‘ರೋಜಿ’ ಚಿತ್ರದ ‘ಸ್ವಾಮಿ ಅಣ್ಣ’ ಪಾತ್ರದೊಂದಿಗೆ ‘ಒರಟ’ ಸಿನಿಮಾ ಖ್ಯಾತಿಯ ಪ್ರಶಾಂತ್ ತೆರೆಗೆ ಮರಳುತ್ತಿದ್ದಾರೆ. ಶೂನ್ಯ ನಿರ್ದೇಶನದ ಈ ಸಿನಿಮಾ ಲೂಸ್ ಮಾದ ಯೋಗಿ ಅವರ 50ನೇ ಪ್ರಾಜೆಕ್ಟ್. ಶ್ರೀನಗರ ಕಿಟ್ಟಿ, ಸ್ಯಾಂಡಿ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಲೂಸ್ ಮಾದ ಯೋಗಿ ಅಭಿನಯದ 50ನೇ ಸಿನಿಮಾ ‘ರೋಜಿ’ಯಲ್ಲಿ ನಟ ಶ್ರೀನಗರ ಕಿಟ್ಟಿ ಮತ್ತು ಸ್ಯಾಂಡಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ಒರಟ ಪ್ರಶಾಂತ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಅವರು ಚಿತ್ರದಲ್ಲಿ ‘ಸ್ವಾಮಿ ಅಣ್ಣ’ ಪಾತ್ರ ಮಾಡುತ್ತಿದ್ದಾರೆ. ಒರಟ ಪ್ರಶಾಂತ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ಶೂನ್ಯ ಈ ಬಗ್ಗೆ ಮಾತನಾಡಿ, ‘ರೋಜಿ ಸ್ಟೈಲಿಶ್ ಗ್ಯಾಂಗ್ಸ್ಟರ್ ಡ್ರಾಮ. ಒರಟ ಪ್ರಶಾಂತ್ ಬಹಳ ದಿನಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು – ಸ್ವಾಮಿ ಅಣ್ಣ. ಚಿತ್ರದಲ್ಲಿ ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ.
ಬಹುದಿನಗಳ ನಂತರ ‘ಒರಟ’ ಸಿನಿಮಾ ಖ್ಯಾತಿಯ ಪ್ರಶಾಂತ್ ತೆರೆಗೆ ಮರಳುತ್ತಿದ್ದಾರೆ. ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಅವರು, ‘ನನಗೆ ಬಹಳ ಅವಕಾಶಗಳು ಬಂದವು. ಆದರೆ, ನಾನು ಒಪ್ಪಿರಲಿಲ್ಲ. ಶೂನ್ಯ ಅವರು ಹೇಳಿದ ಕತೆ ಹಾಗೂ ನನ್ನ ಪಾತ್ರ ಇಷ್ಟವಾಯ್ತು. ಹಾಗಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಯೋಗಿ ಅವರ ಜೊತೆಗೆ ಅಭಿನಯಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರತ್ತಿದೆ’ ಎನ್ನುತ್ತಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ ಎನ್ನುವುದು ವಿಶೇಷ. ಅವರು ಸಿನಿಮಾಗೆ ಬಂದು 25 ವರ್ಷಗಳು ಸಂದಿವೆ. ‘ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲಾ ಹಾಡುಗಳು ಕತೆಗೆ ಪೂರಕವಾಗಿರುತ್ತವೆ. ಕೊರೋನ ನಂತರ ನಾನು ಒಪ್ಪಿಕೊಂಡಿರುವ ಚಿತ್ರವಿದು’ ಎನ್ನುತ್ತಾರೆ ಗುರುಕಿರಣ್. ಡಿ ವೈ ರಾಜೇಶ್, ಡಿ ವೈ ವಿನೋದ್ ನಿರ್ಮಾಣದ ಚಿತ್ರಕ್ಕೆ ಎಸ್ ಕೆ ರಾವ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.