ಕಥೆ ಇನ್ನಷ್ಟು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿ ಇರಬಹುದಿತ್ತು ಎನಿಸಿದರೂ ಅನಿಮೇಷನ್ ಗುಣಮಟ್ಟ ಮತ್ತು ಬಣ್ಣಗಳ ಉಪಯೋಗ ಮತ್ತು ಸುಂದರ ದೃಶ್ಯವಿನ್ಯಾಸ ಆ ಕೊರತೆಯನ್ನು ಮುಚ್ಚಿಹಾಕಿವೆ. ಚಿತ್ರ ಎಲ್ಲಿಯೂ ಅತಿ ಭಾವುಕವಾಗಿಲ್ಲ. ಮಕ್ಕಳು ಮತ್ತು ದೊಡ್ಡವರು ಒಟ್ಟಿಗೆ ಕೂತು ನೋಡಿ ಖುಷಿ ಪಡಬಲ್ಲ ಉತ್ತಮ ಸಿನಿಮಾ. Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ಲಿಯೋ’.

ಮಕ್ಕಳನ್ನು ಬೆಳೆಸುವುದು ಹುಡುಗಾಟವಲ್ಲ. ಸಾಕಷ್ಟು ಸವಾಲುಗಳನ್ನು ಕೆಲವೊಮ್ಮೆ ದೂರುಗಳನ್ನೂ ಎದುರಿಸಬೇಕಾಗುತ್ತದೆ. ಮಕ್ಕಳನ್ನು ಬೆಳೆಸುವುದಕ್ಕೆ ಸಿದ್ಧ ಮಾದರಿ ಅಂತಲೂ ಇಲ್ಲ. ಕೆಲವೊಮ್ಮೆ ಎಣಿಕೆ ತಪ್ಪಾಗಬಹುದು. ತಂತ್ರ ಕೈಕೊಡಬಹುದು. ಪೋಷಕರು ತಪ್ಪು ಮಾಡಬಹುದು. ಆಡಮ್ ಸ್ಯಾಂಡ್ಲರ್‌ ಅವರ ಹೊಸ ಚಿತ್ರ ‘ಲಿಯೋ’ದಲ್ಲಿ ಸಮಸ್ಯಾತ್ಮಕ ಪೋಷಕರು ಇದ್ದರೆ ಏನಾಗುತ್ತದೆ ಎನ್ನುವ ಕಥೆಯನ್ನು ತಮಾಷೆಯಾಗಿ ತೋರಿಸಿದ್ದಾರೆ. ಇದು ಅನಿಮೇಷನ್ ಸಿನಿಮಾ.ಇದರ ನಿರ್ದೇಶಕರು ರಾಬರ್ಟ್ ಮಾರಿಯನೆಟ್ಟಿ, ರಾಬರ್ಟ್ ಸ್ಮಿಗೆಲ್ ಮತ್ತು ಡೇವಿಡ್ ವಾಚನ್ಹೈಮ್.

‘ಲಿಯೋ’ ಚಿತ್ರದಲ್ಲಿ ಒಂದು ಹಿರಿಯ ವಯಸ್ಸಿನ ಹಲ್ಲಿ ಮತ್ತು ಅದಕ್ಕೆ ಧ್ವನಿಯಾಗಿರುವವರು ಆಡಮ್ ಸ್ಯಾಂಡ್ಲರ್‌. ಆಡಮ್ ಮತ್ತು ರಾಬರ್ಟ್ ಸ್ಮಿಗೆಲ್ ಈ ಹಿಂದೆಯೂ ‘ಹೋಟೆಲ್ ಟ್ರಾನ್ಸಿಲ್ವನಿಯ’ ಮೊದಲಾದ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು ಆ ಶೈಲಿಯ ಛಾಯೆಯನ್ನು ಈ ಚಿತ್ರದಲ್ಲೂ ಕಾಣಬಹುದು. ಇದನ್ನು ಬರಿಯ ಮಕ್ಕಳ ಚಿತ್ರವೆಂದೂ ಹೇಳಲಿಕ್ಕೆ ಬರುವುದಿಲ್ಲ. ದೊಡ್ಡವರಿಗೆ ಕೂಡ ತಕ್ಕಮಟ್ಟಿಗೆ ಮನರಂಜನೆ ನೀಡುವಂತಹ ಚಿತ್ರವಿದು. ಈ ಚಿತ್ರ ತನ್ನದೇ ಆದ ಒಂದು ವೈಶಿಷ್ಟ್ಯದಿಂದ ಕೂಡಿರುವುದು ಹೌದು.

