CCL 10ನೇ ಆವೃತ್ತಿ ಫೆಬ್ರವರಿ 23ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದುಬೈನ ಬುರ್ಜ್‌ ಖಲೀಫಾದ ಮೇಲೆ ನಿನ್ನೆ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ನಾಯಕ ಸುದೀಪ್‌ ಸೇರಿದಂತೆ ಎಂಟು ತಂಡಗಳ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. JioCinema ಓಟಿಟಿ ವೇದಿಕೆ CCL ಜೊತೆ ಸಹಭಾಗಿತ್ವ ಘೋಷಿಸಿದೆ.

ಭಾರತೀಯ ಚಿತ್ರರಂಗದ ತಾರೆಯರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ CCL (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ಫೆಬ್ರವರಿ 23ರಿಂದ ಆರಂಭವಾಗಲಿದೆ. ಅದರ ಭಾಗವಾಗಿ ನಿನ್ನೆ (ಫೆ. 2) ದುಬೈನಲ್ಲಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ CCLಗೆ ಚಾಲನೆ ನೀಡಲಾಗಿದೆ. ಬುರ್ಜ್ ಖಲೀಫಾದ ಕಟ್ಟಡದ ಮೇಲೆ CCL ಪ್ರೋಮೋ ಪ್ರದರ್ಶಿಸಲಾಯಿತು. ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಿಂದ ಸುದೀಪ್, ಹಿಂದಿಯಿಂದ ಸೊಹೈಲ್ ಖಾನ್, ತಮಿಳಿನಿಂದ ಆರ್ಯ ಮತ್ತು ಜೀವಾ, ತೆಲುಗಿನಿಂದ ತಮನ್ ಮತ್ತು ಸುಧೀರ್ ಬಾಬು, ಬಂಗಾಳಿಯಿಂದ ಜಿಸ್ಸು ಸೇನ್‌ಗುಪ್ತಾ, ಪಂಜಾಬಿಯಿಂದ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ CCL ನ ಎಲ್ಲಾ 8 ತಂಡಗಳ ನಾಯಕರು ಹಾಗೂ ಖ್ಯಾತ ತಾರೆಯರು ಭಾಗಿಯಾಗಿದ್ದರು.

https://www.instagram.com/reel/C24CMDrPjVN/?utm_source=ig_web_copy_link&igsh=MzRlODBiNWFlZA==

ಸುದೀಪ್ ಈ ಕುರಿತು ಮಾತನಾಡಿ, ‘ನಾನು ಈ ಹಿಂದೆ ಸಿನಿಮಾಗಾಗಿ ಬುರ್ಜ್ ಖಲೀಫಾದಲ್ಲಿದ್ದೆ. ಆದರೆ ಈಗ ಕ್ರಿಕೆಟ್‌ಗಾಗಿ ಇಲ್ಲಿರುವುದು ವಿಶೇಷ ಹಾಗೂ ಮರೆಯಲಾಗದ ಸಂಗತಿ’ ಎಂದರು. CCL ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ವಿಷ್ಣುವರ್ಧನ್ ಇಂದೂರಿ ಈ ಕುರಿತು, ‘CCL ಮನರಂಜನಾತ್ಮಕ ಕ್ರೀಡೆಯಾಗಿದ್ದು, ಎಲ್ಲಾ ತಾರೆಯರು ಅವರ ಬಿಡುವಿಲ್ಲದ ಕೆಲಸಗಳ ನಡುವೆ ಕ್ರಿಕೆಟ್‌ನಲ್ಲಿ ಭಾಗಿಯಾಗುತ್ತಿದ್ದಾರೆ’ ಎಂದಿದ್ದಾರೆ. ಫೆಬ್ರವರಿ 23ರಿಂದ ಆರಂಭವಾಗುವ CCLನ 10ನೇ ಸೀಸನ್ ಮಾರ್ಚ್ 17ರವರೆಗೆ ನಡೆಯಲಿದೆ. ಲೀಗ್‌ನ ಸುತ್ತು ಮಾರ್ಚ್ 10ರವರೆಗೆ ನಡೆಯಲಿದ್ದು, ಇದರಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇ ಆಫ್ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ (United Arab Emirates) ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.

JioCinema ಓಟಿಟಿ ವೇದಿಕೆ CCL ಜೊತೆ ಸಹಭಾಗಿತ್ವ ಘೋಷಿಸಿದೆ. ಇದರ ಭಾಗವಾಗಿ, CCLನ ಹತ್ತನೇ ಸೀಸನ್ ಅನ್ನು ಇದು ಎಕ್ಸ್‌ಕ್ಲೂಸೀವ್‌ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ CCL ಆಗಿದೆ. ಭಾರತದ ಚಲನಚಿತ್ರೋದ್ಯಮಗಳ ಖ್ಯಾತ ನಟರನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು UAE ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಆಡಲಿದ್ದಾರೆ. UAEಯ ಶಾರ್ಜಾದಲ್ಲಿ ಲೀಗ್‌ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆನಂತರ ಲೀಗ್ ಭಾರತಕ್ಕೆ ಮರಳಲಿದೆ. ಭಾರತದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ ಸೇರಿದಂತೆ ಐದು ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ.

ಭಾಗವಹಿಸಲಿರುವ ಪ್ರಮುಖ ತಂಡಗಳು | ಮುಂಬೈ ಹೀರೋಸ್, ಕೇರಳ ಸ್ಟ್ರೈಕರ್ಸ್, ತೆಲುಗು ವಾರಿಯರ್ಸ್, ಭೋಜ್‌ಪುರಿ ದಬಾಂಗ್ಸ್, ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್, ಪಂಜಾಬ್ ದಿ ಶೇರ್. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಸುದೀಪ್ ಕ್ಯಾಪ್ಟನ್ ಆಗಿದ್ದಾರೆ. ‘ಮುಂಬೈ ಹೀರೋಸ್’ ತಂಡಕ್ಕೆ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ನಾಯಕನಾಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ತಂಡಕ್ಕೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ತಂಡಕ್ಕೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಜಿಸ್ಸು ಸೇನ್ ಗುಪ್ತಾ ನಾಯಕರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here