ಕನ್ನಡ (ಸಪ್ತಸಾಗರದಾಚೆ ಎಲ್ಲೋ) ಮತ್ತು ತೆಲುಗಿನ (ಖುಷಿ) ಎರಡು ಬಹುನಿರೀಕ್ಷಿತ ಸಿನಿಮಾಗಳು ಈ ವಾರ ತೆರೆಕಾಣುತ್ತಿವೆ. ಕಳೆದ ಕೆಲವು ವಾರಗಳಿಗೆ ಹೋಲಿಸಿದಲ್ಲಿ ಈ ವಾರ ಹೆಚ್ಚು ಸಿನಿಮಾಗಳು ತೆರೆಕಂಡಿಲ್ಲ. ಬಾಲಿವುಡ್‌ನಲ್ಲಿ ಈ ವಾರ ಪ್ರಮುಖ ಚಿತ್ರವಿಲ್ಲ. ಆದರೆ ಮುಂದಿನ ವಾರ ಶಾರುಖ್‌ ಖಾನ್‌ ನಟನೆಯ ‘ಜವಾನ್‌’ ತೆರೆಗೆ ಬರಲಿದೆ. ಭಾರತಿರಾಜ, ಗೌತಮ್‌ ವಾಸುದೇವ ಮೆನನ್‌ ನಟನೆಯ ‘ಕರುಮೆಗಂಗಲ್ ಕಲೈಗಿಂದ್ರನ’ (ತಮಿಳು), ಗಮನ ಸೆಳೆದಿರುವ ಈ ವಾರದ ಚಿತ್ರಗಳಲ್ಲೊಂದು.

ಸಪ್ತ ಸಾಗರದಾಚೆ ಎಲ್ಲೋ | ಕನ್ನಡ | ಪ್ರಿಯಾ (ರುಕ್ಮಿಣಿ ವಸಂತ್‌) ಮತ್ತು ಮನು (ರಕ್ಷಿತ್‌) ಮಧ್ಯೆಯ ಸರಳ ಪ್ರೇಮಕಥೆ. ಮಾತುಗಳಿಲ್ಲದೇ ಬರೀ ಮೌನದಲ್ಲೇ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮನು ಪಾತ್ರ, ಪ್ರಿಯಾಳ ಶುದ್ಧ ಪ್ರೀತಿ ಸಮುದ್ರದ ಅಲೆಗಳಂತೆ ಪ್ರಶಾಂತವಾಗಿ ವ್ಯಕ್ತವಾಗಿವೆ. ಇವರಿಬ್ಬರ ಪ್ರೇಮಕ್ಕೆ ಆ ಶಾಂತ ಸಾಗರವೇ ಸಾಕ್ಷಿಯೆನ್ನುವಂತಿದೆ. ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ಅವಿನಾಶ್‌, ಶರತ್‌ ಲೋಹಿತಾಶ್ವ, ಪವಿತ್ರಾ ಲೋಕೇಶ್‌, ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹೇಮಂತ್‌ ರಾವ್‌ ಚಿತ್ರಕಥೆ ರಚಿಸಿ, ನಿರ್ದೇಶಿಸಿದ್ದಾರೆ.

