ಮಾರಿ ಸೆಲ್ವರಾಜ್‌ ನಿರ್ದೇಶನದ ತಮಿಳು ಸಿನಿಮಾ ‘ಮಾಮ್ಮನ್ನನ್’ ಒಂದು ರಾಜಕೀಯ ಚಿತ್ರವಾಗಿ, ಏನು ಹೇಳಬೇಕೆಂದು ಬಯಸುತ್ತದೆಯೋ ಅದನ್ನು ಹೇಳುವುದರಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರದಲ್ಲಿ ಕೇಳಿಬರುವ ಚಪ್ಪಾಳೆ, ಶಿಳ್ಳೆಗಳೇ ಅದಕ್ಕೆ ಸಾಕ್ಷಿ. ಆದರೆ, ದೃಶ್ಯಮಾಧ್ಯಮದ ಕಲಾ ಸಾಧ್ಯತೆಗಳನ್ನು ಸರಿಯಾಗಿ ಬಳಸಿಕೊಂಡು ಅದೇ ರಾಜಕೀಯವನ್ನು ಮತ್ತಷ್ಚು ಪರಿಣಾಮಕಾರಿಯಾಗಿ ಹೇಳಬಹುದಿತ್ತು ಎಂಬ ಬೇಸರವನ್ನು ಉಳಿಸುತ್ತದೆ.

ಸುಮಾರು 10 ವರ್ಷಗಳ ಹಿಂದೆ ಇರಬಹುದು. ಇಂಟರ್‌ನೆಟ್‌ನಲ್ಲಿ ಏನೋ ಹುಡುಕುವಾಗ ‘ಜೀವನ ಚೈತ್ರ’ ಸಿನಿಮಾವನ್ನು ನೋಡಿದ್ದ ವಿದೇಶಿ ವ್ಯಕ್ತಿಯೊಬ್ಬರ ಅಭಿಪ್ರಾಯ ಕಣ್ಣಿಗೆ ಬಿದ್ದಿತ್ತು. ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಮಾತನಾಡುವ ಸಿನಿಮಾವಾಗಿ ನಮಗೆಲ್ಲಾ ಕಂಡಿದ್ದ ‘ಜೀವನಚೈತ್ರ’ವನ್ನು ನೋಡಿ ಆ ವಿದೇಶಿ ವ್ಯಕ್ತಿ ಅಚ್ಚರಿಗೊಂಡಿದ್ದ. ಕಾರಣ ಓರ್ವ ಜಮೀನ್ದಾರನನ್ನು ಊರಿನ ಜನ ದೊರೆಯಂತೆ ಭಾವಿಸಿ, ಆತನ ಮುಂದೆ ನಡುಬಗ್ಗಿಸಿ ಆಜ್ಞಾಧಾರಿ ಪ್ರಜೆಗಳಂತೆ ವರ್ತಿಸುವುದು. ಈಗಿನ ಕಾಲದಲ್ಲೂ ಈ ಮಟ್ಟಿನ ಫ್ಯೂಡಲ್ ವ್ಯವಸ್ಥೆ ಉಳಿದಿದೆಯೇ ಮತ್ತು ಅವನ ಎಲ್ಲಾ ಒಳ್ಳೆಯ ಗುಣಗಳ ಹೊರತಾಗಿಯೂ ಆ ಜಮೀನ್ದಾರ ಅಂತಹವೊಂದು ವರ್ಗ ವ್ಯವಸ್ಥೆಯ ವಿರುದ್ಧ ಮಾತನಾಡುವ ಬದಲು ಅದನ್ನು ಏಕೆ ಒಪ್ಪಿಕೊಳ್ಳುತ್ತಾನೆ ಎಂಬುದು ಆತನ ಪ್ರಶ್ನೆಯಾಗಿತ್ತು. ಆ ಪ್ರಶ್ನೆಯನ್ನು ಭಾರತೀಯ ಚಿತ್ರರಂಗ ತನಗೆ ತಾನೇ ಕೇಳಿಕೊಂಡಿದ್ದು ಮತ್ತು ಆ ನಿಟ್ಟಿನಲ್ಲಿ ಅಗತ್ಯ ಬದಲಾವಣೆ ಆರಂಭವಾಗಿದ್ದು ತೀರಾ ಇತ್ತೀಚೆಗೆ. ಈ ವರ್ಗ ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಜಾತಿವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ತಮ್ಮ ಚಿತ್ರಗಳಲ್ಲಿ ಜಾತಿ ಸಮೀಕರಣಗಳನ್ನು ತಿದ್ದಿ ಬರೆಯುತ್ತಿರುವ ಕೆಲವೇ ಪ್ರಮುಖ ನಿರ್ದೇಶಕರುಗಳ ಸಾಲಲ್ಲಿರುವ ಮಾರಿ ಸೆಲ್ವರಾಜ್ ಅವರ ಮೂರನೇ ಚಿತ್ರ ‘ಮಾಮನ್ನನ್’ ಕೂಡ ತನ್ನ ರಾಜಕೀಯವನ್ನು ಸ್ವಷ್ವವಾಗಿ ಮತ್ತು ನಿಖರವಾಗಿ ದಾಖಲಿಸುತ್ತದೆ.

ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡು, ಊಳಿಗಮಾನ್ಯ ಪದ್ಧತಿ ಮಾನ್ಯತೆ ಕಳೆದುಕೊಂಡ ಮೇಲೂ ಭಾರತೀಯ ಚಿತ್ರರಂಗದಲ್ಲಿ ‘ಒಳ್ಳೆಯ’ ಭೂಮಾಲಿಕರನ್ನು ವೈಭವೀಕರಿಸುವಂತಹ ನೂರಾರು ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳು ಬಂದಿವೆ. ದುಷ್ಟರ ವಿರುದ್ಧ ಹೋರಾಡುವ, ಊರನ್ನು ರಕ್ಷಿಸುವ, ಇಂತಹ ಹಲವಾರು ಮರೆಯಲಾಗದ ನಾಯಕ ಪಾತ್ರಗಳನ್ನು ಈ ಚಿತ್ರಗಳು ನೀಡಿವೆಯಾದರೂ, ಅದು ತಪ್ಪಲ್ಲವಾದರೂ, ಈ ನಾಯಕರೆಲ್ಲಾ ಮೇಲ್ವರ್ಗದಿಂದ, ಮೇಲು ಜಾತಿಯಿಂದ ಬಂದವರೇ ಎಂಬುದು ವಿಶೇಷ. ಮತ್ತು ಅಂತಹ ಒಬ್ಬ ನಾಯಕನಿಗಾಗಿ ಜೀವ ತೆರಲೂ ಸಿದ್ದವಿರುವ, ನಿಷ್ಟಾವಂತ ಸೇವಕರು, ಆತನ ಮುಂದೆ ಕೈ ಕಟ್ಟಿ ಬೆನ್ನು ಬಾಗಿ ನಿಲ್ಲುವ ಮಂದಿ, ಮತ್ತು ಆ ದೊರೆ ರಕ್ಷಿಸಬೇಕಾದ ಜನರು ಬಹುತೇಕ ಕೆಳಜಾತಿಯವರಾಗಿರುತ್ತಿದ್ದರು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಇಂತಹ ಊರ ದೊರೆಯ ಚಿತ್ರಗಳು, ಹಳ್ಳಿಗಳಲ್ಲಿ ಬಹುತೇಕ ಅದೇ ವರ್ಗ ವ್ಯವಸ್ಥೆ ಇದ್ದ ಕಾಲದಲ್ಲಿ ಮಾತ್ರವಲ್ಲದೆ, ಕಳೆದ ದಶಕದವರೆಗೂ ತೆರೆಗೆ ಬಂದವು ಮತ್ತು ಜನಪ್ರಿಯವೂ ಆದವು.

