‘ವೆಂಕ್ಯಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿರುವ ರೂಪಾಲಿ ಈಗಾಗಲೇ ಮ್ಯೂಸಿಕ್ ಆಲ್ಬಂಗಳಲ್ಲಿ ಹೆಜ್ಜೆಹಾಕಿದ್ದಾರೆ. ಕಾಲೇಜು ದಿನಗಳಿಂದಲೇ ರೂಪದರ್ಶಿಯಾಗಿರುವ ಶಿಮ್ಲಾ ಸುಂದರಿ ಪಹಾಡಿ ಹೆಣ್ಣು ಮಗಳಾಗಿ ‘ವೆಂಕ್ಯಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಗರ್ ಪುರಾಣಿಕ್ ನಟಿಸಿ, ನಿರ್ದೇಶನ ಮಾಡುತ್ತಿರುವ ‘ವೆಂಕ್ಯಾ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸಲ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಈಗ ಯುವನಟಿ ರೂಪಾಲಿ ಸೂದ್ ‘ವೆಂಕ್ಯಾ’ ಅಂಗಳ ಪ್ರವೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ರೂಪದರ್ಶಿಯಾಗಿದ್ದುಕೊಂಡೇ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡದ್ದಾರೆ. ಖ್ಯಾತ ಪಂಜಾಬಿ ಗಾಯಕ ಹಾರ್ಡಿ ಸಂಧು ಜತೆ ‘ಹಾರ್ನ್ ಬ್ಲೋ’ ಪಂಜಾಬಿ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ‘ವೆಂಕ್ಯಾ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರೂಪಾಲಿ ಸೂದ್ ಈಗಾಗಲೇ ‘ವೆಂಕ್ಯಾ’ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಹಿಮಾಚಲದ ಪಹಾಡಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ನಾವು ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್‌ನಲ್ಲಿ, ಪರ್ವತಗಳ-ಕಣಿವೆಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ’ ಎಂದು ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ. ‘ಡೊಳ್ಳು’ ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ‘ವೆಂಕ್ಯಾ’ ಚಿತ್ರಕ್ಕೂ ಕೈ ಜೋಡಿಸಿದ್ದಾರೆ. ಒಡೆಯರ್ ಫಿಲ್ಮ್ಸ್ ಬ್ಯಾನರ್ ಅಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕದ ಕಥೆ ಆಧಾರಿಸಿ ಮೂಡಿ ಬರ್ತಿರುವ ‘ವೆಂಕ್ಯಾ’ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿ ಎಸ್ ಬರೆದಿದ್ದಾರೆ. ಪ್ರಣವ್ ಮುಲೆ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.