ಸೆನ್ನಾ ಹೆಗಡೆ ಅವರು ಅವರ ಹಿಂದಿನ ಚಿತ್ರಗಳಿಂದಲೂ ತಮ್ಮ ವಿಡಂಬನೆಗೆ, ಹಾಸ್ಯಕ್ಕೆ, ಚುರುಕು ನಿರೂಪಣೆಗೆ ಹೆಸರುವಾಸಿ. ಬಹಳ ಸಾಧಾರಣವಾದ ಕಥೆ ಅಥವಾ ಘಟನೆಯನ್ನು ತೆಗೆದುಕೊಂಡು ಅದಕ್ಕೆ ತಿಳಿಹಾಸ್ಯ ಲೇಪಿಸಿ ಆಸಕ್ತಿಕರವಾಗಿ ಕಥೆ ಹೇಳುವುದರಲ್ಲಿ ಎತ್ತಿದ ಕೈ ಅವರದ್ದು. ಮನುಷ್ಯರ ನಿತ್ಯ ನಡವಳಿಕೆಗಳು, ಗುಣಗಳು ಇವುಗಳನ್ನೇ ಸ್ವಾರಸ್ಯವಾಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ‘ಪದ್ಮಿನಿ’ Netflixನಲ್ಲಿ stream ಆಗುತ್ತಿದೆ.

‘ದಿನಕಳಚ್ಚ ನಿಶ್ಚಯಂ’ ಖ್ಯಾತಿಯ ನಿರ್ದೇಶಕ ಸೆನ್ನಾ ಹೆಗ್ಡೆ ನಿರ್ದೇಶನದ ಮತ್ತೊಂದು ಸೃಜನಾತ್ಮಕ ಕೊಡುಗೆ ‘ಪದ್ಮಿನಿ’. ಸರಾಗವಾದ ಮತ್ತು ಸೃಜನಾತ್ಮಕವಾದ ಈ ಸಿನಿಮಾದಲ್ಲಿ ಕುಂಚಕೋ ಬೋಬಾನ್, ಅಪರ್ಣ ಬಾಲಮುರಳಿ ಮತ್ತು ಮಡೋನಾ ಸೆಬಾಸ್ಟಿಯನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕ ರಮೇಶನ್ ಸ್ಮೃತಿ ಎನ್ನುವ ಹುಡುಗಿಯೊಡನೆ ಮದುವೆಯಾಗುತ್ತಾನೆ. ಅವರ ವಿವಾಹದ ಚಿತ್ರಣದೊಂದಿಗೆ ಸಿನಿಮಾ ಶುರುವಾಗುತ್ತದೆ. ಮದುವೆ ಮನೆಯಲ್ಲಿ ನಡೆಯುವ ಸಂಭಾಷಣೆ, ಕೋಲಾಹಲ, ಸಂಬಂಧಿಕರ ಮಾತುಗಳು ಎಲ್ಲವೂ ಹಿನ್ನೆಲೆಯಲ್ಲಿ ಬರುತ್ತಾ ಚಿತ್ರ ಶುರುವಾಗುತ್ತದೆ. ಚಿತ್ರದ ಧಾಟಿ ತಮಾಷೆಯಾಗಿದೆ. ಮೊದಲ ರಾತ್ರಿಯ ಸಲುಗೆಯ ಮತ್ತು ಪ್ರೀತಿಯ ನಿರೀಕ್ಷೆಯಲ್ಲಿ ಇರುವ ನಾಯಕನಿಗೆ ಅವನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗುವ ಮೂಲಕ ಶಾಕ್ ಕೊಡುತ್ತಾಳೆ. ಈ ಒಂದು ತಿರುವಿನ ಮೂಲಕ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ನಾಯಕಿಯ ಪ್ರಿಯಕರ ಪ್ರೀಮಿಯರ್ ಪದ್ಮಿನಿಯಲ್ಲಿ ತನ್ನ ಪ್ರೇಯಸಿಯನ್ನು ಓಡಿಸಿಕೊಂಡು ಹೋದ್ದರಿಂದ ನಾಯಕನಿಗೆ ಪದ್ಮಿನಿ ಎಂಬ ಹೆಸರೇ ಶಾಶ್ವತವಾಗಿ ಅಂಟಿಬಿಡುತ್ತದೆ. ಊರವರ ಕಣ್ಣಲ್ಲಿ ನಾಯಕ ಅನುಕಂಪಕ್ಕೂ, ಲೇವಡಿಗೂ ಈಡಾಗುತ್ತಾ ಒಂದು ರೀತಿ ಮುಜುಗರದಲ್ಲೇ ಇರುತ್ತಾನೆ.

