ಕಣ್ಣನ್ ಐಯ್ಯರ್ ನಿರ್ದೇಶನದ ‘ಏ ವತನ್ ಮೇರೇ ವತನ್’ ಒಟ್ಟಾರೆಯಾಗಿ ಇಷ್ಟವಾದರೂ ಇನ್ನಷ್ಟು ಪರಿಣಾಮಕಾರಿಯಾಗಿ ಕಥೆಯನ್ನು ನಿರೂಪಿಸಬಹುದಿತ್ತು ಎನಿಸುತ್ತದೆ. ಜನಸಾಮಾನ್ಯರಿಗೆ ಅಷ್ಟೇನೂ ಗೊತ್ತಿಲ್ಲದ ವಿಚಾರಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿರುವುದು ಶ್ಲಾಘನೀಯ. ಒಮ್ಮೆ ನೋಡಿ ಆನಂದಿಸಬಲ್ಲ ಪ್ರಯೋಗ. ಚಿತ್ರ ಆಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕಣ್ಣನ್ ಐಯ್ಯರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಏ ವತನ್ ಮೇರೇ ವತನ್’ ಆಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಸಾರಾ ಅಲಿ ಖಾನ್, ಇಮ್ರಾನ್ ಹಶ್ಮಿ ಮತ್ತು ಅಭಯ್ ಶರ್ಮ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಕರಣ್ ಜೋಹರ್, ಅಪೂರ್ವ ಮೆಹತಾ ಮತ್ತು ಸೋಮೇನ್ ಮಿಶ್ರ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ತೆರೆಮರೆಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪು ಇಟ್ಟರು. ಅಂಥ ಕೆಲವು ನಿಸ್ವಾರ್ಥ ಜೀವಗಳಲ್ಲಿ ಉಷಾ ಮೆಹತಾ ಕೂಡ ಒಬ್ಬರು. ಹೆಚ್ಚು ಜನರಿಗೆ ಈಕೆಯ ಬಗ್ಗೆ, ಈಕೆಯ ಹೋರಾಟದ ಬಗ್ಗೆ ತಿಳಿದಿಲ್ಲ. ಇವರ ಜೀವನವನ್ನು ಆಧರಿಸಿ ತೆಗೆದಿರುವ ಸಿನಿಮಾ ‘ಏ ವತನ್ ಮೇರೇ ವತನ್’. ಉಷಾ ಮೆಹತಾ ಪಾತ್ರದಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯಾರಿಗೂ ತಿಳಿಯದಂತೆ ಗುಪ್ತವಾಗಿ ಕಾಂಗ್ರೆಸ್ ರೇಡಿಯೋ ಆರಂಭಿಸಿದ ದಿಟ್ಟ ಗಾಂಧೀವಾದಿ ಈ ಉಷಾ ಮೆಹತಾ. ‘ಕ್ವಿಟ್ ಇಂಡಿಯಾ ಚಳುವಳಿ’ ಸಮಯದಲ್ಲಿ ಉಷಾ ಅವರ ಕೊಡುಗೆ ಏನು ಎನ್ನುವುದೇ ಈ ಚಿತ್ರದ ಕೇಂದ್ರವಿಚಾರ. ಮಹಾತ್ಮ ಗಾಂಧಿ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆರಂಭಿಸಿದ ‘ಕ್ವಿಟ್ ಇಂಡಿಯಾ ಚಳುವಳಿ’ ಬಗ್ಗೆ ನಾವೆಲ್ಲರೂ ಓದಿದ್ದೇವೆ. ಆದರೆ ಆ ಸಮಯದಲ್ಲಿ ಗಾಂಧೀಜಿಯವರ ಸಂದೇಶ ಇಡೀ ದೇಶಕ್ಕೆ ತಲುಪುವಂತೆ ಸಹಾಯ ಮಾಡಿದ ಕಾಂಗ್ರೆಸ್ ರೇಡಿಯೋ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಚಳುವಳಿ ಘೋಷಣೆಯಾದ ತಕ್ಷಣವೇ ಗಾಂಧೀಜಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿತ್ತು. ದಿನಪತ್ರಿಕೆಗಳು ಗಾಂಧೀಜಿಯವರ ಚಳುವಳಿ ಜನರಿಗೆ ತಲುಪದ ಹಾಗೆ ಬಂದೋಬಸ್ತು ಮಾಡಿದ್ದವು. ಆಗ ಗುಪ್ತವಾಗಿ ಕಾಂಗ್ರೆಸ್ ರೇಡಿಯೋವನ್ನು ಶುರು ಮಾಡಿ ಗಾಂಧೀಜಿಯವರ ಚಳುವಳಿಯ ಕರೆಯನ್ನು ಇಡೀ ದೇಶದ ಜನತೆಗೆ ತಲುಪಿಸುವ ಕಾರ್ಯ ಮಾಡಿದ್ದೇ ದಿಟ್ಟ ಮಹಿಳೆ ಉಷಾ ಮೆಹತಾ. ದೊಡ್ಡ ನಾಯಕರ ಘೋಷಣೆಗಳನ್ನೆಲ್ಲ ರೇಡಿಯೋ ಮೂಲಕ ಪ್ರಚಾರ ಮಾಡಿ ಜನಪ್ರಿಯಗೊಳಿಸಿದವರು ಈಕೆ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ನಡೆದ ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರದ ಇಂಥ ಘಟನೆಗಳ ಕಥಾನಕವೇ ಈ ಚಿತ್ರ. ಉಷಾ ಮೆಹತಾ ತರಹದ ತೆರೆಮರೆಯ ಸ್ವಾತಂತ್ರ್ಯವೀರರನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ಈ ಚಿತ್ರ ಮಾಡುತ್ತದೆ.