ಮಿಸ್ಟರಿ ಆಫ್‌ ಟ್ಯಾಟೋ | ಹಿಂದಿ | ಕಲಾ ವಿಭಾಗದ ವಿದ್ಯಾರ್ಥಿಯೊಬ್ಬಳು ಒಬ್ಬ ಕೊಲೆಗಾರನ ಹುಡುಕಾಟದಲ್ಲಿರುತ್ತಾಳೆ. ಇದರಿಂದ ಆಕೆ ತನ್ನ ಹೊಸ ನೆರೆಹೊರೆಯವರೊಂದಿಗೆ ಉತ್ತಮ ಸ್ನೇಹ ಬೆಳೆಸುತ್ತಾಳೆ. ಕಾಲ ಕ್ರಮೇಣ ಅವಳು ಕೊಲೆಗಾರನನ್ನು ಹಿಡಿಯಲು ಮಾನಸಿಕ ರೋಗಿಯಂತೆ ನಟಿಸಲು ಆರಂಭಿಸುತ್ತಾಳೆ. ಮುಂದೆನಾಗಲಿದೆ ಎಂಬುದನ್ನು ಸಿನಿಮಾ ತೋರಿಸಲಿದೆ. ಕ್ರೈಮ್‌ ಥ್ರಿಲ್ಲರ್‌ ಆಕ್ಷನ್‌ ಚಿತ್ರವನ್ನು ಕಲೈಯರಸಿ ಸಾತಪ್ಪನ್ ನಿರ್ದೇಶಿಸಿದ್ದಾರೆ. ರೋಹಿತ್ ರಾಜ್, ಅರ್ಜುನ್ ರಾಂಪಾಲ್, ಡೈಸಿ ಶಾ ಮತ್ತು ಮನೋಜ್ ಜೋಶಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಿಕ್‌ | ತಮಿಳು | ಪ್ರತಿಷ್ಠಿತ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುವ ಚಿತ್ರದ ನಾಯಕ ಸಂತೋಷ್‌ ಮತ್ತು ನಾಯಕಿ ಶಿವಾನಿಯ ನಡುವೆ ನಡೆಯುವ ಟಾಮ್‌ ಮತ್ತು ಜೆರಿ ಮಾದರಿಯ ಪ್ರತಿಸ್ಪರ್ಧೆ ಮತ್ತು ಪೈಪೋಟಿಯ ಜಗಳದ ಸುತ್ತ ಕಥೆ ಸುತ್ತುತ್ತದೆ. ಸಿನಿಮಾದಲ್ಲಿ ಕನ್ನಡತಿ ರಾಗಿಣಿ ದ್ವಿವೇದಿ, ತಾನ್ಯಾ ಹೋಪ್ ಮತ್ತು ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕನ್ನಡಿಗ ಪ್ರಶಾಂತ್‌ ರಾಜ್‌ ಅವರ ಚೊಚ್ಚಲ ತಮಿಳು ನಿರ್ದೇಶನದ ಚಿತ್ರವಾಗಿದ್ದು, ಇವರೇ ಚಿತ್ರಕಥೆ ರಚಿಸಿದ್ದಾರೆ. Fortune Films ಬ್ಯಾನರ್‌ ಅಡಿಯಲ್ಲಿ ನವೀನ್ ರಾಜ್ ನಿರ್ಮಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಕರುಮೆಗಂಗಲ್ ಕಲೈಗಿಂದ್ರನ | ತಮಿಳು | ಚಿತ್ರದಲ್ಲಿ ಭಾರತಿರಾಜ ಪ್ರಾಮಾಣಿಕ ನ್ಯಾಯಾಧೀಶರ ಪಾತ್ರವನ್ನು ನಿರ್ವಹಿಸಿದ್ದು, ಇವನ ಪುತ್ರನ ಪಾತ್ರದಲ್ಲಿ ಗೌತಮ್ ವಾಸುದೇವ್ ಮೆನನ್ ಭ್ರಷ್ಟ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮಧ್ಯೆ ನಡೆಯುವ ವಾಗ್ವಾದವೇ ಸಿನಿಮಾದ ಕಥಾವಸ್ತು. ಭಾರತಿರಾಜ ಎಂದರೆ ನ್ಯಾಯ, ಸತ್ಯ, ನಂಬಿಕೆ ಎಂದು ಹೆಸರುವಾಸಿಯಾಗಿದ್ದ ನ್ಯಾಯಾಧಿಶನಿಗೆ ತನ್ನ ಮಗನ ಅನ್ಯಾಯದ ಕೆಲಸಗಳನ್ನು ಸಹಿಸಿಕೊಳ್ಳಲಾಗದೇ ಮನೆ ಬಿಟ್ಟು ಹೊರ ನಡೆಯುತ್ತಾನೆ. ಮಗ ಸೊಸೆ, ಮೊಮ್ಮೊಕ್ಕಳನ್ನು ಬಿಟ್ಟು ಬದುಕು ಸಾಗಿಸಲಾಗದೇ ಕಷ್ಟ ಪಡುವ ಭಾರತೀ ರಾಜ್‌ ಯಾವ ರೀತಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನೆಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರವನ್ನು ಟಂಕಾರ್ ಬಚ್ಚನ್ ನಿರ್ದೇಶಿಸಿದ್ದು, ಗೌತಮ್ ವಾಸುದೇವ್ ಮೆನನ್, ಅದಿತಿ ಬಾಲನ್, ಭಾರತಿರಾಜ, ಎಸ್‌ಎ ಚಂದ್ರಶೇಖರ್ ಮತ್ತು ಯೋಗಿ ಬಾಬು ಮುಖ್ಯ ಭೂಮಿಕೆಯಲ್ಲಿದ್ದಾರೆ. Riota Media ನಿರ್ಮಾಣದ ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ವೈರಮುತ್ತು ಸಾಹಿತ್ಯ ಬರೆದಿದ್ದಾರೆ.