ಇಂತಹ ಒಂದು ಸ್ಥಾಪಿತ ನಿರೂಪಣೆಯನ್ನು ಕೆಡವಿ ಮತ್ತೆ ಕಟ್ಟುವ ಪ್ರಯತ್ನದ ಮುಂಚೂಣಿಯಲ್ಲಿರುವ ಪಾ ರಂಜಿತ್ ಅವರ ‘ಕಾಲಾ’ ಚಿತ್ರ, ಬೇರೊಂದು ನೆಲೆಯಲ್ಲೂ ಹೊಸ ಪ್ರಯತ್ನವಾಗಿತ್ತು. ದಲಿತ ಕೇಂದ್ರಿತ ಕತೆಗಳು ಬರುವುದು ಮಾತ್ರ ಮುಖ್ಯವಲ್ಲ, ಅವುಗಳಲ್ಲಿ ದಲಿತರೇ ನಾಯಕರಾಗುವುದು ಮತ್ತು ಶೋಷಿತರನ್ನು ರಕ್ಷಿಸಲು ಮೇಲ್ಜಾತಿಯ ನಾಯಕರನ್ನು ಕರೆಸದಿರುವುದು ಮುಖ್ಯ ಎಂಬುದನ್ನು ಪ್ರತಿಪಾದಿಸುತ್ತಾ ಅದಕ್ಕೆ ತಕ್ಕಂತೆ ಕತೆಗಳನ್ನು ನಿರೂಪಿಸಿ, ಯಶಸ್ವಿಯಾಗಿರುವ ರಂಜಿತ್ ತಮಿಳಿನ ಕ್ಲಾಸಿಕ್ ಚಿತ್ರ ‘ನಾಯಗನ್’ಗೆ ಪರ್ಯಾಯವಾಗಿ ‘ಕಾಲಾ’ ಚಿತ್ರವನ್ನು ನಿರ್ಮಿಸಿದ್ದರು. ಅಂತಹದೇ ಪ್ರಯತ್ನವನ್ನು ಮಾರಿ ಸೆಲ್ವರಾಜ್ ‘ಮಾಮನ್ನನ್’ ಮೂಲಕ ಮಾಡಿದ್ದಾರೆ. ಅವರೇ ಹೇಳುವಂತೆ ‘ದೇವರ್ ಮಗನ್’ ಚಿತ್ರಕ್ಕೆ ಉತ್ತರವಾಗಿ ಈ ಸಿನಿಮಾವನ್ನು ಹೊರ ತಂದಿದ್ದಾರೆ.

ಸೆಲ್ವರಾಜ್ ಎಲ್ಲಾ ಪ್ರಮುಖ ಪಾತ್ರಗಳನ್ನು ಚಿತ್ರದ ಆರಂಭದಲ್ಲಿಯೇ ಅಚ್ಚುಕಟ್ಟಾಗಿ ಪರಿಚಯಿಸುತ್ತಾರೆ. ಮಾಮನ್ನನ್ (ವಡಿವೇಲು) ಶೋಷಿತ ವರ್ಗದಿಂದ ಬಂದಿರುವ ರಾಜಕೀಯ ನಾಯಕ ಮತ್ತು ಹಾಲಿ ಶಾಸಕ. ಆತನ ಮಗ ಅತಿವೀರನ್ (ಉದಯನಿಧಿ ಸ್ಟಾಲಿನ್) ಉದ್ಯೋಗ ಹಂದಿ ಸಾಕಣಿಕೆ. ಜೊತೆಗೆ ಆತ ಮಾರ್ಷಲ್ ಆರ್ಟ್ ಗುರು. ಮಾಮನ್ನನ್‌ಗೆ ರಾಜಕೀಯವಾಗಿ ತಾನು ಬೆಳೆಯಲು ನೆರವಾಗಿದ್ದು ರತ್ನವೇಲು (ಫಹಾದ ಫಾಸಿಲ್) ತಂದೆ ಎಂಬ ನಂಬಿಕೆ. ಹೀಗಾಗಿ, ರತ್ನವೇಲು ಕುಟುಂಬದ ಮೇಲೆ ವಿಶ್ವಾಸ, ನಿಷ್ಠೆ. ಜಗಳವೊಂದನ್ನು ಮಾತುಕತೆ ಮೂಲಕ ಪರಿಹರಿಸುವ ಸಲುವಾಗಿ ಅತಿವೀರನ್ ಮತ್ತು ರತ್ನವೇಲು ಮುಖಮುಖಿಯಾದಾಗ ಈ ವಿಶ್ವಾಸ ಮತ್ತು ನಿಷ್ಠೆಯ ಪರೀಕ್ಷೆ ನಡೆಯುತ್ತದೆ. ತನ್ನ ಶ್ರೇಷ್ಠತೆಯನ್ನು ಪ್ರಶ್ನಿಸದೇ ಇರುವವರೆಗೂ ‘ಮಾಮನ್ನನ್’ ಜೊತೆ ವಿಶ್ವಾಸದಿಂದ ವರ್ತಿಸುವ ರತ್ನವೇಲು, ತನಗೆ ಸರಿಸಮವಾಗಿ ಕುಳಿತುಕೊಳ್ಳುವ ಧೈರ್ಯ ಮಾಡಿದ ತಕ್ಷಣ ತನ್ನ ನಿಜ ಬಣ್ಣ ತೋರುತ್ತಾನೆ. ಸಮಾನ ಅವಕಾಶ ಇದೆ ಎನ್ನಲಾಗುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರತ್ನವೇಲು ತರಹದ ಬಲಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಜನರೆದುರು, ಹಾಲಿ ಶಾಸಕನಾಗಿದ್ದೂ ಮಾಮನ್ನನ್ ಎಷ್ಚು ಕಷ್ಟ ಅನುಭವಿಸಬೇಕಾಗುತ್ತದೆ ಮತ್ತು ಅದನ್ನು ಆತ ಹೇಗೆ ಎದುರಿಸುತ್ತಾನೆ ಎಂಬುದು ಸಿನಿಮಾದ ಸಂಕ್ಷಿಪ್ತ ಕತೆ.

‘ಮಾಮನ್ನನ್’ ಚಿತ್ರದ ಕೇಂದ್ರದಲ್ಲಿ ತಂದೆ – ಮಗನ ಸಂಬಂಧದ ಕತೆಯೂ ಇದೆ. ಆ ಕತೆಯೂ ಕೂಡ ಭಾರತೀಯ ಸಾಂಪ್ರದಾಯಿಕ ಸಿನಿಮಾಗಳ ಹಾದಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಊರಿಗೆ ಉಪಕಾರಿ, ನಿಷ್ಠುರ, ಸತ್ಯಸಂಧ, ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿನಿಧಿಯಂತಿರುವ ತಂದೆಯ ಬದಲಿಗೆ, ಇಲ್ಲಿ ಮೃದು ಹೃದಯದ, ಮಗನ ಮಾತು ಕೇಳಿ ತನ್ನನ್ನು ತಿದ್ದಿಕೊಳ್ಳುವ, ಹೆಂಡತಿಯ ಕಾಲಬುಡದಲ್ಲಿ ಕುಳಿತು ಆಕೆಯ ಕಾಲು ಮುಟ್ಟಿಕೊಂಡು ಸಮಾಧಾನ ಹೇಳುವ ತಂದೆ ಇದ್ದಾನೆ. ಕುಟುಂಬದ ಹಿರಿಮೆ ಗರಿಮೆಯ ಹೆಸರಲ್ಲಿ ಮಕ್ಕಳನ್ನು ಕಟ್ಟಿಹಾಕುವ, ಎಮೋಷನಲ್‌ ಬ್ಲಾಕ್‌ಮೇಲ್‌ ಮಾಡುವ ಅಪ್ಪ ಇಲ್ಲಿಲ್ಲ. ಬದಲಿಗೆ, ಇಲ್ಲಿ ಸಿಟ್ಟು ಮಾಡಿಕೊಂಡು ಮಾತು ಬಿಟ್ಟಿರುವುದು ಮಗ. ಇಲ್ಲಿ ಅಪ್ಪನ ಮಾನ ಕಾಪಾಡಲು ಮಗ ಯಾವುದೇ ತ್ಯಾಗ ಮಾಡುವುದಿಲ್ಲ. ಅಪ್ಪನಿಗೆ ನ್ಯಾಯವಾಗಿ ದೊರಕಬೇಕಾದ್ದನ್ನು ಗುದ್ದಾಡಿ ಕೊಡಿಸುತ್ತಾನೆ.