ರೇಡಿಯೋ ಸ್ಟೇಷನ್ ಶುರುವಾಗುವುದರೊಂದಿಗೆ ಚಿತ್ರವೂ ವೇಗ ಪಡೆಯುತ್ತಾ ಹೋಗುತ್ತದೆ. ಇಂತಹ ಒಂದು ವಾಹಿನಿಯನ್ನು ಶುರುಮಾಡಲು ಉಷಾ ಮತ್ತವರ ಸಂಗಡಿಗರು ಬ್ರಿಟಿಷ್ ಅಧಿಕಾರಿಗಳ ಕಣ್ಣುತಪ್ಪಿಸಿ ಏನೆಲ್ಲಾ ಪಾಡು ಪಡಬೇಕಾಯಿತು ಎನ್ನುವುದರ ಪರಿಣಾಮಕಾರಿಯಾದ ಚಿತ್ರಣವನ್ನು ಈ ಚಿತ್ರದಲ್ಲಿ ಕಾಣಬಹುದು. ಈ ರೇಡಿಯೋವನ್ನು ಮುಚ್ಚಿಹಾಕಲು ಬ್ರಿಟಿಷ್ ಅಧಿಕಾರಿಗಳು ಮಾಡಿದ ಕುತಂತ್ರಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಸಾರಾ ಅಲಿ ಖಾನ್ ಅವರ ನಟನೆ ಅಚ್ಚರಿ ಎನಿಸುವಷ್ಟು ಸೊಗಸಾಗಿ ಮೂಡಿಬಂದಿದೆ. ಉಷಾ ಅವರ ಪಾತ್ರಕ್ಕೆ ಬೇಕಿರುವ ದಿಟ್ಟತನವನ್ನು ಸಾರಾ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರಧಾರಿ ಇಮ್ರಾನ್ ಹಶ್ಮಿ ಅವರ ಪಾತ್ರ ಕೂಡ ಪ್ರಬುದ್ಧವಾಗಿ ಮೂಡಿಬಂದಿದ್ದು ತಮ್ಮ ಪಾತ್ರಕ್ಕೆ ಇಮ್ರಾನ್ ಪೂರ್ಣವಾಗಿ ನ್ಯಾಯ ಸಲ್ಲಿಸಿದ್ದಾರೆ. ಇಲ್ಲಿ ಸಾರಾ ಅವರ ಪಾತ್ರವೇ ಮುಖ್ಯವಾಗಿದ್ದು ಮಿಕ್ಕ ನಟರುಗಳಾದ ಇಮ್ರಾನ್, ಸ್ಪರ್ಶ್, ಅಲೆಕ್ಸ್, ಸಚಿನ್ ಮತ್ತಿತರರು ಪೋಷಕ ಪಾತ್ರಗಳಲ್ಲಿ ಸಾರಾ ಅವರ ಪಾತ್ರಕ್ಕೆ ಉತ್ತಮ ಸಹಕಾರ ನೀಡಿದ್ದಾರೆ.
