ಸೂರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಈ ವಾರ ತೆರೆಕಂಡಿದೆ. ಅಭಿಷೇಕ್ ಅಂಬರೀಶ್ ಅವರ ಎರಡನೇ ಚಿತ್ರವಿದು. ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮತ್ತು ‘ಶುಗರ್ ಫ್ಯಾಕ್ಟರಿ’ ತೆರೆಕಂಡಿರುವ ಮತ್ತೆರೆಡು ಪ್ರಮುಖ ಕನ್ನಡ ಚಿತ್ರಗಳು. ಮಮ್ಮೂಟಿ ಮತ್ತು ಜ್ಯೋತಿಕಾ ಅಭಿನಯದ ಕೋರ್ಟ್ – ಡ್ರಾಮಾ ‘ಕಾದಲ್ ದ ಕೋರ್’ ಮಲಯಾಳಂ ಸಿನಿಮಾ ಕೂಡ ಥಿಯೇಟರ್‌ಗೆ ಬಂದಿದೆ.
ಶುಗರ್ ಫ್ಯಾಕ್ಟರಿ | ಕನ್ನಡ | ಆಧುನಿಕ ದಿನಗಳ ಸಂಬಂಧಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿ ಹಾಸ್ಯದೊಂದಿಗೆ ನಿರೂಪಿಸಲಾಗಿದೆ. ಶುಗರ್ ಫ್ಯಾಕ್ಟರಿ ಎಂದರೆ ಒಂದು ಪಬ್‌ನ ಹೆಸರು. ಅದೇ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ. ಚಿತ್ರದಲ್ಲಿ ಒಂದು ಸುಮಧುರ ಪ್ರೇಮ ಕಾವ್ಯವೂ ಇದೆ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳಿವೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ ಮತ್ತು ರುಹಾನಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಕೂರ್ಗ್ ಯುವತಿಯ ಪಾತ್ರದಲ್ಲಿ ನಟಿಸಿರುವ ಸೋನಲ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಒಪ್ಪದ, ಪಾರ್ಟಿ ಇಷ್ಟಪಡುವ ಯುವತಿಯ ಪಾತ್ರ ಅವರದ್ದು. ರುಹಾನಿ ಶೆಟ್ಟಿ ಯೂಟ್ಯೂಬರ್ ಅಮುಲು ಪಾತ್ರ ನಿರ್ವಹಿಸಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ | ಕನ್ನಡ | ಸಾವನ್ನು ಎದುರು ನೋಡುತ್ತಾ ಬೇಗನೇ ಸಾವು ಬರಲಿ ಎಂದು ಬಯಸುವ ವಿಚಿತ್ರ ಕಾಯಿಲೆಯ ಅನಿಕೇತ್‌ಗೆ (ರಾಜ್ ಬಿ ಶೆಟ್ಟಿ) ಆಸ್ಪತ್ರೆಯಲ್ಲಿ ಕೌನ್ಸಲರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೇರಣಾ (ಸಿರಿ ರವಿಕುಮಾರ್)ಳ ಮೇಲೆ ಪ್ರೀತಿಯಾಗುತ್ತದೆ. ಹೀಗೆ ಮನ್ನಡೆಯುವ ಈ ಜೋಡಿಯ ನಡುವೆ ಆತ್ಮೀಯತೆ, ಇಬ್ಬರ ನಡುವೆ ಮೂಡುವ ಭಾವನೆಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಒಂದಾಗುವ ಎರಡು ಮನಸ್ಸುಗಳ ಪ್ರೇಮಕತೆಯ ಹಂದರ ಈ ಸಿನಿಮಾ. ರಾಜ್ ಬಿ ಶೆಟ್ಟಿ ಅವರೇ ಚಿತ್ರಕಥೆ ಬರೆದು, ನಿರ್ದೇಶಿಸಿ, ನಟಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ. Lighter Buddha Films ಸಹಯೋಗದೊಂದಿಗೆ AppleBox Studios ಬ್ಯಾನರ್ ಅಡಿಯಲ್ಲಿ ರಮ್ಯಾ ಸಿನಿಮಾ ನಿರ್ಮಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಚಿತ್ರಕ್ಕಿದೆ.