ಸಿನಿಮಾದ ಮೊದಲಾರ್ಧದಲ್ಲಿ ಕೆಲವು ನೆನಪಿನಲ್ಲುಳಿಯುವಂತಹ ದೃಶ್ಯಗಳು ಬಂದು ಹೋಗುತ್ತವೆ. ಜಾತಿ ವ್ಯವಸ್ಥೆಯ ಕರಾಳತೆಯನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ಮೂಡಿಸುವ ಸೆಲ್ವರಾಜ್ ಈ ಸಿನಿಮಾದಲ್ಲೂ ಅಂತಹದೊಂದು ದೃಶ್ಯ ಕಟ್ಟಿಕೊಟ್ಟಿದ್ದಾರೆ. ಭಾವಿಗೆ ಈಜಲು ಹೋದ ಶೋಷಿತ ವರ್ಗಕ್ಕೆ ಸೇರಿದ ನಾಲ್ಕು ಮಕ್ಕಳಿಗೆ ಎದುರಾಗುವ ಸ್ಥಿತಿ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಚಿತ್ರಿತವಾಗಿದೆ. ಮೀಸಲಾತಿಯ ಕಾರಣದಿಂದ ಶಾಸಕನಾಗಿದ್ದರೂ, ತನ್ನ ಮಗನ ವಯಸ್ಸಿನ ರತ್ನವೇಲುವಿನ ಬಾಯಲ್ಲಿ ಅಣ್ಣ ಎಂದು ಕರೆಸಿಕೊಂಡರೂ, ಮೇಲ್ವರ್ಗದ ಸಮಾಜದಲ್ಲಿ ತನ್ನ ಸ್ಥಾನ ಏನು ಎಂಬುದರ ಅರಿವು ಮಾಮ್ಮನ್ನನ್‌ಗೆ ಇಲ್ಲದೇ ಇಲ್ಲ. ಆದರೆ, ಆ ಕೆಂಡವನ್ನು ಕೆದಕದೆ ಈ ಮೇಲ್ಮಟ್ಟದ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಯತ್ನ ಮಾಮ್ಮನ್ನನದ್ದು. ಆದರೆ, ಮಗ ಅತಿವೀರನ್ ಆ ಕೆಂಡದ ಮೇಲಿನ ಬೂದಿ ಕೊಡವಿ, ಬೆಂಕಿ ಹಚ್ಚಿದಾಗ ಮಾಮನ್ನನ್ ಪ್ರಜ್ವಲಿಸುತ್ತಾನೆ. ರತ್ನವೇಲು ಮುಂದೆ ಸದಾ ನಿಂತೇ ಇರುವ ಮಾಮನ್ನನ್, ಎಂದೂ ಖುರ್ಚಿಯಲ್ಲಿ ಕೂತಿರದ ಮಾಮನ್ನನ್ ಮೊದಲ ಬಾರಿಗೆ ಕುಳಿತುಕೊಳ್ಳುತ್ತಾನೆ. ಮದ್ಯಂತರದ ಮೊದಲು ಬರುವ ಕತೆಯನ್ನು ಹೊಸ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುವ ಈ ದೃಶ್ಯ ತುಂಬಾ ಶಕ್ತವಾಗಿದೆ.

ಇಂತಹ ಕೆಲವು ದೃಶ್ಯಗಳಿಂದ ಮೊದಲಾರ್ಧದಲ್ಲಿ ಭರವಸೆ ಮೂಡಿಸುವ ಸಿನಿಮಾ ದ್ವಿತೀಯಾರ್ಧದಲ್ಲಿ ಅತೀ ಸಾಧಾರಣವಾದ ಬರವಣಿಗೆಯಿಂದ ಸೋಲುತ್ತದೆ. ಚುನಾವಣೆಯ ದೃಶ್ಯಗಳು, ಹೀರೋನ ಮಾಮೂಲು ಹೊಡೆದಾಟದ ದೃಶ್ಯಗಳು, ರತ್ನವೇಲುವಿನ ದುಷ್ಟತನ ತೋರುವ ಕ್ರೌರ್ಯದ ದೃಶ್ಯಗಳು ಹೊಸದೇನನ್ನೂ ಹೇಳುವುದಿಲ್ಲ. ಅತಿವೀರನ್ ಮನೆಯ ಮುಂದೆ, ವಿದ್ಯಾರ್ಥಿಗಳು ಬಂದು ಆತನಿಗೆ ಬೆಂಬಲ ಸೂಚಿಸುವ ದೃಶ್ಯ ಮತ್ತು ಅದರಲ್ಲಿನ ಸಂಭಾಷಣೆಗಳು ತುಂಬಾ ಕ್ಲೀಷೆಯಾಗಿದೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಶಾಸಕನಾಗಿ ಮರು ಆಯ್ಕೆಯಾದ ಮಾಮ್ಮನ್ನನ್ ಸದನದಲ್ಲಿ ನಡೆದು ಬರುವಾಗಿನ ದೃಶ್ಯ ಕೊಂಚ ಸಮಾಧಾನ ನೀಡುತ್ತದೆ. ಜೊತೆಗೆ, ಕನ್ನಡಿಗರಿಗೆ ಕರ್ನಾಟಕದ ಪ್ರಸ್ತುತ ರಾಜಕೀಯ ಮತ್ತು ಸದನ ಕಲಾಪ ನೆನಪಿಗೆ ಬಂದರೂ ಅಚ್ಚರಿಯೇನಿಲ್ಲ.

