ಚಿತ್ರ ಎಲ್ಲೂ ಬೋರ್ ಹೊಡೆಸದಿದ್ದರೂ, ಪೀಕ್ ತಲುಪುವುದಿಲ್ಲ. ಇಲ್ಲೂ ಕೂಡ ಸೂರಿ ರಕ್ತ ಹರಿಸುತ್ತಾ ಒಂದಷ್ಟು ಫಿಲಾಸಫಿ ಹೇಳುತ್ತಾರೆ. ಅಲ್ಲಲ್ಲಿ ತಮ್ಮ ಮ್ಯಾಜಿಕ್ ತೋರಿಸುತ್ತಾರೆ. ಕತ್ತಲು ಕತ್ತಲು ಆ್ಯಕ್ಷನ್ ಚಿತ್ರಗಳನ್ನು ನೋಡಿ ಬೇಸರಗೊಂಡಿರುವ ಮನಸ್ಸಿಗೆ, ಸೂರಿ ಬೆಳಕು ತೋರಿಸಿದ್ದಾರೆ ಎಂಬುದು ಸಮಾಧಾನದ ಸಂಗತಿ. ಆದರೆ, ಆ ಬೆಳಕಲ್ಲಿ ಚಿತ್ರದ ಹಲವು ದೋಷಗಳು ಎದ್ದು ಕಾಣುತ್ತವೆ ಎನ್ನುವುದು ವಿಪರ್ಯಾಸ.

ನಿರ್ದೇಶಕ ಸೂರಿ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್‌ಗಳಿದ್ದಾಗಲೂ ಅವರ ಸ್ಟಾರ್‌ಡಮ್ ಭಾರದಿಂದ ಚಿತ್ರಗಳು ಕುಸಿಯುವುದಿಲ್ಲ ಎಂಬುದು ಈ ಮೊದಲೇ ಕೆಲವು ಸಿನಿಮಾಗಳಿಂದ ನಿರೂಪಿತವಾಗಿದೆ. ಅವರ ಚಿತ್ರ ಬದುಕಿನ ಎರಡು ಪ್ರಮುಖ ಸಿನಿಮಾಗಳಾದ ‘ಕಡ್ಡಿಪುಡಿ’ ಮತ್ತು ‘ಜಾಕಿ’ ಇದಕ್ಕೆ ಉತ್ತಮ ನಿದರ್ಶನ. ಹೀರೋಗಳ ಸ್ಟಾರ್‌ ಪವರ್ ಅನ್ನು ಅವರು ಬಳಸಿಕೊಂಡರೂ, ಅದರ ಮೆರೆಸುವಿಕೆಗಾಗಿ ಚಿತ್ರದ ಒಟ್ಟು ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಸೂರಿಗೆ ಸಾಧ್ಯ. ಹೀಗಿದ್ದೂ, ಸೂರಿಯ ಬಹುತೇಕ ಅತ್ಯುತ್ತಮ ಸಿನಿಮಾಗಳು ಮೂಡಿ ಬಂದಿರುವುದು ಜನಪ್ರಿಯ ತಾರೆಯರು ಇಲ್ಲದ ತಾರಾಗಣವಿದ್ದಾಗ ಎಂಬುದೂ ಅಷ್ಟೇ ಸತ್ಯ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ನಾಯಕ ಅಭಿಷೇಕ್ ಅಂಬರೀಷ್, ಕೇವಲ ಒಂದು ಚಿತ್ರದಷ್ಟು ಹಳಬರಾದರೂ (ಮತ್ತು ಆ ಚಿತ್ರ ಸೋತಿದ್ದರೂ) ಅಂಬರೀಷ್ ಮಗ ಎಂಬುದರಿಂದ ಸಿಗುವ ಅಟೋಮ್ಯಾಟಿಕ್ ಸ್ಟಾರ್‌ ಪವರ್ ಸಾಕಷ್ಟಿದೆ. ಹೀಗಾಗಿ, ಈ ಚಿತ್ರದಲ್ಲಿ ಸೂರಿಗೆ ತಮ್ಮ ಅಭಿಮಾನಿಗಳು ಮತ್ತು ಅಭಿಷೇಕ್ ಅಭಿಮಾನಿಗಳು ಇಬ್ಬರ ನಿರೀಕ್ಷೆಯನ್ನು ತಲುಪುವ ಸವಾಲಿತ್ತು. ಅದ್ಯಾಕೋ ‘ಬ್ಯಾಡ್ ಮ್ಯಾನರ್ಸ್’ ತನ್ನ ಶೀರ್ಷಿಕೆಯಿಂದಲೇ ಇದು ಸೂರಿ ಚಿತ್ರವಲ್ಲ ಎಂಬ ಭಾವ ನನ್ನಲ್ಲಿ ಮೂಡಿಸಿದ್ದಂತೂ ನಿಜ.

