ಕನ್ನಡದ ಚಿತ್ರನಿರ್ಮಾಣ ಮತ್ತು ವಿತರಣೆ ಸಂಸ್ಥೆ KRG Studios ನೂತನ ತಮಿಳು ಚಿತ್ರ ಘೋಷಿಸಿದೆ. ಈ ಚಿತ್ರವನ್ನು ಜನಪ್ರಿಯ ಸಿನಿಮಾ ಬರಹಗಾರ್ತಿ, ಚಿತ್ರನಿರ್ದೇಶಕಿ ಅಂಜಲಿ ಮೆನನ್‌ ನಿರ್ದೇಶಿಸಲಿದ್ದಾರೆ.

ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ ಅವರೊಂದಿಗೆ KRG Studios ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. ‘ಬೆಂಗಳೂರು ಡೇಸ್‌’, ‘ಉಸ್ತಾದ್‌ ಹೋಟೆಲ್‌’, ‘ಮಂಜಡಿಕುರು’, ‘ಕೊಡೆ’, ‘ವಂಡರ್ ವುಮನ್’ನಂತಹ ಜನಪ್ರಿಯ ತಮಿಳು ಚಿತ್ರಗಳಿಗೆ ಕಥೆ ರಚಿಸಿರುವ ಅಂಜಲಿ‌ ಮೆನನ್ ತಮಿಳು‌ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ಕನ್ನಡದ KRG Studios ನಿರ್ಮಿಸಲಿದೆ. ಈ ಕುರಿತು ಮಾತನಾಡಿರುವ ಅಂಜಲಿ, ‘ಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನು ತಲುಪುತ್ತಿರುವ‌ ಈ ಕಾಲದಲ್ಲಿ KRG Studios ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸಮಂಜಸವೇ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ತಯಾರಾಗಲಿದೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.

KRG Studios ಸಂಸ್ಥಾಪಕ ಮತ್ತು ಚಿತ್ರನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ‘ಅಂಜಲಿ ಮೆನನ್ ಮತ್ತು ನಮ್ಮ KRG Studiosನ ಸಹಯೋಗ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಸಿನಿಮಾಗೆ ಇರುವ‌ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರೂ ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆ. ನಮ್ಮ ಪಯಣ ಶುರುವಾಗಲು ಕಾರಣರಾಗಿರುವುದು ಸ್ನೇಹಿತ ವಿಜಯ್ ಸುಬ್ರಹ್ಮಣ್ಯಂ. ಚಿತ್ರದ ಕಥಾವಸ್ತುವಿಗೆ, ಅದರ ನಿರೂಪಣೆಗೆ ಇರುವ ಶಕ್ತಿಯನ್ನು ಕುರಿತು ಹಾಗೂ ಉನ್ನತ ಮಟ್ಟದ ನಿರ್ಮಾಣವು ಪ್ರೇಕ್ಷಕರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದೆಲ್ಲಾ ನಾವು ಚರ್ಚಿಸಿದ್ದೇವೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ಆತ ಗಮನಿಸಿ, ನಮಗೆ ಮಾರ್ಗದರ್ಶಕನಾಗಿ ಹಾಗೂ ನಮ್ಮೊಡನೆ ಸಹ ನಿರ್ಮಾಪಕನಾಗಿ ಕೈ ಜೋಡಿಸಿದಕ್ಕಾಗಿ ಆಭಾರಿಯಾಗಿರುತ್ತೇನೆ’ ಎಂದಿದ್ದಾರೆ.

2017ರಲ್ಲಿ ಆರಂಭವಾದ KRG Studios ಇಲ್ಲಿಯವರೆಗೂ ಸುಮಾರು 100 ಚಿತ್ರಗಳನ್ನು ವಿತರಿಸಿದೆ. 2020ರಲ್ಲಿ ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಚಿತ್ರ ನಿರ್ಮಾಣ ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ‌ ಧನಂಜಯ್ ಅಭಿನಯದಲ್ಲಿ ಮೂಡಿ‌ಬಂದ ಈ‌ ಚಿತ್ರ Amazon Primeನಲ್ಲಿ ಬಿಡುಗಡೆಗೊಂಡಿತ್ತು. ಮಾರ್ಚ್ 2023ರಲ್ಲಿ ತೆರೆಕಂಡ ‘ಗುರುದೇವ್ ಹೊಯ್ಸಳ’ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು. ‘Tulsea’ ದೇಶದ ಪ್ರತಿಭಾವಂತ ಬರಹಗಾರರನ್ನು, ನಿರ್ದೇಶಕರನ್ನು, ನಟರನ್ನು ಒಳಗೊಂಡಿರುವ ಸಂಸ್ಥೆ. ಈ ಸಂಸ್ಥೆಯನ್ನು ಪ್ರತಿನಿಧಿಸುವ ಅಂಜಲಿ ಮೆನನ್ ಅವರೊಂದಿಗೆ ಕೈ ಜೋಡಿಸಿರುವುದು ತಮಗೆ ಹೆಮ್ಮೆಯ ವಿಷಯ ಎಂದು KRG Studios ಹೇಳಿಕೊಂಡಿದೆ.

LEAVE A REPLY

Connect with

Please enter your comment!
Please enter your name here