ಚಿತ್ರಕಥೆಯಲ್ಲಿನ ಜಾಳುತನವನ್ನು ಮುಚ್ಚಲು ಛಾಯಾಗ್ರಹಣ ಬಹಳ ಮಟ್ಟಿಗೆ ಸಹಾಯ ಮಾಡಿದೆ. ಎಷ್ಟೋ ಕಡೆ ದೃಶ್ಯಗಳೇ ಮಾತನಾಡುವಂತಿವೆ. ಸಂಭಾಷಣೆ ಕೂಡ ಕೆಲವಡೆ ಬಹಳ ಸೂಚ್ಯವಾಗಿ ಮತ್ತು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಏನೇ ಆದರೂ ಈ ಚಿತ್ರಕ್ಕೆ ತನ್ನದೇ ಆದ ಸ್ವಂತಿಕೆ ಇಲ್ಲ. ಎಲ್ಲವನ್ನೂ ಎಲ್ಲಿಂದಲೋ ಎರವಲು ಪಡೆದು ಪೋಣಿಸಿ ಕೊಟ್ಟಹಾಗಿದೆ.
‘ಖೋ ಗಯೇ ಹಮ್ ಕಹಾ’ ಟ್ರೇಲರ್ ಬಿಡುಗಡೆಯಾದಾಗಿನಿಂದಲೇ ಬಹಳ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿದ ಚಿತ್ರ. ಇಂದಿನ ತಲೆಮಾರಿನ ಯುವಕ – ಯುವತಿಯರ ಬದುಕಿನ ತಲ್ಲಣಗಳ ಒಳನೋಟ ಬೀರುವ ಚಿತ್ರ ಇದಾಗಿರಬಹುದೇ ಎಂಬ ನಿರೀಕ್ಷೆ ಬಹಳವೇ ಇತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ. ಯುವಜನತೆಯನ್ನು ಸೆಳೆಯುವ ನಿಟ್ಟಿನಲ್ಲಿ ಬರಿಯ ಬಾಹ್ಯ ವಿಷಯಗಳ ಬಗ್ಗೆ ಗಮನ ಕೊಟ್ಟಿದ್ದಾರೆಯೇ ಹೊರತು ವಿಷಯದ ಆಳಕ್ಕಿಳಿಯುವ ಪ್ರಯತ್ನ ಅಷ್ಟಾಗಿ ಕಂಡುಬಂದಿಲ್ಲ ಎಂದು ಮೇಲುನೋಟಕ್ಕೆ ಅನ್ನಿಸುತ್ತದೆ.
ಅರ್ಜುನ್ ವರೆನ್ ಸಿಂಗ್ ಈ ಚಿತ್ರದ ನಿರ್ದೇಶಕ. ಚಿತ್ರದ ಪ್ರಮುಖ ತಾರಾಗಣದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಆದರ್ಶ್ ಗೌರವ್ ನಟಿಸಿದ್ದಾರೆ. ಇಮಾದ್, ಅಹಾನಾ ಮತ್ತು ನೀಲ್ ಬಾಲ್ಯದಿಂದಲೂ ಗೆಳೆಯರು. ಚಿತ್ರ ಆರಂಭವಾಗುತ್ತಿದ್ದ ಹಾಗೆ ಅವರ ಬಾಲ್ಯದ ಬಾಂಧವ್ಯ, ಅವರ ಆಟ ಪಾಠ, ತುಂಟಾಟ, ತರಲೆ, ತಮಾಷೆಗಳ ಬಹಳ ಲವಲವಿಕೆಯ ಚಿತ್ರಣವನ್ನು ಕಾಣಬಹುದು. ಬಾಲ್ಯದ ಗೆಳೆತನದ ಸುಂದರ ಅನುಭೂತಿ ಹೇಗಿರುತ್ತದೆ ಎನ್ನುವ ಅನುಭವ ಪಡೆಯಬಹುದು. ಆದರೆ ಅವರುಗಳ ಪಾತ್ರಗಳನ್ನು ಅಷ್ಟಕ್ಕೇ ಸೀಮಿತ ಮಾಡಲಾಗಿರುವುದು ಬೇಸರದ ವಿಷಯ. ಕೇವಲ ಅವರುಗಳು ಒಟ್ಟಾಗಿ ಹೊರಹೋಗುವುದು, ಪಾರ್ಟಿ ಮಾಡುವುದು ಮೊದಲಾದ ದೃಶ್ಯಗಳ ಮೂಲಕ ನಾವು ಅವರುಗಳ ಗೆಳೆತನದ ಗಾಢತೆಯನ್ನು ಅರ್ಥಮಾಡಿಕೊಳ್ಳಬೇಕೆಂಬ ನಿರ್ದೇಶಕರ ಆಶಯ ಬಹಳ ಬಾಲಿಶ ಎನಿಸುತ್ತದೆ. ಅವರುಗಳ ಗೆಳೆತನದ ಹೊರನೋಟದ ಚಿತ್ರಣವಷ್ಟೇ ನಮಗೆ ಸಿಗುತ್ತದೆಯೇ ಹೊರತು ಅವರುಗಳ ಅಂತರಂಗದಲ್ಲಿನ ಗೆಳೆತನದ ಭಾವ ಎಲ್ಲಿಯೂ ವೀಕ್ಷಕರ ಮನಸ್ಸನ್ನು ತಟ್ಟುವುದೇ ಇಲ್ಲ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುವಂತಹ ಮತ್ತೊಬ್ಬರ ಬದುಕಿನ ಚಿತ್ರಣದಂತೆ ಇದೂ ನಮಗೆ ಅಷ್ಟಷ್ಟೇ ಕಾಣಸಿಗುತ್ತದೆ. ಗೆಳೆತನ ಎಂದರೆ ಒಟ್ಟಾಗಿ ನಿಂತು ಸೆಲ್ಫಿ ತೆಗೆಸಿಕೊಳ್ಳುವುದು ಎನ್ನುವುದರ ಆಚೆ ನಿರೂಪಿತವಾಗುವುದೇ ಇಲ್ಲ.
ಇಮಾದ್ ಒಬ್ಬ ಸ್ಟ್ಯಾಂಡ್ ಅಪ್ ಕಮೀಡಿಯನ್. ತನ್ನ ಭಾವನೆಗಳನ್ನು ಹೊರಹಾಕಲು ಅಥವಾ ಇತರರ ಕುರಿತು ಹಾಸ್ಯ ಮಾಡಲು ವೇದಿಕೆಯನ್ನು ಬಳಸಿಕೊಳ್ಳುತ್ತಾ ಹಾಸ್ಯದ ಮೂಲಕ ತನ್ನ ವ್ಯಕ್ತಿತ್ವವನ್ನು ಪ್ರಪಂಚಕ್ಕೆ ನಿರೂಪಿಸಲು ಪ್ರಯತ್ನಿಸುತ್ತಿರುವ ಹುಡುಗ. ಹಾಸ್ಯದ ಮುಖವಾಡದಲ್ಲಿ ತನ್ನ ನಿಜವಾದ ಭಾವನೆಗಳನ್ನು ಅವಿಸಿಟ್ಟಿರುತ್ತಾನೆ. ಹೀಗಿರಲು ಒಮ್ಮೆ ಟಿನ್ಡರ್ ಅಲ್ಲಿ ಪರಿಚಯವಾಗುವ ವ್ಯಕ್ತಿ ನಿರೀಕ್ಷಿಸಿದ್ದಕ್ಕಿಂತಲೂ ಆಪ್ತವಾಗುವ ಬಯಕೆ ತೋರುವ ಪ್ರಸಂಗ ಉಂಟಾಗುತ್ತದೆ. ಇನ್ನು ಅಹಾನಾ ಮಾರ್ಕೆಟಿಂಗ್ ಕನ್ಸಲ್ಟೆಂಟ್. ತನ್ನ ಮಾಜಿ ಗೆಳೆಯನ ಆಗುಹೋಗುಗಳನ್ನು ಹುಚ್ಚಿಗೆ ಬಿದ್ದು ಬೆನ್ನು ಹತ್ತಿ ಪತ್ತೇದಾರಿಕೆ ಮಾಡುವ ಯುವತಿ. ನೀಲ್ ಒಬ್ಬ ಜಿಮ್ ಟ್ರೈನರ್ ಮತ್ತು ಇನ್ಫ್ಲುಯೆನ್ಸರ್, ಒಬ್ಬಾಕೆಯನ್ನು