PAN ಇಂಡಿಯಾ ಸಿನಿಮಾಗಳ ಯಾದಿಯಲ್ಲಿ ಇದೀಗ ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಸದ್ದು ಮಾಡುತ್ತಿವೆ. ಕೆಲವು ಸರಣಿ ಸಿನಿಮಾಗಳು ಸೇರಿದಂತೆ ದಕ್ಷಿಣದ ಹಲವು ಚಿತ್ರಗಳು ಭಾರಿ ನಿರೀಕ್ಷೆ ಹುಟ್ಟುಹಾಕಿವೆ. 2025ರಲ್ಲಿ ಭಾರತದ ಪ್ರೇಕ್ಷಕರನ್ನು ಸೆಳೆಯಬಹುದಾದ ದಕ್ಷಿಣದ ಸಿನಿಮಾಗಳ ಪಟ್ಟಿ ಇಲ್ಲಿದೆ.
ದಕ್ಷಿಣದ ಸಿನಿಮಾಗಳನ್ನು ಈಗ ಉತ್ತರ ಭಾರತೀಯರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ರಾಜಮೌಳಿಯವರ ‘ಬಾಹುಬಲಿ’ ಸಿನಿಮಾದಿಂದ ಶುರುವಾದ ದಕ್ಷಿಣ ಕ್ರೇಜ್ ಕನ್ನಡದ ‘KGF’ ಸರಣಿಗಳು, ‘ಕಾಂತಾರ’, ಇತ್ತೀಚಿನ ತೆಲುಗು ಸಿನಿಮಾ ‘ಪುಷ್ಪ2’ವರೆಗೆ ಬಂದು ನಿಂತಿದೆ. ಉತ್ತರ ಭಾರತದ ಥಿಯೇಟರ್‌ಗಳಿಗೂ ಈಗ ದಕ್ಷಿಣದ ಆಕ್ಷನ್ ಸಿನಿಮಾಗಳು ಬೇಕಾಗಿದೆ. ಅಲ್ಲಿನ ಪ್ರೇಕ್ಷಕರು ಇಲ್ಲಿನ ಮಾಸ್ – ಆಕ್ಷನ್ ಹೀರೋಗಳನ್ನು ಆರಾಧಿಸತೊಡಗಿದ್ದಾರೆ. ಮೊದಲು ದಕ್ಷಿಣದ ಸಿನಿಮಾಗಳ ಬಗ್ಗೆ ಮೂಗು ಮುರಿಯುತ್ತಿದ್ದ ಬಾಲಿವುಡ್‌ನವರೇ ಈಗ ಇಲ್ಲಿನ ತಂತ್ರಜ್ಞರೊಂದಿಗೆ ಕೆಲಸ ಮಾಡಲು ಹಾತೊರೆಯುತ್ತಿದ್ದಾರೆ. ಡಬ್ಬಿಂಗ್ ಗುಣಮಟ್ಟವೂ ಉತ್ಕೃಷ್ಟವಾಗಿದೆ. ಹಾಗಾಗಿ ಉತ್ತರ ಭಾರತವಷ್ಟೇ ಅಲ್ಲ ದಕ್ಷಿಣದಲ್ಲೂ ಸಿನಿಮಾಗೆ ಭಾಷೆಯ ತೊಡಕಿಲ್ಲ. ಒಟ್ಟಿನಲ್ಲಿ PAN ಇಂಡಿಯಾ ಮಾದರಿ ಚಿತ್ರಗಳೀಗ ಭಾರತೀಯ ಸಿನಿಮಾ ಎಂದೇ ಕರೆಸಿಕೊಂಡು ತೆರೆಕಾಣುತ್ತಿವೆ. ವಿವಿಧ ಕಾರಣಗಳಿಗಾಗಿ 2025ರಲ್ಲಿ ಭಾರತದ ಪ್ರೇಕ್ಷಕರನ್ನು ಸೆಳೆಯಬಹುದಾದ ದಕ್ಷಿಣದ ಸಿನಿಮಾಗಳಿವು…
ಗೇಮ್ ಚೇಂಜರ್ | ರಾಮ್ ಚರಣ್ ಅವರ ಮೊದಲ PAN ಇಂಡಿಯಾ ತೆಲುಗು ಚಿತ್ರವಿದು. ಎಸ್ ಶಂಕರ್ ನಿರ್ದೇಶನದ ಈ ಸಿನಿಮಾದ ನಾಯಕನಟಿ ಕೈರಾ ಅಡ್ವಾನಿ. ದಿಲ್ ರಾಜು ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್‌ನ ಟೀಸರ್ ಸಿನಿಪ್ರಿಯರಲ್ಲಿ ಅಪಾರ ಕುತೂಹಲ ಮೂಡಿಸಿದೆ. 2025ರ ಮೊದಲ ದೊಡ್ಡ ಚಿತ್ರವಾಗಿ ಈ ಸಿನಿಮಾ ತೆರೆಕಾಣಲಿದೆ.
