ದೇಶದಲ್ಲಿ ಕೊರೋನ ಹಾವಳಿ ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ, ನಮ್ಮ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯರ ಈ ಪರಿಶ್ರಮವನ್ನು ಸ್ಮರಿಸುವ ಮತ್ತು ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೂ ಇದೇ ಸಂದರ್ಭದಲ್ಲಿ ಬಂದಿರುವುದು, ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಇಂದು ಜುಲೈ 1, ರಾಷ್ಟ್ರೀಯ ವೈದ್ಯರ ದಿನ ಅರ್ಥಾತ್ ಡಾಕ್ಟರ್ಸ್ ಡೇ.  1991ರಿಂದ ಭಾರತದಲ್ಲಿ ವೈದ್ಯರ ದಿನಾಚರಣೆ ಆರಂಭಿಸಲಾಯಿತು. ‘Lessen the mortality of COVID19’ ಅಂದರೆ ‘ಕೋವಿಡ್ 19ರಿಂದ ಉಂಟಾಗುವ ಸಾವಿನ ಸಂಖ್ಯೆ ತಗ್ಗಿಸೋಣ’ ಅನ್ನುವುದು ಈ ಬಾರಿ ವೈದ್ಯರ ದಿನಾಚರಣೆ ಸಂದರ್ಭಕ್ಕೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(IMA) ರೂಪಿಸಿರುವ ಧ್ಯೇಯ ವಾಕ್ಯ.

ನಮಗೆಲ್ಲರಿಗೂ ಎದುರಾಗುವ ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಸಮಸ್ಯೆಗಳಿಂದ ವೈದ್ಯರು ನಮ್ಮನ್ನು ರಕ್ಷಿಸುತ್ತಾರೆ. ನಮ್ಮ ಬದುಕಿನ ಗುಣಮಟ್ಟ ಹೆಚ್ಚಿಸಿಕೊಂಡು, ಆನಂದದಿಂದ ಬದುಕಲು ನೆರವಾಗುತ್ತಾರೆ. ಇಂಥ ವೈದ್ಯರ ಸೇವೆಯನ್ನು ಸ್ಮರಿಸುವ ಮತ್ತು ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೇ ರಾಷ್ಟ್ರೀಯ ವೈದ್ಯರ ದಿನ.

ನಾವು ಆಚರಿಸುವ ಎಲ್ಲ ವಿಶೇಷ ದಿನಗಳಿಗೂ ಒಂದು ಮಹತ್ವ ಅಥವ ಹಿನ್ನೆಲೆ ಇದ್ದೇ ಇರುತ್ತದೆ. ಅದೇರೀತಿ, ರಾಷ್ಟ್ರೀಯ ವೈದ್ಯರ ದಿನದ ಹಿಂದೆಯೂ ಒಂದು ವಿಶೇಷ ಕಾರಣವಿದೆ. ಜುಲೈ ಒಂದನೇ ತಾರೀಖು, ಆಧುನಿಕ ಭಾರತೀಯ ವೈದ್ಯಲೋಕದ ಧನ್ವಂತ್ರಿ ಎಂದೇ ಕರೆಯಲ್ಪಡುವ ಭಾರತ ರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನ. ವೈದ್ಯರಾಗಿ ಮಹತ್ ಸಾಧನೆ ಮಾಡಿದ ಈ ಮಹಾನುಭಾವರನ್ನು ನೆನಪಿಸಿಕೊಳ್ಳುವ ಮತ್ತು ಆ ಮೂಲಕ ಇಡೀ ವೈದ್ಯ ಸಮುದಾಯದ ಸೇವೆಯನ್ನು ಸ್ಮರಿಸಿ, ಗೌರವಿಸುವ ಉದ್ದೇಶದಿಂದ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರದ ದಂತಕತೆ ಎಂದೇ ಹೆಸರಾಗಿರುವ ರತ್ನ ಡಾ.ಬಿದನ್ ಚಂದ್ರ ರಾಯ್ ಅವರು, 1882ರ ಜುಲೈ 1 ರಂದು ಬಿಹಾರದ ಪಾಟ್ನಾ ನಗರದಲ್ಲಿ ಹುಟ್ಟಿದರು. ಮೂಲತಃ ಬಂಗಾಳದವರಾಗಿದ್ದ ಇವರ ಕುಟುಂಬ, ವೃತ್ತಿಯ ಕಾರಣದಿಂದಾಗಿ ಅಲ್ಲಿ ನೆಲೆಸಿತ್ತು. ಪಾಟ್ನಾದಲ್ಲೇ ಶಿಕ್ಷಣ ಆರಂಭಿಸಿದ ಬಿ.ಸಿ.ರಾಯ್, ಪಾಟ್ನಾ ಕಾಲೇಜಿನಿಂದ ಗಣಿತ ವಿಭಾಗದಲ್ಲಿ ಬಿ.ಎ ಆನರ್ಸ್ ಪದವಿ ಪಡೆದರು. 

