ಕನ್ನಡ ಚಿತ್ರರಂಗದ ಸ್ಟಾರ್‌ ಹೀರೋಗಳಾದ ದರ್ಶನ್‌ ಮತ್ತು ಧ್ರುವ ಸರ್ಜಾ ಅವರ ಮಧ್ಯೆ ಮನಸ್ತಾಪ ಇರುವುದು ಬಹಿರಂಗವಾಗಿದೆ. ಇಂದು ತಮ್ಮ ಹುಟ್ಟುಹಬ್ಬದ ದಿನದಂದು ಧ್ರುವ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಾಗೂ ತಮ್ಮ ಅಭಿಮಾನಿಗಳ ಬಗ್ಗೆ ಕೆಟ್ಟ ರೀತಿಯಲ್ಲಿ ಕಾಮೆಂಟ್‌ ಮಾಡುವವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಸಭೆ ಆಯೋಜಿಸಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಶಿವರಾಜಕುಮಾರ್‌ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಸ್ಟಾರ್‌ ಹೀರೋಗಳಾದ ದರ್ಶನ್‌ ಮತ್ತು ಧ್ರುವ ಸರ್ಜಾ ಕೂಡ ಭಾಗಿಯಾಗಿದ್ದರು. ಶಿವರಾಜಕುಮಾರ್‌ ಅವರ ಎಡ – ಬಲದಲ್ಲಿ ಕುಳಿತಿದ್ದ ಇಬ್ಬರೂ ಪರಸ್ಪರರನ್ನು ಮಾತನಾಡಿಸಲಿಲ್ಲ. ಕಾರ್ಯಕ್ರಮ ಮುಗಿಯುವವರೆಗೂ ಇದು ಹೀಗೇ ಇತ್ತು. ಈ ಘಟನೆ ನಂತರ ಇಬ್ಬರು ನಟರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕೆಸರೆರೆಚಾಟದಲ್ಲಿ ತೊಡಗಿದ್ದರು. ಇಂದು ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಹಾಗೂ ದರ್ಶನ್‌ ಅವರ ಮಧ್ಯೆ ಮನಸ್ತಾಪ ಇರುವುದಾಗಿ ಹೇಳಿಕೊಂಡಿದ್ದಾರೆ.

ದರ್ಶನ್‌ ಅವರ ಜೊತೆಗಿನ ಮುನಿಸಿದ ಬಗ್ಗೆ ಮಾತನಾಡಿರುವ ಧ್ರುವ, ‘ದರ್ಶನ್ ನಮ್ಮ ಸೀನಿಯರ್ ಆಕ್ಟರ್. ಅವರ ಪ್ರಸೆನ್ಸ್ ಅಷ್ಟೇ ಅಲ್ಲ, ಅವರ ಆಬ್ಸೆನ್ಸ್‌ನಲ್ಲೂ ಅವರನ್ನು ನಾನು ಗೌರವಿಸುತ್ತೇನೆ. ನಮ್ಮ ಸಿನಿಮಾಗೆ ಅವರು ಡಬ್ಬಿಂಗ್‌ ಮಾಡಿಕೊಟ್ಟಿದ್ದಾರೆ. ಆದರೆ, ದರ್ಶನ್ ಅವರಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಬೇಕಿದೆ. ಆ ಪ್ರಶ್ನೆಗಳನ್ನು ಕ್ಲಿಯರ್ ಮಾಡಿಕೊಳ್ಳದೆ ಮನಸ್ಸಲ್ಲೊಂದು, ಎದುರು ಒಂದು‌ ಮಾತನಾಡೋಕೆ ಆಗೋಲ್ಲ. ಮನಸ್ಸಲ್ಲಿ ಒಂದು ವಿಷಯ ಇಟ್ಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗಿಲ್ಲ. ಆರ್ಟಿಫಿಸಿಯಲ್ ಆಗಿ, ಫೇಕ್ ಆಗಿ ಇರೋಕೆ ನನಗೆ ಬರಲ್ಲ. ನಮ್ಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆ.. ಅವರು ಪ್ರಶ್ನೆಗಳಿಗೆ ಉತ್ತರಿಸಿದರೆ ಮನಸ್ತಾಪ ತಿಳಿಯಾಗಬಹುದು, ಆಗದೆಯೂ ಇರಬಹುದು. ಅದು ನಮ್ಮ ವೈಯಕ್ತಿಕ ವಿಚಾರ’ ಎಂದಿದ್ದಾರೆ.

ಧ್ರುವ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಪೋಸ್ಟ್‌ಗಳು ಹರಿದಾಡುತ್ತಿವೆ. ಫೇಕ್‌ ಅಕೌಂಟ್‌ಗಳನ್ನು ಸೃಷ್ಟಿಸಿ ಅವರ ಮಧ್ಯೆ ಮತ್ತಷ್ಟು ಮನಸ್ತಾಪ ಆಗುವಂತೆ ಕುತಂತ್ರವೂ ನಡೆದಿದೆ. ಈ ಕಿಡಿಗೇಡಿಗಳಿಗೆ ಧ್ರುವ ಎಚ್ಚರಿಕೆ ಕೊಟ್ಟಿದ್ದಾರೆ. ‘ಈ ಬೆಳವಣಿಗೆ ನಂತರ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ನಮ್ಮ ನಮ್ಮಲ್ಲೇ ತಂದಿಡುವ ಕೆಲಸ ಆಗುತ್ತಿದೆ. ಈ ರೀತಿ ಮಾಡುವವರಿಗೆ ಒಂದು ರಿಕ್ವೆಸ್ಟ್. ದಯವಿಟ್ಟು ನನ್‌ ಹತ್ರ ತಗಲಾಕ್ಕೊಬೇಡಿ. ಫೇಕ್ ಆಕೌಂಟ್ ಕ್ರಿಯೇಟ್ ಮಾಡ್ತಿರೋರು ಎಚ್ಚರವಾಗಿರಿ’ ಎಂದು ಧ್ರುವ ಎಚ್ಚರಿಕೆ ನೀಡಿದ್ದಾರೆ. ಇಬ್ಬರ ಮಧ್ಯೆ ನಿಜಕ್ಕೂ ಏನಾಗಿದೆ ಎನ್ನುವುದರ ಬಗ್ಗೆ ಮಾತ್ರ ಧ್ರುವ ಸ್ಪಷ್ಟವಾಗಿ ಹೇಳಿಲ್ಲ. ಧ್ರುವ ಅವರ ಮಾತಿಗೆ ದರ್ಶನ್‌ ಅವರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಬಹುದು ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here