2021ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದ ‘ಪುಷ್ಪ: ದಿ ರೈಸ್‌’ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈಗ ಈ ಚಿತ್ರ ಮುಂದುವರಿದ ಭಾಗವಾಗಿರುವ ‘ಪುಷ್ಪ 2’ ಸಿನಿಮಾದ ಮೊದಲ ಹಾಡು ರಿಲೀಸ್‌ಗೆ ರೆಡಿಯಾಗಿದೆ.

‘ಪುಷ್ಪ’ ಸಿನಿಮಾದಲ್ಲಿ ರೈಸ್‌ ಆದ ಪುಷ್ಪರಾಜ್‌ ‘ಪುಷ್ಪ 2’ ಚಿತ್ರದಲ್ಲಿ ರೂಲ್‌ ಮಾಡಲು ಡಬಲ್‌ ಫೈರ್‌ ಜೊತೆ ಎಂಟ್ರಿ ಕೊಡಲಿದ್ದಾನೆ. ಪೋಸ್ಟರ್‌ಗಳು, ಟೀಸರ್‌ ಹಾಗೂ ವಿಡಿಯೋ ಗ್ಲಿಂಪ್ಸ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ‘ಪುಷ್ಪ 2’ ಸಿನಿಮಾದ ಕುರಿತಾಗಿ ಹೊಸದೊಂದು ಅಪ್ಡೇಟ್‌ ಸಿಕ್ಕಿದೆ. ಚಿತ್ರದ ಮೊದಲ ಹಾಡು ರಿಲೀಸ್‌ಗೆ ಸಿದ್ಧವಾಗಿದ್ದು, ಅದರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಮೊದಲ ಹಾಡು ರಿಲೀಸ್‌ ದಿನಾಂಕ ಪ್ರಕಟಿಸುವ ಮುನ್ನ ಒಂದು ಆಕರ್ಷಕ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿತ್ತು.

ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಸಿನಿಮಾ 2021ರಲ್ಲಿ ತೆರೆ ಕಂಡಿತ್ತು. ಚಿತ್ರದ ಜೊತೆಗೆ ಹಾಡುಗಳೂ ಸಹ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದವು. ಹೀಗಾಗಿ ‘ಪುಷ್ಪ 2’ ಚಿತ್ರದ ಹಾಡುಗಳ ಮೇಲೆ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹೀಗಾಗಿಯೇ ಸಿನಿಮಾದ ಮೊದಲ ಹಾಡಿನ ರಿಲೀಸ್‌ಗಾಗಿ ಅಲ್ಲು ಅರ್ಜುನ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಬನ್ನಿ ಅಭಿಮಾನಿಗಳನ್ನು ಹೆಚ್ಚು ಕಾಯಿಸದ ಚಿತ್ರತಂಡ ಮೊದಲ ಹಾಡಿನ ಬಿಡುಗಡೆ ದಿನಾಂಕವನ್ನು ವಿಶೇಷವಾದ ಪ್ರೋಮೋ ಮೂಲಕ ಪ್ರಕಟಿಸಿದೆ. ‘ಪುಷ್ಪ 2’ ಸಿನಿಮಾದ ಮೊದಲ ಹಾಡು ಮೇ 1ರಂದು 11:7ಕ್ಕೆ ಬಿಡುಗಡೆಯಾಗಲಿದೆ. ಪ್ರೋಮೋದಲ್ಲಿರುವ ‘ಪುಷ್ಪ.. ಪುಷ್ಪ.. ಪುಷ್ಪರಾಜ್‌…..’ ಅನ್ನೋ ಸಾಲನ್ನು ಕೇಳಿದರೆ, ಇದು ನಾಯಕನನ್ನ ಪರಿಚಯಿಸುವ ಹಾಡಾಗಿರಬಹುದು ಎಂದೆನಿಸುತ್ತದೆ.

ಸಂಗೀತ ನಿರ್ದೇಶಕನ ದೇವಿಶ್ರೀ ಪ್ರಸಾದ್ ಅವರಿಗೆ ಟಾಲಿವುಡ್‌ನ ಹೊರಗೂ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ದೇವಿಶ್ರೀ ಪ್ರಸಾದ್ ಸಂಯೋಜಿಸಿದ ‘ಪುಷ್ಪ’ ಚಿತ್ರದ ಹಾಡುಗಳು ಭಾಷೆಯ ಗಡಿ ದಾಟಿ ಪ್ರೇಕ್ಷಕರ ಮನ ಗೆದ್ದಿತ್ತು. ಹೀಗಾಗಿ ಎಲ್ಲರ ಕಣ್ಣು ‘ಪುಷ್ಪ 2’ ಚಿತ್ರದ ಮೇಲಿದೆ. ಸದ್ಯ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು, ಆಗಸ್ಟ್ 15ಕ್ಕೆ ಪುಷ್ಪರಾಜ್‌ ಬೆಳ್ಳಿತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗುತ್ತಿದ್ದಾನೆ.

LEAVE A REPLY

Connect with

Please enter your comment!
Please enter your name here