ಆದರೆ, ಚಿತ್ರ ಆರಂಭವಾಗುತ್ತಿದ್ದಂತೆ ಸೂರಿ ಚಿತ್ರದ ಫೀಲ್ ಸಿಗುತ್ತದೆ. ಮತ್ತೆ ನಾನ್ ಲೀನಿಯರ್ ನಿರೂಪಣೆಗೆ ಮೊರೆ ಹೋಗಿರುವ ನಿರ್ದೇಶಕರು ಅಲ್ಲೊಂದು ಇಲ್ಲೊಂದು ಬಿಡಿ ಬಿಡಿ ದೃಶ್ಯಗಳ ಮೂಲಕ ಕತೆ ಹೆಣಿಯಲು ತೊಡಗುತ್ತಾರೆ. ಹೀಗಾಗಿ, ಒಂದಷ್ಟು ಪಾತ್ರಗಳು, ಸನ್ನಿವೇಶಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೆರೆಯ ಮೇಲೆ ಬಂದು ಹೋಗುತ್ತವೆ. ಅಂತೂ ಕತೆ ಒಂದು ಹಂತಕ್ಕೆ ಅರ್ಥವಾಗಲು ಆರಂಭಿಸುವಾಗ ನಾಯಕ ರುದ್ರೇಶ್ (ಅಭಿಷೇಕ್ ಅಂಬರೀಷ್) ಕಂಟ್ರಿ ಗನ್‌ಗಳ ಮೂಲವನ್ನು ಹುಡುಕುತ್ತಾ ಗೋಢಕ್ಕೆ ಕಾಲಿಡುತ್ತಾನೆ. ಗೋಢದಲ್ಲಿ ಬಂದೂಕು ತಯಾರಿ, ‘ಗೃಹ ಕೈಗಾರಿಕೆ’ ಎಂಬ ಮಟ್ಟಿಗೆ ವ್ಯಾಪಕವಾಗಿದೆ.

ರುದ್ರ ಅಲ್ಲಿನ ನಿವಾಸಿಗಳ ಜೊತೆ ಕಲ್ಲು ಕಟ್ಟುವ ಬದಲು ಗನ್ನು ಕಟ್ಟಿ ಲಗೋರಿ ಆಡುತ್ತಾನೆಂಬುದು ಅದರ ವ್ಯಾಪಕತೆಗೆ ಸಾಕ್ಷಿ. ಆ ವೇಳೆಗಾಗಲೇ, ಸೂರಿ ಸಿನಿಮಾಗಳ ಅವಿಬಾಜ್ಯ ಅಂಗವಾದ ಚಿತ್ರ ವಿಚಿತ್ರ ಆಸಕ್ತಿಕರ ಹೆಸರಿನ ಸಾಕಷ್ಟು ಪಾತ್ರಗಳ ಪರಿಚಯವಾಗಿರುತ್ತದೆ. ಗನ್ನಿಸ್, ಫೀನಿಕ್ಸ್, ಮಗಾಯ್, ತಲವಾರ್ ತಾತಯ್ಯ, ಶೋಲೆ ಬಾಬು… ಹೀಗೆ. ಈ ಬಾರಿ ಜಾಗದ ಹೆಸರೂ ಆಸಕ್ತಿ ಕೆರಳಿಸುವಂತಿವೆ. ಬೂದಿಗುಡ್ಡ, ಹಂದಿಹಳ್ಳ, ರಾಣಿಕೊಂಪೆ ಹೀಗೆ… ಮೊದಲಾರ್ಧ ಏನು ನಡೆಯುತ್ತಿದೆ ಎಂಬುದು ಪೂರ್ತಿ ಅರಿವಾಗದೆ ಒಂದಷ್ಟು ಸರಣಿ ದೃಶ್ಯಗಳು ಸರಸರನೆ ಸಾಗಿ ಹೋಗುತ್ತವೆ.