ತಮ್ಮ ಹಿಂದಿನ ಸಿನಿಮಾಗಳಂತೆ ಸೆಲ್ವರಾಜ್ ಇದರಲ್ಲೂ ಪ್ರಾಣಿಗಳನ್ನು ಪ್ರತಿಮೆಗಳಾಗಿ ಬಳಸುತ್ತಾರೆ. ಹಂದಿ, ಶೋಷಿತ ವರ್ಗದ ಸ್ಪಿರಿಟ್ ಎನಿಮಲ್ ಆಗಿ ಬಳಕೆಯಾಗಿದ್ದರೆ, ರೇಸ್ ನಾಯಿಗಳು ಶೋಷಕ ವರ್ಗಕ್ಕೆ ಪ್ರತಿಮೆಯಾಗಿ ಬಳಕೆಯಾಗಿದೆ. ಇಡೀ ಚಿತ್ರವನ್ನು ಒಂದು ಹಂತ ಮೇಲಕ್ಕೇರಿಸಿರುವುದರಲ್ಲಿ ಎ ಆರ್ ರೆಹಮಾನ್ ಹಿನ್ನೆಲೆ ಸಂಗೀತ ಮತ್ತ ಹಾಡುಗಳು ನೆರವಾಗಿವೆ. ಅದರಲ್ಲೂ ವಡಿವೇಲು ಗಾಯನ ತುಂಬಾ ಸಮಯದವರೆಗೂ ಕಾಡುವಂತಿದೆ. ಚಿತ್ರವನ್ನು ಕಾಪಾಡಿರುವ ಮತ್ತೊಂದು ಸಂಗತಿ ವಡಿವೇಲು ಮತ್ತು ಫಹಾದ್ ಫಾಸಿಲ್ ನಟನೆ. ಬೇರೆಲ್ಲಾ ಅನ್ಯಾಯಗಳ ವಿರುದ್ಧ ಹೋರಾಡುವುದರ ಜೊತೆಗೆ ವಡಿವೇಲು ಅವರನ್ನು ಹಾಸ್ಯಪಾತ್ರಗಳಿಗೆ ಸೀಮಿತಗೊಳಿಸಿ ಎಸಗಲಾಗಿರುವ ಅನ್ಯಾಯವನ್ನೂ ಈ ಸಿನಿಮಾ ಎತ್ತಿ ತೋರಿಸುವಂತಿದೆ. ಫಹಾದ್ ಫಾಸಿಲ್ ಪಾತ್ರ ಚಿತ್ರಣದಲ್ಲಿ ಹಲವಾರು ತೊಂದರೆಗಳಿದ್ದರೂ ಅವರು ಮಾತ್ರ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಉದಯನಿಧಿ ಹೆಚ್ಚಿನ ಭಾವನೆಗಳನ್ನೇನೂ ತೋರಿಸದಿದ್ದರೂ, ಅದು ಅವರ ಪಾತ್ರಕ್ಕೆ ಹೊಂದಿಕೊಳ್ಳುವ ಕಾರಣ ತೊಂದರೆ ಎನಿಸುವುದಿಲ್ಲ.

