ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಏ ವತನ್ ಮೇರೆ ವತನ್’ ಹಿಂದಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕಣ್ಣನ್ ಅಯ್ಯರ್ ನಿರ್ದೇಶನದ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಕತೆಯಿದೆ. ನಟ ಇಮ್ರಾನ್ ಹಶ್ಮಿ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಣ್ಣನ್ ಅಯ್ಯರ್ ನಿರ್ದೇಶನದ ‘ಏ ವತನ್ ಮೇರೆ ವತನ್’ ಹಿಂದಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಿನಿಮಾಗೆ ದರಾಬ್ ಫಾರೂಕಿ ಮತ್ತು ಅಯ್ಯರ್ ಕಥೆ ಬರೆದಿದ್ದು, ಸಾರಾ ಅಲಿ ಖಾನ್ ಮತ್ತು ಸಚಿನ್ ಖೇಡೇಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮಾರ್ಚ್ 21ರಿಂದ Prime Videoದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿರುವ ಚಿತ್ರದಲ್ಲಿ ಸಾರಾ ಅಲಿ ಖಾನ್ ಅವರು ಉಷಾ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕಥೆಯು ರೇಡಿಯೊ ಸ್ಟೇಷನ್ ಬಗ್ಗೆ ಕಾಲ್ಪನಿಕ ಕಥೆಯನ್ನು ಹೇಳಲಿದೆ. ಧೈರ್ಯಶಾಲಿ ಯುವತಿ ಉಷಾಳ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಬದಲಾಯಿಸಿದ ಕೆಲವು ಅಂಶಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ.
ನಿರ್ಮಾಣ ಸಂಸ್ಥೆಯು ತನ್ನ Instagram ಖಾತೆಯಲ್ಲಿ ಈ ಚಿತ್ರದ ಕುರಿತು ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕಾರ್ಯಕ್ರಮದ ಅಧಿಕೃತ ವಿವರಣೆಯು ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ತಿಳಿಸಿದೆ. ಈ ಚಲನಚಿತ್ರವು ಅವರಿಗೆ ಗೌರವವನ್ನು ಸಲ್ಲಿಸುತ್ತದೆ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತದ ಅನೇಕ ವೀರರು ಹಾಗೂ ಯುವಕರು ಪ್ರದರ್ಶಿಸಿದ ಶೌರ್ಯ, ದೇಶಭಕ್ತಿ, ತ್ಯಾಗ ಮತ್ತು ಪರಿಶ್ರಮವನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಳ್ಳಲಿದ್ದು, ಅಭಯ್ ವರ್ಮಾ, ಸ್ಪರ್ಶ್ ಶ್ರೀವಾಸ್ತವ್, ಅಲೆಕ್ಸ್ ನೀಲ್, ಆನಂದ್ ತಿವಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು Dharmatic Entertainment ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಸೋಮೆನ್ ಮಿಶ್ರಾ ನಿರ್ಮಿಸಿದ್ದಾರೆ. ಕಣ್ಣನ್ ಮತ್ತು ದಾರಾಬ್ ಅವರು ಭಾರತದ ಇತಿಹಾಸದಿಂದ ಸ್ಫೂರ್ತಿ ಪಡೆದು ಈ ಕಥೆ ರಚಿಸಿದ್ದಾರೆ.