತ್ರ ಆಪ್ತಮಿತ್ರ ರಾಜ್ ಬಹದ್ದೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಶಿವಾಜಿ ಬಹದ್ದೂರ್’ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಇಲ್ಲಿ ಮೊದಲ ಬಾರಿ ಹೆಚ್ಚು ಸ್ಕ್ರೀನ್ ಸ್ಪೇಸ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆರೋನ್ ಕಾರ್ತಿಕ್ ನಿರ್ದೇಶನದ ‘ಶಿವಾಜಿ ಬಹದ್ದೂರ್’ ಕನ್ನಡ ಸಿನಿಮಾ ಸೆಟ್ಟೇರಿದೆ. ಖ್ಯಾತ ನಟ ರಜನೀಕಾಂತ್ ಅವರ ಆಪ್ತಮಿತ್ರ ರಾಜ್ ಬಹದ್ದೂರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಈ ಹಿಂದೆ ರಜನೀಕಾಂತ್ ಜೊತೆ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಜ್ ಬಹದ್ದೂರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮೊದಲ ಚಿತ್ರವಿದು. ‘ರಜನಿಕಾಂತ್ರಿಗೆ ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ತಿಳಿಸಿದೆ. ತುಂಬಾ ಖುಷಿಪಟ್ಟರು. ಚಿತ್ರ ಸಿದ್ದವಾದ ಮೇಲೆ ಬಂದು ನೋಡುವುದಾಗಿಯೂ ಹೇಳಿದ್ದಾರೆ. ನಾನು ನಟಿಸುತ್ತಿರುವ ವಿಷಯ ತಿಳಿದು ಇಲ್ಲಿನ ರಜನಿಕಾಂತ್ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ’ ಎಂದರು ರಾಜ್ ಬಹದ್ದೂರ್.
ನಿರ್ದೇಶಕ ಆರೋನ್ ಕಾರ್ತಿಕ್ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿ, ‘ಶಿವಾಜಿ ಬಹದ್ದೂರ್ ಎಂದರೆ ಎರಡು ಪಾತ್ರಗಳು. ಶಿವಾಜಿ ಪ್ರಧಾನಮಂತ್ರಿ ಪಾತ್ರದ ಹೆಸರು. ಬಹದ್ದೂರ್ ಮುಖ್ಯಮಂತ್ರಿ ಪಾತ್ರದ ಹೆಸರು. ಶಿವಾಜಿ ಪಾತ್ರದ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳುತ್ತದೆ. ಬಹದ್ದೂರ್ ಅಂದರೆ ಮುಖ್ಯಮಂತ್ರಿ ಪಾತ್ರದಲ್ಲಿ ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ. ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ (ಭಯೋತ್ಪಾದನೆ) ತಡೆಗಟ್ಟಲು ಹೋರಾಡುವ ಮುಖ್ಯಮಂತ್ರಿಯಾಗಿ ರಾಜ್ ಬಹದ್ದೂರ್ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ. ಚಿತ್ರದ ಪ್ರಮುಖ ಖಳಪಾತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ನಟಿಸಲಿದ್ದಾರೆ.
‘ರಂಗಿನ ರಾಟೆ’ ಖ್ಯಾತಿಯ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಆರೋನ್ ಕಾರ್ತಿಕ್ ಅವರೇ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಹೆಚ್ ವಾಸು, ಸ್ವಸ್ತಿಕ್ ಶಂಕರ್, ನಟ ಷಣ್ಮುಖ ಗೋವಿಂದರಾಜು, ಗಾಯಕ ಆಲೂರು ನಾಗಪ್ಪ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು.