ಪ್ಯಾನ್ ಇಂಡಿಯಾ ಸ್ಟಾರ್ ಯಶ್ ‘ಭಜರಂಗಿ 2’ ಸಿನಿಮಾ ನೋಡುವ ಉಮೇದಿನಲ್ಲಿದ್ದಾರೆ. ನಿನ್ನೆ ಚಿತ್ರದ ಪ್ರೀರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಅವರು ನಟ ಶಿವರಾಜಕುಮಾರ್ ತಮಗೆ ಮಾದರಿ ಎಂದರು.
“ನಾನು ಹುಟ್ಟಿದಾಗ ಶಿವರಾಜಕುಮಾರ್ ದೊಡ್ಡ ಸ್ಟಾರ್ ಆಗಿದ್ದರು. ಚಿಕ್ಕಂದಿನಿಂದಲೂ ನಾನು ಅವರನ್ನು ನೋಡಿಕೊಂಡು ಬೆಳೆದವನು. ದೊಡ್ಡ ಹೆಸರು ಮಾಡಿದರೂ ಹೇಗೆ ನಡೆದುಕೊಳ್ಳಬೇಕು? ಹೇಗಿರಬೇಕು? ಎನ್ನುವುದನ್ನು ಶಿವಣ್ಣನನ್ನು ನೋಡಿ ಕಲಿಯಬೇಕು” ಎಂದರು ಯಶ್. ನಿನ್ನೆ ‘ಭಜರಂಗಿ 2’ ಪ್ರೀರಿಲೀಸ್ ಇವೆಂಟ್‌ನಲ್ಲಿ ತಮ್ಮ ನೆಚ್ಚಿನ ನಟ ಶಿವರಾಜಕುಮಾರ್ ಕುರಿತು ಅವರು ಅಭಿಮಾನದಿಂದ ಮಾತನಾಡಿದರು. ಈ ಮಧ್ಯೆ ವರನಟ ಡಾ.ರಾಜಕುಮಾರ್ ಅವರ ಪಸ್ತಾಪವೂ ಆಯ್ತು. ರಾಜ್‌ರನ್ನು ಸ್ಮರಿಸಿದ ಯಶ್, “ಮನೆಯಲ್ಲಿ ನನ್ನಮ್ಮ ರಾಜಕುಮಾರ್ ಅವರ ದೊಡ್ಡ ಅಭಿಮಾನಿ. ನಾನು ಮೊಗ್ಗಿನ ಮನಸ್ಸು ಸಿನಿಮಾದ ಚಿತ್ರೀಕರಣಕ್ಕೆಂದು ಯಾಣಕ್ಕೆ ಹೋಗಿದ್ದೆ. ಆಗ ಅಷ್ಟೊಂದು ದೂರ ನಡೆಯಬೇಕಾಯ್ತು ಎಂದೆಲ್ಲಾ ಹೇಳಿದ್ದೆ. ಆಗ ಅಮ್ಮ, ‘ನಿಮ್ಮ ಕಾಲದಲ್ಲಾದರೆ ಕಾರು, ಜೀಪು ಇವೆ. ಆಗ ರಾಜಕುಮಾರ್ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ದೊಡ್ಡ ವ್ಯಕ್ತಿಯಾದರೂ ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದರು, ಆತ್ಮೀಯವಾಗಿ ಮಾತನಾಡಿಸುತ್ತಿದ್ದರು’ ಎಂದು ನಮಗೆ ಬುದ್ಧಿ ಹೇಳುತ್ತಿದ್ದರು. ಅದೇ ಗುಣ ಶಿವಣ್ಣರಲ್ಲಿದೆ” ಎಂದರು ಯಶ್.
“ನಾವು ಒಂದು ಹಂತಕ್ಕೆ ಬೆಳೆದ ನಂತರ ಸಮಾಜ ನಮ್ಮನ್ನು ಮಾತನಾಡಿಸುತ್ತದೆ. ಜಗತ್ತೇ ಆಗಿದೆ. ಆದರೆ ನಾವು ಏನೂ ಆಗಿಲ್ಲದಾಗ ನಮ್ಮನ್ನು ಮಾತನಾಡಿಸುವುದು, ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ದೊಡ್ಡ ಗುಣ. ಅಂಥವರನ್ನು ನಾವು ಗೌರವಿಸಬೇಕು. ಶಿವಣ್ಣ, ಪುನೀತ್ ರಾಜಕುಮಾರ್ ಅವರಲ್ಲಿ ನಾನು ಇಂತಹ ಗುಣಗಳನ್ನು ಕಂಡಿದ್ದೇನೆ” ಎಂದ ಯಶ್ ‘ಭಜರಂಗಿ’ ಚಿತ್ರವನ್ನು ಶಿವಣ್ಣನ ಅಪ್ಪಟ ಅಭಿಮಾನಿಯಾಗಿ ಬೆಂಗಳೂರು ಮೆಜಸ್ಟಿಕ್‌ನ ತ್ರಿವೇಣಿ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದರಂತೆ. ಈಗ ಸೀಕ್ವೆಲ್‌ನ ನಿರೀಕ್ಷೆಯಲ್ಲಿದ್ದು, ಎಂದಿನಂತೆ ಅಭಿಮಾನಿಯಾಗಿಯೇ ಥಿಯೇಟರ್‌ಗೆ ಹೋಗುವುದಾಗಿ ಹೇಳಿದರು.