ಗುರು ದೇಶಪಾಂಡೆ ಅವರ G Cinemas ನೂತನ ಸಿನಿಮಾ ನಿರ್ಮಿಸುತ್ತಿದೆ. ಬಿ ಎಂ ಗಿರಿರಾಜ್ ನಿರ್ದೇಶಿಸಲಿರುವ ಚಿತ್ರದಲ್ಲಿ G Academyಯ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ನಟಿಸಲಿದ್ದಾರೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟರು ಅಭಿನಯಿಸಲಿದ್ದಾರೆ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.
‘ಜಟ್ಟ’, ‘ಮೈತ್ರಿ’ ಚಿತ್ರಗಳ ಖ್ಯಾತಿಯ ಬಿ ಎಂ ಗಿರಿರಾಜ್ ನಿರ್ದೇಶನದ ‘ಪ್ರೊಡಕ್ಷನ್ ನಂ 4’ ಚಿತ್ರದ ಹಾಡುಗಳ ಧ್ವನಿಮುದ್ರಣ ಪೂಜೆ ನಾಗರಭಾವಿಯ ಲೂಪ್ ಸ್ಟುಡಿಯೋಸ್‌ನಲ್ಲಿ ನೆರವೇರಿದೆ. ನಿರ್ದೇಶಕ ಬಿ ಜೆ ಭರತ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ದೇಶಕರು, ‘ಹಿಂದೆ ಸಾಂಗ್ ರೆಕಾರ್ಡಿಂಗ್ ಪೂಜೆ ಎಂದರೆ ಒಂದು ಸಡಗರ. ಈಗ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಅವರು ಧ್ವನಿ ಮುದ್ರಣದ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಸಿನಿಮಾ ಈ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುತ್ತದೆ. ಮರೆಯಾಗುತ್ತಿರುವ ಸಂಸ್ಕೃತಿಯ ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಧ್ವನಿ ಮುದ್ರಣ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ.
ಚಿತ್ರನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರ G Academyಯಲ್ಲಿ ನಟನಾ ತರಬೇತಿ ನಡೆಯುತ್ತದೆ. ಈಗಾಗಲೇ ಹತ್ತು ಬ್ಯಾಚ್‌ಗಳು ಆಗಿವೆ. ನೂತನ ಚಿತ್ರದಲ್ಲಿ G Academyಯಲ್ಲಿ ಕಲಿತ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ನಟಿಸಲಿದ್ದಾರೆ ಎನ್ನುವುದು ವಿಶೇಷ. ಇದು ಅವರ G Cinemas ಬ್ಯಾನರ್‌ನಡಿ ತಯಾರಾಗುತ್ತಿರುವ ನಾಲ್ಕನೇ ಸಿನಿಮಾ. ಈ ಚಿತ್ರ G Academy ವಿದ್ಯಾರ್ಥಿಗಳಿಗೆ ಒಂದೊಳ್ಳೆಯ ವೇದಿಕೆಯಾಗಲಿದೆ ಎನ್ನುವ ವಿಶ್ವಾಸ ಗುರು ದೇಶಪಾಂಡೆ ಅವರದು. ‘ಕನ್ನಡದ ಹೆಸರಾಂತ ನಟರು ಈ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ. ಈ ಕುರಿತು ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ. ಕನ್ನಡದಲ್ಲಿ ಕಮರ್ಷಿಯಲ್ ಹಾಗೂ ಪ್ರಶಸ್ತಿ ಚಿತ್ರಗಳು ಎಂಬ ಎರಡು ವಿಭಾಗಗಳಿದೆ. ಬೇರೆ ಕಡೆ ಆ ರೀತಿ ಇಲ್ಲ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಜನರು ನೋಡುತ್ತಾರೆ. ಆಗ ಅದು ಎರಡು ವಿಭಾಗಗಳನ್ನೊಳಗೊಂಡ ಒಂದೇ ಚಿತ್ರವಾಗುತ್ತದೆ. ನಮ್ಮ ಚಿತ್ರ ಕೂಡ ಅದೇ ರೀತಿ ಇರಲಿದೆ’ ಎನ್ನುತ್ತಾರವರು.