ಆ ಬಳಿಕ, ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶದಿಂದ 1901ರಲ್ಲಿ ಕೊಲ್ಕತ್ತಾ ಮೆಡಿಕಲ್ ಕಾಲೇಜು ಸೇರಿದರು. ಅದೇ ಸಂದರ್ಭದಲ್ಲಿ, ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಯುವಕ ರಾಯ್ ಅವರಲ್ಲಿ, ತಾನೂ ಕೂಡ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಅನ್ನುವ ತುಡಿತ ಆರಂಭವಾಗಿತ್ತು. ಹೀಗಿದ್ದರೂ, ವೈದ್ಯಕೀಯ ಅಧ್ಯಯನ ಮುಗಿಸಿ ಅದರ ಮೂಲಕವೇ ದೇಶಸೇವೆ ಮಾಡುವುದು ಉತ್ತಮ ಎಂದು ರಾಯ್ ಭಾವಿಸಿದರು. ಆರೋಗ್ಯವಂತ ಭಾರತೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಹೆಚ್ಚು ಶಕ್ತರಾಗಿರುತ್ತಾರೆ ಅನ್ನುವುದು ರಾಯ್ ಅವರ ಚಿಂತನೆಯಾಗಿತ್ತು.

ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ ಡಾ.ರಾಯ್, ಇಂಗ್ಲೆಂಡಿಗೆ ತೆರಳಿ ಅಲ್ಲಿನ ಪ್ರಸಿದ್ಧ ಸೆಂಟ್ ಬಾರ್ತೊಲೋಮಿಯೊ ಆಸ್ಪತ್ರೆಯಿಂದ (St Bartholomew’s Hospital, London) ಸ್ನಾತಕೋತ್ತರ ಪದವಿ ಪಡೆದರು. ಆ ಬಳಿಕ 1911ರಲ್ಲಿ ಭಾರತಕ್ಕೆ ಹಿಂದಿರುಗಿದ ಡಾ.ರಾಯ್, ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ, ಪ್ರತಿನಿತ್ಯವೂ ಹತ್ತಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. 

1923ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಡಾ.ಬಿದನ್ ಚಂದ್ರ ರಾಯ್, ಬಂಗಾಳ ವಿಧಾನ ಪರಿಷತ್ ಸದಸ್ಯರಾದರು. ಆ ಬಳಿಕ ಗಾಂಧೀಜಿಯವರ ನಿಕಟ ಸಂಪರ್ಕಕ್ಕೆ ಬಂದ ಡಾ.ರಾಯ್, ಮಹಾತ್ಮನ ಆರೋಗ್ಯ ಪಾಲಕರಾದರು. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ರಾಯ್ ಅವರು, 1925ರಲ್ಲೇ ಹೂಗ್ಲಿ ನದಿ ಮಾಲಿನ್ಯ ತಡೆಗೆ ಹೋರಾಟ ಆರಂಭಿಸಿದ್ದರು.(ಇದಾಗಿ ಸುಮಾರು 100 ವರ್ಷಗಳೇ ಕಳೆದಿದ್ದರೂ ಕೂಡ, ಗಂಗಾ ನದಿ ಮಾಲಿನ್ಯದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅನ್ನುವುದು ಕಹಿ ಸತ್ಯ).

