ಬ್ಲೆಸ್ಸಿ ನಿರ್ದೇಶನದ ಬಹುನಿರೀಕ್ಷಿತ ‘ಆಡುಜೀವಿತಂ’ ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೇರಳ ಮೂಲದ ಸಾಮಾನ್ಯ ವಲಸಿಗ ನಜೀಬ್ ಮೊಹಮ್ಮದ್ ಜೀವನ ಆಧರಿಸಿದ ಕತೆಯಿದು. ಇದೇ ಮಾರ್ಚ್ 28ರಂದು ಸಿನಿಮಾ ತೆರೆಕಾಣಲಿದೆ.
ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಆಡುಜೀವಿತಂ’ (The Goat Life) ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕೇರಳದ ಹರಿಪದ್‌ನ ಸಾಮಾನ್ಯ ವಲಸಿಗ ನಜೀಬ್ ಮೊಹಮ್ಮದ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಆಡುಜೀವಿತಂ’ ಸಿನಿಮಾವು ಬೆನ್ಯಾಮಿನ್ ಅವರ ಅದೇ ಹೆಸರಿನ ಪುಸ್ತಕದ ರೂಪಾಂತರ. ಇದು 1990ರಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿದ್ದು. ಈ ಚಲನಚಿತ್ರವು ಸೌದಿ ಅರೇಬಿಯಾದ ಮರಳುಗಾಡಿನಲ್ಲಿ ಸಿಲುಕಿ ಮತ್ತೆ ಬದುಕಿ ಬಂದ ವಲಸೆ ಕಾರ್ಮಿಕ ನಜೀಬ್ ಮೊಹಮ್ಮದ್ ಸುತ್ತ ಸುತ್ತುತ್ತದೆ. ಸೌದಿ ಅರೇಬಿಯಾದಿಂದ ಅವನು ಹೇಗೆ ತಪ್ಪಿಸಿಕೊಂಡ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆಯ ನಂತರ ನಟ ಪ್ರಭಾಸ್ ತಮ್ಮ Instagram ಸ್ಟೋರಿಯಲ್ಲಿ, ‘ನನ್ನ ಸಹೋದರ ಪೃಥ್ವಿರಾಜ್ ಟ್ರೇಲರ್‌ನಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. ವರದರಾಜ ಮನ್ನಾರ್ ಪಾತ್ರ ಮಾಡಿದ್ದು ಇದೇ ವ್ಯಕ್ತಿ ಎಂದು ನಂಬಲಾಗುತ್ತಿಲ್ಲ. ಅಭಿನಂದನೆಗಳು ಸಹೋದರ. ‘ದಿ ಗೋಟ್ ಲೈಫ್’ ಚಿತ್ರಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಅಮಲಾ ಪೌಲ್, ತಾಲಿಬ್ ಅಲ್ ಬಲೂಶಿ, ಜಿಮ್ಮಿ ಜೀನ್-ಲೂಯಿಸ್, ರಿಕ್ ಅಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ರೆಸೂಲ್ ಪೂಕ್ಕುಟ್ಟಿ ಅವರ ಧ್ವನಿ ವಿನ್ಯಾಸವಿದೆ. ಸುನಿಲ್ ಕೆ ಎಸ್ ಛಾಯಾಗ್ರಹಣ ಮಾಡಿದ್ದು, ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾ ಮಾರ್ಚ್ 28ರಂದು ಮೂಲ ಮಲಯಾಳಂ ಸೇರಿದಂತೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಅರೆಬಿಕ್ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.