ಜನರು ಚಿತ್ರವನ್ನು, ಅದರಲ್ಲಿನ ಗ್ರೂಟ್ ಪಾತ್ರವನ್ನು ಯಾವ ಕಾರಣಕ್ಕೆ ಇಷ್ಟಪಟ್ಟಿದ್ದರೋ ಅದೇ ಭಾವ ಈ ಸರಣಿಯಲ್ಲೂ ವ್ಯಕ್ತವಾಗಿದೆ. ಮೂಲ ಪಾತ್ರದ ಭಾವಕ್ಕೆ ಎಲ್ಲಿಯೂ ಚ್ಯುತಿಯಾಗಿಲ್ಲ. ಪ್ರತಿ ಸಂಚಿಕೆಯಲ್ಲೂ ಒಂದೊಂದು ಕಥೆಯನ್ನು ಕೂರಿಸಲಾಗಿದೆ. ‘ಗಾರ್ಡಿಯನ್ಸ್ ಆಫ್ ದ ಗ್ಯಾಲಾಕ್ಸಿ’ಯ ಮೂಲ ಕಥೆಗೆ ಅನಗತ್ಯವಾಗಿ ಏನನ್ನೂ ಸೇರಿಸದೇ ಸ್ವತಂತ್ರ ಕಥೆಗಳನ್ನು ಹೆಣೆದು ಈ ಚಿತ್ರವನ್ನು ಮಾಡಲಾಗಿದೆ. ‘ಐ ಆಮ್ ಗ್ರೂಟ್’ ಸೀಸನ್ 2 DisneyPlus hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮಾರ್ವೆಲ್ ಸ್ಟುಡಿಯೋಸ್‌ನ ‘ಐ ಆಮ್ ಗ್ರೂಟ್’ ಸೀಸನ್ 1 ಯಶಸ್ಸಿನ ನಂತರ ಸೀಸನ್ 2 ವೀಕ್ಷಕರ ಮನರಂಜಿಸಲು ಬಿಡುಗಡೆಯಾಗಿದೆ. ಸಣ್ಣ ಸಣ್ಣ ಸಂಚಿಕೆಗಳ ಸರಮಾಲೆ ಈ ‘ಐ ಆಮ್ ಗ್ರೂಟ್’ನ ವೈಶಿಷ್ಟ್ಯ. ತಮಾಷೆಯಾದ ಮತ್ತು ಅಷ್ಟೇ ಮುದ್ದಾದ ನಿರೂಪಣೆ ಸರಣಿಯಲ್ಲಿದೆ. ಇದರಲ್ಲೂ ಗ್ರೂಟ್ ತನ್ನ ಮುದ್ದಾದ ಮತ್ತು ಪೆದ್ದುಪೆದ್ದಾದ ಹುಚ್ಚಾಟಗಳನ್ನು ಮುಂದುವರೆಸುತ್ತದೆ. ಫೋಟೋರಿಯಲಿಸ್ಟಿಕ್ ಅನಿಮೇಷನ್ ತಂತ್ರಜ್ಞಾನ ದೃಶ್ಯಗಳನ್ನು ಮತ್ತು ವೀಕ್ಷಣೆಯ ಅನುಭವವನ್ನು ಇನ್ನಷ್ಟು ಮಜವಾಗಿಸುತ್ತವೆ. ಕಳೆದ ಸೀಸನ್, 5 ಚಿಕ್ಕ ಸಂಚಿಕೆಗಳನ್ನು ಹೊಂದಿತ್ತು. ಈ ಬಾರಿಯೂ 5 ಸಂಚಿಕೆಗಳ ಸೀಸನ್ ಅನ್ನು ಹೊರತಂದಿದ್ದಾರೆ. ಪ್ರತಿ ಸಂಚಿಕೆಯೂ ನಾಲ್ಕು ನಿಮಿಷಗಳ ಅವಧಿ ಹೊಂದಿವೆ.