ಇವೆಲ್ಲವನ್ನೂ ಜೋಡಿಸಿ ಅವುಗಳಿಗೊಂದು ಹಿನ್ನೆಲೆ ಅರ್ಥ ಕೊಡುವ ಕೆಲಸವನ್ನು ಸೂರಿ ದ್ವಿತಿಯಾರ್ಧದಲ್ಲಿ ಮಾಡುತ್ತಾರೆ. ಇದುವರೆಗೆ ನೈಜವೆನಿಸದ ಯಾವುದೋ ಕಾಲ್ಪನಿಕ ಸಿನಿಮಾ ಜಗತ್ತಿನಲ್ಲಿ ನಡೆಯುತ್ತಿದೆ ಎನಿಸುವ ಸಿನಿಮಾ ಧುತ್ತನೆ ವಾಸ್ತವ ಜಗತ್ತಿಗೆ ಮರಳುತ್ತದೆ. ಇಲ್ಲಿ ರುದ್ರನಿಗೆ ಅಮ್ಮ, ಬಾಸ್, ಪ್ರೇಯಸಿ, ಸಹೋದ್ಯೋಗಿ ಎಲ್ಲಾ ಇದ್ದಾರೆ. ಮೊದಲಾರ್ಧದ ನಡೆದ ಎಲ್ಲಾ ಘಟನೆಗಳಿಗೆ ಕಾರಣ ತಿಳಿಯುತ್ತಾ ಹೋಗುತ್ತದೆ. ಕೊಂಡಿ ಬೆಸೆಯುತ್ತದೆ.
ಅಲ್ಲಲ್ಲಿ ಸೂರಿಯ ಬ್ರಿಲಿಯೆನ್ಸ್, ಡಾರ್ಕ್ ಹ್ಯೂಮರ್ ಕಂಡರೂ, ಭಾವನಾತ್ಮಕ ದೃಶ್ಯಗಳು ಸೋಲುತ್ತವೆ. ರಚಿತಾ ರಾಮ್ ಮತ್ತು ಅಭಿಷೇಕ್ ಮಧ್ಯದ ಪ್ರೇಮ ಕಥಾನಕದಲ್ಲಿ ಯಾವುದೇ ಗಾಢತೆ ಇಲ್ಲ. ಮನಸ್ಸನ್ನು ತಟ್ಟುವುದಿಲ್ಲ. 10 ನಿಮಿಷಗಳ ಪಾತ್ರಗಳಿಗೂ ಒಂದು ವಿಶಿಷ್ಟತೆ, ಅನನ್ಯತೆ ನೀಡಿ ಅವುಗಳನ್ನು ಐಕಾನಿಕ್ ಆಗಿಸುವ ಸೂರಿಯ ಈ ಚಿತ್ರದಲ್ಲಿ ಬಂದು ಹೋಗುವ ಹತ್ತಾರು ಪಾತ್ರಗಳಲ್ಲಿ ಯಾವುದೂ ಹೆಚ್ಚು ನೆನಪಿನಲ್ಲಿ ಉಳಿಯುವುದಿಲ್ಲ.

ಚಿತ್ರ ಎಲ್ಲೂ ಬೋರ್ ಹೊಡೆಸದಿದ್ದರೂ, ಪೀಕ್ ತಲುಪುವುದಿಲ್ಲ. ಇಲ್ಲೂ ಕೂಡ ಸೂರಿ ರಕ್ತ ಹರಿಸುತ್ತಾ ಒಂದಷ್ಟು ಫಿಲಾಸಫಿ ಹೇಳುತ್ತಾರೆ. ‘ಪ್ರಪಂಚದಲ್ಲಿ ಶಾಂತಿ ಇರಬೇಕು ಅಂದ್ರೆ ಎಲ್ಲರಿಗೂ ಕಜ್ಜಿ ಆಗಬೇಕು. ಕೆರೆದು ಕೊಳ್ಳೋದರಲ್ಲೇ ಬ್ಯುಸಿ ಇದ್ದಾಗ ಮನುಷ್ಯ ಬೇರೆಯವರ ತಂಟೆಗೆ ಹೋಗಲ್ಲ’ ಅಂತಾರೆ. ಗನ್ನುಗಳ ನಾಡಿನ ಮಕ್ಕಳ ಕೈಗೆ ಚರಕ ಕೊಡುತ್ತಾರೆ. ಖಳನಾಯಕನ ಕೆಟ್ಟ ಕೆಲಸಗಳಿಗೆ ನಾಯಕನ ಮಾತೇ ಸ್ಪೂರ್ತಿಯಾಗುವ ವಿಚಿತ್ರ ಸನ್ನಿವೇಶವನ್ನು ಹೊತ್ತು ತರುತ್ತಾರೆ. ತೆಲುಗು ಮಾತನಾಡುವ ಪೋಲೀಸ್ ಅಧಿಕಾರಿಯ ಕೈಲಿ ರೇಪಿಸ್ಟ್‌ಗಳ ಫೇಕ್ ಎನ್‌ಕೌಂಟರ್ ಮಾಡಿಸಿ ನಿಜ ಘಟನೆಯ ಸ್ಪರ್ಶವನ್ನೂ ನೀಡುತ್ತಾರೆ. ಅಂತೂ ಅಲ್ಲಲ್ಲಿ ತಮ್ಮ ಮ್ಯಾಜಿಕ್ ತೋರಿಸುತ್ತಾರೆ.

ಚಕ್ರವ್ಯೂಹದ ಹಾಡನ್ನು ರಿಂಗ್ ಟೋನ್ ಮಾಡುವ ಮೂಲಕ ಸೂರಿ ಅಂಬಿ ಅಬಿಮಾನಿಗಳನ್ನು ಖುಷಿ ಪಡಿಸುತ್ತಾರಾದರೂ, ಅಂಬಿ ನೆನಪಿಗೆ ಅತಿಯಾಗಿ ಜೋತು ಬೀಳದೆ ಅತ್ಯಗತ್ಯ ಸಂಯಮ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅಭಿಷೇಕ್ ಅಂಬರೀಶ್‌ ದೈಹಿಕ ರೂಪು ಹೊಂದುತ್ತದೆ. ಎದುರಾಳಿಗಳನ್ನು ಎತ್ತಿ ಬಿಸಾಕುವುದು, ತಾನು ಹೊಡೆತ ತಿಂದರೂ ಕಲ್ಲಿನಂತೆ ನಿಲ್ಲುವುದು ಇವನ್ನೆಲ್ಲಾ ಒಪ್ಪಿಕೊಳ್ಳಲು ಸುಲಭವಾಗುವಂತಹ ಮೈಕಟ್ಟು ಅವರಿಗೆ ಇರುವುದು ಒಂದು ಪ್ಲಸ್ ಪಾಯಿಂಟ್. ಅವರ ಮೊದಲ ಚಿತ್ರ ನೋಡಿದವರಿಗೆ ಅಭಿನಯದಲ್ಲೂ ಸಾಕಷ್ಟು ಸುಧಾರಿಸಿದ್ದಾರೆ ಎಂದು ಖಂಡಿತಾ ಅನಿಸುತ್ತದೆ. ಜೊತೆಗೆ, ತನ್ನ ಅಪ್ಪನನ್ನು ಹೋಲುವ ದ್ವನಿ, ಸಂಭಾಷಣೆ ಹೇಳುವ ಶೈಲಿ ಮತ್ತು ಮುಖ ಚಹರೆಯಿಂದಾಗಿ ಅಂಬರೀಷ್ ಅವರಿಗೆ ಇದ್ದ ದೊಡ್ಡ ಅಭಿಮಾನಿ ಬಳಗವನ್ನು ಅವರು ಖಂಡಿತಾ ಆಕರ್ಷಿಸಬಲ್ಲರು.

ಆದರೆ, ಭಾವತೀವ್ರತೆ ಇರುವ ದೃಶ್ಯಗಳಲ್ಲಿ ಅವರ ಅಭಿನಯದ ಕೊರತೆ ಕಾಣುತ್ತದೆ. ಜೊತೆಗೆ, ಇಂತಹ ದೃಶ್ಯಗಳ ಬರವಣಿಗೆಯೂ ಪರಿಣಾಮಕಾರಿಯಾಗಿ ಇಲ್ಲದ ಕಾರಣ ಅವು ಪ್ರೇಕ್ಷಕರನ್ನು ತಟ್ಟುವುದೇ ಇಲ್ಲ. ಹೀಗಾಗಿ, ಭಾವಪೂರ್ಣ ದೃಶ್ಯಗಳಲ್ಲಿ ನಿರ್ದೇಶಕ ಮತ್ತು ನಟ ಇಬ್ಬರೂ ಸೋಲುತ್ತಾರೆ. ರೌಡಿಸಂ ಸಿನಿಮಾಗಳೇ ಆದರೂ ಸೂರಿ ತಮ್ಮ ಸಿನಿಮಾಗಳ ಮೂಲಕ ನೆನಪಿನಲ್ಲಿ ಉಳಿಯುವಂತಹ ಸಾಕಷ್ಟು, ವಿಶಿಷ್ಟ, ವಿಶೇಷ ಸ್ತ್ರೀ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಆ ನಿಟ್ಟಿನಲ್ಲಿ ನೋಡಿದಾಗ ‘ಬ್ಯಾಡ್ ಮ್ಯಾನರ್ಸ್’ ಪೂರ್ತಿ ಸೋಲುತ್ತದೆ. ಇರುವ ಕೆಲವೇ ಕೆಲವು ಮಹಿಳಾ ಪಾತ್ರಗಳು ಕೂಡ ಅಪಹರಣವಾಗಲು, ಕೊಲೆಯಾಗಲು ಮಾತ್ರ ಇವೆ ಎನಿಸಿ ಬಿಡುತ್ತದೆ.

