ಪುನೀತ್ ರಾಜಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ‘ಲಕ್ಕಿ ಮ್ಯಾನ್‌’ ಸಿನಿಮಾದ ಫೋಟೊಗಳು ಬಿಡುಗಡೆಯಾಗಿವೆ. ಎಸ್‌.ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ನಟ, ನೃತ್ಯನಿರ್ದೇಶಕ ಪ್ರಭುದೇವ ಅವರೊಂದಿಗಿನ ಡ್ಯಾನ್ಸ್ ಸೇರಿದಂತೆ ಕೆಲವು ಸನ್ನಿವೇಶಗಳಲ್ಲೂ ನಟಿಸಿದ್ದಾರೆ ಪುನೀತ್‌ ರಾಜಕುಮಾರ್‌.

ಪುನೀತ್ ರಾಜಕುಮಾರ್ ಅಗಲಿದ ನಂತರದ ದಿನಗಳಲ್ಲಿ ನೃತ್ಯನಿರ್ದೇಶಕ ಪ್ರಭುದೇವ ಅವರೊಂದಿಗಿನ ಪುನೀತ್‌ ಡ್ಯಾನ್ಸ್ ವೀಡಿಯೋವೊಂದು ಹೊರಬಿದ್ದಿತ್ತು. ಅದು ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಸೆರೆಹಿಡಿದ ವೀಡಿಯೊ ತುಣುಕು. ಅದು ಪುನೀತ್ ರಾಜಕುಮಾರ್ ಹೀರೋ ಆಗಿ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್‌’ನ ಡ್ಯಾನ್ಸ್ ಎಂದೇ ಬಹಳಷ್ಟು ಜನರು ಭಾವಿಸಿದ್ದರು. ಅದು ‘ಲಕ್ಕಿ ಮ್ಯಾನ್‌’ ಸಿನಿಮಾದ ಹಾಡು ಎನ್ನುವುದರ ಜೊತೆಗೆ ಈ ಡ್ಯಾನ್ಸ್ ಶೂಟಿಂಗ್ ಸಂದರ್ಭದ ಕೆಲವು ಫೋಟೊಗಳು ಬಿಡುಗಡೆಯಾಗಿವೆ. ಪ್ರಭುದೇವ ಅವರ ಸಹೋದರ, ನೃತ್ಯನಿರ್ದೇಶಕ ಎಸ್‌.ನಾಗೇಂದ್ರ ಪ್ರಸಾದ್ ನಿರ್ದೇಶಿಸುತ್ತಿರುವ ಚಿತ್ರವಿದು. ಅಂದು ಶೂಟಿಂಗ್ ನಡೆದ ದಿನದಂದು ಪ್ರಭುದೇವ ಅವರ ತಂದೆ, ಹಿರಿಯ ನೃತ್ಯನಿರ್ದೇಶಕ ಮೂಗೂರು ಸುಂದರಂ ಕೂಡ ಇದ್ದರು. ಅವರೊಂದಿಗಿನ ಫೋಟೋ ಕೂಡ ಸೆರೆಯಾಗಿದೆ.

ವಿಶೇಷವೆಂದರೆ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ‘ಲಕ್ಕಿ ಮ್ಯಾನ್‌’ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಡಾರ್ಲಿಂಗ್ ಕೃಷ್ಣ ಈ ಚಿತ್ರದ ಹೀರೋ. ಸಹೋದರ ನಾಗೇಂದ್ರಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭುದೇವ ಕೂಡ ನಟಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಕುರಿತು ರಚಿಸಿರುವ ಹಾಡಿಗೆ ಪುನೀತ್ ಮತ್ತು ಪ್ರಭುದೇವ ಒಟ್ಟಿಗೇ ಡ್ಯಾನ್ಸ್ ಮಾಡಿರುವುದು ವಿಶೇಷ. ಇದು ತೆರೆಯ ಮೇಲೆ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಮೊದಲ ಸಿನಿಮಾ ಕೂಡ ಹೌದು. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯ ಹಂತದಲ್ಲಿದ್ದು, ತೆರೆಗೆ ಸಿದ್ಧವಾಗುತ್ತಿದೆ. ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಸದ್ಯ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದು, ರೋಶನಿ ಪ್ರಕಾಶ್ ದ್ವಿತೀಯ ನಾಯಕಿ. ಉಳಿದಂತೆ ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುದಾ ಬೆಳವಾಡಿ, ಮಾಳವಿಕ ಮತ್ತಿತರರು ಅಭಿನಯಿಸಿದ್ದಾರೆ. ಪಿ.ಆರ್.ಮೀನಾಕ್ಷಿ ಸುಂದರಮ್ ಮತ್ತು  ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಜೀವಾ ಶಂಕರ್ ಛಾಯಾಗ್ರಹಣ, V2 ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ, ಧನಂಜಯ ರಂಜನ್ ಗೀತಸಾಹಿತ್ಯ, ಬಾಲಾಜಿ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ(ಪುನೀತ್ ಪಾತ್ರಕ್ಕೆ) ಅವರ ಸಂಭಾಷಣೆ, ಮೋಹನ್ ಬಿ ಕೆ. ಕಲಾನಿರ್ದೇಶನವಿದೆ. ಮುಂದಿನ ತಿಂಗಳು ಇಲ್ಲವೇ ಜನವರಿಗೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here