ಡಾ. ಬಿ.ಸಿ. ರಾಯ್ 1931 ರಿಂದ 1933ರ ವರೆಗೆ ಕೊಲ್ಕತ್ತಾದ ಮೇಯರ್ ಆಗಿ ಸೇವೆ ಸಲ್ಲಿಸಿದರು. ನಗರದ ಜನತೆಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ನೀರು, ವಿದ್ಯುತ್ ದೀಪ, ರಸ್ತೆ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡರು. ಆ ಬಳಿಕ, 1939ರಲ್ಲಿ Medical Council of India ದ ಅಧ್ಯಕ್ಷರಾದ ಡಾ.ಬಿದನ್ ಚಂದ್ರ ರಾಯ್, 1942ರಿಂದ 1944ರವರೆಗೆ ಕೊಲ್ಕತ್ತಾ ವಿ.ವಿಯ ಉಪ ಕುಲಪತಿಗಳಾಗಿದ್ದರು. 1947ರಲ್ಲಿ ಡಾ. ರಾಯ್ ಅವರನ್ನು, ಆಗಿನ ಸಂಯುಕ್ತ ಪ್ರಾಂತ್ಯದ (ಈಗಿನ ಉತ್ತರ ಪ್ರದೇಶ) ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. 

ಸಕ್ರಿಯ ರಾಜಕಾರಣದಿಂದ ದೂರವಿರಲು ನಿರ್ಧರಿಸಿದ್ದ ಡಾ.ರಾಯ್ ಅವರು, ತಮ್ಮ ಸೇವಾವೃತ್ತಿಯ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದರು. ಆದರೆ, ಅವರ ಮನವೊಲಿಸಿದ ಗಾಂಧೀಜಿ, ರಾಯ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳುವಂತೆ ಮಾಡಿದರು. 1948ರ ಜನವರಿ 23ರಂದು ಡಾ. ಬಿ.ಸಿ.ರಾಯ್ ಅವರು, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡರು. ದೇಶ ವಿಭಜನೆ ಬಳಿಕ ಉಂಟಾಗಿದ್ದ ನಿರಾಶ್ರಿತರ ಸಮಸ್ಯೆ, ಘರ್ಷಣೆ ಮತ್ತು ಹಿಂಸಾಚಾರವನ್ನು ನಿಯಂತ್ರಣಕ್ಕೆ ತಂದ ಡಾ.ಬಿ.ಸಿ.ರಾಯ್, ಶಾಂತಿ ಸ್ಥಾಪಿಸಲು ಶ್ರಮಿಸಿದರು. ಸುಮಾರು 14 ವರ್ಷಗಳಷ್ಟು ದೀರ್ಘಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಡುವು ಮಾಡಿಕೊಳ್ಳುತ್ತಿದ್ದ ಡಾ.ರಾಯ್, ಇಡೀ ವೈದ್ಯ ಲೋಕಕ್ಕೆ ಆದರ್ಶ. 

