ನಟ ವಿಜಯ್‌ ರಾಘವೇಂದ್ರ ಅವರು ಇತ್ತೀಚೆಗೆ ಹೆಚ್ಚು ಹೆಚ್ಚು ಸಸ್ಪೆನ್ಸ್‌ ಥಿಲ್ಲರ್‌ ಚಿತ್ರಗಳಲ್ಲೇ ನಟಿಸುತ್ತಾ ಹೆಸರು ಮಾಡುತ್ತಿದ್ದಾರೆ. ಈಗಲೂ ಸಹ ಅವರು ಸೈಕಾಲಜಿಸ್ಟ್ ಪಾತ್ರದಲ್ಲಿ ನಟಿಸಿರುವ ‘ಗ್ರೇ ಗೇಮ್ಸ್‌’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.

ಹೆಜ್ಜೆಹೆಜ್ಜೆಗೂ ಸಸ್ಪೆನ್ಸ್‌ ಜೊತೆಗೆ ಥ್ರಿಲ್‌ ಕೊಡಲಿರುವ ಸಿನಿಮಾ ‘ಗ್ರೇ ಗೇಮ್ಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಗಂಗಾಧರ್‌ ಸಾಲಿಮಠ ನಿರ್ದೇಶನದಲ್ಲಿ ಮೂಡಿಬಂದಿರುವ ಫ್ಯಾಮಿಲಿ ಸಸ್ಪೆನ್ಸ್‌ ಡ್ರಾಮಾದಲ್ಲಿ ನಾಯಕನಾಗಿ ವಿಜಯ್‌ ರಾಘವೇಂದ್ರ ನಟಿಸಿದ್ದಾರೆ. ಸೈಕಾಲಜಿಸ್ಟ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ, ಸೈಬರ್ ಕ್ರೈಂ ಅಧಿಕಾರಿಯಾಗಿ ಭಾವನಾ ರಾವ್ ಹಾಗೂ ವೃತ್ತಿಪರ ಗೇಮರ್ ಆಗಿ ಜೈ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಚಿಂತನೆಗಳ ಪ್ರಚೋದನೆ ನಡೆಯುತ್ತದೆ. ಸರಿ ತಪ್ಪುಗಳ ಗ್ರಹಿಕೆಗಳಿಗೂ ಸವಾಲೆಸೆಯುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಆನ್‌ಲೈನ್‌ ಗೇಮಿಂಗ್‌ ಪೈಪೂಟಿ ಜತೆಗೆ ಮೆಟಾವರ್ಸ್‌ನ ಸಂಕೀರ್ಣತೆಗಳ ಬೆಸುಗೆಯೂ ಇದೆ. ಸದ್ಯ ಸಿನಿಮಾದ ಬಹುತೇಕ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ ಚಿತ್ರ ರಿಲೀಸ್‌ ದಿನಾಂಕವನ್ನು ಪ್ರಕಟಿಸಿದೆ. ಮೇ 10ರಂದು ರಾಜ್ಯಾದ್ಯಂತ ‘ಗ್ರೇ ಗೇಮ್ಸ್‌’ ಸಿನಿಮಾ ತೆರೆ ಕಾಣಲಿದೆ.

ಸೆನ್ಸಾರ್‌ ಮಂಡಳಿಯಿಂದ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಇನ್ನೇನು ಚಿತ್ರತಂಡ ಸಿನಿಮಾದ ಪ್ರಚಾರ ಆರಂಭಿಸಲಿದೆ. ವಿಜಯ್‌ ರಾಘವೇಂದ್ರ ಜತೆಗೆ ಭಾವನಾ ರಾವ್‌, ಶ್ರುತಿ ಪ್ರಕಾಶ್‌, ಅಪರ್ಣಾ ವಸ್ತ್ರೇಯ, ರವಿ ಭಟ್‌ ಮುಖ್ಯಭೂಮಿಕೆಯಲ್ಲಿದ್ದರೆ, ಜೈ, ಇಶಿತಾ ಸಿಂಗ್‌, ರಾಮ್‌ ಮಂಜೋನ್ನಾಥ್‌ ಬೆನ್ಸಕಾನ್‌ ಚಾಕೋ ಇನ್ನುಳಿದ ಪಾತ್ರವರ್ಗವದಲ್ಲಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ 54ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ಆನ್‌ಲೈನ್‌ ಗೇಮಿಂಗ್‌ ಜತೆಗೆ ಮಾನಸಿಕ ಆರೋಗ್ಯ, ತಂತ್ರಜ್ಞಾನದ ವಿಚಾರವೂ ಇರಲಿದೆ. ನೋಡುಗರನ್ನು ಭಾವನಾತ್ಮಕವಾಗಿಯೂ ಯೋಚನೆಗೆ ಇಳಿಸುವ ಶಕ್ತಿ ಈ ಚಿತ್ರಕ್ಕಿದೆ ಅನ್ನೋದು ಚಿತ್ರತಂಡದ ವಿಶ್ವಾಸ.

‘ವಾಸ್ತವ ಮತ್ತು ವರ್ಚುವ್ಯಾಲಿಟಿ ಹೆಣೆದುಕೊಂಡಿರುವ ಜಗತ್ತಿನಲ್ಲಿ ಸರಿ ಮತ್ತು ತಪ್ಪುಗಳ ನಮ್ಮ ಗ್ರಹಿಕೆಗೆ ಸವಾಲು ಹಾಕುತ್ತದೆ. ಅಸಾಧಾರಣವಾದ ಪಾತ್ರವರ್ಗ ಮತ್ತು ತಂಡದ ಜತೆಗೆ, ಸಿನಿಮೀಯ ಅನುಭವವನ್ನು ನೀಡಲು ದಣಿವರಿವಿಲ್ಲದೆ ಕೆಲಸ ಮಾಡಿದ್ದೇವೆ. ಅದು ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇದರಿಂದ ಅಷ್ಟೇ ಪರಿಣಾಮ ಸಹ ಆಗಲಿದೆ’ ಎಂದಿದ್ದಾರೆ ನಿರ್ದೇಶಕ ಗಂಗಾಧರ್‌ ಸಾಲಿಮಠ.

ನಿರ್ಮಾಪಕ ಆನಂದ್‌ ಮುಗದ್‌ ಮಾತನಾಡಿ, ‘ನಮ್ಮ ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕಲು ನಾವು ಉತ್ಸುಕರಾಗಿದ್ದೇವೆ. ‘ಗ್ರೇ ಗೇಮ್ಸ್’ ಸಿನಿಮಾ ಮಾಡಲು ತಮ್ಮ ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದ ನಮ್ಮ ಅದ್ಭುತ ತಂಡದ ಅಚಲವಾದ ಸಮರ್ಪಣೆಗೆ ಈ ಸಿನಿಮಾ ಸಾಕ್ಷಿಯಾಗಿದೆ’ ಎನ್ನುತ್ತಾರೆ. ‘DEES FILMS’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಗ್ರೇ ಗೇಮ್ಸ್‌’ ಸಿನಿಮಾಗೆ ವರುಣ್‌ ಡಿಕೆ ಛಾಯಾಗ್ರಹಣ, ಜಗದೀಶ್ ಎನ್‌ ಸಂಕಲನ, ಕಿರಣ್‌ ಕಾವೇರಪ್ಪ ಸಾಹಿತ್ಯ, ಶ್ರೀಯಾಂಶ ಶ್ರೀರಾಮ್‌, ಡೊಳೇಶ್ವರ್‌ ರಾಜ್‌ ಸುಂಕು, ಅಶ್ವಿನ್‌ ಹೇಮಂತ್‌ ಸಂಗೀತ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here