ದೃಶ್ಯಗಳು ಕಣ್ಣಿಗೆ ಹಬ್ಬವೆನ್ನುವಂತೆ ಮೂಡಿಬಂದಿವೆ. ದೃಶ್ಯಗಳನ್ನು ಜೋಡಿಸುತ್ತಾ ಕತೆಯನ್ನು ಹೇಗೆ ಚಲಿಸಬೇಕೆಂದು ನಿರ್ದೇಶಕಿಗೆ ಗೊತ್ತು. ಹಿನ್ನೆಲೆ ಗಾಯನದಲ್ಲಿ ಜನಪದ ಗೀತೆಗಳು, ನೀಲಗಾರರ ಹಾಡು ಹಳ್ಳಿಯ ಪರಿಸರವನ್ನು ದಟ್ಟವಾಗಿ ಕಟ್ಟಿಕೊಡುತ್ತವೆ. ಕೊನೆಯ ದೃಶ್ಯದಲ್ಲಿ ತಾಯಿ-ಮಗಳು ಕೈಹಿಡಿದುಕೊಂಡು ಹೊಸ ಜಗತ್ತಿಗೆ ನಡೆಯುವ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ.

ಒಬ್ಬ ಕತೆಗಾರ ಅಥವಾ ನಿರ್ದೇಶಕ ಸಾಮಾನ್ಯವಾಗಿ ತನಗೆ ಚಿರಪರಿಚಿತ ಪ್ರದೇಶದಲ್ಲಿಯೇ ಕತೆ ಹೆಣೆಯಲು ಪ್ರಯತ್ನಿಸುತ್ತಾನೆ. ಉತ್ತಮ ಕತೆಗಳು ಮನುಷ್ಯರಿದ್ದೆಡೆಯೆಲ್ಲಾ ಇದ್ದೇ ಇರುತ್ತವೆ. ಆದರೆ ಅಪರಿಚಿತ ಪ್ರದೇಶದ ಹಿನ್ನೆಲೆಯಲ್ಲಿ ಕತೆ ಹೆಣೆಯಲು ಸಾಕಷ್ಟು ಅಧ್ಯಯನ ಮತ್ತು ಪರಿಶ್ರಮವನ್ನು ಬೇಡುತ್ತದೆ. ಕೇವಲ ದೃಶ್ಯವೈಭವದ ಸಲುವಾಗಿ ಕ್ಯಾಮೆರಾ ಹಿಡಿದುಕೊಂಡು ಮಲೆನಾಡು, ಕರಾವಳಿ, ಚಾಮರಾಜನಗರದ ಕಡೆ ಹೋಗುವುದು ಬೇರೆ. ಆದರೆ ಅಲ್ಲಿಯ ಜನಜೀವನದ ನಾಡಿಮಿಡಿತವನ್ನು ಅರಿತು, ಅಲ್ಲಿಯ ನುಡಿಗಟ್ಟಿನೊಂದಿಗೆ ಕತೆಯನ್ನು ಹೇಳುವುದು ಬೇರೆ. ಎರಡನೆಯದು ದುರ್ಗಮದ ಹಾದಿ. ಅಂತಹ ಆಯ್ಕೆ ಆ ಕತೆಗಾರ ಅಥವಾ ನಿರ್ದೇಶಕನ ಪ್ರಬುದ್ಧತೆಯನ್ನು ತೋರಿಸುತ್ತದೆ. ನಮ್ಮ ಹಿರಿಯ ನಿರ್ದೇಶಕರಾದ ಗಿರೀಶ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್, ನಾಗಾಭರಣ ಮುಂತಾದವರು ಇದನ್ನು ಈಗಾಗಲೇ ಮಾಡಿ ತೋರಿಸಿದ್ದಾರೆ. ಈಗ ಚಂಪಾ ಶೆಟ್ಟಿ ಅವರು ಅಂತಹದೇ ಪ್ರಬುದ್ಧತೆಯನ್ನು ತಮ್ಮ ‘ಕೋಳಿ ಎಸ್ರು’ ಮೂಲಕ ತೋರಿಸಿದ್ದಾರೆ. ರಾಜಕೀಯ ನಾಯಕರೇ ಕಾಲಿಡಲು ಅಂಜುವ ಚಾಮರಾಜನಗರದ ಪುಟ್ಟ ಹಳ್ಳಿಯೊಂದಕ್ಕೆ ಹೋಗಿ, ದೃಶ್ಯರೂಪಕವೊಂದನ್ನು ಮಾಡಿಕೊಂಡು ಬಂದಿದ್ದಾರೆ.