ಶ್ರೇಷ್ಠ ವೈದ್ಯರಾಗಿದ್ದ ಡಾ.ರಾಯ್ ಅವರ ಜನಪ್ರಿಯತೆ ಹೇಗಿತ್ತೆಂದರೆ, ‘ಅವರು ಯಾವುದಾದರೂ ಒಂದು ಊರಿಗೆ ಬರುತ್ತಿದ್ದಾರೆ ಅಥವ ರೈಲ್ವೇ ನಿಲ್ದಾಣದಲ್ಲಿ ಇಳಿಯುತ್ತಾರೆಂಬ ಸುದ್ದಿ ಕೇಳಿದರೆ ಸಾಕು, ಅವರಿಂದ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡು ಸಲಹೆ ಪಡೆಯುವುದಕ್ಕಾಗಿ ನೂರಾರು ಜನ ಅಲ್ಲಿ ಸೇರುತ್ತಿದ್ದರು’ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಉಲ್ಲೇಖಿಸಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ರೂಪಿಸಲು ಅವಿರತವಾಗಿ ಶ್ರಮಿಸಿದ ಡಾ.ರಾಯ್, ಬಂಗಾಳದಲ್ಲಿ ಜಾಧವ್ ಪುರ ಟಿ.ಬಿ ಆಸ್ಪತ್ರೆ, ಕಮಲಾ ನೆಹರು ಸ್ಮಾರಕ ಆಸ್ಪತ್ರೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ, ಮಕ್ಕಳು ಮತ್ತು ಮಹಿಳೆಯರಿಗಾಗಿ ಚಿತ್ತರಂಜನ್ ಸೇವಾ ಸದನ ಇತ್ಯಾದಿ ಹಲವಾರು ವೈದ್ಯಕೀಯ ಸಂಸ್ಥೆಗಳ ಆರಂಭಕ್ಕೆ ಕಾರಣರಾದರು. 

ಬಡವರಿಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸುವ ಸಲುವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಿದರು.

ಭಾರತೀಯ ಸಿನೆಮಾ ಜಗತ್ತಿನ ದಂತಕತೆ ಸತ್ಯಜಿತ್ ರೇ ಅವರು, 1955ರಲ್ಲಿ ತಮ್ಮ ಮೊದಲ ಸಿನೆಮಾ ‘ಪಥೇರ್ ಪಾಂಚಾಲಿ’ ನಿರ್ಮಾಣಕ್ಕೆ ಹಣವಿಲ್ಲದೆ ಪರದಾಡುತ್ತಿದ್ದಾಗಲೂ ಅವರ ನೆರವಿಗೆ ಬಂದವರು ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್. ಇದರ ಜೊತೆಗೆ, ಪ್ರಧಾನಿ ನೆಹರು ಅವರಿಗಾಗಿ, ಆ ಸಿನೆಮಾದ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದರಂತೆ.

ಡಾ.ಬಿ.ಸಿ.ರಾಯ್ ಅವರ ಪ್ರಸಿದ್ಧಿ ಅಮೆರಿಕದವರೆಗೂ ವಿಸ್ತರಿಸಿತ್ತು. 1961ರಲ್ಲಿ ರಾಯ್ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ, ತಮ್ಮ ಬೆನ್ನುನೋವಿನ ಪರಿಹಾರಕ್ಕಾಗಿ ಡಾ. ರಾಯ್ ಅವರಿಂದ ಸಲಹೆ ಪಡೆದಿದ್ದರು. ಆ ಸಂದರ್ಭದಲ್ಲಿ, ಕೆನಡಿ, ನಾನು ಡಾ.ರಾಯ್ ಅವರಷ್ಟು ಚೈತನ್ಯಶೀಲನಾಗಿದ್ದರೆ ಚೆನ್ನಾಗಿತ್ತು ಎಂದಿದ್ದರಂತೆ.( ಆಗ ಕೆನಡಿ ಅವರ ವಯಸ್ಸು44 ಮತ್ತು ಡಾ.ರಾಯ್ ಅವರಿಗೆ 79)

1962ರಲ್ಲಿ ಪ್ರಧಾನಿ ನೆಹರು ಅನಾರೋಗ್ಯ ಪೀಡಿತರಾಗಿದ್ದಾಗ ವಿಶ್ರಾಂತಿ ಪಡೆಯಲು ವೈದ್ಯರು ಮಾಡಿದ್ದ ಸಲಹೆ ಒಪ್ಪಿರಲಿಲ್ಲ. ಆಗಲೂ ಕೊಲ್ಕತ್ತಾದಿಂದ ಆಗಮಿಸಿದ ಡಾ.ರಾಯ್ ಅವರು, ನೀವು ವೈದ್ಯರ ಸಲಹೆ ಪಾಲನೆ ಮಾಡಲೇಬೇಕು ಎಂದು ನೆಹರು ಅವರಿಗೆ ಆಜ್ಞೆ! ಮಾಡಿದ್ದರಂತೆ. ಅಂತಹ ಎತ್ತರದ ವ್ಯಕ್ತಿತ್ವ ರಾಯ್ ಅವರದ್ದಾಗಿತ್ತು.

