ವಿಚಾರಗಳನ್ನು ಪ್ರಕಟಿಸುವ ಎಲ್ಲ ನಮೂನೆಗಳನ್ನೂ ಅಧಿಕಾರಸ್ಥರು ತಮ್ಮದಾಗಿಸಿಕೊಂಡಿರುವಾಗ, ತನಗಿರುವ ದಾರಿಯ ಹುಡುಕಾಟದ ತಲ್ಲಣಗಳನ್ನು ಹೇಳಲಿಕ್ಕೆ ಒಂದು ಸಿನಿಮಾ ಮಾಡುವುದು ಎಂದರೆ, ನಮ್ಮ ಸ್ವಾತಂತ್ರ್ಯ ಹರಣದ ವಿರಾಟ್ ರೂಪವನ್ನು ನಮಗೆ ತಿಳಿಸುವ ಒಂದು ವಿಧವಾಗಿದೆ. biffesನಲ್ಲಿ ಪ್ರದರ್ಶನಗೊಳ್ಳುತ್ತಿರುವ ಹೆಬ್ರ್ಯೂ ಭಾಷೆಯ ‘ಅಹೆದ್ಸ್ ನ್ಹೀ’ ಅಂಥ ಒಂದು ಅಪರೂಪದ ಸಿನಿಮಾ.

ಪ್ಯಾಲಸ್ತೇನಿನ ಅರಬ್ ಕ್ವೇಕರ್ ಕ್ರಿಶ್ಚಿಯನ್‌ ಎಡ್ವರ್ಡ್ ಸೈದ್, ಪ್ಯಾಲಸ್ತೇನ್‌ ಸ್ವಾತಂತ್ರ್ಯ ಹೋರಾಟದ ಬಹಳವೇ ದೊಡ್ಡ ಬೆಂಬಲಿಗನಾಗಿದ್ದ. ಮತ್ತೂ, ಹೋರಾಟದ ಆಗುಹೋಗುಗಳಲ್ಲಿ ಉತ್ತರ ಅಮೇರಿಕೆಯ ಪ್ರಭುತ್ವದ ಧೋರಣೆ ಎಷ್ಟು ಕಾರಣವೋ ಅಷ್ಟೇ ಪ್ಯಾಲಸ್ತೇನಿ ಅರಬರು ಜಾಗತಿಕ ವಿದ್ಯಮಾನಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕಿವಿಯೊಡ್ಡದೆ, ಹಳೆಯ ಹೋರಾಟದ ಪಾಠಗಳನ್ನೇ ಗೋಳಿನ ಹಾಗೆ ಪ್ರದರ್ಶಿಸುವುದರ ಕಟು ಟೀಕಾಕಾರನೂ ಆಗಿದ್ದ. ಇಂಥಹ ಅನುಭವಗಳ ಹಿನ್ನೆಯಲ್ಲಿ, ಆತ ಭೌದ್ಧಿಕ ಸಂಪನ್ಮೂಲ ಉಳ್ಳ ಶಿಕ್ಷಿತ ವರ್ಗದ ಜವಾಬ್ದಾರಿಯನ್ನು (Responsibility of Intellectuals) ‘ಅಧಿಕಾರಸ್ಥರ ಮುಖಕ್ಕೆ, ಅವರ ಕೃತ್ಯಗಳ ನಿಜವನ್ನು ತೋರುವುದು’ (Telling Truth to Power) ಎಂದು ವಿವರಿಸಿದ್ದ.