ಥಂಡೇಲ್ | ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ತೆಲುಗು ಆಕ್ಷನ್ – ಡ್ರಾಮಾ 2025ರ ಫೆಬ್ರವರಿ 7ರಂದು ತೆರೆಗೆ ಬರುತ್ತಿದೆ. ಟಾಲಿವುಡ್‌ನ ಪ್ರತಿಷ್ಠಿತ ಗೀತಾ ಆರ್ಟ್ಸ್ ನಿರ್ಮಾಣದ ಈ ಚಿತ್ರವನ್ನು ಚಂದೂ ಮಂಡೇಟಿ ನಿರ್ದೇಶಿಸಿದ್ದಾರೆ. ಸಮುದ್ರದ ಮೀನುಗಾರನೊಬ್ಬ ಪಾಕಿಸ್ತಾನದ ಸೈನಿಕರಿಗೆ ಸೆರೆಯಾಗುವುದು, ಆತನ ಪ್ರೀತಿ, ಅವನು ಮರಳಿ ತಾಯ್ನಾಡು ಸೇರುವುದು ಹೇಗೆ ಎನ್ನುವುದರ ಸುತ್ತ ಹೆಣೆದ ಕಥಾನಕ.
ಲೂಸಿಫರ್ 2 | 2019ರ ಯಶಸ್ವೀ ಮಲಯಾಳಂ ಸಿನಿಮಾ ‘ಲೂಸಿಫರ್’ ಸರಣಿಯಿದು. ಜನಪ್ರಿಯ ಹೀರೋಗಳಾದ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮತ್ತೆ ಇಲ್ಲಿ ಜೊತೆಯಾಗುತ್ತಿದ್ದಾರೆ. ‘ಲೂಸಿಫರ್ 2’ ಸಿನಿಮಾದಲ್ಲಿ ಮೊದಲ ಚಿತ್ರದಲ್ಲಿ ರಿವೀಲ್ ಆಗಿದ್ದ ಖುರೇಶಿ ಅಬ್ರಹಾಮ್ ಪಾತ್ರವನ್ನು ಸೆಕೆಂಡ್ ಪಾರ್ಟ್‌ನಲ್ಲಿ ಹೇಳಲಾಗುತ್ತಿದೆ. ಮಾರ್ಚ್ 27ರಂದು ಸಿನಿಮಾ ರಿಲೀಸ್ ಆಗಲಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮಂಜು ವಾರಿಯರ್, ಟೊವಿನೊ ಥಾಮಸ್, ಇಂದ್ರಜಿತ್ ಸುಕುಮಾರನ್ ನಟಿಸಿದ್ದಾರೆ.
ಕಾಂತಾರ : ಚಾಪ್ಟರ್ 1 | 2022ರ ಬ್ಲಾಕ್ ಬಸ್ಟರ್ ‘ಕಾಂತಾರ’ ಕನ್ನಡ ಸಿನಿಮಾದ ಪ್ರೀಕ್ವೆಲ್ ಇದು. ‘ಕಾಂತಾರ’ ಸಿನಿಮಾದ ಉತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಅವರ ಈ ಪ್ರಿಕ್ವೆಲ್ ಬಗ್ಗೆ ದೊಡ್ಡ ನಿರೀಕ್ಷೆಯಿದೆ. ರಿಷಬ್ ಇಲ್ಲಿ ಪಂಜುರ್ಲಿ ದೈವದ ಕತೆ ಹೇಳಲಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ 2025ರ ಅಕ್ಟೋಬರ್ 2ರಂದು ಥಿಯೇಟರ್‌ಗೆ ಬರಲಿದೆ.