1949ನೇ ಇಸವಿಯಿಂದ ಒಂದು ರೀತಿಯ ತವರುಮನೆಯಾಗಿರುವ ಶಾಲೆಯ ಐದನೇ ತರಗತಿಯಲ್ಲಿ ಲಿಯೋ ಮತ್ತು ಅವನ ಗೆಳೆಯ ಸ್ಕ್ವಿರ್ಟಲ್, ಶಿಕ್ಷಕರು ಮತ್ತು ಆಪ್ತಸ್ನೇಹಿತರು. ಸ್ಕ್ವಿರ್ಟಲ್ ಪಾತ್ರಕ್ಕೆ ಬಿಲ್ ಬರ್ ಧ್ವನಿಯಾಗಿದ್ದಾರೆ. ಪ್ರಾಥಮಿಕ ಶಾಲೆಯ ಮಕ್ಕಳನ್ನು ದಶಕಗಳಿಂದ ನಿಭಾಯಿಸಿರುವ ಅನುಭವ ಇರುವವರು. ಮಕ್ಕಳ ಸ್ವಭಾವಗಳ ವಿಚಾರದಲ್ಲಿ ಬಹಳ ಅನುಭವಿಗಳು. ಒಂದೇ ಭೇಟಿಯಲ್ಲಿ ಒಂದು ಮಗುವಿನ ಸ್ವಭಾವವನ್ನು, ಅದರ ಹಿನ್ನೆಲೆಯನ್ನು ನಿಖರವಾಗಿ ಅಳೆಯಬಲ್ಲ ಸಾಮರ್ಥ್ಯ ಅವರಿಗಿರುತ್ತದೆ. ಲಿಯೋ ಅಷ್ಟಾಗಿ ಯಾವ ಮಕ್ಕಳ ಜೀವನದ ಬಗ್ಗೆಯೂ, ಅವರ ಹಿನ್ನೆಲೆಯ ಬಗ್ಗೆಯೂ ಅಥವಾ ಅವುಗಳ ಹಿತಾಸಕ್ತಿಯ ಬಗ್ಗೆಯೂ ಅಗತ್ಯ ಮೀರಿ ತಲೆಕೆಡಿಸಿಕೊಳ್ಳುವ ಸ್ವಭಾವ ಅಲ್ಲವಾದರೂ ತಾನಿನ್ನು ಒಂದೇ ವರ್ಷ ಬದುಕಿರುವುದು ಎಂದು ತಿಳಿದ ಮೇಲೆ ಆತನ ಧೋರಣೆಯಲ್ಲಿ ಅಗಾಧವಾದ ಬದಲಾವಣೆಯಾಗುವ ಸಂದರ್ಭ ಬರುತ್ತದೆ.

ಭಾವುಕತೆ ಮತ್ತು ಪೆದ್ದುತನ ಎರಡರ ಮಿಶ್ರಭಾವ ಹೊಂದಿರುವ ಪಾತ್ರಗಳ ನಿರೂಪಣೆಯಲ್ಲಿ ಆಡಮ್ ಸ್ಯಾಂಡ್ಲರ್‌ ಮಿಂಚುತ್ತಾರೆ. ಬೋರ್ ಹೊಡೆಸುವ ಹಾಡುಗಳು ಮತ್ತು ಪೆದ್ದುತನಗಳ ನಡುವೆಯೂ ಕೆಲವೊಮ್ಮೆ ಒರಟು ಎನಿಸಿದರೂ ಲಿಯೋ ಪಾತ್ರ ರಂಜಿಸುತ್ತದೆ. ಈ ಮಾದರಿಯ ನಿರೂಪಣೆಯನ್ನು ನಿರ್ದೇಶಕರು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರಾ ಎಂದೂ ಎನಿಸುತ್ತದೆ. ಅರುಳುಮರುಳು ಎನಿಸುವ ಹಲ್ಲಿಯೊಂದು ಪ್ರತಿ ವಾರ ಹತ್ತು ವರ್ಷದ ಮಕ್ಕಳೊಂದಿಗೆ ಬೆರೆತು ಜೀವನದ ಪಾಠಗಳನ್ನು ಹೇಳಿಕೊಡುವ ಸನ್ನಿವೇಶಗಳು ತಮಾಷೆಯಾಗಿ ಲವಲವಿಕೆಯಾಗಿ ಮೂಡಿಬಂದಿವೆ.