ಒಬ್ಬ ಉತ್ತರ ಅಮೇರಿಕೆಯ ಯಹೂದಿಯಾಗಿದ್ದು, ಉತ್ತರ ಅಮೇರಿಕ- ಇಸ್ರೇಲ್‌ಗಳ ಕೂಟದ ರಾಜಕೀಯ ನಕ್ಷೆಯ ಕಾರಣವಾಗುವ ಅರಬ ಪ್ಯಾಲಸ್ತೀನಿಯರ ಮೇಲೆ ನಡೆಯುತ್ತಿರುವ ಹಿಂಸೆಯ ಕಟು ಟೀಕಾಕಾರನಾದ ನಾಮ್ ಚಾಮ್ಸ್ಕಿಯು, ಸೈದನ ಉಲ್ಲೇಖವನ್ನು ಒಂದಷ್ಟು ಚುಚ್ಚುವಂತೆ ‘ಅಯ್ಯಾ! ಅಧಿಕಾರಸ್ಥರ ಮುಖಕ್ಕೆ ಅವರ ಕೃತ್ಯಗಳ ನೈಜತೆ ಹಿಡಿದು ಏನು ಮಾಡುವವನಿದ್ದೀ! ಅದರ ನೈಜತೆ ಹಾಗು ಪರಿಣಾಮಗಳ ಕೇಡಿ‌ ಲೆಕ್ಕಾಚಾರವನ್ನು ಹಾಕಿಕೊಂಡೇ, ಅವರು ತಮ್ಮ ಕೃತ್ಯಗಳನ್ನು ನಡೆಸುತ್ತಿರುವುದಕ್ಕೆ ದಂಡಿ ಸಾಕ್ಷ್ಯಗಳಿವೆ. ಇಂಥ ಸ್ಥಿತಿಯಲ್ಲಿ ಭೌದ್ಧಿಕ ಸಂಪನ್ಮೂಲ ಉಳ್ಳ ಮಂದಿ, ಯಾವ ಜನ ವರ್ಗವು ನಿಜದ ಅರಿವಾದರೆ, ಈ ಅಧಿಕಾರಸ್ಥರ ಎದುರು ನಿಂತು, ಪರಿಸ್ಥಿತಿಯಲ್ಲಿ ಬದಲಾವಣೆ ತರಬಲ್ಲರೋ, ಅಂಥ ಜನ ವರ್ಗಕ್ಕೆ ನಿಜವನ್ನು ತಿಳಿಸುವತ್ತ ಕೆಲಸ ಮಾಡುವುದು ಸರಿಯಾದ ಭೌದ್ಧಿಕ ಜವಾಬ್ದಾರಿ’ ಎಂದಿದ್ದ.

21ನೇ ಶತಮಾನದ ಅಧಿಕಾರಸ್ಥರು, ‘ಯಾವ ಜನವರ್ಗಕ್ಕೆ ನಿಜ ತಿಳಿಸಿದರೆ ಅಧಿಕಾರಸ್ಥರನ್ನು ಎದುರಿಸಬಲ್ಲರೋ’ ಅಂಥಾ ಜನ ವರ್ಗದ ವಿವೇಕ-ವಿವೇಚನೆಗಳನ್ನು ಆವರಿಸಿಕೊಂಡು, ತಮ್ಮ ಮಾತುಗಳನ್ನು ಅವರ ಮೂಲಕ ಆಡಿಸುವ, ತಮ್ಮ ಹಿಂಸೆಯ ನಕಲನ್ನು ಸಾಮುದಾಯಿಕ ಬದುಕಿನಲ್ಲಿ ಪ್ರಯೋಗಿಸುವ ಮಟ್ಟಿಗೆ ಪಳಗಿಸಿ ಬಿಟ್ಟಿದ್ದಾರೆ. ಈಗ ‘ನಿಜವನ್ನು ಯಾರಿಗೆ ಹೇಳುವುದು!? ಹೇಗೆ ಹೇಳುವುದು!?’ ಎಂಬುದೇ ಬಹಳವೇ ದೊಡ್ಡದಾದ ಸಮಸ್ಯೆಯು ಭಿನ್ನಮತೀಯರ ಮುಂದಿದೆ. ಈ ಸಂಗತಿಯನ್ನು ಮುಖ್ಯವಾಗಿ ಮುಂದೆ ಇಟ್ಟುಕೊಂಡಿರುವ ನಾವ್ ಲಾಪಿಡ್‌ನ ಸಿನಿಮಾ ‘ಅಹೆದ್ಸ್ ನ್ಹೀ’. ತನ್ನ ಮೊದಲ ಸಿನಿಮಾ ‘ಸಿನಾನಿಮ್ಸ್’ನಲ್ಲಿ ಲಾಪಿಡ್, ಹಿಂಸಾತ್ಮಕವಾದ ಇಸ್ರೇಲ್ ಪ್ರಭುತ್ವದಿಂದ ಮುಕ್ತಿ ಪಡೆಯಲು, ಸ್ವಾತಂತ್ರ್ಯ-ಸಮಾನತೆ-ಸಹೋದರತ್ವಗಳನ್ನು ಗಟ್ಟಿಯಾಗಿ ಹೇಳುವ ಫ್ರಾನ್ಸಿಗೆ ವಲಸೆ ಬಂದರೆ, ಅಲ್ಲಿಯೂ ಅವನು ತನ್ನ ಪ್ರಭುತ್ವದ್ದೇ ಪ್ರತಿರೂಪ ಕಂಡು, ಅದನ್ನು ಹೇಳುವ ಭಾಷೆಗೆ ಆಕ್ರೋಶದಲ್ಲಿ ಒದ್ದಾಡುವ ಯುವಕನ ಕಥನವಾಗಿದೆ.