ಪ್ರೀತಿಸುತ್ತಿರುವ ಹುಡುಗ. ಕೇಳುವುದಕ್ಕೆ ಆಸಕ್ತಿ ಹುಟ್ಟಿಸುವ ಪಾತ್ರಗಳಾದರೂ ತೆರೆಯ ಮೇಲೆ ನೋಡುವಾಗ ಅಷ್ಟೇನೂ ಆಸಕ್ತಿ ಹುಟ್ಟಿಸುವುದಿಲ್ಲ. ಇಮಾದ್ ಮಾಡುವ ಸ್ಟ್ಯಾಂಡ್ ಅಪ್ ಹಾಸ್ಯವಂತೂ ನಗು ಹುಟ್ಟಿಸುವುದಕ್ಕಿಂತ ಹತಾಶೆ ಎನಿಸುವುದೇ ಹೆಚ್ಚು.
ಆತನ ಜೀವನದಲ್ಲಿ ನಡೆದಿದೆ ಎನ್ನಲಾದ ಆಘಾತದ ತೀವ್ರತೆ ವೀಕ್ಷಕರನ್ನು ತಟ್ಟುವುದೇ ಇಲ್ಲ. ಒಂದು ಲಘುವಾದ ಧೋರಣೆಯಲ್ಲಿ ಸಿದ್ಧಾಂತ್ ಪಾತ್ರವನ್ನು ವಹಿಸಲು ಪ್ರಯತ್ನ ಪಟ್ಟಿದ್ದರೂ ಜಾಳುಜಾಳಾದ ನಿರೂಪಣೆ ಮತ್ತು ಬರೆವಣಿಗೆಯಿಂದ ಆ ಪಾತ್ರ ಬಹಳ ಬಾಲಿಶವಾಗಿ ಕಾಣುತ್ತದೆ. ಅನನ್ಯರ ಪಾತ್ರದ ಕಥೆಯೂ ಭಿನ್ನವಾಗೇನೂ ಇಲ್ಲ. ಬಹಳ ಸಡಿಲ ಮತ್ತು ಅವ್ಯವಸ್ಥಿತ ಬರೆವಣಿಗೆ, ಪಾತ್ರದ ಗಂಭೀರತೆಯನ್ನು ಕಡಿಮೆ ಮಾಡಿದೆ. ಇರುವುದರಲ್ಲಿ ನೀಲ್ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಆದರ್ಶ್ ಗೌರವ್ ಅಭಿನಯ ಕೂಡ ಗಮನ ಸೆಳೆಯುವಂತಿದೆ. ಈ ಚಿತ್ರದಲ್ಲಿ ಎಲ್ಲಕ್ಕಿಂತ ಗಮನ ಸೆಳೆಯುವ ಅಂಶ ಎಂದರೆ ಛಾಯಾಗ್ರಹಣ. ಬಹಳ ಮನಮೋಹಕವಾದ ಮತ್ತು ಮನಸ್ಸಿಗೆ ಹಿತ ಎನಿಸುವ ಛಾಯಾಗ್ರಹಣ ಈ ಚಿತ್ರಕ್ಕಿದೆ. ತನಯ್ ಅವರ ಕ್ಯಾಮೆರಾ ಚಳಕ ಚಿತ್ರಕ್ಕೆ ಹಲವು ಆಯಾಮಗಳನ್ನು ಕೊಡುತ್ತದೆ. ಚಿತ್ರಕಥೆಯಲ್ಲಿನ ಜಾಳುತನವನ್ನು ಮುಚ್ಚಲು ಛಾಯಾಗ್ರಹಣ ಬಹಳ ಮಟ್ಟಿಗೆ ಸಹಾಯ ಮಾಡಿದೆ. ಎಷ್ಟೋ ಕಡೆ ದೃಶ್ಯಗಳೇ ಮಾತನಾಡುವಂತಿವೆ. ಸಂಭಾಷಣೆ ಕೂಡ ಕೆಲವಡೆ ಬಹಳ ಸೂಚ್ಯವಾಗಿ ಮತ್ತು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಏನೇ ಆದರೂ ಈ ಚಿತ್ರಕ್ಕೆ ತನ್ನದೇ ಆದ ಸ್ವಂತಿಕೆ ಇಲ್ಲ. ಎಲ್ಲವನ್ನೂ ಎಲ್ಲಿಂದಲೋ ಎರವಲು ಪಡೆದು ಪೋಣಿಸಿ ಕೊಟ್ಟಹಾಗಿದೆ.
