ಖ್ಯಾತ ಬಹುಭಾಷಾ ನಟ ಆರ್‌ ಮಾಧವನ್‌ ಅವರು ಪುಣೆಯ FTII ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರತಿಷ್ಠಿತ ಸಂಸ್ಥೆಯ ಪ್ರಮುಖ ಹುದ್ದೆಗೆ ನೇಮಕಗೊಂಡಿರುವ ಮಾಧವನ್‌ ಅವರನ್ನು ಸಿನಿಮಾರಂಗದ ಪ್ರಮುಖರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವರು ಅಭಿನಂದಿಸಿದ್ದಾರೆ.

ನಟ ಆರ್ ಮಾಧವನ್ ಅವರು ಪುಣೆಯ FTIIಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಧವನ್‌ ಆಪ್ತರು ನಟನನ್ನು ಅಭಿನಂದಿಸಿದ್ದಾರೆ. ‘FTII ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ನಟ ಮಾಧವನ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ನೈತಿಕತೆಯು ಈ ಸಂಸ್ಥೆಗೆ ಧನಾತ್ಮಕ ಬದಲಾವಣೆಗಳನ್ನು ತರಲಿದ್ದು, ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುವ ಭರವಸೆಯಿದೆ. ನಿಮಗೆ ಶುಭಾಶಯಗಳು’ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. ‘ಈ ಗೌರವ ಮತ್ತು ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು. ನಿಮ್ಮ ನಿರೀಕ್ಷೆಗಳನ್ನು ಈಡೇರಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ ಮಾಧವನ್.

ಮಾಧವನ್‌ ಅವರ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ (Rocketry: The Nambi Effect) ಸಿನಿಮಾ 69ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ‘ಅತ್ಯುತ್ತಮ ಚಲನಚಿತ್ರ’ ಪ್ರಶಸ್ತಿಯನ್ನು ಗೆದ್ದಿದೆ. ಈ ಚಿತ್ರವು ಮಾಜಿ ಇಸ್ರೋ ವಿಜ್ಞಾನಿ ಎಸ್ ನಂಬಿ ನಾರಾಯಣನ್ ಅವರ ಜೀವನ ಮತ್ತು ಭಾರತದ ಬಾಹ್ಯಾಕಾಶ ಸಂಸ್ಥೆಗೆ ಅವರು ನೀಡಿದ ಕೊಡುಗೆಗಳ ಕುರಿತಾಗಿದೆ. ಈ ಚಿತ್ರದಲ್ಲಿ ಶಾರುಖ್‌ ಖಾನ್‌, ಸೂರ್ಯ, ರಜಿತ್‌ ಕಪೂರ್‌, ಮಿಶಾ ಘೊಶಾಲ್‌, ಸಿಮ್ರಾನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಇಸ್ರೋದ ‘ಚಂದ್ರಯಾನ 3’ ಯೋಜನೆಯು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸವನ್ನು ಸೃಷ್ಟಿಸಿದ ಮಾರನೇ ದಿನದಂದು (ಆಗಸ್ಟ್ 24) ‘ರಾಕೆಟ್ರಿ’ಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಉದ್ಯಮವನ್ನು ರೂಪಿಸುವಲ್ಲಿ FTII ಮಹತ್ವದ ಪಾತ್ರವನ್ನು ವಹಿಸಿದೆ. ಚಲನಚಿತ್ರ ಪ್ರಪಂಚಕ್ಕೆ ಅನೇಕ ಪ್ರತಿಭಾವಂತ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ತಂತ್ರಜ್ಞರನ್ನು FTII ಕೊಡುಗೆಯಾಗಿ ನೀಡಿದೆ. ರಾಜ್‌ಕುಮಾರ್ ಹಿರಾನಿ, ಮಣಿ ಕೌಲ್ ಮತ್ತು ಶ್ಯಾಮ್ ಬೆನಗಲ್ ಅವರಂತಹ ಕೆಲವು ಅದ್ಭುತ ಚಲನಚಿತ್ರ ನಿರ್ಮಾಪಕರು ಜೊತೆಗೆ ನಾಸಿರುದ್ದೀನ್ ಶಾ, ಶಬಾನಾ ಅಜ್ಮಿ, ಓಂ ಪುರಿ ಮುಂತಾದ ಕಲಾವಿದರು ಈ ಸಂಸ್ಥೆಯಲ್ಲಿ ಕಲಿತು ಬಂದವರೇ ಆಗಿದ್ದಾರೆ.

LEAVE A REPLY

Connect with

Please enter your comment!
Please enter your name here