ವಿನಯ್ ಕುಮಾರ್ ಸಿರಿಗಿನೀಡಿ ನಿರ್ದೇಶನದ ‘G2’ ತೆಲುಗು ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಅಡವಿ ಶೇಷ್ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. 2018ರ ಯಶಸ್ವೀ ‘ಗೂಢಾಚಾರಿ’ ಸಿನಿಮಾದ ಸರಣಿಯಿದು.
ಇಮ್ರಾನ್ ಹಶ್ಮಿ ‘ಜಿ 2’ (ಗೂಢಾಚಾರಿ-2) ತೆಲುಗು ಚಿತ್ರದ ಚಿತ್ರೀಕರಣವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ವಿನಯ್ ಕುಮಾರ್ ಸಿರಿಗಿನೀಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಡವಿ ಶೇಷ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಇಮ್ರಾನ್ ಹಶ್ಮಿ, ‘ಜಿ 2 ಸಿನಿಮಾ ತಂಡಕ್ಕೆ ಸೇರಿರುವುದು ನಿಜವಾಗಿಯೂ ಸಂತಸ ತಂದಿದೆ. ಸ್ಕ್ರಿಪ್ಟ್ ಆಕರ್ಷಕವಾಗಿದೆ ಮತ್ತು ನಾನು ಈ ಸ್ಪೈ ಥ್ರಿಲ್ಲರ್ ಭಾಗವಾಗಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ಚಿತ್ರದಲ್ಲಿ ಬನಿತಾ ಸಂಧು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. People Media Factory, Abhishek Agarwal Arts ಮತ್ತು AK Entertainments ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವ ಪ್ರಸಾದ್ ಮತ್ತು ಅಭಿಷೇಕ್ ಅಗರ್‌ವಾಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಲನಚಿತ್ರದ ಮೊದಲ ಭಾಗ ‘ಗೂಢಾಚಾರಿ’ ಸಿನಿಮಾವು ಆಗಸ್ಟ್ 3, 2018ರಲ್ಲಿ ತೆರೆಕಂಡಿತ್ತು. ಈ ಚಿತ್ರವನ್ನು ಶಶಿ ಕಿರಣ್ ಟಿಕ್ಕಾ ನಿರ್ದೇಶಿಸಿದ್ದರು. ಅಡವಿ ಶೇಷ್ ಅವರು ಚಿತ್ರಕಥೆ ರಚಿಸಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಚಿತ್ರದಲ್ಲಿ ಶೋಭಿತಾ ದುಲಿಪಾಲ, ಪ್ರಕಾಶ್ ರಾಜ್, ಜಗಪತಿ ಬಾಬು ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇಮ್ರಾನ್ ಹಶ್ನಿ ಅವರು ಪವನ್ ಕಲ್ಯಾಣ್ ಅಭಿನಯದ ‘OG’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಶ್ಮಿ ಇತ್ತೀಚೆಗೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದ ಆಕ್ಷನ್ ಥ್ರಿಲ್ಲರ್ ‘ಟೈಗರ್ 3’ ಹಿಂದಿ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು.