ಸೂರ್ಯ ನಿರ್ಮಿಸಿ, ನಟಿಸಿರುವ ‘ಜೈ ಭೀಮ್‌’ ತಮಿಳು ಸಿನಿಮಾದ ಆಯ್ದ ದೃಶ್ಯಗಳ ವೀಡಿಯೊ ಆಸ್ಕರ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರವಾಗುತ್ತಿದೆ. ಸಿನಿಮಾದ ದೃಶ್ಯಗಳು ಹಾಗೂ ಚಿತ್ರ ರೂಪುಗೊಂಡ ಬಗೆಯ ಕುರಿತಾದ ನಿರ್ದೇಶಕ ಟಿ.ಜೆ.ಜ್ಞಾನವೇಲ್‌ ಮಾತುಗಳೂ ಈ ವೀಡಿಯೋದಲ್ಲಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆದ ‘ಜೈ ಭೀಮ್‌’ ತಮಿಳು ಸಿನಿಮಾ ಭಾರತದಾದ್ಯಂತ ಸದ್ದು ಮಾಡಿತ್ತು. ಮೂಲ ತಮಿಳು ಭಾಷೆ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ಸ್ಟ್ರೀಮ್‌ ಆಗಿತ್ತು. ಪ್ರಮುಖರಿಂದ ಪ್ರಶಂಸೆಗೊಳಗಾಗಿದ್ದ ಸಿನಿಮಾ ‘Best Non-English Language Film’ ವಿಭಾಗದಲ್ಲಿ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಇದೀಗ ಸಿನಿಮಾದ ಕೆಲವು ಆಯ್ದ ಪ್ರಮುಖ ದೃಶ್ಯಗಳನ್ನೊಳಗೊಂಡ ವೀಡಿಯೋ ಆಸ್ಕರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ಈ ವೀಡಿಯೋದಲ್ಲಿ ಚಿತ್ರದ ನಿರ್ದೇಶಕ ಟಿ.ಜೆ.ಜ್ಞಾನವೇಲ್‌ ಅವರ ಸಿನಿಮಾ ಸೆಟ್ಟೇರಿದ ಬಗೆ, ಕತೆಯ ಒಳನೋಟ, ಆಶಯಗಳ ಮಾತುಗಳಿವೆ. ಈ ಗೌರವಕ್ಕೆ ಪಾತ್ರವಾದ ಮೊದಲ ತಮಿಳು ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಜೈ ಭೀಮ್‌’ ಪಾತ್ರವಾಗಿದೆ.

ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಪ್ರಯೋಗ ತೊಂಬತ್ತರ ದಶಕದ ನೈಜ ಘಟನೆಯೊಂದರ ಪ್ರೇರಣೆಯಿಂದ ತಯಾರಾದ ಸಿನಿಮಾ. ಬುಡಕಟ್ಟು ಜನರ ಸಾಮಾಜಿಕ ಹಕ್ಕುಗಳಿಗಾಗಿ ವಕೀಲನೊಬ್ಬ ದಿಟ್ಟತನದಿಂದ ಹೋರಾಟ ನಡೆಸಿದ ವಸ್ತು ಸಿನಿಮಾದ ಕತೆ. ವಕೀಲನ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದರು. ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಚಿತ್ರ ಮೆಚ್ಚಿ ತಲೆದೂಗಿದ್ದರು. ಮುಖ್ಯಮಂತ್ರಿ ಸ್ಟಾಲಿನ್‌ ಶೋಷಿತ ವರ್ಗಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಿದ್ದರು. ರಜಿಷಾ ವಿಜಯನ್‌, ಪ್ರಕಾಶ್‌ ರೈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೇಜಾನ್‌ ಪ್ರೈಮ್‌ ಜೊತೆಗಿನ ನಾಲ್ಕು ಸಿನಿಮಾಗಳ ಒಪ್ಪಂದದ ಭಾಗವಾಗಿ ‘ಜೈ ಭೀಮ್‌’ ತೆರೆಕಂಡಿತ್ತು. ಆಸ್ಕರ್‌ ಗೌರವದ ಸಂಗತಿಯನ್ನು ಚಿತ್ರತಂಡದ ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Previous articleಜನಾಂಗೀಯ ಘರ್ಷಣೆಯ ಕತೆ ‘ಇನಾಮ್ದಾರ್‌’; ರಂಜನ್‌ – ಭೂಮಿಕಾ ಅಭಿನಯದ ಸಿನಿಮಾ
Next articleಟ್ರೈಲರ್‌ | ದಿ ಗ್ರೇಟ್‌ ಇಂಡಿಯನ್‌ ಮರ್ಡರ್‌; ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಫೆ.4ರಿಂದ

LEAVE A REPLY

Connect with

Please enter your comment!
Please enter your name here