ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ನಾಯಕಿಯಾಗಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಆಯ್ಕೆಯಾಗಿದ್ದಾರೆ. ‘ರಾಜ್ ವಿಷ್ಣು’, ‘ಗಾಳಿಪಟ 2’ ಚಿತ್ರಗಳ ನಂತರ ವೈಭವಿ ಅವರಿಗಿದು ಕನ್ನಡದಲ್ಲಿ ಮೂರನೇ ಸಿನಿಮಾ.
‘ಪೊಗರು’ ಸಿನಿಮಾ ತೆರೆಕಂಡ ನಂತರ ಆರಂಭವಾದ ಧ್ರುವ ಸರ್ಜಾರ ‘ಮಾರ್ಟಿನ್’ ಸದ್ಯ ಚಿತ್ರೀಕರಣದಲ್ಲಿದೆ. ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆಯಂತೆ. ಈ ಮೂಲಕ ಧ್ರುವ ಪ್ಯಾನ್ ಇಂಡಿಯಾ ಹೀರೋ ಆಗುತ್ತಿದ್ದಾರೆ. ಈ ಚಿತ್ರದ ನಾಯಕಿಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿರಲಿಲ್ಲ. ಬಲ್ಲ ಮೂಲಗಳ ಪ್ರಕಾರ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ‘ಮಾರ್ಟಿನ್’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ರಾಜ್ ವಿಷ್ಣು’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದ ಅವರು ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಮೂವರು ನಾಯಕಿಯರಲ್ಲೊಬ್ಬರು. ಇದೀಗ ‘ಮಾರ್ಟಿನ್’ ಮೂಲಕ ದೊಡ್ಡ ಸಿನಿಮಾಗೆ ಹಿರೋಯಿನ್ ಆಗಿದ್ದಾರೆ.
‘ಏಕ್ ಅಲ್ಬೇಲಾ’ ಮರಾಠಿ ಚಿತ್ರದೊಂದಿಗೆ ವೈಭವಿ ಶಾಂಡಿಲ್ಯ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿರುವ ಅವರು ‘ನಿಶಾ’, ‘ಛತ್ರಸಾಲ್’ ವೆಬ್ ಸರಣಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ‘ಮಾರ್ಟಿನ್’ ನಿರ್ದೇಶಕ ಎ.ಪಿ.ಅರ್ಜುನ್. ಧ್ರುವ ಸರ್ಜಾ ಚೊಚ್ಚಲ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್. ‘ಪೊಗರು’ ಸಿನಿಮಾಗೆ ಪ್ರೇಕ್ಷಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹಾಗಾಗಿ ‘ಮಾರ್ಟಿನ್’ನಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ ಧ್ರುವ ಸರ್ಜಾ. ಮಣಿಶರ್ಮ ಸಂಗೀತ ಸಂಯೋಜನೆ, ಸತ್ಯ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.