ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಶಿವರಾಂ ಅಗಲಿದ್ದಾರೆ. ಆರು ದಿನಗಳ ಹಿಂದೆ ಮನೆಯಲ್ಲಿ ಅವರು ಕುಸಿದು ಬಿದಿದ್ದರು. ತಲೆಗೆ ಪೆಟ್ಟು ಬಿದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ನಟ ಶಿವರಾಂ ಅವರದ್ದು ಆರು ದಶಕಗಳ ಸಿನಿಮಾ ನಂಟು. ಕನ್ನಡ ಚಿತ್ರರಂಗದ ಎಲ್ಲರಿಂದಲೂ ‘ಶಿವರಾಮಣ್ಣ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ, ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಹಿರಿಯ ನಟ ಶಿವರಾಂ (83 ವರ್ಷ) ಇನ್ನು ನೆನಪು ಮಾತ್ರ. ಆರು ದಿನಗಳ ಹಿಂದೆ ಬೆಂಗಳೂರು ಬನಶಂಕರಿ ಬಡವಾಣೆಯಲ್ಲಿನ ತಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರ ತಲೆಗೆ ಪೆಟ್ಟಾಗಿತ್ತು. ಮೆದುಳು ರಕ್ತಸ್ರಾವ ಆದುದರಿಂದ ಆಸ್ಪತ್ರೆಯ ಐಸಿಯೂನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು. ಕನ್ನಡ ಚಿತ್ರರಂಗದ ಮೂರು ತಲೆಮಾರಿನ ನಟರೊಂದಿಗೆ ಅಭಿನಯಿಸಿದ ಶಿವರಾಂರ ಅಗಲಿಕೆಯಿಂದ ಸಿನಿಮಾ ತಲೆಮಾರುಗಳನ್ನು ಬೆಸೆದಿದ್ದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಶಿವರಾಂ ಸಹನಿರ್ದೇಶಕರಾಗಿ 1958ರಲ್ಲಿ ಚಿತ್ರರಂಗ ಪ್ರವೇಶಿಸಿದರು. ‘ಬೆರೆತ ಜೀವ’ (1965) ಅವರು ನಟರಾಗಿ ಪರಿಚಯವಾದ ಸಿನಿಮಾ. ಅವರು ಈ ಚಿತ್ರದ ಸಹನಿರ್ಮಾಪಕರೂ ಹೌದು. ಹಾಸ್ಯ, ಪೋಷಕ ಪಾತ್ರಗಳ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲೂ ಅವರ ಹೆಜ್ಜೆಗುರುತು ಇದೆ. ಶರಪಂಜರ, ಬೆಕ್ಕಿನ ಕಣ್ಣು, ಶುಭಮಂಗಳ, ದೇವರ ಗುಡಿ, ಶ್ರಾವಣ ಬಂತು, ಗುರು ಶಿಷ್ಯರು, ನಾಗರಹೊಳೆ, ಒಂದು ಮುತ್ತಿನ ಕತೆ, ಮಲಯ ಮಾರುತ, ಬೆಳದಿಂಗಳ ಬಾಲೆ, ತಾಯಿ ಸಾಹೇಬ ಹೆಸರಿಸಬಹುದಾದ ಅವರ ಕೆಲವು ಪ್ರಮುಖ ಸಿನಿಮಾಗಳು. ‘ಬೆಕ್ಕಿನ ಕಣ್ಣು’ ಅವರ ಅಭಿನಯದ ನೂರನೇ ಸಿನಿಮಾ. ‘ಮಣಿಕಂಠನ ಮಹಿಮೆ’ ಅವರ ಇನ್ನೂರನೇ ಸಿನಿಮಾ.

ಸಹೋದರ ಎಸ್‌.ರಾಮನಾಥನ್‌ ಅವರ ಜೊತೆ ಸೇರಿ ಶಿವರಾಂ ‘ರಾ.ಶಿ.ಸಹೋದರರು’ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ನಾನೊಬ್ಬ ಕಳ್ಳ, ಗೆಜ್ಜೆಪೂಜೆ, ಉಪಾಸನೆ, ಹೃದಯ ಸಂಗಮ, ಡ್ರೈವರ್ ಹನುಮಂತು… ಈ ಸಂಸ್ಥೆಯಡಿ ತಯಾರಾದ ಪ್ರಮುಖ ಸಿನಿಮಾಗಳು. ರಾಶಿ ಸಹೋದರರು ನಿರ್ದೇಶಿಸಿದ ‘ಹೃದಯ ಸಂಗಮ’ ಸಿನಿಮಾ 1972-73ನೇ ಸಾಲಿನ ನಾಲ್ಕನೇ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಪಡೆಯಿತು. ನಟಿ ಜಯಮಾಲಾ ಅವರು ನಿರ್ಮಿಸಿ, ನಟಿಸಿದ ‘ತಾಯಿಸಾಹೇಬ’ ಚಿತ್ರದ ಉತ್ತಮ ನಟನೆಗೆ ಅತ್ಯುತ್ತಮ ಪೋಷಕ ನಟ (1997-98) ರಾಜ್ಯಪ್ರಶಸ್ತಿಗೆ ಶಿವರಾಂ ಪಾತ್ರರಾಗಿದ್ದಾರೆ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಹಲವು ವರ್ಷ ದುಡಿದಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೂ ಅವರ ಸೇವೆ ಸಂದಿದೆ. ಅವರ ನಿರ್ಮಾಣದ ಚಿತ್ರಗಳ ಮೂಲಕ ಹಲವು ಕಲಾವಿದರು ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಓದುವ ಹವ್ಯಾಸವಿದ್ದ ಅವರು ತಮ್ಮ ಮನೆಯಲ್ಲಿ ದೊಡ್ಡ ಗ್ರಂಥಾಲಯ ಹೊಂದಿದ್ದರು. ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ, ಚಿತ್ರರಂಗದ ಹಿರಿಯರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here