ಚಿತ್ರದ ಆರಂಭ ಮತ್ತು ಅಂತ್ಯ ತುಸು ದುರ್ಬಲ ಎನಿಸಿದರೂ ನಡುವಿನ ಒಂದು ಘಂಟೆ ಚಿತ್ರ ಬಹಳ ಪರಿಣಾಮಕಾರಿಯಾಗಿದೆ. ಆರಂಭವಂತೂ ಬಹಳ ನಿಧಾನಗತಿಯಲ್ಲಿ ನಿರೂಪಿತವಾಗಿದೆ. ಬ್ರಿಟಿಷರು ರೇಡಿಯೋ ವಾಹಿನಿಯ ಇರುವಿಕೆಯನ್ನು ಶಂಕಿಸಿ ಕಟ್ಟಡ ಖಾಲಿ ಮಾಡಿಸುವ ದೃಶ್ಯದೊಂದಿಗೆ ಚಿತ್ರ ಆರಂಭವಾಗಿ ನಂತರ ಒಂದಷ್ಟು ಫ್ಲಾಷ್‌ಬ್ಯಾಕ್ ದೃಶ್ಯಗಳು ಬರುತ್ತಾ ವೀಕ್ಷಕರಿಗೆ ತುಸು ಬೋರ್ ಹೊಡೆಸುತ್ತದೆ. ರೇಡಿಯೋ ವಾಹಿನಿ ಶುರುವಾದ ನಂತರ ಚಿತ್ರ ವೇಗ ಪಡೆದುಕೊಂಡು ಆಸಕ್ತಿ ಹುಟ್ಟಿಸುತ್ತಾ ನೋಡಿಸಿಕೊಂಡು ಹೋಗುತ್ತದೆ. ಚಿತ್ರದಲ್ಲಿ ಬರುವ ಪ್ರೇಮ ಕಥಾನಕ ದುರ್ಬಲ ಎನಿಸುವುದಷ್ಟೇ ಅಲ್ಲದೆ ಅನಗತ್ಯ ಎಂದು ಕೂಡ ಎನಿಸುತ್ತದೆ. ಈ ಭಾಗ ಚಿತ್ರಕ್ಕೆ ಮತ್ತಷ್ಟು ಭಾವುಕ ಆಯಾಮ ಕೊಡುತ್ತದೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಒಟ್ಟಾರೆ ಸಾರವನ್ನು ಈ ಪ್ರೇಮಕಥಾನಕ ದುರ್ಬಲಗೊಳಿಸಿದೆ. ಅದು ಇಲ್ಲದೆಯೇ ಇದ್ದಿದ್ದರೆ ಚಿತ್ರಕ್ಕೆ ಮತ್ತಷ್ಟು ಬಲ ಬರುತ್ತಿತ್ತು. ಚಿತ್ರ ಮುಗಿಯುತ್ತಾ ಮುಗಿಯುತ್ತಾ ಅಂತ್ಯವನ್ನು ಊಹಿಸಿಬಿಡಬಹುದು. ಕಥಾನಿರೂಪಣೆಯಲ್ಲಿ ರೋಚಕತೆಯನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತದೆ. ಇಂತಹ ದೇಶಭಕ್ತಿಯ ಮಾದರಿಯ ಚಿತ್ರಗಳಲ್ಲಿ ಅಂತ್ಯ ಬಹಳ ಪ್ರಭಾವಿಯಾಗಿ ಮೂಡಿಬರಬೇಕು. ಇಲ್ಲಿ ಅಂತ್ಯ ಬಹಳ ದುರ್ಬಲವಾಗಿ ಚಿತ್ರಿತವಾಗಿದೆ. ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.
ಅಮೃತಾ ಮಹಲ್ ಮತ್ತು ಸಬ್ರೀನಾ ಸಿಂಗ್ ಅವರ ನಿರ್ಮಾಣ ವಿನ್ಯಾಸ ಬಹಳ ಅದ್ಭುತವಾಗಿದ್ದು ಸ್ವಾತಂತ್ರ್ಯಪೂರ್ವದ ಕಾಲಘಟ್ಟದ ದೃಶ್ಯಾವಿನ್ಯಾಸವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ವಸ್ತ್ರವಿನ್ಯಾಸ ಬಹಳ ಅಚ್ಚುಕಟ್ಟಾಗಿದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಸಹ ಪೂರಕವಾಗಿವೆ. ಎಲ್ಲಿಯೂ ಅತಿ ಎನಿಸುವುದಿಲ್ಲ. ಚಿತ್ರದ ನಿರ್ಮಾಣದ ಗುಣಮಟ್ಟ ಬಹಳ ಚೆನ್ನಾಗಿದ್ದರೂ ಸಂಕಲನ ಇನ್ನಷ್ಟು ಚುರುಕಾಗಿ ಇರಬೇಕಿತ್ತು ಎನಿಸುತ್ತದೆ. ಕಣ್ಣನ್ ಐಯ್ಯರ್ ನಿರ್ದೇಶನ ಒಟ್ಟಾರೆಯಾಗಿ ಇಷ್ಟವಾದರೂ ಇನ್ನಷ್ಟು ಪರಿಣಾಮಕಾರಿಯಾಗಿ ಕಥೆಯನ್ನು ನಿರೂಪಿಸಬಹುದಿತ್ತು ಎನಿಸುತ್ತದೆ. ಜನಸಾಮಾನ್ಯರಿಗೆ ಅಷ್ಟೇನೂ ಗೊತ್ತಿಲ್ಲದ ವಿಚಾರಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿರುವುದು ಶ್ಲಾಘನೀಯ. ಒಮ್ಮೆ ನೋಡಿ ಆನಂದಿಸಬಲ್ಲ ಚಿತ್ರ ‘ಏ ವತನ್ ಮೇರೇ ವತನ್’. ಚಿತ್ರ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.