ಪರಮ್‌ಪೊರುಲ್‌ | ತಮಿಳು | ದೇವಾಲಯದ ವಿಗ್ರಹಗಳ ಕಳ್ಳಸಾಗಣೆ, ಮಾಫಿಯಾ ಮತ್ತು ಕೈಮ್‌ ಥ್ರಿಲ್ಲರ್‌ ಅಂಶಗಳ ಸುತ್ತ ಕಥೆ ಸುತ್ತುತ್ತದೆ. ಪುರಾತನ ಕಾಲದ ವಿಗ್ರಹಗಳನ್ನು ಕದ್ದು, ಕಳ್ಳಸಾಗಾಣಿಕೆ ಮಾಡುವ ಗುಂಪಿನ ವಿರುದ್ಧ ಕಾರ್ಯಾಚರಣೆ ಮಾಡುವ ಪೊಲೀಸ್‌ ಅಧಿಕಾರಿಯ ರೋಚಕ ಕಥೆಯೇ ಈ ಸಿನಿಮಾ. ಸಿ ಅರವಿಂದ್ ರಾಜ್ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಮಿತಾಶ್ ಮತ್ತು ಆರ್ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಕಾಶ್ಮೀರ ಪರದೇಶಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆಯಿದೆ. ಸತೀಶ್‌ ಕೃಷ್ಣನ್‌ ಛಾಯಾಗ್ರಣ ನಿರ್ವಹಿಸಿದ್ದಾರೆ.

ರಂಗೋಲಿ | ತಮಿಳು | ಸತ್ಯಮೂರ್ತಿ ಎಂಬ ಪ್ರತಿಭಾವಂತ ವಿದ್ಯಾರ್ಥಿ ತನ್ನ ಸರ್ಕಾರಿ ಶಾಲೆಯಲ್ಲಿ ಬೇರೆ ವಿದ್ಯಾರ್ಥಿಗಳೊಂದಿಗೆ ಪ್ರತಿಯೊಂದು ವಿಷಯಕ್ಕೂ ಜಗಳವಾಡುತ್ತಿರುತ್ತಾನೆ. ಅವನ ತಂದೆಗೆ ಮಗನನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಆಸೆ. ಅದರಂತೆ ಸತ್ಯನನ್ನು ಖಾಸಗಿ ಶಾಲೆಗೆ ವರ್ಗಾಯಿಸುತ್ತಾನೆ. ಅಲ್ಲಿ ಅವನು ಇತರ ವಿದ್ಯಾರ್ಥಿಗಳಿಂದ ಲೋಕಲ್‌ ಶಾಲೆಯಿಂದ ಬಂದ ಎಂಬ ಕಾರಣಕ್ಕೆ ಹಿಂಸೆಗೆ ಒಳಗಾಗುತ್ತಾನೆ. ನಂತರ ಶಾಲೆಯ ಯುವತಿಯೊಂದಿಗೆ ಪ್ರೇಮವಾಗಿ ಅವಳೊಂದಿಗೆ ಸಲುಗೆಯಿಂದಿರುವುದು ಶಾಲೆಯ ಸಿಬ್ಭಂದಿಗೆ ತಿಳಿದು ಪೋಷಕರನ್ನು ಕರೆಸಿ ಶಿಕ್ಷೆ ನೀಡುತ್ತಾರೆ. ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ವಾಲಿ ಮೋಹನ್‌ ದಾಸ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ‌ಹಮರೇಶ್, ಮುರುಗ ದಾಸ್, ಪ್ರಾರ್ಥನಾ, ಅಮಿತ್ ಭಾರ್ಗವ್, ಸಂಜಯ್, ರಘುಲ್, ವಿಶ್ವ, ಅಕ್ಷಯ ಹರಿಹರನ್, ಕೃತಿಗ, ಸಾಯಿ ಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸುಂದರ ಮೂರ್ತಿ ಸಂಗೀತ ಸಂಯೋಜಿಸಿದ್ದು, Gopuram Studios ಬ್ಯಾನರ್‌ ಅಡಿಯಲ್ಲಿ ಕೆ ಬಾಬು ರೆಡ್ಡಿ ಮತ್ತು ಜಿ ಸತೀಶ್‌ ಕುಮಾರ್‌ ಸಿನಿಮಾ ನಿರ್ಮಿಸಿದ್ದಾರೆ.

