ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್‌ ಆರಂಭವಾಗಿದೆ. ಈ ಹಿಂದೆ ಶೋನ ತೀರ್ಪುಗಾರರಾಗಿ ನಟ, ಸಂಗೀತ ಸಂಯೋಜಕ ಸಾಧುಕೋಕಿಲ ಮತ್ತು ನಟಿ ಶ್ರುತಿ ಇದ್ದರು. ಮೂರನೇ ಸೀಸನ್‌ನಲ್ಲಿ ನಟ ಕೋಮಲ್‌ ಮತ್ತೊಬ್ಬ ತೀರ್ಪುಗಾರರಾಗಿ ಬಂದಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 10 ಮುಕ್ತಾಯವಾಗಿದ್ದು, ‘ಗಿಚ್ಚಿ ಗಿಲಿಗಿಲಿ’ ಶೋ ಎರಡು ಮೂರನೇ ಸೀಸನ್ ಫೆಬ್ರವರಿ 3ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಮೂರನೇ ತೀರ್ಪುಗಾರರಾಗಿ ನಟ ಕೋಮಲ್‌ ಅವರಿಗೆ ಜೊತೆಯಾಗಿದ್ದಾರೆ ಎನ್ನುವುದು ವಿಶೇಷ. ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪ್ರಶಾಂತ್‌ ನಾಯಕ್ ಈ ಬಗ್ಗೆ ಮಾತನಾಡಿ, ‘ಹೊಸ ಸೀಸನ್‌ನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ‘ಗಿಚ್ಚಿ ಗಿಲಿಗಿಲಿ’ಗೆ ಹೊಸ ರಂಗು ತುಂಬಲಿವೆ. ಕಲರ್ಸ್‌ ಕನ್ನಡದ ಹಾಸ್ಯಗಾರರ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್‌ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿ ಭಾಗವಹಿಸಲಿದ್ದಾರೆ’ ಎಂದಿದ್ದಾರೆ.

‘ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ‌. ಆದರೆ ‘ಕನ್ನಡ ಕೋಗಿಲೆ’ ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆಯಿದೆ’ ಎಂದರು ಸಾಧುಕೋಕಿಲ. ‘ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ’ ಎನ್ನುವುದು ಶ್ರುತಿ ಮಾತು.

ನಟ ಕೋಮಲ್‌ ತೀರ್ಪುಗಾರರಲ್ಲೊಬ್ಬರಾಗಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಶೋ ಬಗ್ಗೆ ಮಾತನಾಡಿ, ‘ನಾನು ಈ ಹಿಂದೆ ಒಂದು ಕಾಮಿಡಿ ಶೋ ನಿರ್ಮಾಣ ಮಾಡಿದ್ದೆ‌. ಕಲರ್ಸ್ ವಾಹಿನಿಯ ಅನುಬಂಧ ಅವಾರ್ಡ್ಸ್‌ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು ‘ಗಿಚ್ಚಿ ಗಿಲಿಗಿಲಿ’ ಶೋ ಬಗ್ಗೆ ಹೇಳಿದರು’ ಎಂದರು. ಈ ಬಾರಿಯ ಬಿಗ್‌ಬಾಸ್‌ನ ಪ್ರಮುಖರಲ್ಲಿ ಒಬ್ಬರಾಗಿದ್ದ ಕಾಮಿಡಿಯನ್‌ ತುಕಾಲಿ ಸಂತೋಷ್‌ ತಮ್ಮ ಪತ್ನಿ ಮಾನಸ ಅವರೊಟ್ಟಿಗೆ ‘ಗಿಚ್ಚಿ ಗಿಲಿಗಿಲಿ’ಯಲ್ಲಿ ಭಾಗವಹಿಸಲಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ ಮಂಜು ಪಾವಗಡ ಮರಳುತ್ತಿದ್ದಾರೆ. ಬಿಗ್‌ಬಾಸ್ ಸೀಸನ್‌ ಒಂಬತ್ತರ ಕಲಾವಿದ ವಿನೋದ್‌ ಗೊಬ್ಬರಗಾಲ ಹಾಗೂ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದ ಡ್ರೋನ್ ಪ್ರತಾಪ್‌ ಮತ್ತು ಇಶಾನಿ ಮತ್ತು ಬಿಗ್‌ಬಾಸ್‌ ಸೀಸನ್‌ ನಾಲ್ಕರ ಸಂಜನಾ ಚಿದಾನಂದ್‌ ಕೂಡಾ ಸ್ಫರ್ಧಿಸಲಿದ್ದಾರೆ. ಉಳಿದಂತೆ ಕಲರ್ಸ್‌ ಕನ್ನಡದ ಹಾಸ್ಯಗಾರರಾದ ಹುಲಿ ಕಾರ್ತಿಕ್‌, ಶಿವು, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್‌, ನಂದೀಶ್‌ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here