‘ಅಹೆದ್ಸ್ ನ್ಹೀ’ಯಲ್ಲಿ ಲಾಪಿಡ್, ಇಸ್ರೇಲಿನಲ್ಲೇ ತನ್ನ ಪ್ರಭುತ್ವದ ಹಿಂಸೆಯ ಸ್ವರೂಪವನ್ನು ಯಾರಿಗೆ, ಹೇಗೆ ತಿಳಿಸುವುದು? ಎಂದು ಒದ್ದಾಡುವ ಒಬ್ಬ ನಡುವಯಸ್ಸಿನ ಸಿನಿಮಾ ನಿರ್ದೇಶಕನ ತಲ್ಲಣಗಳ ನಿರೂಪಣೆಯಾಗಿದೆ. ಇಲ್ಲಿಯೇ ಲಾಪಿಡ್‌ನ ಈ ಸಿನಿಮಾ ಕಲಾರಚನೆಯ ಮಹತ್ವವಿದೆ. ನಿಜವನ್ನು ವಿವೇಕವಿರುವ ಒಂದಷ್ಟು ಜನರಿದ್ದಾರೆ ಎಂಬ ಆಸೆ ಇದ್ದರೆ, ಅವರನ್ನು ತಲುಪುವ ಕಥನಾ ನಿರೂಪಣೆಯ ಬಗೆಗಳನ್ನು ಹುಡುಕಬಹುದು. ಅಂಥ ಜನವೇ ಕಣ್ಣೆದುರಿಗೆ ಇರದ ಸನ್ನಿವೇಶದಲ್ಲಿ, ಇಸ್ರೇಲಿನ ಪ್ರಭುತ್ವದ ವಿಚಾರಗಳನ್ನೇ ತಮ್ಮ ಬುದ್ಧಿ ವಿವೇಕಗಳಲ್ಲಿ ತುಂಬಿಕೊಂಡಿರುವ ಮಂದಿಯೂ ತಲ್ಲಣಿಸುವಂತೆ ನಿಜವನ್ನು ಹೇಳುವ ಕಲಾ ಮಾರ್ಗದ ಹುಡುಕಾಟವೇ ‘ಅಹೆದ್ಸ್ ನ್ಹೀ’. ತಾನು ಪ್ರೇಕ್ಷಕರಿಗೆ ಹೇಳಬೇಕು ಎಂದಿಕೊಂಡಿರುವ ವಿಚಾರಗಳನ್ನು ಯಾವ ಬಗೆಯ ಕಲಾ ವ್ಯಾಕರಣದಲ್ಲಿ ಹೇಳಬೇಕು ಎಂಬ ತೊಳಲಾಟವನ್ನೇ ಒಂದು ಸಿನಿಮಾ ಮಾಡುವ ಫ್ರೆಂಚ್ ನಿರ್ದೇಶಕಿ ಅಗ್ನೆಸ್ ವಾರ್ದಾಳ ನಿಜ ವಾರಸುದಾರ ನಾವ್ ಲಾಪಿಡ್. ವಿಚಾರಗಳನ್ನು ಪ್ರಕಟಿಸುವ ಎಲ್ಲ ನಮೂನೆಗಳನ್ನೂ ಅಧಿಕಾರಸ್ಥರು ತಮ್ಮದಾಗಿಸಿಕೊಂಡಿರುವಾಗ, ತನಗಿರುವ ದಾರಿಯ ಹುಡುಕಾಟದ ತಲ್ಲಣಗಳನ್ನು ಹೇಳಲಿಕ್ಕೆ ಒಂದು ಸಿನಿಮಾ ಮಾಡುವುದು ಎಂದರೆ, ನಮ್ಮ ಸ್ವಾತಂತ್ರ್ಯ ಹರಣದ ವಿರಾಟ್ ರೂಪವನ್ನು ನಮಗೆ ತಿಳಿಸುವ ಒಂದು ವಿಧವಾಗಿದೆ. ‘ಅಹೆದ್ಸ್ ನ್ಹೀ’ ಅಂಥ ಒಂದು ಅಪರೂಪದ ಸಿನಿಮಾ.

LEAVE A REPLY

Connect with

Please enter your comment!
Please enter your name here