ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಮಿನರ್ವ ಮಿಲ್ ಸೆಟ್‌ನ ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಹೀರೋ ಉಪೇಂದ್ರರಿಗೆ ಬಾಲಿವುಡ್ ನಟ ನವಾಬ್ ಷಾ ಜೊತೆಯಾಗಿದ್ದಾರೆ.
ಅಪಾರ ಬೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ‘ಕಬ್ಜ’ ಸಿನಿಮಾತಂಡಕ್ಕೆ ಬಾಲಿವುಡ್ ನಟ ನವಾಬ್ ಷಾ ಸೇರ್ಪಡೆಯಾಗಿದ್ದಾರೆ. ಷಾ ಮತ್ತು ಉಪೇಂದ್ರ ನಟನೆಯ ದೃಶ್ಯಗಳು ಚಿತ್ರೀಕರಣಗೊಳ್ಳುತ್ತಿವೆ. ಈ ಸನ್ನಿವೇಶಗಳಿಗಾಗಿ ‘ಕೆಜಿಎಫ್’ ಸಿನಿಮಾ ಖ್ಯಾತಿಯ ಶಿವಕುಮಾರ್ ಮಿನರ್ವ ಮಿಲ್‌ನಲ್ಲಿ ಅದ್ಧೂರಿ ಸೆಟ್ ಹಾಕಿದ್ದಾರೆ. ಈಗಾಗಲೇ ಚಿತ್ರದ ಶೇ.50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಅದ್ಧೂರಿ ಸೆಟ್‌ನಲ್ಲಿ ಬಹಳಷ್ಟು ಸನ್ನಿವೇಶಗಳು ಚಿತ್ರೀಕರಣಗೊಳ್ಳಲಿವೆಯಂತೆ. ಅಲ್ಲಿಗೆ ಶೇ.75ರಷ್ಟು ಚಿತ್ರೀಕರಣ ಪೂರ್ಣಗೊಂಡಂತಾಗುತ್ತದೆ ಎನ್ನುತ್ತಾರೆ ಆರ್.ಚಂದ್ರು. ಬೆಂಗಳೂರಿನ ನಂತರ ಚಿತ್ರತಂಡ ಮಂಗಳೂರು ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲಿದೆ.
ನಿರ್ದೇಶಕ ಆರ್.ಚಂದ್ರು ಅವರಿಗೆ ನಟ ಉಪೇಂದ್ರ ಅವರ ಸಂಪೂರ್ಣ ಸಹಕಾರ ಸಿಕ್ಕಿದೆ. ಉಪೇಂದ್ರರ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ಅವರಿಗೆ ಉಪೇಂದ್ರರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. “ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಅಷ್ಟೊಂದು ಸುಲಭವಲ್ಲ. ಇಲ್ಲಿಯವರೆಗೂ ನಾನೇನು ಮಾಡಿದ್ದೇನು ಎಂಬುದನ್ನು ಫೋಟೊಸ್ ಮೂಲಕ ನೋಡಿದ್ದೀರಾ, ದೀಪಾವಳಿಗೆ ದೃಶ್ಯಾವಳಿ ಮೂಲಕ ನೋಡಲಿದ್ದೀರಿ. ಉಪ್ಪಿ ಸರ್ ಅವರ ಬೆಂಬಲದಿಂದಾಗಿ ನನ್ನ ಕನಸು ನನಸಾಗುತ್ತಿದೆ. ನನ್ನ ಮತ್ತು ಅವರ ಸಾಮರಸ್ಯ ಚೆನ್ನಾಗಿದೆ. ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇದು ಬಾಹುಬಲಿ ಚಿತ್ರಕ್ಕಿಂತ ಹೆಚ್ಚೇ ಆಗಲಿದೆ. ನವಾಬ್ ಷಾ ಅವರಂತಹ ಟೆರಿಫಿಕ್ ಅಜಾನುಬಾಹು ಚಿತ್ರತಂಡ ಸೇರಿದ್ದು, ಸಿನಿಮಾಗೆ ಮತ್ತಷ್ಟು ಬಲ ಬಂದಿದೆ. ಹಾಲಿವುಡ್ ಮಟ್ಟದಲ್ಲಿ ನಮ್ಮ ಸಿನಿಮಾ ತಯಾರಾಗುತ್ತಿದೆ” ಎನ್ನುತ್ತಾರೆ ಚಂದ್ರು. ಮುಂದೆ ‘ಕಬ್ಜ’ ಪಾರ್ಟ್ 2 ಸಿನಿಮಾ ಮಾಡುವ ಕುರಿತೂ ಅವರು ಆಲೋಚಿಸುತ್ತಿದ್ದಾರೆ.
ನಟ ಉಪೇಂದ್ರರಿಗೆ ಮೊದಲು ಚಂದ್ರು 120 ದಿನಗಳ ಕಾಲ್‌ಶೀಟ್ ಕೇಳಿದ್ದರಂತೆ. ಇದೀಗ ಕಾಲ್‌ಶೀಟ್ 150 ದಿನಕ್ಕೆ ಹೋಗಿದೆ. “ಚಂದ್ರು ಅವರ ಸಿನಿಮಾ ಪ್ಯಾಷನ್ ಮೆಚ್ಚುವಂಥದ್ದು. ಹೊಸ ಪ್ರಯೋಗಗಳಿಗೆ ಹಾತೊರೆಯುತ್ತಾರೆ. ಅದಕ್ಕೆ ನನ್ನ ಸಹಕಾರ ಇದ್ದೇ ಇದೆ. ಅವರ ಕನಸಿಗೆ ನಮ್ಮ ಬೆಂಬಲ ಇದೆ. ಕಥೆ ಕೇಳಿದಾಗ ಅಚ್ಚರಿಯಾಗಿತ್ತು. ಹೇಗೆ ಮಾಡುತ್ತೀರಿ ಎಂದು ಚಂದ್ರುಗೆ ಕೇಳಿದ್ದೆ. ಅವರು ಏನು ಅಂದುಕೊಂಡಿದ್ದಾರೋ ಅದು ನೆರವೇರಿದೆ” ಎನ್ನುತ್ತಾರೆ ನಟ ಉಪೇಂದ್ರ. “ಕನ್ನಡದಲ್ಲಿ ಉಪೇಂದ್ರರ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ. ರೆಟ್ರೋ ಕಾಲಘಟ್ಟ ಎಂಬುದಕ್ಕಿಂತ ಒಂದು ಭೂಗತ ಲೋಕದ ಅನಾವರಣವಿದು. ನಾನು ಹಲವು ಸೌತ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿದು ಒಳ್ಳೆಯ ಅವಕಾಶ” ಎನ್ನುವುದು ನವಾಬ್ ಷಾ ಅವರ ಹೇಳಿಕೆ.
ಎಂ.ಟಿ.ಬಿ.ನಾಗರಾಜ್ ಅರ್ಪಿಸುವ ಚಿತ್ರದ ನಿರ್ಮಾಣದ ಹೊಣೆಯನ್ನು ಆರ್.ಚಂದ್ರು ಅವರೇ ಹೊತ್ತಿದ್ದಾರೆ. ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ, ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂ ಮೋರ್,ವಿಜಯ್, ಪೀಟರ್ ಹೇನ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ವಿಶಿಷ್ಟ ಪಾತ್ರವೊಂದರಲ್ಲಿ ನಟ ಸುದೀಪ್ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ‘ಮುಕುಂದ ಮುರಾರಿ’ ಚಿತ್ರದ ನಂತರ ಇಲ್ಲಿ ಮತ್ತೊಮ್ಮೆ ಉಪೇಂದ್ರ – ಸುದೀಪ್ ಜೊತೆಯಾಗಿದ್ದಾರೆ. ಕಾಮರಾಜನ್, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು ಮತ್ತಿತರರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ನಾಯಕಿ ಯಾರೆನ್ನುವುದನ್ನು ಬಹಿರಂಗಪಡಿಸುತ್ತೇವೆ ಎನ್ನುತ್ತಾರೆ ಆರ್.ಚಂದ್ರು.