ನಿರ್ದೇಶಕ ಕೆ ಎಂ ಚೈತನ್ಯ ಮತ್ತೊಮ್ಮೆ ಭೂಗತ ಲೋಕದ ಕತೆಯೊಂದಿಗೆ ಮರಳಿದ್ದಾರೆ. ಅವರ ನಿರ್ದೇಶನದ ‘ಬಲರಾಮನ ದಿನಗಳು’ ಸಿನಿಮಾ ಸೆಟ್ಟೇರಿದೆ. ಶ್ರೇಯಸ್ ಮತ್ತು ಪದ್ಮಾವತಿ ಜಯರಾಂ ನಿರ್ಮಾಣದ ಚಿತ್ರದ ಶೀರ್ಷಿಕೆ ಪಾತ್ರಧಾರಿಯಾಗಿ ವಿನೋದ್ ಪ್ರಭಾಕರ್ ನಟಿಸುತ್ತಿದ್ದಾರೆ.
ವಿನೋದ್ ಪ್ರಭಾಕರ್ 25ನೇ ಚಿತ್ರದ ಶೀರ್ಷಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಅನಾವರಣಗೊಳಿಸಿದ್ದಾರೆ. ಚಿತ್ರಕ್ಕೆ ‘ಬಲರಾಮನ ದಿನಗಳು’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ‘ಆ ದಿನಗಳು’ ಖ್ಯಾತಿಯ ಕೆ ಎಂ ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಸಂದರ್ಭದಲ್ಲಿ Padmavathi Films ಎಂಬ ನೂತನ ನಿರ್ಮಾಣ ಸಂಸ್ಥೆಗೂ ಚಾಲನೆ ಸಿಕ್ಕಿದೆ. ನಿರ್ಮಾಪಕ ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಇದೇ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ‘ಟೈಗರ್’ ಎಂದು ಬಿರುದು ನೀಡಿ ಸನ್ಮಾನಿಸಲಾಯ್ತು.
ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಡಾ ಜಿ ಪರಮೇಶ್ವರ್, ‘ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಒಂದೊಂದು ಆಸೆ ಇರುತ್ತದೆ. ನಮ್ಮ ಶ್ರೇಯಸ್‍ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಆಸೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಯಶಸ್ಸು ಸಿಗಲಿ. ಹಿಂದೆ ಸಿನಿಮಾದಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಈಗ ಕಮರ್ಷಿಯಲ್ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿದೆ. ಹಣ ಮಾಡಬೇಕು ನಿಜ. ಆದರೆ ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಹೋಗಬೇಕು. ಹಾಗಾಗಿ ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ’ ಎಂದು ಸಲಹೆ ಮಾಡಿದರು.
”ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ನಿರ್ದೇಶಕ ಚೈತನ್ಯ ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರೇನು ಬಲರಾಮನ ಪಾತ್ರ ಸೃಷ್ಟಿ ಮಾಡಿದ್ದಾರೋ, ಪ್ರಾಣ ಒತ್ತೆಯಿಟ್ಟು, ಬೆವರು – ರಕ್ತ ಹರಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ’ ಎಂದರು ವಿನೋದ್ ಪ್ರಭಾಕರ್. ನಿರ್ದೇಶಕ ಕೆ ಎಂ ಚೈತನ್ಯ ತಮ್ಮ ಸಿನಿಮಾ ಬಗ್ಗೆ ಮಾತನಾಡಿ, ‘ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್. ಇದು ಭೂಗತಲೋಕದ ಸಿನಿಮಾ. ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ನಿಜಜೀವನದ ಕತೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ’ ಎನ್ನುತ್ತಾರೆ.