ಪರಮ್‌ ನಿರ್ದೇಶನದಲ್ಲಿ ಧನಂಜಯ ನಟಿಸಿರುವ ‘ಕೋಟಿ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಧನಂಜಯ ಅವರು ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು, ರಮೇಶ್‌ ಇಂದಿರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೌಟುಂಬಿಕ ಸಂಬಂಧಗಳ ಜೊತೆ ಲವ್‌ಸ್ಟೋರಿಯೂ ಇದೆ ಎನ್ನುವುದನ್ನು ಟ್ರೇಲರ್‌ ಹೇಳುತ್ತದೆ.

ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಟ್ರೇಲರ್‌ ಬಂದಿದೆ. ಅವರಿಲ್ಲಿ ಕೆಳಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಿಲ್ಲಿ ಸಾಮಾನ್ಯ ಡ್ರೈವರ್‌ ಪಾತ್ರ. ಯಾರಿಗೂ ಮೋಸ ಮಾಡದೆ, ಪ್ರಾಮಾಣಿಕವಾಗಿ ಒಂದು ಕೋಟಿ ರೂಪಾಯಿ ದುಡಿದು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಚಿತ್ರದ ಕಥಾನಾಯಕನದ್ದು. ಮತ್ತೊಂದೆಡೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮಿಂಚಿದ್ದ ರಮೇಶ್‌ ಇಂದಿರಾ ಚಿತ್ರದಲ್ಲಿ ನಟೋರಿಯಸ್‌ ಖಳಪಾತ್ರದಲ್ಲಿದ್ದಾರೆ. ತಾಯಿ ಪಾತ್ರದಲ್ಲಿ ತಾರಾ ನಟಿಸಿದ್ದಾರೆ. ಆಕರ್ಷಕ ಹಿನ್ನೆಲೆ ಸಂಗೀತ, ಹುಲಿವೇಷಧಾರಿಗಳ ಸನ್ನಿವೇಶಗಳು ಸಿನಿಮಾ ರೋಚಕವಾಗಿರುವ ಸುಳಿವು ನೀಡುತ್ತವೆ.

ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಹೀರೊ ಧನಂಜಯ, ‘ಇದೊಂದು ಮಧ್ಯಮವರ್ಗದ ಸಾಮಾನ್ಯ ವ್ಯಕ್ತಿಯ ಕತೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಪ್ಯಾಮಿಲಿ ಎಂಟರ್‌ಟೇನರ್‌’ ಎನ್ನುತ್ತಾರೆ. ‘ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಕತೆ, ಒಳ್ಳೆ ಮನರಂಜನೆ ಗ್ಯಾರಂಟಿ’ ಎನ್ನುವುದು ಚಿತ್ರದ ನಿರ್ದೇಶಕ ಪರಮ್‌ ಅವರ ಭರವಸೆಯ ಮಾತು. ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಚಿತ್ರದ ಐದು ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ನೋಬಿನ್‌ ಪೌಲ್‌ ಹಿನ್ನೆಲೆ ಸಂಗೀತ, ಪ್ರತೀಕ್‌ ಶೆಟ್ಟಿ ಸಂಕಲನ, ಅರುಣ್‌ ಛಾಯಾಗ್ರಹಣ ಚಿತ್ರಕ್ಕಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ ಸಿನಿಮಾ ಇದೇ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here