ಒಂದೊಂದು ಮಗುವಿನೊಂದಿಗೂ ಒಂದರ ಮೇಲೆ ಒಂದರಂತೆ ಬೆರೆಯುತ್ತಾ ಬಂದಾಗ ಲಿಯೋಗೆ ಪ್ರತಿಯೊಂದು ಮಗುವೂ ಯಾವುದೋ ಒಂದು ಕೀಳರಿಮೆಯಿಂದ ಬಳಲುತ್ತಿರುವ ಅಂಶ ಅರ್ಥವಾಗತೊಡಗುತ್ತದೆ. ಎಲ್ಲ ಸಮಸ್ಯೆಗಳೂ ಆಯಾ ವಯಸ್ಸಿಗೆ ಸಹಜವಾಗಿ ಒದಗಿ ಬರುವಂತಹ ಸಮಸ್ಯೆಗಳೇ. ಒಂದು ಮಗುವಿಗೆ ಅದರ ಧ್ವನಿಯ ಬಗ್ಗೆ ಕೀಳರಿಮೆಯಾದರೆ ಮತ್ತೊಂದಕ್ಕೆ ತನಗೆ ಯಾರೂ ಸ್ನೇಹಿತರಿಲ್ಲ ಎಂಬ ಕೀಳರಿಮೆ. ಆದರೆ ಲಿಯೋ ಎಂಥದ್ದೇ ಸಮಸ್ಯೆ ಇದ್ದರೂ ಥಟ್ ಎಂದು ತನ್ನ ಹಾಡಿನಿಂದ ಪರಿಹಾರ ಸೂಚಿಸುತ್ತಾ ಮಕ್ಕಳ ನಡುವೆ ಜನಪ್ರಿಯವಾಗುತ್ತಾನೆ. ಲಿಯೋನ ಜನಪ್ರಿಯತೆಯನ್ನು ಸಹಿಸಲಾಗದ ಕೆಲವು ದೊಡ್ಡವರು ಮತ್ತವರ ಹೊಟ್ಟೆಕಿಚ್ಚು ಕೂಡಾ ತೋರಿಸಲಾಗಿದೆ. ಈ ಕಥೆಯಲ್ಲಿ ಸಂಘರ್ಷಕ್ಕೆ ಅವಕಾಶ ಇಲ್ಲವಾದರೂ ಆ ತರಗತಿಯ ಶಿಕ್ಷಕ ಮಿಸ್ ಮಾಲ್ಕಿನ್ ಅನ್ನು ಲಿಯೋ ವಿರುದ್ಧ ಖಳನಟನಂತೆ ತೋರಿಸುವ ಯತ್ನ ಮಾಡಲಾಗಿದೆ. ಅದೂ ಕೂಡ ರಂಜನೀಯವಾಗಿ ಮೂಡಿಬಂದಿದೆ.

ಕಥೆ ಇನ್ನಷ್ಟು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿ ಇರಬಹುದಿತ್ತು ಎನಿಸಿದರೂ ಅನಿಮೇಷನ್ ಗುಣಮಟ್ಟ ಮತ್ತು ಬಣ್ಣಗಳ ಉಪಯೋಗ ಮತ್ತು ಸುಂದರ ದೃಶ್ಯವಿನ್ಯಾಸ ಆ ಕೊರತೆಯನ್ನು ಮುಚ್ಚಿಹಾಕಿವೆ. ಚಿತ್ರ ಎಲ್ಲಿಯೂ ಅತಿ ಭಾವುಕವಾಗಿಲ್ಲ. ಸ್ಯಾಂಡ್ಲರ್‌ ಇಡೀ ಚಿತ್ರವನ್ನು ತಮ್ಮ ಲವಲವಿಕೆಯಿಂದ ರಂಜನೀಯವಾಗಿ ಇಡಲು ಪಟ್ಟಿರುವ ಪ್ರಯತ್ನ ಎದ್ದು ಕಾಣುತ್ತದೆ. ಹಿನ್ನೆಲೆ ಸಂಗೀತ ಕೂಡ ಇದಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಮಕ್ಕಳು ಮತ್ತು ದೊಡ್ಡವರು ಒಟ್ಟಿಗೆ ಕೂತು ನೋಡಿ ಖುಷಿ ಪಡಬಲ್ಲ ಉತ್ತಮ ಚಿತ್ರ ‘ಲಿಯೋ’. Netflixನಲ್ಲಿ ಲಭ್ಯವಿದೆ ಸಿನಿಮಾ.

LEAVE A REPLY

Connect with

Please enter your comment!
Please enter your name here