ಚಂಪಾ ಶೆಟ್ಟಿಯವರಿಗೆ ನಾಟಕದ ಹಿನ್ನೆಲೆಯಿದೆ. ಆದ್ದರಿಂದ ದೃಶ್ಯ, ಅಭಿನಯ, ಹಿನ್ನೆಲೆ ಸಂಗೀತ, ಸಂಭಾಷಣೆ, ನೆರಳು ಬೆಳಕುಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಅರಿವು ಚೆನ್ನಾಗಿ ಇದೆ. ಆ ಕಲಾತ್ಮಕತೆ ಸಿನಿಮಾದ ಎಲ್ಲಾ ಕೋನಗಳಲ್ಲೂ ಕಾಣಿಸುತ್ತದೆ. ‘ಕೋಳಿ ಎಸ್ರು’ ಎನ್ನುವ ಶೀರ್ಷಿಕೆಯನ್ನು ಸುಧಾಕರ ದರ್ಬೆ ಅವರೊಡನೆ ಬರೆಸಿ, ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಮೂಡಿಸಿವುದರಿಂದ ಹಿಡಿದು, ಎಲ್ಲಾ ಕಡೆಯೂ ಆ ಕಲಾತ್ಮಕತೆ ಕೆಲಸ ಮಾಡಿದೆ. ಅವರ ಮನೋಧರ್ಮವನ್ನು ಅರಿತಂತೆ ನಾಯಕಿ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ಜೀವಂತವಾಗಿ ಅಭಿನಯಿಸಿದ್ದಾರೆ. ಅವರ ನಡೆ, ನುಡಿ, ನೋಟ, ಹಾವ-ಭಾವ – ಎಲ್ಲವೂ ಹಳ್ಳಿಯ ಹೆಣ್ಣುಮಗಳೊಬ್ಬಳ ಸಂಕಷ್ಟವನ್ನು ಮನಮುಟ್ಟುವಂತೆ ಪ್ರೇಕ್ಷಕನಿಗೆ ದಾಟಿಸುತ್ತವೆ. ಅವರ ಮಗಳಾಗಿ ಅಭಿನಯಿಸಿದ ಪುಟ್ಟ ಹುಡುಗಿ ಆಪೇಕ್ಷಾ ನಾಗರಾಜು ಕೂಡಾ ನಮ್ಮ ಮನಸ್ಸನ್ನು ಗೆಲ್ಲುತ್ತಾರೆ. ಉಳಿದ ಪಾತ್ರಗಳಿಗೆ ಸಿನಿಮಾದಲ್ಲಿ ಅಂತಹ ಪ್ರಾಮುಖ್ಯತೆಯಿಲ್ಲ.