ಇಂಡಿಯನ್ 3 | ಶಂಕರ್ ನಿರ್ದೇಶನದಲ್ಲಿ ಕಮಲ ಹಾಸನ್ ನಟಿಸಿರುವ ಬಹುನಿರೀಕ್ಷಿತ ತಮಿಳು ಸಿನಿಮಾ. ಈ ಜೋಡಿಯಲ್ಲಿ ತೆರೆಕಂಡ ‘ಇಂಡಿಯನ್’ ಭಾರಿ ಯಶಸ್ಸು ಕಂಡಿತ್ತು. 2024ರಲ್ಲಿ ತೆರೆಕಂಡಿದ್ದ ‘ಇಂಡಿಯನ್ 2’ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತ್ತು. ಹಾಗಾಗಿ ಪ್ರೇಕ್ಷಕರು ‘ಇಂಡಿಯನ್ 3’ ಚಿತ್ರವನ್ನು ಹೇಗೆ ರಿಸೀವ್ ಮಾಡಿಕೊಳ್ಳಬಹುದು ಎನ್ನುವ ಕುತೂಹಲವಿದೆ. ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಕಮಲ ಹಾಸನ್ ಅಭಿನಯದ ಮತ್ತೊಂದು ನಿರೀಕ್ಷಿತ ತಮಿಳು ಸಿನಿಮಾ. ಬಹಳ ವರ್ಷಗಳ ನಂತರ ಈ ಚಿತ್ರದ ಮೂಲಕ ಮಣಿರತ್ನ – ಕಮಲ್ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ.
ಸಲಾರ್ 2 | ‘KGF’ ಸರಣಿ ಸಿನಿಮಾಗಳ ಮೂಲಕ ದೊಡ್ಡ ಸಂಚಲನ ಸೃಷ್ಟಿಸಿದ್ದ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ 2’ ತೆಲುಗು ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆಯಿದೆ. 2023ರಲ್ಲಿ ತೆರೆಕಂಡಿದ್ದ ‘ಸಲಾರ್’ Part1 ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಭಾಸ್ ಮತ್ತು ಪೃಥ್ವಿರಾಜ್ ಜೋಡಿಯ ಸರಣಿ ಸಿನಿಮಾ ಖಂಡಿತ ಪ್ರೇಕ್ಷಕರ ನಿರೀಕ್ಷೆ ಹುಸಿಮಾಡದು ಎಂದಿದ್ದಾರೆ ಪ್ರಶಾಂತ್ ನೀಲ್. ಈ ತೆಲುಗು ಸಿನಿಮಾ 2025ರ ಕೊನೆಯಲ್ಲಿ ತೆರೆಗೆ ಬರಬಹುದು.
ಸರ್ದಾರ್ 2 | 2022ರಲ್ಲಿ ತೆರೆಕಂಡ ಕಾರ್ತಿ ನಟನೆಯ ಸ್ಪೈ ಆಕ್ಷನ್ – ಥ್ರಿಲ್ಲರ್ ತಮಿಳು ಸಿನಿಮಾ ‘ಸರ್ದಾರ್’ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪಿ ಎಸ್ ಮಿತ್ರನ್ ನಿರ್ದೇಶನದ ಈ ಸಿನಿಮಾದ ಸರಣಿ 2025ರಲ್ಲಿ ತೆರೆಕಾಣಲಿದೆ. ಪ್ರತಿಭಾವಂತ ನಟ ಎಸ್ ಜೆ ಸೂರ್ಯ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕ ಮೋಹನನ್, ಆಶಿಕಾ ರಂಗನಾಥ್, ರಜಿಷಾ ವಿಜಯನ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
KD | ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿರುವ ‘KD’ ಕನ್ನಡದಿಂದ ಬರುತ್ತಿರುವ PAN ಇಂಡಿಯಾ ಸಿನಿಮಾ. 2024ರಲ್ಲಿ ತೆರೆಗೆ ಬಂದಿದ್ದ ಧ್ರುವ ಅವರ ‘ಮಾರ್ಟಿನ್’ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿತ್ತು. ಹಾಗಾಗಿ ಧ್ರುವ ಅಭಿಮಾನಿಗಳು ‘KD’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ಸುಪ್ರೀತ್ ನಿರ್ಮಾಣದ ಈ ಆಕ್ಷನ್ ಎಂಟರ್‌ಟೇನರ್ 2025ರಲ್ಲಿ ಥಿಯೇಟರ್‌ಗೆ ಬರಲಿದೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಬಾಲಿವುಡ್‌ನ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಚಿತ್ರದ ಇತರೆ ಪ್ರಮುಖ ಕಲಾವಿದರು.
ಘಾಟಿ | ‘ಅರುಂಧತಿ’, ‘ಬಾಹುಬಲಿ’ ಸರಣಿ ಸಿನಿಮಾಗಳ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರ ‘ಘಾಟಿ’, 2025ರ ಬಹುನಿರೀಕ್ಷಿತ ಟಾಲಿವುಡ್ ಸಿನಿಮಾಗಳಲ್ಲೊಂದು. ನಾಯಕಿ ಪ್ರಧಾನ ಸಿನಿಮಾ PAN ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಮತ್ತೆ ಜನಪ್ರಿಯತೆ ಪಡೆಯಲಿದ್ದಾರೆ ಎನ್ನುವುದು ಟಾಲಿವುಡ್ ಸಿನಿ ವಿಶ್ಲೇಷಕರ ಹೇಳಿಕೆ. ಕ್ರಿಷ್ ಜಗರ್ಲಮುಡಿ ನಿರ್ದೇಶನದ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿಬಾಬು ಜಗರ್ಲಮುಡಿ ನಿರ್ಮಿಸಿದ್ದಾರೆ.
ಬೈಸನ್ | ಖ್ಯಾತ ತಮಿಳು ನಟ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ನಟನೆಯ ‘ಬೈಸನ್’ ತಮಿಳು ಸಿನಿಮಾ ಬಗ್ಗೆ ಸಿನಿಪ್ರಿಯರು ಭರವಸೆ ಹೊಂದಿದ್ದಾರೆ. ಅಪರೂಪದ ಸಿನಿಮಾಗಳ ಮೂಲಕ ಭಾರತದ ಸಿನಿಪ್ರಿಯರ ಗಮನಸೆಳೆದಿರುವ ಮಾರಿ ಸೆಲ್ವರಾಜ್ ನಿರ್ದೇಶನದ sports – drama ಇದು.
ಗೂಢಾಚಾರಿ 2 | 2018ರಲ್ಲಿ ತೆರೆಕಂಡ ಅಡವಿ ಶೇಷ್ ನಟನೆಯ ‘ಗೂಢಾಚಾರಿ’ ತೆಲುಗು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ವಿನಯ್ ಕುಮಾರ್ ನಿರ್ದೇಶನದ ಸ್ಪೈ – ಥ್ರಿಲ್ಲರ್‌ನ ಸರಣಿ ಸಿದ್ಧವಾಗಿದ್ದು, 2025ರಲ್ಲಿ ಬಿಡುಗಡೆಯಾಗಲಿದೆ.
ಅಖಂಡ 2 | ಕಮರ್ಷಿಯಲ್ ಸಿನಿಮಾಗಳನ್ನು ಸೊಗಸಾಗಿ ನಿರೂಪಿಸುವ ಬೊಯಪಾಟಿ ಶ್ರೀನು ನಿರ್ದೇಶನದ ‘ಅಖಂಡ’ ತೆಲುಗು ಸಿನಿಮಾ ಯಶಸ್ಸು ಕಂಡಿತ್ತು. ನಂದಮೂರಿ ಬಾಲಕೃಷ್ಣ ಅವರು ಚಿತ್ರದಲ್ಲಿ ಮಿಂಚಿದ್ದರು. ಇದೀಗ ಈ ಚಿತ್ರದ ಸರಣಿ ‘ಅಖಂಡ 2’ ಸಿದ್ಧವಾಗಿದೆ. ಬಾಲಕೃಷ್ಣ ಅವರಿಗೆ ನಾಯಕಿಯಾಗಿ ಪ್ರಜ್ಞಾ ಜಸ್ವಾಲ್ ಇದ್ದಾರೆ. ರಾಮ್ ಅಚಂತ ಮತ್ತು ಗೋಪಿ ಅಚಂತ ನಿರ್ಮಾಣದ ಸಿನಿಮಾ ದುಬಾರಿ ಬಜೆಟ್‌ನಲ್ಲಿ ತಯಾರಾಗಿದೆ ಎನ್ನಲಾಗಿದೆ. ಬಾಲಕೃಷ್ಣರ ಈ ಸಿನಿಮಾ PAN ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.