ವೈದ್ಯಕೀಯ ಕ್ಷೇತ್ರದ ಮಹಾನ್ ಸಾಧಕನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಹಾಗೂ ಸಮರ್ಥ ಆಡಳಿತಗಾರನಾಗಿ ದೇಶಕ್ಕೆ ಸೇವೆ ಸಲ್ಲಿಸಿದ ಡಾ.ಬಿ.ಸಿ.ರಾಯ್ ಅವರಿಗೆ 1961ರಲ್ಲಿ ಭಾರತ ರತ್ನ ಪ್ರಶಸ್ತಿಯಿತ್ತು ಗೌರವಿಸಲಾಯಿತು.

ಬದುಕಿನ ಕಡೆಯ ದಿನದವರೆಗೂ ದೇಶ ಸೇವೆಯಲ್ಲಿ ನಿರತರಾಗಿದ್ದ ಡಾ.ರಾಯ್ ಅವರು, 1962ನೇ ಇಸವಿಯ ಜುಲೈ 1ರಂದು, ತಾವು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ದೈವಾಧೀನರಾದರು, ಅದು ಅವರ ಜನ್ಮ ದಿನವೂ ಆಗಿತ್ತು ಅನ್ನುವುದು, ಆ ದಿನದ ಮತ್ತೊಂದು ವಿಶೇಷ.

‘ತಮ್ಮ ಕೌಶಲ್ಯ ಮತ್ತು ಮಾನವೀಯತೆಯನ್ನು ಒಂದುಗೂಡಿಸಿಕೊಂಡು, ಇತರರ ಆರೋಗ್ಯಕ್ಕಾಗಿ ಶ್ರಮಿಸುವವರು ಈ ಭೂಮಿಯಲ್ಲೇ ಶ್ರೇಷ್ಠರು. ಜೀವರಕ್ಷಣೆ ಮತ್ತು ಮರುಚೈತನ್ಯ ನೀಡುವಿಕೆಯು, ಒಂದು ಜೀವದ ಸೃಷ್ಟಿಯಷ್ಟೇ ಉದಾತ್ತ ಕಾರ್ಯವಾಗಿರುವುದರಿಂದ, ಅಂತಹವರು ದೈವತ್ವವನ್ನೂ ಪಡೆಯುತ್ತಾರೆ’

(“Men who are occupied in the restoration of health to other men, by the joint exertion of skill and humanity, are above all the great of the earth. They even partake of divinity, since to preserve and renew is almost as noble as to create.”- Voltaire)

ಎನ್ನುವ ಫ್ರೆಂಚ್ ತತ್ವಜ್ಞಾನಿ ವೋಲ್ಟೈರ್ ಮಾತಿಗೆ ಉದಾರಣೆಯಂತೆ ಸಮಾಜಕ್ಕೆ ಸೇವೆ ಸಲ್ಲಿಸಿದವರು ಡಾ.ಬಿದನ್ ಚಂದ್ರ ರಾಯ್. ಇಂತಹವರ ಸ್ಮರಣೆ ಜೊತೆಗೆ, ತಮ್ಮ ವೈಯಕ್ತಿಕ ಬದುಕು ಹಾಗೂ ಆರೋಗ್ಯವನ್ನೂ ಲೆಕ್ಕಿಸದೆ ನಮಗಾಗಿ ಶ್ರಮಿಸುತ್ತಿರುವ ಸಮಸ್ತ ವೈದ್ಯ ಪರಿವಾರಕ್ಕೆ ಜುಲೈ 1ರ ಈ ಸುದಿನ ನಾವೆಲ್ಲರೂ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸೋಣ.

LEAVE A REPLY

Connect with

Please enter your comment!
Please enter your name here