ಸಾಮಾಜಿಕ ಜಾಲತಾಣಗಳ ಹುಚ್ಚು ಮತ್ತು ಪಿಡುಗು ಹತ್ತಿಸಿಕೊಂಡ ತಲೆಮಾರಿನ ತಲ್ಲಣಗಳ ಚಿತ್ರಣವನ್ನು ಕೊಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆಯಾದರೂ ಆ ಪಿಡುಗಿನಿಂದ ಬಾಧಿಸಲ್ಪಟ್ಟವರ ತಲ್ಲಣಗಳ ಕುರಿತು ಗಮನವನ್ನೇ ನೀಡಿಲ್ಲ. ಇಮಾದ್, ಅಹನಾ ಮತ್ತು ನೀಲ್ ಗೆಳೆತನದ ಹಿನ್ನೆಲೆಯ ಚಿತ್ರಣ ಕೂಡ ಮಾಡಲಾಗಿಲ್ಲ. ಅವರ ಗೆಳೆತನದ ಕಥೆ, ಆ ಪಯಣ, ಆ ಬಾಂಧವ್ಯ ಇದಾವುದರ ಬಗ್ಗೆಯೂ ಒಂದು ಅಂದಾಜು ನೋಡುಗರಿಗೆ ಸಿಗುವುದೇ ಇಲ್ಲ. ಏನೋ ಅವಸರಕ್ಕೆ ಒಂದು ಕಥೆ ಮಾಡಿದ ಹಾಗಿದೆ. ಸುಮ್ಮನೆ ಒಂದಷ್ಟು ಇನ್ಸ್ಟಾಗ್ರಾಮ್ ರೀಲ್ಸ್‌ಗಳನ್ನು ಒಟ್ಟಿಗೆ ನೋಡಿದರೆ ಹೇಗೆ ಇರುತ್ತದೋ ಈ ಚಿತ್ರವೂ ಹಾಗೆಯೇ ಇದೆ. ಈ ಚಿತ್ರದ ಒಂದು ಪಾತ್ರ ಹೇಳುವಂತೆ, ‘ಎಂದೂ ಏನೂ ನಡೆಯುವುದೇ ಇಲ್ಲ, ಅದೇ ಸಮಸ್ಯೆ’ ಎನ್ನುವ ಹಾಗೆ ಈ ಚಿತ್ರದಲ್ಲೂ ಏನೂ ನಡೆಯುವುದೇ ಇಲ್ಲ. ಅದೇ ಮನಸ್ಸಿಗೆ ತಟ್ಟದ ಈ ಚಿತ್ರದ ಸಮಸ್ಯೆ. ‘ಖೋ ಗಯೇ ಹಮ್ ಕಹಾ’ ಸಿನಿಮಾ Netflixನಲ್ಲಿ ಲಭ್ಯವಿದೆ.