‘ಮುಂಗಾರು ಮಳೆ’ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಂಡವರು ಪೂಜಾ ಗಾಂಧಿ. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿರುವ ಅವರು ಕುವೆಂಪು ಪರಿಕಲ್ಪನೆಯ ‘ಮಂತ್ರಮಾಂಗಲ್ಯ’ದ ಮೂಲಕ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಉದ್ಯಮಿ ವಿಜಯ್‌ ಘೋರ್ಪಡೆ ಅವರೊಂದಿಗೆ ನಾಳೆ (ನವೆಂಬರ್‌ 29) ಅವರ ವಿವಾಹ ನೆರವೇರಲಿದೆ.

ನಟಿ ಪೂಜಾ ಗಾಂಧಿ ಅವರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಉದ್ಯಮಿ ವಿಜಯ್ ಘೋರ್ಪಡೆ ಎಂಬುವವರ ಜೊತೆಗೆ ಪೂಜಾ ಗಾಂಧಿ ನಾಳೆ (ನವೆಂಬರ್‌ 28) ಮದುವೆ ಆಗುತ್ತಿದ್ದು, ಕುವೆಂಪು ಅವರ ‘ಮಂತ್ರ ಮಾಂಗಲ್ಯ’ದ ಪರಿಕಲ್ಪನೆಯಲ್ಲಿ ಸರಳ ವಿವಾಹ ಜರುಗಲಿದೆ. ಪೂಜಾ ಗಾಂಧಿ ಅವರು, ‘ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನವೆಂಬರ್‌ 29-11-2023ನೇ ತಾರೀಖು ಸಂಜೆ ಕುವೆಂಪು ಆಶಯದ ‘ಮಂತ್ರ ಮಾಂಗಲ್ಯ’ ಮೂಲಕ ವಿಜಯ್‌ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆಶೀರ್ವದಿಸಿ’ ಎಂದು ತಮ್ಮ ಕೈಬರಹದ ಆಮಂತ್ರಣ ಪತ್ರ ಮಾಡಿಸಿದ್ದಾರೆ.

ಲಾಜಿಸ್ಟಿಕ್‌ ಕಂಪನಿ ಮಾಲೀಕ, ಉದ್ಯಮಿ ವಿಜಯ್ ಎಂಬುವವರ ಜೊತೆಗೆ ಪೂಜಾ ಗಾಂಧಿ ಸಪ್ತಪದಿ ತುಳಿಯಲಿದ್ದಾರೆ. ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮೂಲತಃ ಉತ್ತರ ಪ್ರದೇಶದ ಮೀರತ್‌ನವರಾದ ಪೂಜಾ ಗಾಂಧಿ ತಾವು ಕನ್ನಡ ಕಲಿಯಲು ವಿಜಯ್‌ ಅವರೇ ಪ್ರೇರಣೆ ಎನ್ನುತ್ತಾರೆ. ಪೂಜಾ ಗಾಂಧಿ ಬೆಳ್ಳಿತೆರೆಗೆ ಪರಿಚಯವಾಗಿದ್ದು 2001ರಲ್ಲಿ ಹಿಂದಿ ಚಿತ್ರದ ಮೂಲಕ. ‘ಮುಂಗಾರು ಮಳೆ’ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಅವರು ಈ ಚಿತ್ರದ ದೊಡ್ಡ ಯಶಸ್ಸಿನ ನಂತರ ಕನ್ನಡದಲ್ಲಿ ಭದ್ರವಾಗಿ ನೆಲೆಯೂರಿದರು. ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ‘ಮಿಲನ’, ‘ಹನಿ ಹನಿ’, ‘ಆಕ್ಸಿಡೆಂಟ್’, ‘ನೀ ಟಾಟಾ ನಾ ಬಿರ್ಲಾ’, ‘ಬುದ್ಧಿವಂತ’, ‘ಜನುಮದ ಗೆಳತಿ’, ‘ಕೃಷ್ಣ’, ‘ಗೋಕುಲ’, ‘ಇನಿಯ’, ‘ಮಿನುಗು’, ‘ಶ್ರೀ ಹರಿಕಥೆ’, ‘ದಂಡುಪಾಳ್ಯ’, ‘ಅಭಿನೇತ್ರಿ’ ಅವರ ಪ್ರಮುಖ ಕನ್ನಡ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here