ದೃಶ್ಯಗಳು ಕಣ್ಣಿಗೆ ಹಬ್ಬವೆನ್ನುವಂತೆ ಮೂಡಿಬಂದಿವೆ. ದೃಶ್ಯಗಳನ್ನು ಜೋಡಿಸುತ್ತಾ ಕತೆಯನ್ನು ಹೇಗೆ ಚಲಿಸಬೇಕೆಂದು ನಿರ್ದೇಶಕಿಗೆ ಗೊತ್ತು. ಕೊನೆಯ ದೃಶ್ಯದಲ್ಲಿ ತಾಯಿ-ಮಗಳು ಕೈಹಿಡಿದುಕೊಂಡು ಹೊಸ ಜಗತ್ತಿಗೆ ನಡೆಯುವ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ. ಸಿನಿಮಾಟೋಗ್ರಫಿ ಜವಾಬ್ದಾರಿಯನ್ನು ಫ್ರಾನ್ಸಿಸ್ ರಾಜ್‌ಕುಮಾರ್ ಅತ್ಯಂತ ಮುತುವರ್ಜಿಯಿಂದ ನಿರ್ವಹಿಸಿದ್ದಾರೆ. ಹಿನ್ನೆಲೆ ಗಾಯನದಲ್ಲಿ ಜನಪದ ಗೀತೆಗಳು, ನೀಲಗಾರರ ಹಾಡು ಹಳ್ಳಿಯ ಪರಿಸರವನ್ನು ದಟ್ಟವಾಗಿ ಕಟ್ಟಿಕೊಡುತ್ತವೆ. ಎಲ್ಲಿಯೂ ಅಬ್ಬರವಾಗದಂತೆ, ಕಣ್ ಕಿವಿ ಮನಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಸಿನಿಮಾ ನಿಭಾಯಿಸುವುದರಲ್ಲಿ ಚಂಪಾ ಶೆಟ್ಟಿ ಗೆದ್ದಿದ್ದಾರೆ.

ಆದರೆ ಇಷ್ಟೆಲ್ಲಾ ಸಾಮರ್ಥ್ಯವಿದ್ದರೂ ಈ ಸಿನಿಮಾಕ್ಕೆ ಗಟ್ಟಿ ಕತೆಯ ಬುನಾದಿ ಇಲ್ಲದ್ದರಿಂದ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ಗೆಲ್ಲುವುದಿಲ್ಲ. ಅತೃಪ್ತಿ ಉಳಿಸಿಬಿಡುತ್ತದೆ. ಸಿನಿಮಾ ಪ್ರಾರಂಭವಾದ ಐದು ನಿಮಿಷದಲ್ಲಿಯೇ ಈ ಸಿನಿಮಾದ ಹೂರಣ ನಿಮಗೆ ಸಂಪೂರ್ಣವಾಗಿ ತಿಳಿದು ಬಿಡುತ್ತದೆ. ನಿಮ್ಮ ನಿರೀಕ್ಷೆ ಒಂದಿಷ್ಟೂ ಬೇರೆಯಾಗದಂತೆ ತೊಂಬತ್ತು ನಿಮಿಷದಲ್ಲಿ ಸಿನಿಮಾ ಮುಗಿಯುತ್ತದೆ. ಬಡತನ, ಸ್ತ್ರೀಶೋಷಣೆ, ಮದ್ಯಪಾನ – ಇತ್ಯಾದಿ ಸಂಗತಿಗಳು ನಿಸ್ಸಂಶಯವಾಗಿ ನಮ್ಮ ಸಮಾಜವನ್ನು ಕಾಡುತ್ತಿರುವ ತೀಕ್ಷ್ಣ ಸಂಗತಿಗಳೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಹೊಸರೂಪಕಗಳಲ್ಲಿ, ಹೊಸ ನಡೆಯಲ್ಲಿ, ಹಲವು ಆಯಾಮಗಳೊಂದಿಗೆ ಹೇಳಬೇಕು. ಈಗಾಗಲೇ ‘ಕೋಳಿ ಎಸ್ರು’ ತರಹದ ಹಲವು ಕತೆಗಳನ್ನು ಓದಿದ್ದೇವೆ, ಸಿನಿಮಾಗಳನ್ನು ನೋಡಿದ್ದೇವೆ. ಸವಕಲು ರೂಪಕಗಳು ಮಹತ್ವದ ಸಾಮಾಜಿಕ ಸಮಸ್ಯೆಗಳನ್ನೂ ದುರ್ಬಲಗೊಳಿಸಿಬಿಡುತ್ತವೆ. ಇಡೀ ಸಿನಿಮಾಕ್ಕೆ ಒಂದೇ ಆಯಾಮ, ಒಂದು ಸಾಲಿನ ಕತೆ. ಕೇವಲ ಕಥನೇತರ ತಾಂತ್ರಿಕ ಕಾರಣಗಳಿಗಾಗಿಯೇ ಒಂದು ಸಿನಿಮಾ ನೋಡುವುದು ಕಷ್ಟ.

ಈ ಹಿಂದೆ ನಮ್ಮ ಹಿರಿಯ ನಿರ್ದೇಶಕರು ಈ ಸಮಸ್ಯೆಯನ್ನು ಹಲವು ರೀತಿಯಲ್ಲಿ ಬಗೆಹರಿಸಿಕೊಂಡಿದ್ದಾರೆ. ಆಯ್ಕೆ ಮಾಡಿಕೊಳ್ಳುವಾಗಲೇ ಸಂಕೀರ್ಣ ಕತೆಯೊಂದನ್ನು ಗುರುತಿಸುತ್ತಾರೆ (ಉದಾ. ಘಟಶ್ರಾದ್ಧ, ತಬರನ ಕತೆ). ಒಮ್ಮೊಮ್ಮೆ ಸೃಜನೇತರ ಕಾರಣದಿಂದ ಸರಳ ಕತೆಯೊಂದನ್ನೇ ಸಿನಿಮಾ ಮಾಡುವ ಪ್ರಸಂಗ ಬಂದಾಗ, ಅದಕ್ಕೆ ಹೊಸತಾಗಿ ಸಂಕೀರ್ಣತೆ ಸೇರಿಸಿ ಕತೆಗೆ ಕವಲು ಮೂಡಿಸಿ ಕೊನರಿಸಿದ್ದಾರೆ. (ಭೂತಯ್ಯನ ಮಗ ಅಯ್ಯು, ಹಸೀನಾ, ಶುಭಮಂಗಳ). ಇಲ್ಲಿ ನಿರ್ದೇಶಕಿಗೆ ಎರಡನೆಯ ಸವಾಲು ಎದುರಾಗಿದೆ. ಅದನ್ನು ಇನ್ನಷ್ಟು ಸೃಜನಶೀಲವಾಗಿ ನಿಭಾಯಿಸುವ ಅವಶ್ಯಕತೆ ಇತ್ತು.

ಉಳಿದ ಸಂಗತಿಗಳೇನೇ ಇರಲಿ, ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕಿಯೊಬ್ಬರು ಗಟ್ಟಿ ನಿಲ್ಲುವುದೇ ದೊಡ್ಡ ಸವಾಲು. ಅದನ್ನು ಕಳೆದೊಂದು ದಶಕದಿಂದ ಚಂಪಾ ಶೆಟ್ಟಿ ನಿರಂತರವಾಗಿ ಗೆದ್ದು ತೋರಿಸಿದ್ದಾರೆ. ಅದಕ್ಕಾಗಿಯೇ ಈ ಸಿನಿಮಾವನ್ನು ನಾವು ನೋಡುವ ಅವಶ್ಯಕತೆ ಇದೆ. ಹತ್ತಾರು ಮಹತ್ವದ ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಮತ್ತು ಬಹುಮಾನ ಪಡೆದ ಈ ಅಪರೂಪದ ಕೃತಿಯನ್ನು ನಮ್ಮೂರಿನ ಚಿತ್ರಮಂದಿರಗಳಲ್ಲಿ ನೋಡುವುದು ನಮ್ಮ ಜವಾಬ್ದಾರಿ. ಸಸ್ಯಾಹಾರಿಗಳೂ ಚಪ್ಪರಿಸಬಹುದಾದ ಈ ‘ಕೋಳಿ ಎಸ್ರು’ ಎಲ್ಲರಿಗೂ ಒಂದಿಷ್ಟಾದರೂ ದಕ್ಕಲಿ. ನಾಲಿಗೆಯ ಬಯಕೆಯನ್ನು ತೀರಿಸಲಿ.

LEAVE A REPLY

Connect with

Please enter your comment!
Please enter your name here