ಮೊದಲನೇ ಸೀಸನ್ ಏನೇನು ಅನುಭವಗಳನ್ನು ಒದಗಿಸಿತ್ತೋ ಅದೇ ಓಘ ಇಲ್ಲಿಯೂ ಮುಂದುವರೆದಿದೆ. ಅಷ್ಟೇ ರಂಜನೀಯವಾಗಿದೆ. ತಮಾಷೆ ಮತ್ತು ಮುದ್ದುತನ ಎರಡರ ಸಮ್ಮಿಶ್ರಣ ಈ ಸರಣಿ. ಪುಟ್ಟ ಗ್ರೂಟ್ ತನ್ನ ಮುದ್ದಾದ ಮತ್ತು ಪೆದ್ದಾದ ಸಾಹಸಗಳಿಗೆ ಹೊರಡುತ್ತದೆ. ಪುಟ್ಟ ಗ್ರೂಟ್‌ಗೆ ಇರಬೇಕಾದ ಎಲ್ಲಾ ಆಕರ್ಷಣೆಗಳನ್ನೂ ಸರಣಿ ಸಶಕ್ತವಾಗಿ ತೋರಿಸಿದೆ. ಪುಟ್ಟ ಗ್ರೂಟ್ ಒಬ್ಬ ತಮಾಷೆಯಾದ, ಗಡಿಬಿಡಿಯ ಮತ್ತು ತುಂಟತನ ಮಾಡುವ ಪಾತ್ರ. ಈ ಸ್ವಭಾವಗಳು ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿವೆ.

ಬರವಣಿಗೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಕರ್ಸ್ಟಾನ್ ಲೆಪೋರೆ ಪಾತ್ರದ ಅಂತರಂಗವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು ತೆರೆಯ ಮೇಲೆ ತಂದಿದ್ದಾರೆ. ‘ಗಾರ್ಡಿಯನ್ ಆಫ್ ಗೆಲಾಕ್ಸೀಸ್’ ವಾಲ್ಯೂಮ್ 2ರ ಗ್ರೂಟ್ ಪಾತ್ರ ಹೇಗಿತ್ತು ಎನ್ನುವುದನ್ನು ಬಹಳ ನಿಖರವಾಗಿ ಇಲ್ಲಿ ಬಿಂಬಿಸಿದ್ದಾರೆ. ಲೆಪೋರೆ ಇಲ್ಲಿ ಗ್ರೂಟ್ ಅನ್ನು ತನ್ನದೇ ಹೊಸ ಹೊಸ ಸಾಹಸಗಳಿಗೆ ಕಳಿಸಿದ್ದರೂ ಚಿತ್ರದ ಮೂಲ ಭಾವವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಆ ಕಾರಣದಿಂದಾಗಿಯೇ ಸರಣಿ ಕೂಡ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಜನರು ಚಿತ್ರವನ್ನು, ಅದರಲ್ಲಿನ ಗ್ರೂಟ್ ಪಾತ್ರವನ್ನು ಯಾವ ಕಾರಣಕ್ಕೆ ಇಷ್ಟ ಪಟ್ಟಿದ್ದರೋ ಅದೇ ಭಾವ ಈ ಸರಣಿಯಲ್ಲೂ ವ್ಯಕ್ತವಾಗಿದೆ. ಮೂಲ ಪಾತ್ರದ ಭಾವಕ್ಕೆ ಎಲ್ಲಿಯೂ ಚ್ಯುತಿಯಾಗಿಲ್ಲ. ಪ್ರತಿ ಸಂಚಿಕೆಯಲ್ಲೂ ಒಂದೊಂದು ಕಥೆಯನ್ನು ಕೂರಿಸಲಾಗಿದೆ. ‘ಗಾರ್ಡಿಯನ್ಸ್ ಆಫ್ ದ ಗ್ಯಾಲಾಕ್ಸಿ’ಯ ಮೂಲ ಕಥೆಗೆ ಅನಗತ್ಯವಾಗಿ ಏನನ್ನೂ ಸೇರಿಸದೇ ಸ್ವತಂತ್ರ ಕಥೆಗಳನ್ನು ಹೆಣೆದು ಈ ಚಿತ್ರವನ್ನು ಮಾಡಲಾಗಿದೆ. ಗ್ರೂಟ್ ಬಗೆಗಿನ ಕಿರು ಚಿತ್ರಗಳ ಮಾದರಿ ಮಾತ್ರವೇ ಇದೆ. ಕೆಲವೊಮ್ಮೆ ಅಷ್ಟೇ ಅಗತ್ಯ ಇರುತ್ತದೆ ಮತ್ತು ಇಲ್ಲಿ ಅದನ್ನು ಸರಿಯಾಗಿ ಮನಗಂಡು ಸರಣಿ ಮಾಡಿದ್ದಾರೆ. ಸ್ವತಂತ್ರ ಕಥೆಗಳಿಗೆ ತನ್ನವೇ ಆದ ವೈಶಿಷ್ಟ ಇರುತ್ತದೆ ಎನ್ನುವುದನ್ನು ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಇದೇ ಮಾದರಿಯಲ್ಲಿ ಇದ್ದಾಗ ಇನ್ನಷ್ಟು ಮತ್ತಷ್ಟು ನೋಡಬೇಕು ಎನಿಸುವ ಕಾತುರವನ್ನು ಸರಣಿ ಸೃಷ್ಟಿಮಾಡುತ್ತದೆ.

