ಕಿಶೋರ್ ಮೇಗಳಮನೆ ನಿರ್ದೇಶನದ ‘ಕಾಂಗರೂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಒಂದು ಸಣ್ಣ ತಪ್ಪಿನ ಪರಿಣಾಮದಿಂದ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು. ಆದಿತ್ಯ ಮತ್ತು ರಂಜಿನಿ ರಾಘವನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಮೇ 3ರಂದು ಸಿನಿಮಾ ತೆರೆಕಾಣಲಿದೆ.
‘ನಿರ್ಮಾಪಕರೇ ನಮ್ಮ ಅನ್ನದಾತರು. ಹಾಗಾಗಿ ಅವರಿಂದಲೇ ಟ್ರೇಲರ್ ರಿಲೀಸ್ ಮಾಡಿಸಬೇಕೆಂದು ನಾನು ಹಾಗೂ ನಿರ್ದೇಶಕರು ಅಂದುಕೊಂಡೆವು. ಈ ಚಿತ್ರದ ನಿರ್ಮಾಪಕರೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ’ ಎಂದರು ‘ಕಾಂಗರೂ’ ಚಿತ್ರದ ಹೀರೋ ಆದಿತ್ಯ. ಅವರ ‘ಕಾಂಗರೂ’ ಸಿನಿಮಾ ಇದೇ ಮೇ 3ರಂದು ತೆರೆಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸುತ್ತದೆ. ”ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆ ತಾಯಿ ಹೃದಯದ ಮಮತೆಯಿದೆ, ‘ನೀನೊಂದು ಮುಗಿಯದ ಮೌನ’ದಂಥ ಎವರ್ಗ್ರೀನ್ ಹಾಡನ್ನು ನನಗೆ ಕೊಟ್ಟವರು ಸಾಧು ಕೋಕಿಲ. ಅವರು ಮತ್ತೊಮ್ಮೆ ನನ್ನ ಚಿತ್ರಕ್ಕೆ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ನಾನು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ನಟ ಆದಿತ್ಯ.
ಆರೋಹ ಪ್ರೊಡಕ್ಷನ್ಸ್ನಡಿ ಚನ್ನಕೇಶವ ಬಿ ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಚಿತ್ರ ನಿರ್ಮಿಸಿದ್ದಾರೆ. ನಿರ್ಮಾಪಕರಲ್ಲೊಬ್ಬರಾದ ರಮೇಶ್ ಬಂಡೆ ಅವರು ಮಾತನಾಡಿ, ‘ನಾವು ಆರು ಸ್ನೇಹಿತರು ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಏನಾದರೂ ಹೊಸತನ್ನು ಮಾಡೋಣ ಎಂದು ಈ ಸಿನಿಮಾ ಮಾಡಿದ್ದೇವೆ, ಜನ ಕೊಟ್ಟ ದುಡ್ಡಿಗೆ ನ್ಯಾಯ ಒದಗಿಸುತ್ತೇವೆ’ ಎನ್ನುತ್ತಾರೆ. ಆದಿತ್ಯ ಅವರಿಗೆ ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ನಾನು ಆದಿತ್ಯ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು, ಈ ಚಿತ್ರದಲ್ಲಿ ಅವರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಒಬ್ಬ ಪ್ರೇಕ್ಷಕಳಾಗಿ ನಾನು ಸಿನಿಮಾನ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತಂದಿದ್ದಾರೆ’ ಎನ್ನುತ್ತಾರೆ. ನಿರ್ದೇಶಕ ಕಿಶೋರ್ ಮೇಗಳಮನೆ ಮಾತನಾಡಿ, ‘ಸುಮಾರು ಇನ್ನೂರು ಥಿಯೇಟರ್ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ಗೆ ಮಾಡಿದ ಕತೆ. ಒಂದು ಸಣ್ಣ ತಪ್ಪಿನಿಂದ ಮುಂದೆ ಏನೇನೆಲ್ಲ ಆಗಬಹುದೆಂದು ಚಿತ್ರದಲ್ಲಿ ತೋರಿಸಿದ್ದೇವೆ’ ಎಂದು ಹೇಳುತ್ತಾರೆ.