ಪದ್ಮಿನಿ ಎನ್ನುವ ಹೆಸರಿನ ಬಗ್ಗೆಯೇ ಅವನಿಗೆ ಹೇಸಿಗೆ ಶುರುವಾಗುತ್ತದೆ. ಅದೇ ಸಮಯಕ್ಕೆ ರಮೇಶನ್ ಶಿಕ್ಷಕನಾಗಿ ಕೆಲಸ ಮಾಡುವ ಶಾಲೆಗೆ ಹೊಸ ಶಿಕ್ಷಕಿಯಾಗಿ ಪದ್ಮಿನಿ ಕೆಲಸಕ್ಕೆ ಸೇರುತ್ತಾಳೆ. ಇಲ್ಲಿಂದ ಮುಂದೆ ಕಥೆಯಲ್ಲಿ ಏನೇನಾಗುತ್ತದೆ, ಓಡಿ ಹೋದ ಹಳೆಯ ಹುಡುಗಿ ಏನಾದಳು ಎನ್ನುವುದು ಮುಂದಕ್ಕೆ ಮಜವಾದ ಲಘು ಹಾಸ್ಯದ ನಿರೂಪಣೆಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೆನ್ನಾ ಹೆಗಡೆ ಅವರು ಅವರ ಹಿಂದಿನ ಚಿತ್ರಗಳಿಂದಲೂ ತಮ್ಮ ವಿಡಂಬನೆಗೆ, ಹಾಸ್ಯಕ್ಕೆ, ಚುರುಕು ನಿರೂಪಣೆಗೆ ಹೆಸರುವಾಸಿ. ಬಹಳ ಸಾಧಾರಣವಾದ ಕಥೆ ಅಥವಾ ಘಟನೆಯನ್ನು ತೆಗೆದುಕೊಂಡು ಅದಕ್ಕೆ ತಿಳಿಹಾಸ್ಯ ಲೇಪಿಸಿ ಆಸಕ್ತಿಕರವಾಗಿ ಕಥೆ ಹೇಳುವುದರಲ್ಲಿ ಎತ್ತಿದ ಕೈ ಅವರದ್ದು. ಮನುಷ್ಯರ ನಿತ್ಯ ನಡವಳಿಕೆಗಳು, ಗುಣಗಳು ಇವುಗಳನ್ನೇ ಸ್ವಾರಸ್ಯವಾಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ.

ಈ ಚಿತ್ರದ ಹೈಲೈಟ್ ಎಂದರೆ ಅಪರ್ಣ ಬಾಲಮುರಳಿ ಅವರ ಅಭಿನಯ. ಚಿತ್ರದ ಎಲ್ಲ ಕಲಾವಿದರ ಅಭಿನಯವೂ ಅತ್ಯುತ್ತಮ ಆದರೂ ಅಪರ್ಣ ಅವರದ್ದು ಒಂದು ಕೈ ಮೇಲೆ. ಡಿವೋರ್ಸ್ ಲಾಯರ್ ಶ್ರೀದೇವಿ ಪಾತ್ರದಲ್ಲಿ ಅವರ ಒಂದೊಂದು ಭಾವಾಭಿವ್ಯಕ್ತಿಯೂ ಬಹಳ ಉತ್ತಮವಾಗಿ ಮೂಡಿಬಂದಿದೆ. ಜೊತೆಗೆ ಹಾಸ್ಯಲೇಪಿತ ಅಭಿನಯವನ್ನು ಕೂಡ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ನಾಯಕಿ ಮಡೋನಾ ಅವರ ಅಭಿನಯ ಕೂಡ ಬಹಳ ಆಹ್ಲಾದಕರವಾಗಿದೆ. ಶ್ರೀರಾಜ್ ರವೀಂದ್ರನ್ ಅವರ ಅದ್ಭುತವಾದ ಛಾಯಾಗ್ರಹಣ ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ. ಜೇಕ್ಸ್ ಬಿಜಯ್ ಅವರ ಸಂಗೀತ ಚಿತ್ರಕ್ಕೆ ಬಹಳ ಪೂರಕವಾಗಿದ್ದು ಚಿತ್ರವನ್ನು ವೀಕ್ಷಕರಿಗೆ ಮತ್ತೂ ಹತ್ತಿರ ಮಾಡುತ್ತದೆ.

ಒಟ್ಟಾರೆ ಹೇಳಬೇಕೆಂದರೆ ಪದ್ಮಿನಿ ಅಪ್ಪಟ ಮನರಂಜನೆಯ ಸುಂದರ ಕೌಟುಂಬಿಕ ಚಿತ್ರ. ನಾಯಕ ರಮೇಶನ್ ಪಾತ್ರ ನಗಿಸುತ್ತಲೇ ಮನಸ್ಸನ್ನು ಆವರಿಸಿಬಿಡುತ್ತದೆ. ವಿಷಯ ಸಾಧಾರಣವಾದರೂ ವಿಶೇಷವಾಗಿ ಹೇಗೆ ಹೇಳಬಹುದು, ವೀಕ್ಷಕರನ್ನು ಹೇಗೆ ಹಿಡಿದಿಡಬಹುದು ಎನ್ನುವುದನ್ನು ನಿರ್ದೇಶಕರು ಸಾಬೀತು ಮಾಡಿದ್ದಾರೆ. ಸಿನಿಮಾಕ್ಕೆ ನಿರ್ದೇಶನ ಮತ್ತು ಉತ್ತಮ ಬರವಣಿಗೆ ಎಷ್ಟು ಮುಖ್ಯ ಎನ್ನುವುದನ್ನು ಇಂತಹ ಸದಭಿರುಚಿಯ ಚಿತ್ರಗಳು ಕಾಲಕಾಲಕ್ಕೆ ತೋರಿಸಿಕೊಡುತ್ತಲೇ ಬಂದಿವೆ. ‘ಪದ್ಮಿನಿ’ Netflixನಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here