ಗ್ರೂಟ್ ಪಾತ್ರಕ್ಕೆ ವಿನ್ ಡೀಸಲ್ ಅವರ ಧ್ವನಿಯಿದೆ. ದೃಶ್ಯರಚನೆ ಬಹಳ ಕಲಾತ್ಮಕವಾಗಿದೆ. ಅನಿಮೇಷನ್ ತಂತ್ರಜ್ಞಾನ ಬಹಳ ವಿಶಿಷ್ಟವಾದ ಆಯಾಮವನ್ನು ನೀಡಿದೆ. ‘ಗಾರ್ಡಿಯನ್ಸ್ ಆಫ್ ದ ಗ್ಯಾಲಕ್ಸಿ’ ವಾಲ್ಯೂಮ್ 2ರಲ್ಲಿ ಬಳಕೆಯಾದ ತಂತ್ರಜ್ಞಾನವನ್ನೇ ಇಲ್ಲೂ ಬಳಸಿದರೂ ಈ ಸರಣಿಯಲ್ಲಿ ಅದು ಬಹಳ ಅನನ್ಯವಾಗಿ ಬಳಕೆಯಾಗಿದೆ. ಗ್ರೂಟ್ ಪಾತ್ರದ ಮುಖಭಾವಗಳು ಬಹಳ ನಿರ್ದಿಷ್ಟವಾಗಿ ಸ್ಪಷ್ಟವಾಗಿ ಮೂಡಿಬಂದಿವೆ. ಈ ಸರಣಿಗಾಗಿಯೇ ಸೃಷ್ಟಿ ಮಾಡಿದ ಪರಿಸರ ಮತ್ತು ಪಾತ್ರಗಳು ಗ್ರೂಟ್ ಕಥೆಯೊಳಗೆ ಪರಿಪೂರ್ಣವಾಗಿ ಮಿಳಿತವಾಗಿವೆ. ಇದರಲ್ಲಿ ಬಳಸಿರುವ ವಿಭಿನ್ನ ಮತ್ತು ಅನನ್ಯ ಅನಿಮೇಷನ್ ಶೈಲಿ ಮಿಕ್ಕ ಸರಣಿಗಳಿಗಿಂತ ಇದನ್ನು ವಿಶೇಷವಾಗಿಸುತ್ತವೆ.

ಇದರ ಸಂಗೀತ ಸಂಯೋಜನೆಯನ್ನು ಡೇನಿಯಲ್ ಲುಪ್ಪಿ ಮಾಡಿರುವುದು ಬಹಳ ವಿಶೇಷವಾಗಿದೆ. ಪಾತ್ರದ ಸಾಹಸಿ ಮನೋಭಾವ ಮತ್ತು ಲವಲವಿಕೆಯ ಮನೋಭಾವಕ್ಕೆ ಹೊಂದುವಂತಹ ಕಥೆಯ ಒಟ್ಟಾರೆ ಆಶಯವನ್ನು ಪ್ರತಿಫಲಿಸುವಂತಹ ಅಚ್ಚುಕಟ್ಟಾದ ಸಂಯೋಜನೆಯನ್ನು ಕಾಣಬಹುದು. ಒಟ್ಟಾರೆ ಹೇಳಬೇಕೆಂದರೆ ಇದೊಂದು ಬಹಳ ರಂಜನೀಯವಾದ ಸರಣಿ. ವಿಶೇಷವಾಗಿ ಮಕ್ಕಳಿಗೆ ಬಹಳ ಮನರಂಜನೆ ನೀಡುತ್ತದೆ. ಅಲ್ಲದೆ ತಾಂತ್ರಿಕವಾಗಿಯೂ ಬಹಳ ಅಚ್ಚುಕಟ್ಟಾಗಿ ಮಾಡಲ್ಪಟ್ಟಿರುವ ಸರಣಿ ಇದಾಗಿದ್ದು ಮುಂದಿನ ಸೀಸನ್ ಯಾವಾಗ ಬರಬಹುದು ಎಂಬ ಕುತೂಹಲ ಮತ್ತು ಕಾತರದೊಂದಿಗೆ ಮುಗಿಯುತ್ತದೆ.

LEAVE A REPLY

Connect with

Please enter your comment!
Please enter your name here