ಬ್ಯಾಡ್ ಮ್ಯಾನರ್ಸ್ | ಕನ್ನಡ | ಅಭಿಷೇಕ್ ಅಂಬರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ಗ್ಯಾಂಗ್‌ಸ್ಟರ್ ಸಿನಿಮಾ. ರುದ್ರನ (ಅಭಿಷೇಕ್) ತಂದೆ ಆಕಸ್ಮಿಕವಾಗಿ ನಿಧನರಾಗುತ್ತಾರೆ. ಅವರ ಮರಣದ ನಂತರ ಪೊಲೀಸ್ ಇಲಾಖೆಯಿಂದ ತಂದೆಯ ಕೆಲಸವನ್ನು ರುದ್ರನಿಗೆ ನೀಡಲಾಗುತ್ತದೆ. ಆದರೆ ಅಪರಾಧ ತನಿಖೆಯೊಂದರಲ್ಲಿ ಅವನು ತನ್ನ ಸರ್ವಿಸ್ ಗನ್ ಕಳೆದುಕೊಳ್ಳುತ್ತಾನೆ. ಗನ್ ಹುಡುಕದಿದ್ದರೆ ಕೆಲಸದಿಂದ ಅಮಾನತ್ತು ಗೊಳಿಸಲಾಗುತ್ತದೆ ಎಂದು ಕರೆ ಬರುತ್ತದೆ. ಮುಂದೇನಾಗಲಿದೆ ಎನ್ನುವುದರ ಸುತ್ತ ಚಿತ್ರದ ಕತೆಯ ಹೆಣಿಗೆಯಿದೆ. ಸೂರಿ ನಿರ್ದೇಶನದ ಚಿತ್ರವನ್ನು ಕೆ ಎಂ ಸುಧೀರ್ ನಿರ್ಮಾಣ ಮಾಡಿದ್ದಾರೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ, ಅರಸು, ಬ್ಯಾಂಕಾಕ್ ದಿಲೀಪ್, ತಾವರೆಕೆರೆ ರಘು, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಂ, ಪ್ರಿಯಾಂಕಾ ಕುಮಾರ್ ತಾರಾಬಳಗದಲ್ಲಿದ್ದಾರೆ.
ಕೋಟಬೊಮ್ಮಲಿ ಪಿ ಎಸ್ | ತೆಲುಗು | ಚುನಾವಣಾ ಉದ್ದೇಶಗಳಿಗಾಗಿ ರಾಜಕಾರಣಿಗಳು ಜಾತಿ, ಧರ್ಮದ ಹೆಸರಿನಲ್ಲಿ ಕೋಮುಗಲಭೆ ಉಂಟುಮಾಡಿ ಒಳಜಗಳಗಳನ್ನು ಸೃಷ್ಠಿಸುವ ರಾಜಕೀಯ ಕಥಾಹಂದರ. ಮಲಯಾಳಂ ಸಿನಿಮಾ ‘ನಾಯಟ್ಟು’ ರಿಮೇಕ್ ಇದು. ಶ್ರೀಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವನ್ನು ತೇಜ ಮಾರ್ನಿ ನಿರ್ದೇಶಿಸಿದ್ದಾರೆ. GA2 Pictures ಬ್ಯಾನರ್ ಅಡಿಯಲ್ಲಿ ಬನ್ನಿ ವಾಸ್ ಮತ್ತು ವಿದ್ಯಾ ಕೊಪ್ಪಿನೀಡಿ ಚಿತ್ರ ನಿರ್ಮಿಸಿದ್ದಾರೆ. ಜಗದೀಶ ಚೀಕಾಟಿ ಛಾಯಾಗ್ರಹಣ, ಕಾರ್ತಿಕ ಶ್ರೀನಿವಾಸ ಆರ್ ಸಂಕಲನ ಚಿತ್ರಕ್ಕಿದೆ. ಶ್ರೀಕಾಂತ್ ಹಲವು ಚಿತ್ರಗಳಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ರಾಮ್ ಚರಣ್ ಜೊತೆಗೆ ‘ಗೇಮ್ ಚೇಂಜರ್’ ಚಿತ್ರದಲ್ಲಿ, ಎನ್‌ಟಿಆರ್ ಜೊತೆಗೆ ‘ದೇವರ’ ಮತ್ತು ಮೋಹನ್ ಲಾಲ್ ಅವರ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಸಿಲ ನೊಡಿಗಳಿಲ್ | ತಮಿಳು | ಲಂಡನ್‌ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗಿ ಅಲ್ಲೊಂದು ಕೊಲೆ ಸಂಭವಿಸುತ್ತದೆ. ಈ ಕೊಲೆ ಮಾಡಿದ್ದು ಯಾರು? ಅಲ್ಲಿ ನಿಜವಾಗಿಯೂ ಕೊಲೆ ನಡೆದಿದಿಯಾ? ಎಂಬ ಕುತೂಹಲಕಾರಿ ಅಂಶಗಳು ಸಿನಿಮಾದಲ್ಲಿವೆ. ‘ಸಿಲ ನೊಡಿಗಲಿಲ್’ ಎಂದರೆ ‘ಕೆಲವೇ ಕ್ಷಣಗಳಲಿ’ ಎಂದು ಅರ್ಥ. ಸಿನಿಮಾವು ಗಂಡ – ಹೆಂಡತಿ ಸಂಬಂಧ, ಕೊಲೆ, ಭ್ರಮೆ, ಸೇಡು, ನಿಗೂಢ ಸತ್ಯದ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಮತ್ತು ಯಶಿಕಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ ಮಾಂಡ್ರೆ ಹೊತ್ತುಕೊಂಡಿದ್ದಾರೆ. ‘ಮುಂದಿನ ನಿಲ್ದಾಣ’ ಚಿತ್ರ ನಿರ್ದೇಶಕ ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕಾದಲ್-ದಿ ಕೋರ್ | ಮಲಯಾಳಂ | ಮಮ್ಮೂಟಿ ಮತ್ತು ಜ್ಯೋತಿಕಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಕೋರ್ಟ್ ಡ್ರಾಮಾ. ಮಧ್ಯವಯಸ್ಕ ದಂಪತಿಗಳಾದ ಮ್ಯಾಥ್ಯೂ ದೇವಸ್ಸಿ (ಮಮ್ಮುಟ್ಟಿ) ಮತ್ತು ಓಮನಾ (ಜ್ಯೋತಿಕಾ) ಸುತ್ತ ಕತೆ ಸುತ್ತುತ್ತದೆ. ಯಾವುದೋ ರಾಜಕೀಯ ಗಲಭೆಯಲ್ಲಿ ಮ್ಯಾಥ್ಯೂ ದೇವಸ್ಸಿ ಸಿಲುಕಿಕೊಂಡಿರುತ್ತಾನೆ. ಇದರಿಂದ ದಂಪತಿಗಳ ಮಧ್ಯೆ ಅಂತರ ಏರ್ಪಡುತ್ತದೆ. ಈ ಕಾರಣದಿಂದ ಒಬ್ಬರಿಗೊಬ್ಬರು ಮಾತು ಬಿಟ್ಟಿರುತ್ತಾರೆ. ಲಾಲು ಅಲೆಕ್ಸ್, ಮುತ್ತುಮಣಿ, ಚಿನ್ನು ಚಾಂದಿನಿ, ಸುಧಿ ಕೋಝಿಕ್ಕೋಡ್, ಅನಘಾ ಅಕ್ಕು, ಜೋಸಿ ಸಿಜೋ ಮತ್ತು ಆದರ್ಶ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Mammootty Kampany ಬ್ಯಾನರ್ ಸಿನಿಮಾ ನಿರ್ಮಿಸಿದೆ. ಸಾಲು ಕೆ ಥಾಮಸ್ ಛಾಯಾಗ್ರಹಣ, ಫ್ರಾನ್ಸಿಸ್ ಲೂಯಿಸ್ ಸಂಕಲನ, ಮ್ಯಾಥ್ಯೂಸ್ ಪುಲಿಕನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಫರ್ರೆ | ಹಿಂದಿ | ಸಲ್ಮಾನ್ ಖಾನ್ ಅವರ ಸೋದರಸೊಸೆ ಅಲಿಜೆ ಅಗ್ನಿಹೋತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ SSLC ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ದೆಹಲಿಯ ಅನಾಥ ಹುಡುಗಿಯೊಬ್ಬಳ ಕಥೆ. ಅವಳು ತನ್ನ ಶ್ರೀಮಂತ ಸಹಪಾಠಿಗಳಿಂದ ಮೋಸ ಹೋಗುತ್ತಾಳೆ. ಇದರಿಂದ ಅವಳಲ್ಲಿ ಅತ್ಯಂತ ಸಂಕುಚಿತ ಮನೋಭಾವನೆ ಮೂಡುವಂತೆ ಮಾಡುತ್ತದೆ. ಚಿತ್ರದಲ್ಲಿ ಶಾಲಾ ವಾತಾವರಣ ಮತ್ತು ವಿದ್ಯಾರ್ಥಿಗಳು, ಶಾಲಾ ಕ್ಯಾಂಪಸ್ ಮತ್ತು ಪರೀಕ್ಷಾ ಕೊಠಡಿಯ ಸನ್ನಿವೇಶಗಳು ಹೆಚ್ಚಾಗಿವೆ. ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಸೌಮೇಂದ್ರ ಪಾಧಿ ಚಿತ್ರ ನಿರ್ದೇಶಿಸಿದ್ದಾರೆ. ಅಲಿಜ್, ಝೈನ್ ಶಾ, ಸಾಹಿಲ್ ಮೆಹ್ತಾ, ಪ್ರಸನ್ನ ಬಿಷ್ಟ್, ರೋನಿತ್ ಬೋಸ್ ರಾಯ್ ಮತ್ತು ಜೂಹಿ ಬಬ್ಬರ್ ಸೋನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸ್ಟಾರ್ ಫಿಶ್ | ಹಿಂದಿ | ಚಿತ್ರದ ಮುಖ್ಯ ಪಾತ್ರಧಾರಿಗಳಾದ ಖುಶಾಲಿ ಕುಮಾರ್ ಮತ್ತು ಸೋಮನ್ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಹೋಗುವ ದೃಶ್ಯಗಳು ಹೆಚ್ಚಾಗಿವೆ. ಸಮುದ್ರದ ಆಳದಲ್ಲಿ ಜೀವಿಸುವ ಜೀವಿಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ತೋರಿಸಲಾಗಿದೆ. ಈ ಮಧ್ಯೆ ಒಂದು ಪ್ರೇಮಕಥೆಯೂ ಇದೆ. ಜೊತೆಗೆ ರೊಮ್ಯಾನ್ಸ್, ಪಾರ್ಟಿ, ಡ್ರಗ್ಸ್, ಪ್ಯಾಶನ್, ಸಾವು, ವಿನಾಶ ಮತ್ತು ಆಧ್ಯಾತ್ಮಿಕತೆಯ ಕೆಲವು ವಿಷಯಗಳು ಸಹ ಚಿತ್ರದಲ್ಲಿ ಅಡಕವಾಗಿವೆ. T-Series Films ಮತ್ತು Almighty Motion Picture Production ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಖಿಲೇಶ್ ಜೈಸ್ವಾಲ್, ಆದಿತ್ಯ ಭಟ್ನಾಗರ್ ಸಂಭಾಷಣೆ ಬರೆದಿದ್ದಾರೆ. ಜಿಮ್ ಎಡ್ಗರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮನನ್ ಸಾಗರ್ ಸಂಕಲನ, ಸ್ಯಾಚೆಟ್-ಪರಂಪರಾ, ಮನನ್ ಭಾರದ್ವಾಜ್, ಯೋ ಯೋ ಹನಿ ಸಿಂಗ್, ಖಲೀಫ್, ಓಫ್ ಮತ್ತು ಸವೇರಾ ಸಂಗೀತ ಸಂಯೋಜಿಸಿದ್ದಾರೆ.