ನಾ ನೀ ಪ್ರೇಮ ಕಥಾ | ತೆಲುಗು | ಆಕ್ಷನ್‌ ಥ್ರಿಲ್ಲರ್‌ ರೊಮ್ಯಾಂಟಿಕ್‌ ಪ್ರೇಮ ಕಥೆಯು ಎರಡು ವಿಭಿನ್ನ ತಲೆಮಾರುಗಳ ನಡುವೆ ಅರಳುವ (1983 ಮತ್ತು 2020) ಪ್ರೀತಿಯ ಸುತ್ತ ಸುತ್ತುತ್ತದೆ. ಈ ಪ್ರೀತಿಯನ್ನು ಒಪ್ಪದ ಇವರು ಪೋಷಕರ ಮತ್ತು ಊರಿನ ಜನರ ವಿರೋಧವನ್ನು ಕಟ್ಟಿಕೊಳ್ಳುತ್ತಾರೆ. ಊರಿನ ಮುಖಂಡರೆಲ್ಲಾ ಸೇರಿ ಹುಡುಗನ ಮೇಲೆ ಹಲ್ಲೆ ಮಾಡುತ್ತಾರೆ. ಅವರನ್ನೆಲ್ಲಾ ಮನವೊಲಿಸುವ ಇವರು ಒಂದಾಗುತ್ತಾರಾ? ಎಂಬುದನ್ನು
ಸಿನಿಮಾ ತೋರಿಸಲಿದೆ. ಅಮುದಾ ಶ್ರೀನಿವಾಸ್ ಸಿನಿಮಾ ನಿರ್ದೇಶಿಸಿದ್ದು, Sravan Kumar Entertainments ಬ್ಯಾನರ್‌ ಅಡಿಯಲ್ಲಿ ಶ್ರವಣ್‌ ಕುಮಾರ್ ನಿರ್ಮಿಸಿದ್ದಾರೆ. ಎಂ ಎಲ್ ಪಿ ರಾಜಾ ಸಂಗೀತ ಸಂಯೋಜಿಸಿದ್ದಾರೆ. ನಿವಾಸ್, ಕಾರುಣ್ಯ ಚೌಧರಿ, ಅಜಯ್ ಘೋಷ್, ಶಫಿ, ಫಿಶ್ ವೆಂಕಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಖುಷಿ | ತೆಲುಗು | ವಿಫ್ಲವ್‌ ಎಂಬ ಕ್ರಿಶ್ಚಿಯನ್‌ ಯುವಕ (ವಿಜಯ್‌ ದೇವರಕೊಂಡ) ಸಮಂತಾಳನ್ನು ಕಾಶ್ಮೀರದಲ್ಲಿ ಮೊದಲ ಬಾರಿಗೆ ನೋಡಿದ ತಕ್ಷಣವೇ ಆಕರ್ಷಣೆಗೆ ಒಳಗಾಗಿ ಪ್ರೀತಿಯಲ್ಲಿ ಬೀಳುತ್ತಾನೆ. ಅವಳನ್ನು ಬೇಗಂ ಅಂದುಕೊಂಡರೂ ಆಕೆಯನ್ನು ಪ್ರೀತಿಸಲು ಶುರು ಮಾಡುತ್ತಾನೆ. ಕಾಲಕ್ರಮೇಣ ಅವಳು ಕೇರಳ ಮೂಲದ ಬ್ರಾಹಣ ಕುಟುಂಬವೊಂದಕ್ಕೆ ಸೇರಿದ ಆರಾಧ್ಯ ಹೆಸರಿನ ಹುಡುಗಿ ಎಂದು ತಿಳಿಯುತ್ತದೆ. ಇವರಿಬ್ಬರದ್ದು ವಿಭಿನ್ನ ಧರ್ಮವಾದ್ದರಿಂದ ಇವರಿಬ್ಬರ ಮದುವೆಗೆ ಕುಟುಂಬಗಳಿಂದ ಸಮ್ಮತಿ ಸಿಗುವುದಿಲ್ಲ. ತಮ್ಮ ಪರಿವಾರದ ಸಮ್ಮತಿ ಇಲ್ಲದೇ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿ ಕೆಲವು ದಿನ ಅನ್ನೋನ್ಯವಾಗಿದ್ದ ಇವರು ನಂತರದ ದಿನಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲದೇ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡುತ್ತಿರುತ್ತಾರೆ. ಪ್ರೀತಿ, ಜಗಳ, ರೊಮ್ಯಾನ್ಸ್‌ ಈ ಎಲ್ಲಾ ಅಂಶಗಳನ್ನು ಸಿನಿಮಾ ಒಳಗೊಂಡಿದೆ. ವಿಜಯ್ ದೇವರಕೊಂಡ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಶಿವ ನಿರ್ವಾಣ ರಚಿಸಿ ನಿರ್ದೇಶಿಸುವುದರ ಜೊತೆಗೆ ಸಿನಿಮಾಗೆ ಗೀತೆರಚನೆಯನ್ನೂ ಮಾಡಿದ್ದಾರೆ. Mythri Movie Makers ಬ್ಯಾನರ್‌ ನಡಿ ರವಿ ಶಂಕರ್ ಮತ್ತು ನವೀನ್ ಯರ್ನೇನಿ ನಿರ್ಮಿಸಿದ್ದಾರೆ. ಹೇಶಮ್‌ ಅಬ್ದಲ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಜಯರಾಮ್, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಬೇಬಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಪ್ರದೀಪ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುಕಲ್ಪರಪ್ಪು | ಮಲಯಾಳಂ | ಕಣ್ಣೂರಿನ ಪ್ರಾಕೃತಿಕ ವ್ಯವಸ್ಥೆಯಲ್ಲಿ ಪರಿಸರ ಸಮಸ್ಯೆಗಳೊಂದಿಗೆ ಹೋರಾಡುವ ಕಥಾಹಂದರ. ಕಲ್ಲಿನ ಗಣಿಗಾರಿಕೆಯ ಕಂಪನಿಗಳೊಂದಿಗೆ ನಿರಂತರವಾಗಿ ಪ್ರತಿಧ್ವನಿಸುವ ಹಳ್ಳಿಯ ಹೆಸರಾಂತ ತೆಯ್ಯಂ ಕಲಾವಿದ ಚತ್ತೂಟ್ಟಿ ಪೆರುವಣ್ಣನ್ ಅವರ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳನ್ನು ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಚಿತ್ರವನ್ನು ಸಿ ಬಿ ಪಡಿಯಾರ ಬರೆದು ನಿರ್ದೇಶಿಸಿದ್ದಾರೆ. Thavarool Banner ಅಡಿಯಲ್ಲಿ ಜ್ಯೋತಿಸ್ ವಿಷನ್ ನಿರ್ಮಿಸಿದ್ದಾರೆ. ಶಿಜಿ ಜಯದೇವನ್ ಮತ್ತು ನಿತಿನ್ ಕೆ ರಾಜ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.

LEAVE A REPLY

Connect with

Please enter your comment!
Please enter your name here