ಚಿತ್ರದ ದೊಡ್ಡ ಸಮಸ್ಯೆ ಇರುವುದು ಪಾತ್ರಗಳ ಚಿತ್ರಣದಲ್ಲಿ. ಬಹುತೇಕ ಪಾತ್ರಗಳು ಕಪ್ಪು ಬಿಳುಪಾಗಿವೆ. ರತ್ನವೇಲು ಪಾತ್ರವನ್ನು, ಯಾವುದೋ ಮಾಸ್ ಸಿನಿಮಾವೊಂದರ, ಸೈಕೋಪಾತ್ ವಿಲನ್ ಎಂಬ ರೀತಿಯಲ್ಲಿ, ಒಂದೇ ಆಯಾಮದಲ್ಲಿ ಚಿತ್ರಿಸಲಾಗಿದೆ. ಆತ ತನ್ನ ಜಾತಿಯ ಜನರ ಕಾಲು ಹಿಡಿದು ಕ್ಷಮೆ ಕೇಳುವ ಮೊದಲು ತನ್ನ ಪತ್ನಿಯನ್ನು ತಬ್ಬಿಕೊಳ್ಳುವ ಸಂದರ್ಭವನ್ನು ಬಿಟ್ಟರೆ ಆ ಪಾತ್ರಕ್ಕೆ ಯಾವುದೇ ಲೇಯರ್ ನೀಡಿಲ್ಲ. ಕೀರ್ತಿ ಸುರೇಶ್ ಪಾತ್ರಕ್ಕೆ ಯಾವುದೇ ಪ್ರಾಮುಖ್ಯತೆಯಾಗಲಿ, ವಿಶಿಷ್ಟತೆಯಾಗಲೀ ಇಲ್ಲ. ಬಹುತೇಕ ಎಲ್ಲಾ ಮಹಿಳಾ ಪಾತ್ರಗಳ ಕತೆಯೂ ಅಷ್ಟೇ.

ಮಾಮ್ಮನ್ನನ್ ಒಂದು ರಾಜಕೀಯ ಚಿತ್ರವಾಗಿ, ಏನು ಹೇಳಬೇಕೆಂದು ಬಯಸುತ್ತದೆಯೋ ಅದನ್ನು ಹೇಳುವುದರಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರದಲ್ಲಿ ಕೇಳಿಬರುವ ಚಪ್ಪಾಳೆ, ಶಿಳ್ಳೆಗಳೇ ಅದಕ್ಕೆ ಸಾಕ್ಷಿ. ಆದರೆ, ದೃಶ್ಯಮಾಧ್ಯಮದ ಕಲಾ ಸಾಧ್ಯತೆಗಳನ್ನು ಸರಿಯಾಗಿ ಬಳಸಿಕೊಂಡು ಅದೇ ರಾಜಕೀಯವನ್ನು ಮತ್ತಷ್ಚು ಪರಿಣಾಮಕಾರಿಯಾಗಿ ಹೇಳಬಹುದಿತ್ತು ಎಂಬ ಬೇಸರವನ್ನು ಚಿತ್ರ ಉಳಿಸುತ್ತದೆ. ‘ಪೆರಿಯೇರುಂ ಪೆರುಮಾಳ್’ ಮತ್ತು ‘ಕರ್ಣನ್’ನಂತಹ ಚಿತ್ರಗಳನ್ನು ನೀಡಿರುವ ನಿರ್ದೇಶಕರಿಂದ ಪ್ರೇಕ್ಷಕರ ನಿರೀಕ್ಷೆಯೂ ದೊಡ್ಡ ಮಟ್ಟದಲ್ಲಿರುವುದರಿಂದ ಈ ತೊಂದರೆ ಎದ್ದುಕಾಣುತ್ತದೆ. ಆದರೂ, ದಲಿತರ ಬದುಕು, ದಲಿತ ನಾಯಕರು, ದಲಿತರ ಕತೆಗಳನ್ನು ಮೈನ್ ಸ್ಚ್ರೀಮ್ ಸಿನಿಮಾದ ಸಾಮಾನ್ಯ ಮತ್ತು ಅವಿಭಾಜ್ಯ ಭಾಗವಾಗಿಸುವ, ಅದನ್ನು ಸಂಭ್ರಮಿಸುವ ಹಾದಿಯಲ್ಲಿ ‘ಮಾಮ್ಮನ್ನನ್’ ಖಂಡಿತಾ ಒಂದು ಪ್ರಮುಖ ಸಿನಿಮಾ.

Previous article‘ಅಧೂರಾ’ ಟ್ರೈಲರ್‌ | ಜುಲೈ 7ರಿಂದ Amazon Primeನಲ್ಲಿ ಹಾರರ್‌ ಹಿಂದಿ ಸರಣಿ
Next article‘ಕಿಂಗ್‌ ಆಫ್‌ ಕೋಥಾ’ ಟೀಸರ್‌ | ದುಲ್ಕರ್‌ ಸಲ್ಮಾನ್‌ ಅಂಡರ್‌ವರ್ಲ್ಡ್‌ ಮಲಯಾಳಂ ಸಿನಿಮಾ

LEAVE A REPLY

Connect with

Please enter your comment!
Please enter your name here