ನಾಯಕಿ ರಚಿತಾ ರಾಮ್, ತಾಯಿ ತಾರಾ ಪಾತ್ರಗಳು ಈಗಾಗಲೇ ನೋಡಿರುವ ಹಲವಾರು ಪಾತ್ರಗಳ ಪುನರಾವರ್ತನೆಯಂತೆ ಇವೆ. ಯಾವುದೇ ವಿಶೇಷತೆ, ಪ್ರಾಮುಖ್ಯತೆ, ಹೊಸತನ ಇಲ್ಲ. ತೆರೆಯ ಮೇಲೆ ಇಬ್ಬರಿಗೆ ಅವಕಾಶವೂ ಹೆಚ್ಚಿಲ್ಲ. ಶರತ್ ಲೋಹಿತಾಶ್ವ ಮತ್ತು ದತ್ತಣ್ಣ ಗಮನ ಸೆಳೆಯುತ್ತಾರೆ. ಚರಣ್‌ ರಾಜ್ ಸಂಗೀತ ಕೆಲವು ಕಡೆ ಗೆಲ್ಲುತ್ತದೆ. ಶೀರ್ಷಿಕೆಗಳ ಸಂದರ್ಭದಲ್ಲಿ ಬಳಸಲಾಗಿರುವ ಹಿನ್ನೆಲೆ ಸಂಗೀತ, ಉತ್ತಮ ದೃಶ್ಯ ಸಂಯೋಜನೆಯೊಂದಿಗೆ ಸೇರಿಕೊಂಡು ಚಿತ್ರಕ್ಕೊಂದು ಉತ್ತಮ ಆರಂಭ ನೀಡುತ್ತದೆ. ಆದರೆ, ಅದೇ ಟೆಂಪೋ ಚಿತ್ರ ಪೂರ್ತಿ ಮುಂದುವರಿಯುವುದಿಲ್ಲ. ಹೀರೋ ಪರಿಚಯದ ಹಾಡು ‘ಜಾಕಿ’ ಚಿತ್ರದ ಟೈಟಲ್ ಸಾಂಗ್ ನೆನಪಿಸಿದರೆ, ಸಾರಾಯಿ ಸಾಂಗ್ ‘ಕಡ್ಡಿಪುಡಿ’ಯ ಬುಡ್ ಬುಡ್ಕೆ ಮಾದೇವ ಹಾಡನ್ನು ನೆನಪಿಸುತ್ತದೆ. ಲೋಕೇಷನ್‌ಗಳ ಆಯ್ಕೆ ಅದ್ಭುತವಾಗಿದೆ. ಇತ್ತೀಚೆಗೆ ಕತ್ತಲು ಕತ್ತಲು ಆ್ಯಕ್ಷನ್ ಚಿತ್ರಗಳನ್ನು ನೋಡಿ ಬೇಸರಗೊಂಡಿರುವ ಮನಸ್ಸಿಗೆ, ಸೂರಿ ಬೆಳಕು ತೋರಿಸಿದ್ದಾರೆ ಎಂಬುದು ಸಮಾಧಾನದ ಸಂಗತಿ. ಆದರೆ, ಆ ಬೆಳಕಲ್ಲಿ ಚಿತ್ರದ ಹಲವು ದೋಷಗಳು ಎದ್ದು ಕಾಣುತ್ತವೆ ಎನ್ನುವುದು ವಿಪರ್ಯಾಸ.

LEAVE A REPLY

Connect with

Please enter your comment!
Please enter your name here